ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ ಸಾರತ್ಯದ ‘ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಆಯೋಜಿಸುತ್ತಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ 2026’ವನ್ನು ದಿನಾಂಕ 11 ಅಕ್ಟೋಬರ್ 2026ರಿಂದ 20 ಅಕ್ಟೋಬರ್ 2026ರವೆರೆಗೆ ಶ್ರೀ ದುರ್ಗಾಂಬಾ ವೇದಿಕೆಯಲ್ಲಿ ಆಯೋಜಿಸಲಾಗಿದೆ.
ದಿನಾಂಕ 11 ಅಕ್ಟೋಬರ್ 2026ರಂದು ಪ್ರಾರಂಭವಾಗುವ ದಸರಾ ಕಾರ್ಯಕ್ರಮಗಳನ್ನು ಎಡನೀರು ಶ್ರೀಗಳು ಉದ್ಘಾಟಿಸಲಿದ್ದು, ಪ್ರಧಾನ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ರೀತಿ ಕಾಸರಗೋಡು ದಸರಾ ಸಂಕೀರ್ತನಾ ದಶಾಹ ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಭಜನಾ ಪರಿಷತ್ ತಾಲೂಕು ಅಧ್ಯಕ್ಷರಾದ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿರುವರು. ಸುಮಾರು 28 ಭಜನಾ ತಂಡಗಳು ದಶಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲ ತಂಡ ಹಾಗೂ ಸದಸ್ಯರಿಗೆ ‘ಕಾಸರಗೋಡು ದಸರಾ ಸಾಧಕ ಸನ್ಮಾನ’ ನೀಡಿ ಗೌರವಿಸಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಕವಿಸಮ್ಮೇಳನ, ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ. ಸುಮಾರು 60 ಅಂತರ್ ರಾಜ್ಯ -ರಾಷ್ಟ್ರ ಮಟ್ಟದ ಕವಿಗಳು ಭಾಗವಹಿಸಲಿದ್ದಾರೆ. ಮೈಸೂರು ರಾಜ ವಂಶದ ಪ್ರಮುಖರಾದ ಡಾ. ಬಿ. ಶ್ರೀನಿವಾಸ ಬಹದೂರ್ ಸರ್ವಾಧ್ಯಕ್ಷತೆಯಲ್ಲಿ ಡಾ. ಎಮ್.ಜಿ.ಆರ್. ಅರಸ್ ಮೈಸೂರು ಉದ್ಘಾಟಿಸುವ ಕವಿ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮೈಸೂರಿನ ಖ್ಯಾತ ಕವಿ ಸಾಹಿತಿ ಜಯಪ್ಪ ಹೊನ್ನಾಳಿ ವಹಿಸಲಿದ್ದಾರೆ. ಗುರುರಾಜ್ ಕಾಸರಗೋಡು ನೇತೃತ್ವದಲ್ಲಿ ಕಲಾಮೇಳ ನಡೆಯಲಿದೆ. ಕನ್ನಡ ಭವನ ಪ್ರಕಾಶನದ 15ನೇ ಕೃತಿ ಲೇಖಕಿ ರೇಖಾ ಸುಧೇಶ್ ರಾವ್ ಇವರ ಸಪ್ತಯಾನ’ ಪ್ರವಾಸ ಕಥನ ಲೋಕಾರ್ಪಣೆ, ಗಡಿನಾಡ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ ಕಲಾವಿದರ ಕಲವರ -ಶ್ರೀ ವಸಂತ ಬಾರಡ್ಕ ಇವರ ಶ್ರೀ ವಾರಿ ಮೆಲೋಡಿಸ್ ಇವರ ‘ಭಕ್ತಿ ರಸ ಮಂಜರಿ’, ನಾಯಕರ ವೆಂಕಟ್ರಮಣಮಣಯ್ಯ ಸಂಸ್ಮರಣೆ, ಭಿಕ್ಷು ಡಾ. ಲಕ್ಷ್ಮಣಾನಂದ ಸ್ವಾಮೀಜಿ ಸಂಸ್ಮರಣೆ, ರಾಮಕ್ಷತ್ರಿಯ ಸಮಾಜ ನಡೆದು ಬಂದ ದಾರಿ : ವಿಚಾರ ಸಂಕಿರಣ, ಕಾಸರಗೋಡು ದಸರಾ ‘ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’, ಕಾಸರಗೋಡು ದಸರಾ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ’, ‘ಕನ್ನಡ ಪಯಸ್ವಿನಿ ಪ್ರಶಸ್ತಿ’ ಪ್ರದಾನ ನಡೆಯಲಿದೆ.

