ಸಾಲಿಗ್ರಾಮ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಆಯೋಜಿಸಿಕೊಂಡ ‘ಅರ್ಥಾಂಕುರ-27’ರಲ್ಲಿ ‘ನಾಗರಾಜ ಹಂದೆ ಸಂಸ್ಮರಣೆ’ ಕಾರ್ಯಕ್ರಮವು ದಿನಾಂಕ 08 ಆಗಸ್ಟ್ 2026ರಂದು ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಮರಣಾ ಮಾತುಗಳನ್ನಾಡಿದ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ “ದಿವಂಗತ ನಾಗರಾಜ ಹಂದೆಯವರು ಬಹಳಷ್ಟು ಕಾಲ ಸಾಲಿಗ್ರಾಮ ದೇಗುಲದಲ್ಲಿ ಮ್ಯಾನೆಜರ್ ಆಗಿ ದುಡಿದವರು. ಕಲಾಸಕ್ತಿಯಿಂದ ಹೆಚ್ಚು ಕಲಾ ತಂಡಗಳಿಗೆ ಸ್ಪೂರ್ತಿಯಾಗಿ ಕಾರ್ಯಕ್ರಮ ನೆರವೇರಿಸಿಕೊಡುವಲ್ಲಿ ಶ್ರಮಿಸಿದವರು. ಕಲಾ ತಂಡಗಳನ್ನು ಆಹ್ವಾನಿಸಿಕೊಂಡು ವಿಶೇಷ ಆಹ್ವಾನವೀಯುತ್ತಾ ಅತಿಥಿ ಸತ್ಕಾರದಿಂದ ಮನ ಗೆದ್ದವರು. ಅವರಿಲ್ಲ ಎಂಬುದು ಅತ್ಯಂತ ನೋವು ತಂದಿದೆ” ಎಂದು ಹೇಳಿದರು.

ದೇಗುಲದ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ ಮಾತನಾಡಿ, “ಕುಟುಂಬದ ಸದಸ್ಯನಂತೆ ದೇಗುಲದ ಏಳ್ಗೆಗಾಗಿ ಶ್ರಮಿಸಿದ ನಾಗರಾಜ ಹಂದೆಯವರ ಅಕಾಲ ಮರಣ ಮನಸ್ಸಿಗೆ ಬೇಸರ ತಂದಿದೆ” ಎಂದರು. ಮೃತರ ಸಹೋದರ ಭಾಸ್ಕರ ಹಂದೆ ಮಾತನಾಡಿ ಅನವರತವೂ ದೇಗುಲದ ಸಮಸ್ತ ಏಳ್ಗೆಗೆ ಶ್ರಮಿಸಿದ ಸಹೋದರನ ಸಾವಿನ ಬಾಧೆಯನ್ನು ತೋಡಿಕೊಂಡರು. ದೇಗುಲದ ಸಿಬ್ಬಂದಿ ಗಣೇಶ್ ಭಟ್, ಹಿರಿಯ ಭಾಗವತ ಕರ್ಜೆ ಶ್ರೀಧರ ಹೆಬ್ಬಾರ್, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಡಾ. ಜಗದೀಶ್ ಶೆಟ್ಟಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಬಳಿಕ ತೆಂಕುತಿಟ್ಟಿನ ಹಿಮ್ಮೇಳದೊಂದಿಗೆ ‘ಕದಂಬ ಕೌಶಿಕೆ’ ಯಕ್ಷಗಾನ ತಾಳಮದ್ದಳೆ ರಂಗ ಪ್ರಸ್ತುತಿಗೊಂಡಿತು.

