ಮುಂಬಯಿ : ಮುಂಬಯಿ ವಿಶ್ವವಿದ್ಯಾಲಯದ ಹೆಮ್ಮೆಯ ಪ್ರಕಟಣೆ ‘ಭಾರತೀಯ ಜ್ಞಾನ ಪರಂಪರೆ’ ಕನ್ನಡ ಆವೃತ್ತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ರವೀಂದ್ರ ಕುಲಕರ್ಣಿ ಇವರು ದಿನಾಂಕ 19 ಎಪ್ರಿಲ್ 2026ರಂದು ಸಂಜೆ 6-00 ಗಂಟೆಗೆ ಮೈಸೂರು ಅಸೋಸಿಯೇಷನ್, ಬಾವುದಾಜಿ ರಸ್ತೆ, ಮಾಟುಂಗ ಇಲ್ಲಿನ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ.
ಈ ಕೃತಿಯ ಮುಖ್ಯ ಸಂಪಾದಕರಾಗಿ ಪ್ರಾಚಾರ್ಯ ಡಾ. ಎಂ.ಆರ್. ರಾಜವಾಡೆ ಇವರು ಕೆಲಸ ಮಾಡಿದ್ದು, ಸಂಪಾದಕರಾಗಿ ಕಾರ್ಯನಿರ್ವಹಿಸಿದ ಡಾ. ಪ್ರಕಾಶ್ ಮಸ್ರಾಮ್ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿಲಿದ್ದಾರೆ. ದೇಶದ ಮೊದಲ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಮುಂಬಯಿ ವಿಶ್ವವಿದ್ಯಾಲಯ ತನ್ನ ನೂರ ಎಪ್ಪತ್ತರ ಸಂಭ್ರಮದ ಅಂಗವಾಗಿ ಭಾರತದ ಎಲ್ಲ ಭಾಷೆಗಳಲ್ಲಿ ಭಾರತೀಯ ಜ್ಞಾನಪರಂಪರೆ ಎಂಬ ವಿಶೇಷವಾದ ಆಕರ ಗ್ರಂಥವನ್ನು ಪ್ರಕಟಿಸಲು ಮುಂದಾಗಿದ್ದು, ಕನ್ನಡ ಆವೃತ್ತಿಯ ಪ್ರಕಟಣೆಯ ಪ್ರಾಯೋಜಕತ್ವವನ್ನು ಶತಮಾನದ ಸಂಭ್ರಮದಲ್ಲಿರುವ ಮೈಸೂರು ಅಸೋಸಿಯೇಷನ್ ವಹಿಸಿಕೊಂಡಿದೆ.

ಮುಂಬಯಿ ವಿಶ್ವವಿದ್ಯಾಲಯದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಭಾರತೀಯ ಜ್ಞಾನ ಪರಂಪರೆ’ ಮರಾಠಿ ಹಾಗೂ ಇಂಗ್ಲೀಷ್ ಆವೃತ್ತಿಗಳು ಈಗಾಗಲೇ ಲೋಕಾರ್ಪಣೆಯಾಗಿದ್ದು, ಇದೀಗ ಕನ್ನಡ ಆವೃತ್ತಿಯ ಸಂಪಾದಕರಾಗಿ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಇವರು ಕಾರ್ಯನಿರ್ವಹಿಸಿದ್ದು, ಅನುವಾದದಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ, ಸಂಶೋಧನ ವಿದ್ಯಾರ್ಥಿಗಳಾದ ಕಲಾ ಭಾಗ್ವತ್, ಸವಿತಾ ಅರುಣ್ ಶೆಟ್ಟಿ ಅನುವಾದ ಕಾರ್ಯದಲ್ಲಿ ಸಹಕರಿಸಿದ್ದಾರೆ. ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕರಾದ ಡಾ. ಉಮಾ ರಾಮರಾವ್ ಇವರು ವಿಷಯ ತಜ್ಞರಾಗಿ ಈ ಕೃತಿಯನ್ನು ಪರಿಶೀಲಿಸಿ ಕೊಟ್ಟಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಅಸೋಸಿಯೇಷನ್ನಿನ ಅಧ್ಯಕ್ಷರಾದ ಕೆ. ಕಮಲಾ ಇವರು ವಹಿಸಿಲಿದ್ದಾರೆ ಎಂಬುದಾಗಿ ಮೈಸೂರು ಅಸೋಸಿಯೇಷನ್ನಿನ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ ತಿಳಿಸಿದ್ದಾರೆ.

