ಚಲನಚಿತ್ರ ನಿರ್ದೇಶಕನೊಬ್ಬ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿ, ಅವರು ತನ್ನ ಮನೆಯಲ್ಲಿ ಬಿಟ್ಟು ಹೋದ ಮೊಬೈಲನ್ನು ಕೂಡ ಪೊಲೀಸರಿಗೆ ಒಪ್ಪಿಸಿ, ಅವರು ನನ್ನ ಸಿನಿಮಾದ ನಿರ್ದೇಶಕ ಆದಷ್ಟು ಬೇಗ ಹುಡುಕಿ ಕೊಡಿ ಎಂದು ನಿರ್ದೇಶಕ ನಟಿ ಒಬ್ಬಳು ಪೊಲೀಸರಿಗೆ ಆಗಾಗ ವಿಚಾರಿಸುತ್ತಿದ್ದರೆ, ಕುತೂಹಲಕಾರಿಯಾಗಿ ಆ ನಿರ್ದೇಶಕನ ಕೇಸನ್ನು ಎಸ್ಪಿ ರವಿ ಕುಮಾರ್ ಅವರು ಇನ್ವೆಸ್ಟಿಗೇಷನ್ ಮಾಡುತ್ತಿದ್ದರೆ, ನಿರ್ದೇಶಕ ಎಲ್ಲಿಗೆ ಹೋದ ಕೊಲೆಯಾಗಿದ್ದರೆ? ಅವನ ಹೆಣ ಎಲ್ಲಿ ಹೋಯಿತು? ಹೀಗೆ ಕುತೂಹಲಕಾರಿಯಾಗಿ ನಮ್ಮನ್ನು ಕಾಡುತ್ತಾ, ಮುಂದೆ ಏನಾಯಿತು? ಹೇಗೆ ಆಯಿತು! ಎಂದೆಲ್ಲ ಪ್ರಶ್ನಿಸಿಕೊಂಡು ಓದಿಸಿಕೊಂಡು ಹೋಗುವ ‘ನಾನು ಸತ್ಯವನ್ನೇ ಹೇಳುತ್ತೇನೆ’ ಎಂಬ ಸೂರ್ಯಸಖ ಪ್ರಸಾದ್ ಕುಲ್ಕರ್ಣಿ ಅವರ ಕಾದಂಬರಿಯನ್ನು ಈ ಸದ್ಯ ಓದಿದೆ.
ಕಥಾನಾಯಕಿಯ ಹೆಸರನ್ನೇ ಹೇಳದೆ ಅವಳು, ನಾನು ಎಂಬ ಸರ್ವನಾಮಗಳನ್ನೇ ಬಳಸಿ, ಪಾತ್ರಗಳೆಲ್ಲ ತಮ್ಮ ತಮ್ಮ ಸ್ವಗತಗಳನ್ನು ನಮ್ಮ ಮುಂದಿಡುತ್ತಾ ಸಾಗುವ ಈ ಕಾದಂಬರಿಯ ಎಲ್ಲಾ ಪಾತ್ರಗಳು ನಮ್ಮನ್ನು ಆವರಿಸುತ್ತವೆ. ಚಿಕ್ಕಂದಿನಿಂದ ಕಥಾನಾಯಕಿಗೆ ತಪ್ಪು ಮಾಡಿದಾಗ, ಅವಳ ತಪ್ಪನ್ನು ತಿದ್ದುವಂತಹ ಬುದ್ಧಿ ಮಾತುಗಳನ್ನು ಹೇಳುವುದು ಬಿಟ್ಟು, ಅವಳ ತಾಯಿ ಅಜ್ಜ ಅಜ್ಜಿಯಂದಿರು ಹೊಡೆದು-ಬಡಿದು ಅವಳಿಗೆ ಶಿಕ್ಷೆ ನೀಡಿದರೆ ಮತ್ತು ತಪ್ಪು ಮಾಡಿದಳೆಂದು ಅವಳ ಮೇಲೆ ಆರೋಪಿಸಿ ಒತ್ತಡದಲ್ಲಿ ತಂದೆ ಅವಳನ್ನು ಹಾಸ್ಟೆಲ್ ಸೇರಿಸಿ, ಮುಂದೆ ಹಾಸ್ಟೆಲ್ ನಲ್ಲೂ ಅವಳಿಗೆ ಒಳ್ಳೆಯ ಗೆಳೆಯ ಗೆಳತಿಯರು ಸಿಗದೇ ಅವರಿಂದ ಹಾಸ್ಟೆಲ್ ಗೆ ಬಂದ ಕಾರಣವನ್ನು ಕೆದಕಿ ಅವಳನ್ನು ಹಿಂಸಿಸುವ ರೂಮ್-ಮೇಟ್ಸಗಳು. ಅವಳ ಬದುಕಿನಲ್ಲಿ ಅವಳಿಗೆ ನಿಜವಾಗಿ ಗೆಳೆಯನೆಂದು ಸಿಕ್ಕವನೆಂದರೆ ಆಂತೋನಿ. ಅಂತೋನಿ ಅವರ ಮನೆಯ ಕೆಲಸದಾಳಿನ ತಮ್ಮ ಮತ್ತು ಅನ್ಯ ಧರ್ಮದವ ಎಂದು ಅವರ ನಡುವೆ ಪ್ರೀತಿ ಇರುವ ವಿಷಯ ತಿಳಿದ ತಂದೆ-ತಾಯಿ ಮತ್ತೆ ಅವಳನ್ನು ಶಿರಸಿಯ ಅವರ ಗೆಳೆಯನ ಮನೆಯಲ್ಲಿ ತಂದರೆ ಏನಾದೀತು. ಅವಳಿಗೆ ಜಾನಕಿ ಮತ್ತು ಜಯರಾಂ ಅವರ ಮನೆಯಲ್ಲಿ ತಂದೆ ತಾಯಿಯ ಪ್ರೀತಿ ಸಿಕ್ಕರೆ ಅವಳಿಗಿಂತ ಭಾಗ್ಯವಂತರುಂಟೆ. ಅವರು ತಂದೆ-ತಾಯಿಗಿಂತ ಉತ್ತಮ ಸ್ನೇಹಿತರಾಗಿರುತ್ತಾರೆ. ಬೆಳೆದು ನಿಂತ ಮಕ್ಕಳಿಗೆ ತಂದೆ ತಾಯಿಗಳು ಆ ವಯಸ್ಸಿನಲ್ಲಿ ಅವರಿಗೆ ಸ್ನೇಹಿತರಂತೆ ಮಾತನಾಡಿಸಿ, ಅವರೊಂದಿಗೆ ಇರಬೇಕಂತೆ. ಓದಿ ಸಾಧಿಸಬೇಕಂಬಾಚಲದಿಂದ ನಾಯಕಿಯು ಉತ್ತಮವಾಗಿ ಓದುತ್ತಾ ನಂತರ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಮಾಡಿ ಅದರಲ್ಲಿಯೂ ಉತ್ತಮವಾಗಿ ಸಾಧನೆ ಮಾಡುತ್ತಾಳೆ. ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದು ನಟನಾ ಕ್ಷೇತ್ರಕ್ಕೂ ಕಾಲಿಡುವಂತಾಗುತ್ತದೆ. ಛಲ, ಹುಮ್ಮಸ್ಸು, ಆಸಕ್ತಿ, ಕೆಲಸ ಮಾಡುವ ಮನಸ್ಸು, ಸಾಧಿಸುವ ವಾಂಚೆ ಇವೆಲ್ಲ ಇದ್ದರೆ ಬದುಕಿನಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ನಾಯಕಿ ನಮಗೆ ತೋರಿಸಿಕೊಡುತ್ತಾಳೆ.
ಆದರೆ ಸಾಧನೆ ಎಂದರೇನು? ಜೀವನದಲ್ಲಿ ಯಶಸ್ಸನ್ನು ಪಡೆಯಲು ಹೋಗಿ ನಂತರ ನಿರಾಶರಾಗುವ ಬದಲು ಯಶಸ್ಸಿಗೂ ಸಾಧನೆಗೂ ಒಂದು ಮಿತಿ ಇದೆ ಎಂದು ಎಚ್ಚರಿಸುವ ಅವಳ ಪ್ರಿಯತಮ ಆಂತೋನಿ ಅವನು ಹೇಳುವುದರಲ್ಲಿ ತಪ್ಪೇನಿದೆ? ಸಾಧನೆ ಮಾಡಿದಷ್ಟು ಇನ್ನು ಸಾಧನೆ ಮಾಡುವುದಿದೆ. ಆದರೆ ಅದನ್ನು ಪಡೆಯಲು ಹೋಗಿ ನಾವು ನಮ್ಮವರಿಂದಲೇ ದೂರವಾಗುವುದು ಮತ್ತು ಏನಾದರೂ ಕಳೆದುಕೊಳ್ಳುವ ಬದಲು ನಾವು ನಮ್ಮ ಗುರಿಯನ್ನು ಕೈಲಾದಷ್ಟು ಅಥವಾ ನಾವು ಒಂದಷ್ಟು ಸಾಧಿಸಿದ ಮೇಲೆ ಇಷ್ಟು ಸಾಕು ಎಂದು ಹಾಸಿಗೆ ಇದ್ದಷ್ಟೇ ಕಾಲು ಚಾಚಿ ತೃಪ್ತರಾಗುವುದು ಒಳ್ಳೆಯದು. ಮನುಷ್ಯನಿಗೆ ಒಳ್ಳೆ ಒಳ್ಳೆಯ ಉದ್ಯೋಗ ಜೀವನ ನಡೆಸಲು ಸಾಕಾಗುವಷ್ಟು ಸ್ವಲ್ಪ ಹಣ ಮತ್ತು ಕುಟುಂಬದಲ್ಲಿ ಪ್ರೀತಿ ಇರಲು ಊರಿಗೆ ಹೋಗಿ ಮದುವೆಯಾಗಿ ಆರಾಮಾಗಿರೋಣ, ನಮ್ಮನ್ನು ಈಗ ಯಾರು ತಡೆಯಲಾರರೇನೋ ಎಂಬುದು ನಾಯಕನ ಮನಸು. ಆದರೆ ನಾಯಕಿಗೆ ಇದೊಂದು ಚಲನಚಿತ್ರ ಮುಗಿಸಿಯೇ ನಾವು ಮದುವೆಯಾಗೋಣ ಎಂಬುದು ಅವಳ ಮನಸ್ಸು.
ಆದರೆ ತಾನೊಂದು ಬಗೆದರೆ ದೈವ ಒಂದು ಬಗೆದಂತೆ ಎಂಬಂತೆ ನಿರ್ದೇಶಕನೇ ನಾಪತ್ತೆ. ಆದರೆ ನಾಯಕಿ ಒಬ್ಬಳೇ ಏನು ತಾನೇ ಮಾಡಲು ಸಾಧ್ಯ? ಜಯರಾಮ್ ಮತ್ತು ಜಾನಕಿಯ ಕಾಲೇಜಿನ ಪ್ರೇಮ. ಪ್ರೇಮ ವಿವಾಹಕ್ಕೆ ಬೆಂಬಲ ನೀಡಿ ಅವರ ಜೀವನಕ್ಕೆ ಸಹಕಾರ ನೀಡಿದ ನಾಯಕಿಯ ತಂದೆಯ ಕುಟುಂಬ ಹೀಗೆ ಅಂದು ಪ್ರೇಮ ವಿವಾಹಕ್ಕೆ ಸೈ ಎಂದ ಕುಟುಂಬ, ಇಂದು ನಾಯಕಿಯ ಅನ್ಯ ಧರ್ಮೀಯ ಮದುವೆಗೆ ಒಪ್ಪಿಗೆ ನೀಡುವುದು ಸಮ್ಮತವೇ? ನನ್ನ ಸಿನಿಮಾದಲ್ಲಿ ನಾಯಕಿ ಪಾತ್ರ ನೀಡುವ ಭರವಸೆ ನೀಡುವ ವಿಶ್ವರಾಂ ಯಾಕೆ ಹಾಗೆ ಮಾಡಿದ? ಅವಳಿಗಾಗಿ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆ ಪಡೆದು ತಾನೇ ಬಾಡಿಗೆ ಕಟ್ಟಿ ತಿಂಗಳಿಗೆ ಒಂದುವರೆ ಲಕ್ಷ ಸಂಬಳ ನೀಡಿ ,ತನ್ನ ಸಿನಿಮಾನ ಅಸಿಸ್ಟೆಂಟ್ ಡೈರೆಕ್ಟರ್ ನೀನೇ ಎಂದು ಅವಳನ್ನು ನೇಮಿಸಿ, ಮುಂದೆ ವಿಶಿಷ್ಟವಾಗಿ ಪ್ರೊಪೋಸ್ ಮಾಡಿದರೆ ಬೇಡ ಅನ್ನಲು ಯಾವ ನಾಯಕಿಗೆ ಮನ ಬಂದೀತು? ಆದರೂ ಬೇಡ ಎನ್ನಲು ಇವಳು ನಮ್ಮ ಕಥಾನಾಯಕಿ ಅಲ್ಲವೇ?! ಇಷ್ಟೆಲ್ಲ ನಡೆದ ನಂತರ ವಿಶ್ವ ರಾಮನನ್ನು ನಾಯಕಿಯೇ ಪ್ರಿಯತಮನೊಂದಿಗೆ ಕೊಲ್ಲುವುದೆಂದರೇನು. ಹೀಗೆ ರೋಮಾಂಚಕಾರಿಯಾಗಿ ಸಾಗುತ್ತಾ ನಮ್ಮನ್ನು ಆವರಿಸುತ್ತಾ ಸಾಗುವ ಈ ಕಾದಂಬರಿ ವಿಭಿನ್ನವಾಗಿ ಮೂಡಿಬಂದಿದೆ.
ರವಿಕುಮಾರ್ ನಡೆಸಿದ ಇನ್ವೆಸ್ಟಿಗೇಷನ್ ತಿರುವು ಬರುವುದು ಅವರ ಹೆಂಡತಿ ವಕೀಲೆ ಸುರಭಿ ಆಗಮನದ ನಂತರ. ಗೆಳತಿಯ ಮದುವೆಗೆ ದೂರದ ರಾಜ್ಯಕ್ಕೆ ಹೋದ ಸುರಭಿ ಬೇಗನೆ ಇನ್ವೆಸ್ಟಿಗೇಷನ್ ಮುಗಿಸಿ ಬರುವ ರವಿಯ ನಿರೀಕ್ಷೆಯಲ್ಲಿದ್ದರೂ, ಮದುವೆ ಮುಗಿಸಿ ಅವಳು ಬಂದಾಗ ಇನ್ನೇನು ಇನ್ವೆಸ್ಟಿಗೇಷನ್ ಮುಗಿದಿದೆ ಎಂದು ಹೇಳುವ ರವಿಯ ಕಥೆಗೆ ಅವಳಿಗೆ ಸಿಗುವ ಸಣ್ಣ ಸುಳಿವು ಪೂರ್ತಿ ಕತೆಗೆ ತಿರುವು ನೀಡುವುದೆಂದರೇನು? ಕಥೆಯಲ್ಲಿ ಬರುವ ವಿವಿಧ ಪಾತ್ರಗಳಾದ ನಾಯಕಿಯ ತಂದೆ ತಾಯಿ, ಆಂತೋನಿ, ಅವನ ಗೆಳೆಯರು, ವಿಶ್ವರಾಮ್, ಅವರ ಕುಟುಂಬದವರು ಹೀಗೆ ಪ್ರತಿಯೊಬ್ಬರ ಭಾವನೆ ಮನಸ್ಸು ಬೇರೆ ಬೇರೆಯಾಗಿತ್ತು. ಅವರವರ ಭಾವವನ್ನು ನಮ್ಮ ಮುಂದೆ ಹಂಚಿಕೊಳ್ಳುತ್ತಾ ಅವರೆಲ್ಲರ ಭಾಷೆಯಲ್ಲಿಯೇ ನಮ್ಮ ಮುಂದೆ ಇಡುತ್ತಾ ಸಾಗುವ ಪತ್ರಕರ್ತನ ಸಂದರ್ಶನ ಮುಂದೆ ನಾವೆಲ್ಲ ಓದಿರುವ ಈ ಕಾದಂಬರಿಯ ಕಥೆಯನ್ನೇ ಚಲನಚಿತ್ರವಾಗಿ ನಿರ್ಮಿಸುವ ಪತ್ರಕರ್ತನ ಕಥೆ ನಾನು ಸತ್ಯವನ್ನು ಹೇಳುತ್ತೇನೆ.
ನಿಮ್ಮ ಮುಂದೆ ಪೂರ್ತಿ ಕತೆಯನ್ನೇ ಹೇಳಿದೇನೇನೋ ಎಂದು ಕೊಳ್ಳಬೇಡಿ, ಇದು ಜಸ್ಟ್ ಟೀಸರ್ ಅಷ್ಟೇ. ಚಲನಚಿತ್ರವನ್ನು ನೋಡುವಷ್ಟೇ ಕಾತುರದಲ್ಲಿ ಈ ಕಾದಂಬರಿಯನ್ನು ನೀವು ಓದುವುದರಲ್ಲಿ ಸಂಶಯವಿಲ್ಲ. ಪ್ರತಿ ಪಾತ್ರಗಳಿಗೆ ಜೀವ ತುಂಬುವ ಕೆಲಸ ಕಾದಂಬರಿ ಕರ್ತೃ ಬಹಳ ಚೆನ್ನಾಗಿ ಮಾಡಿಕೊಟ್ಟಿದ್ದಾರೆ. ಇನ್ನು ಓದುವ ಜವಾಬ್ದಾರಿ ನಿಮ್ಮದು.
ಪುಸ್ತಕ : ‘ನಾನು ಸತ್ಯವನ್ನೇ ಹೇಳುತ್ತೇನೆ’
ಲೇಖಕರು : ಸೂರ್ಯಸಖ ಪ್ರಸಾದ್ ಕುಲಕರ್ಣಿ
ಬೆಲೆ : 250/-
ಪುಟ : 216+4
ಪ್ರಕಾಶನ : ಹೆಚ್.ಎಸ್.ಆರ್.ಎ. ಪ್ರಕಾಶನ

ವಿಮರ್ಶಕಿ : ಸಾವಿತ್ರಿ ಶ್ಯಾನುಭಾಗ
ಮಲೆನಾಡಿನ ಸಿರ್ಸಿ ಊರಿನವರಾದ ಸಾವಿತ್ರಿ ಶಾನುಭಾಗ್ ಬೆಂಗಳೂರಿನಲ್ಲಿ ಏಳು ವರುಷ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಗೃಹಿಣಿಯಾಗಿ ಓದುವ ಬರೆಯುವ ಹವ್ಯಾಸವನ್ನು ಮುಂದುವರಿದಿದ್ದಾರೆ. ಇದುವರೆಗೂ ಮಹಿಳೆಯರು, ಅವರ ಜೀವನದ ಬಗ್ಗೆ ಬರಹಗಳನ್ನು ಬರೆದು, ಅವುಗಳ ಕಿರುಪರಿಚಯ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರ ಆಟೋಟಗಳಲ್ಲೇ ಸಮಯ ಕಳೆಯುತ್ತಾ ಅವರ ಕುರಿತು, ಅವರನ್ನು ನಿಭಾಯಿಸುವ ಕುರಿತು ಬರೆಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಇವರ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
