ಮಂಗಳೂರು : ಪಾಂಚಜನ್ಯ ಪ್ರತಿಷ್ಠಾನ ಕುಡ್ಲ ಇದರ ಪ್ರಥಮ ನೃತ್ಯ ನಾಟಕ ಪ್ರಸ್ತುತಿ ‘ಶ್ರೀ ಮಂಗಳಾಪುರದ ಮಂಗಳಾಂಬೆ’ ದಿನಾಂಕ 17 ಜುಲೈ 2026ರಂದು ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದ ಕಲಾ ಮಂಟಪದಲ್ಲಿ ವೈಭವದಿಂದ ಜರುಗಿತು.
ಪ್ರಾರಂಭದಲ್ಲಿ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಎಂ. ಅರುಣ್ ಐತಾಳ್ ಇವರು ದೀಪ ಬೆಳಗಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀ ಕೃಷ್ಣಮೂರ್ತಿ ಐತಾಳ್, ಡಾ. ಪ್ರಿಯಾ ಹರೀಶ್ ಶೆಟ್ಟಿ, ಶ್ರೀ ರಂಜಿತ್, ಶ್ರೀಮತಿ ಅರ್ಚನಾ ಶೆಟ್ಟಿ, ಶ್ರೀಮತಿ ಹೇಮಲತಾ ಶೆಟ್ಟಿ ಹಾಗೂ ನವೀನ್ ಪೂಜಾರಿಯವರು ಉಪಸ್ಥಿತರಿದ್ದರು. ಯಕ್ಷ ಗುರು ಜಯಕರ್ ಪಂಡಿತ್ ಮಾತನಾಡಿ “ತುಳು ನಾಡಿನ ಭವ್ಯ ಪರಂಪರೆಯನ್ನು ಪೌರಾಣಿಕ ಕಥೆಗಳನ್ನು ಜನಮಾನಸದಲ್ಲಿ ಬಿಂಬಿಸುವ ಪಾಂಚಜನ್ಯ ಪ್ರತಿಷ್ಠಾನದ ಪ್ರಯತ್ನ ಯಶಸ್ವಿಯಾಗುತ್ತಿರಲಿ” ಎಂದು ಶುಭ ಹಾರೈಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರದರ್ಶನಗೊಂಡ ‘ಶ್ರೀ ಮಂಗಳಾಪುರದ ಮಂಗಳಾಂಬೆ’ ಎಂಬ ಪೌರಾಣಿಕ ನೃತ್ಯ ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಂಡರು. ನೃತ್ಯ ನಾಟಕದ ಗಾಯನಕ್ಕೆ ಸಹಕಾರವನ್ನಿತ್ತ ಶ್ರೀಮತಿ ಲಾವಣ್ಯ ಸುಧಾಕರ್ ಇವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಶ್ರೀಮತಿ ಮಲ್ಲಿಕಾ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

