ಮಂಗಳೂರು : ನೃತ್ಯ ಪ್ರಧಾನವಾದ, ಕಲಾವಿದರ ಸಂದರ್ಶನವನ್ನು ಒಳಗೊಂಡ ಕೃತಿಯ ಹೂರಣವನ್ನು ‘ಗೆಜ್ಜೆ ಬರೆದ ಅಕ್ಷರ’ ಪರಿಕಲ್ಪನೆಯಡಿ ನಾಟ್ಯದ ಕನ್ನಡಿಯಲ್ಲಿ ಬಿಂಬಿಸಿದಾಗ ಸೇರಿದ್ದ ಕಲಾಸಕ್ತರಲ್ಲಿ ರೋಮಾಂಚನ, ಪುಳಕ. ‘ಮಯೂರ’ ಮಾಸಪತ್ರಿಕೆಯಲ್ಲಿ ಪ್ರಕಟಗೊಂಡ ರಾಜಲಕ್ಷ್ಮಿ ಕೋಡಿಬೆಟ್ಟು ಇವರ ‘ಲಲಿತ ಮಂಟಪ’ ಅಂಕಣದ ಪುಸ್ತಕ ರೂಪದ ಬಿಡುಗಡೆ ಕಾರ್ಯಕ್ರಮವು ದಿನಾಂಕ 25 ಮಾರ್ಚ್ 2026ರಂದು ಮಂಗಳೂರಿನ ಹಂಪನಕಟ್ಟೆಯ ‘ಸಪ್ನ ಬುಕ್ ಹೌಸ್’ನಲ್ಲಿ ನಡೆಯಿತು.
ಕೃತಿಯಲ್ಲಿರುವ ಕಲಾವಿದರ ಮಾತುಕತೆ ಜೀವನದ ಕುರಿತ ಮಾಹಿತಿಯ ತುಣುಕುಗಳನ್ನು ಸಪ್ನಾ ಬುಕ್ ಹೌಸ್ ವೇದಿಕೆಯಲ್ಲಿ ಅಭಿನಯಿಸಿ ತೋರಿಸಿದವರು ವಿದುಷಿ ಮಂಜುಳಾ ಸುಬ್ರಹ್ಮಣ್ಯ. ‘ಲಲಿತ ಮಂಟಪ’ದಲ್ಲಿ ಇರುವ 20 ಕಲಾವಿದರ ಸಂದರ್ಶನ ಲೇಖನಗಳಲ್ಲಿ ಕೆಲವನ್ನು ಮಂಜುಳಾ ರಂಗಕ್ಕೆ ಅಳವಡಿಸಿದ್ದರು. ಅಕ್ಷರಗಳಲ್ಲಿ ಮೂಡಿದ ಮಾಹಿತಿಯನ್ನು ಗೆಜ್ಜೆ ನಾದದ ಮೂಲಕ ಪ್ರಸ್ತುತಪಡಿಸಿದರು. ಅದರಲ್ಲಿ ಭರತನಾಟ್ಯದ ಉಲ್ಲಾಸವಿತ್ತು. ಯಕ್ಷಗಾನ ನಾಟ್ಯದ ಠೀವಿ ಇತ್ತು, ಅನ್ಯನ್ಯ ನೃತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡವರ ಮಾತಿನ ಮಾಧುರ್ಯವಿತ್ತು, ಎದೆಯದನಿ ಇತ್ತು.


ಭರತನಾಟ್ಯದ ಲಾಲಿತ್ಯ, ಒಡಿಸ್ಸಿಯ ಬಿರುಸು ಹೆಜ್ಜೆ ಮತ್ತು ನವಿರು ಭಂಗಿಯನ್ನು ಪ್ರದರ್ಶಿಸಿದ ನಂತರ ಮೋಹಿನಿಯಾಟ್ಟಂ ಕಲಾವಿದೆಯ ಅಂತರಾಳಕ್ಕೆ ಜಿಗಿದರು. ಚಂಡೆ ಮದ್ದಲೆಯ ನಡೆಗಳು ಕೇಳಿದಾಗ ಸಹೃದಯರು ಯಕ್ಷಗಾನದತ್ತ ಹೊರಳಿದರು. ಆಗ ಕೇಳಿದ್ದು ಸೂರಿಕುಮೇರು ಗೋವಿಂದ ಭಟ್ಟರ ‘ನಾನು ಕಲೆಯಲ್ಲಿ ಸಾಧಿಸಿದ್ದೆಲ್ಲವೂ ಭಗವಂತನಿಗೆ ಅರ್ಪಣೆ’ ಎಂಬ ಮಾತುಗಳ ಅನುರಣನ. ಯಕ್ಷಗಾನ ನಾಟ್ಯದ ಸೊಬಗಿನಲ್ಲಿ ‘ಕಪಟ ನಾಟಕ ರಂಗ. ನಿಪುಣ ಭೀಮನ ನೋಡು’ ಎಂಬ ಹಾಡಿನಲ್ಲಿ ವಿವಿಧ ರಸಗಳ ನಿರೂಪಣೆ ಕಂಡು ಬಂತು. ಝನನ್ ಝನನ್ ಝನನ್ ಪಾಯಲ್ ಬಾಜೇ ಮೂಲಕ ತೆರೆ ಎಳೆದರು. ಚಾರುಕೇಶಿ, ಅಮೃತವರ್ಷಿಣಿ, ಶ್ರೀ, ಮೋಹನ ಮತ್ತು ಧನಶ್ರೀ ರಾಗಗಳ ಮೂಲಕ ಮೋಹಕ ಆಲಾಪ, ಗಾಯನದಲ್ಲಿ ಪವಿತ್ರಾ ಮಯ್ಯ ಸಹಕರಿಸಿದರೆ, ರಾಕೇಶ್ ಹೊಸಬೆಟ್ಟು ಇವರು ಮೃದಂಗ, ತಬಲ, ಚಂಡೆ, ಗೆಜ್ಜೆ ಮತ್ತು ಟಮ್ಕಿಯ ನಾದ ಹೊಮ್ಮಿಸಿದರು.


ಪುಸ್ತಕ ಬಿಡುಗಡೆ ಮಾಡಿದ ಪ್ರೊ. ಕೆ. ಚಿನ್ನಪ್ಪ ಗೌಡ “ಈ ಕೃತಿಯಲ್ಲಿ ಕಲಾವಿದರನ್ನು ಅರಿಯುವ ಮತ್ತು ಕಲೆಯ ಒಳಗನ್ನು ಬಗೆಯುವ ಕಾರ್ಯ ಮಾಡಲಾಗಿದೆ” ಎಂದರು. ಕಾರ್ಯಕ್ರಮದಲ್ಲಿ ಲೇಖಕಿ ರಾಜಲಕ್ಷ್ಮಿ ಕೋಡಿಬೆಟ್ಟು, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಮತ್ತು ಪತ್ರಕರ್ತ ಪಿ.ಬಿ. ಹರೀಶ್ ರೈ ಪಾಲ್ಗೊಂಡಿದ್ದರು.
