ಕಿನ್ನಿಗೋಳಿ : ಯುಗಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಕಥಾಬಿಂದು ಪ್ರಕಾಶನದ ಸಾರಥ್ಯದಲ್ಲಿ ದಿನಾಂಕ 27 ಫೆಬ್ರವರಿ 2026ರಂದು ಯುಗಪುರುಷ ಸಭಾಭವನದಲ್ಲಿ ‘ಸಾಹಿತ್ಯಾವಲೋಕನ ಹಾಗೂ ಕೃತಿ ಬಿಡುಗಡೆ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸಾಹಿತ್ಯಕ ಕಾರ್ಯಕ್ರಮಗಳು ಕನ್ನಡ ಭಾಷೆ ಹಾಗೂ ಕನ್ನಡ ಶಾಲೆಗಳ ಉಳಿವಿಗೆ ಪೂರಕ ಕೆಲಸ ಮಾಡಬೇಕು” ಎಂದು ಹೇಳಿದರು.


ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆ.ವಿ. ಲಕ್ಷ್ಮಣ ಮೂರ್ತಿಯವರ ಕನ್ನಡ ಕೃತಿಯನ್ನು ಸುನೀತಾ ಪ್ರದೀಪ್ ಕುಮಾರ್‌ರವರು ತುಳುವಿಗೆ ಅನುವಾದಿಸಿದ ಕೃತಿ ‘ಶ್ರೀ ಮಾತಾ ವೈಷ್ಟೋ ದೇವಿ’, ಜಾನಕೀದೇವಿಯವರ ‘ಬೃಂದಾವನ’ ಮತ್ತು ‘ಮೌನದ ಮಾತು’, ಪ್ರೇಮ ಪಿ.ವೈ.ಕೆ ಮೋಳೆಯವರ ‘ನೀಲಿರಾಗ’, ನಾ. ಭಾ. ಕೆಂಪರಾಜ್ ಶಾಂತಲರವರ ‘ನಾ ಕಂಡಂತೆ ನನ್ನ ಅನ್ನಪೂರ್ಣೇಶ್ವರೀ ಶಾಂತಲರಾಜ್’ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಶ್ರೀಪತಿ ಭಟ್, ಕೊಳ್ಚಪ್ಪೆ ಗೋವಿಂದ ಭಟ್, ಕೆ.ವಿ. ಲಕ್ಷ್ಮಣ್ ಮೂರ್ತಿ, ಪ್ರದೀಪ್ ಕುಮಾರ ಕಲ್ಕೂರ, ಕಸ್ತೂರಿ ಪಂಜ, ಜೊಸ್ಸಿ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.


ಪ್ರಕಾಶ್ ಸುವರ್ಣ ಹಾಗೂ ಅನಿತಾ ಶೆಣೈಯವರನ್ನು ಸಮ್ಮಾನಿಸಲಾಯಿತು. ಜಯಾನಂದ ಪೆರಾಜೆ ಸ್ವಾಗತಿಸಿ, ಪ್ರದೀಪ್ ಕುಮಾರ್ ಪ್ರಸ್ತಾವನೆಗೈದರು. ಡಾ. ಸತೀಶ್ ಎನ್. ಬಂಗೇರ ವಂದಿಸಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಇಪ್ಪತ್ತು ಮಂದಿ ಕವಿಗಳಿಂದ ಕವಿಗೋಷ್ಠಿ ನಡೆಯಿತು.

ಕೃತಿಗಳ ಪ್ರತಿಗಳಿಗೆ 93414 10153 ಪ್ರದೀಪ್ ಕುಮಾರ್ ಇವರನ್ನು ಸಂಪರ್ಕಿಸಿರಿ.
