ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಇದರ ವತಿಯಿಂದ ಆಯೋಜಿಸಲಾದ ‘ಕಲಾಭವ’ ಮಾಸಿಕ ನೃತ್ಯ ಸರಣಿಯ 14ನೇ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2026ರಂದು ಮಂಗಳೂರಿನ ಸುಬ್ರಹ್ಮಣ್ಯ ಸದನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ‘ಕಲಾದೀಪ’ ಖ್ಯಾತಿಯ ವಿದ್ವಾನ್ ದೀಪಕ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ದಂಪತಿಗಳ ಭರತನಾಟ್ಯ ಪ್ರಸ್ತುತಿ ‘ಮಾತೆ – ಜಗನ್ಮಾತೆಗೆ ನೃತ್ಯ ನಮನ’ ಕಲಾಸಕ್ತರ ಮನಸೂರೆಗೊಂಡಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ರಂಗಕಲಾವಿದ ಶ್ರೀ ರವಿ ಚಾರ್ಮಾಡಿ ಇವರು ಮಾತನಾಡಿ, “ಹಿಂದಿನ ರಂಗಭೂಮಿಯಲ್ಲಿ ಕಲಾವಿದರು ಮತ್ತು ಪ್ರೇಕ್ಷಕರು ಪರಸ್ಪರ ಹತ್ತಿರವಿದ್ದು ಕಲೆಯೊಂದಿಗೆ ನೇರವಾದ ಭಾವನಾತ್ಮಕ ಸಂಬಂಧ ಹೊಂದಿದ್ದರು. ಆದರೆ ಪಾಶ್ಚಾತ್ಯ ಅನುಕರಣೆಯ ಪ್ರಭಾವದಿಂದ ಈ ಆತ್ಮೀಯತೆ ಕಡಿಮೆಯಾಗುತ್ತಿರುವುದು ವಿಷಾದನೀಯ. ಇಂತಹ ಸಾಂಪ್ರದಾಯಿಕ ವಾತಾವರಣದಲ್ಲಿ ನಡೆದ ಕಲಾಭಾವ ಕಾರ್ಯಕ್ರಮ ಮನಸ್ಸಿಗೆ ಅಪಾರ ಮುದ ನೀಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾದೀಪ ದಂಪತಿಗಳ ನೃತ್ಯ ಪ್ರಸ್ತುತಿಯನ್ನು ಶ್ಲಾಘಿಸಿದ ಅವರು, ಶಾಸ್ತ್ರಬದ್ಧತೆ, ಅಹಂರಹಿತ ಕಲಾಸೇವೆ ಹಾಗೂ ವೇದಿಕೆಯ ಘನತೆಯನ್ನು ಅರಿತುಕೊಂಡ ಅವರ ಪ್ರಸ್ತುತಿ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು. ಅದರಲ್ಲೂ ಮಾತೆಗೆ ಸಲ್ಲಿಸಿದ ನೃತ್ಯನಮನ ಅತ್ಯಂತ ಅದ್ಭುತವಾಗಿ ಮೂಡಿಬಂದಿದೆ ಎಂದು ಪ್ರಶಂಸಿಸಿ, ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ ಕಲಾಸೂರ್ಯ ನೃತ್ಯಾಲಯದ ಪ್ರಯತ್ನವನ್ನು ಅಭಿನಂದಿಸಿದರು.


ಕುಮಾರಿ ಶ್ರೇಯಾ ಭಾಪಟ್ ಹಾಗೂ ಕುಮಾರಿ ಪ್ರಾರ್ಥನಾ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ಮಾಸ್ಟರ್ ಶ್ಯಾಮ್ ಪಡುವೆಟ್ನಾಯ ಅವರ ಓಂಕಾರನಾದ, ಗುರು ಸೌಜನ್ಯ ಪಡುವೆಟ್ನಾಯ ಅವರ ಶಂಖನಾದ ಹಾಗೂ ಕುಮಾರಿ ಪ್ರಿಷಾ ಅವರ ಪಂಚಾಂಗ ಪಠಣ ಕಾರ್ಯಕ್ರಮಕ್ಕೆ ಶುಭಾರಂಭ ನೀಡಿದವು. ನವರಾತ್ರಿಯ ಮಹತ್ವದ ಕುರಿತು ಕುಮಾರಿ ಸಾನಿಧ್ಯ ಮಾಹಿತಿ ಹಂಚಿಕೊಂಡರು. ಕಲಾಸೂರ್ಯ ನೃತ್ಯಾಲಯದ ನೃತ್ಯಗುರು ವಿದುಷಿ ಸೌಜನ್ಯ ವಿ. ಪಡುವೆಟ್ನಾಯ ಸ್ವಾಗತಿಸಿ, ಕುಮಾರಿ ಮನ್ವಿತಾ ಕಾರ್ಯಕ್ರಮ ನಿರೂಪಿಸಿದರು.

