Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ಮಣ್ಣಿನ ಮಗ’ | ಸೆಪ್ಟೆಂಬರ್ 16

    September 15, 2026

    ಪುಸ್ತಕ ವಿಮರ್ಶೆ | ವಚನ ಸಾಹಿತ್ಯದ ಗುಣಾತಿಶಯಗಳ ಗುರುತಿಸುವಿಕೆ

    September 15, 2026

    ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಯಕ್ಷ ಶ್ರಾವಣ -6’ ತಾಳಮದ್ದಳೆ

    September 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ಮನಸೆಳೆದ ವೈವಿಧ್ಯಪೂರ್ಣ ಚೇತೋಹಾರಿ ‘ನೃತ್ಯ ಸಮಾಗಮ’
    Article

    ನೃತ್ಯ ವಿಮರ್ಶೆ | ಮನಸೆಳೆದ ವೈವಿಧ್ಯಪೂರ್ಣ ಚೇತೋಹಾರಿ ‘ನೃತ್ಯ ಸಮಾಗಮ’

    September 15, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಖ್ಯಾತ ನಾಟ್ಯಗುರು ವಿದುಷಿ ಜ್ಯೋತಿ ಪಟ್ಟಾಭಿರಾಮ್ ಮತ್ತು ಡಾ. ಸಾಧನಶ್ರೀ ನೇತೃತ್ವದ ‘ಸಾಧನ ಸಂಗಮ ಟ್ರಸ್ಟ್’ ನೃತ್ಯ ಸಂಸ್ಥೆ ಪ್ರತಿಬಾರಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೊಸದನ್ನೇನ್ನಾದರೂ ಪ್ರಯೋಗಿಸುವ ಪದ್ಧತಿ ನಡೆಸಿಕೊಂಡು ಬಂದಿದೆ. ಅಲ್ಲಿ ನೃತ್ಯ ಕಲಿಯುವ ಎಲ್ಲ ಮಕ್ಕಳಿಗೂ ನರ್ತಿಸುವ ಅವಕಾಶ ಮತ್ತು ವೇದಿಕೆ ಒದಗಿಸುವ ಕಾರ್ಯವನ್ನು ಸಂಸ್ಥೆ ಬಹು ಬದ್ಧತೆಯಿಂದ ಪಾಲಿಸಿಕೊಂಡು ಬಂದಿರುವುದು ಸ್ತುತ್ಯಾರ್ಹ ಸಂಗತಿ. ಪ್ರತಿ ಸಲವೂ ವಿಭಿನ್ನ ಕಾರ್ಯಕ್ರಮದ ಅರ್ಪಣೆ ‘ಸಾಧನ ಸಂಗಮ’ದ ಅಸ್ಮಿತೆ. ಇನ್ನೂ ಒಂದು ಇದರ ವಿಶೇಷತೆ ಎಂದರೆ, ಹಿರಿಯ ವಿದ್ಯಾರ್ಥಿಗಳ ‘ನಿಪುಣ ತಂಡ’ದ ಪ್ರತಿಯೊಬ್ಬ ನುರಿತ ನೃತ್ಯ ಕಲಾವಿದೆಯರು ಕಿರಿಯರಿಗೆ ಮಾರ್ಗದರ್ಶನ ಮಾಡಿ ತಮ್ಮ ನೃತ್ಯ ಸಂಯೋಜನೆ ಮತ್ತು ದಿಗ್ದರ್ಶನದಲ್ಲಿ ಒಂದು ಗುಂಪಿನ ಮಕ್ಕಳಿಗೆ ಹೊಸದೊಂದು ಕೃತಿ ಕಲಿಸಿ ಪ್ರದರ್ಶನಕ್ಕೆ ಅನುವು ಮಾಡಿಕೊಡುತ್ತಾರೆ. ಇದರಿಂದ ಹಿರಿಯ ವಿದ್ಯಾರ್ಥಿಗಳಿಗೂ ತಮ್ಮ ಪರಿಕಲ್ಪನೆ – ನೃತ್ಯ ಸಂಯೋಜನೆಯನ್ನು ಪ್ರಯೋಗಿಸುವ ಸದವಕಾಶ, ಅದನ್ನು ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ ಕೂಡ.

    ಈ ಬಾರಿ ಸಂಸ್ಥೆಯ ನಾಲ್ಕುದಶಕಗಳ ಸಂಭ್ರಮಾಚರಣೆಯನ್ನು ಬಹು ವೈವಿಧ್ಯಪೂರ್ಣದ ‘ನೃತ್ಯ ಸಮಾಗಮ’ವನ್ನು ನಗರದ ಶ್ರೀ ಪುಟ್ಟಣ್ಣ ಚೆಟ್ಟಿ ಟೌನ್ ಹಾಲಿನಲ್ಲಿ ಕಿಕ್ಕಿರಿದ ಕಲಾಭಿಮಾನಿಗಳ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಶುಭಾರಂಭದಲ್ಲಿ ಸಾಧನ ಸಂಗಮ ಡ್ಯಾನ್ಸ್ ಸೆಂಟರಿನ ಉತ್ಸಾಹೀ ಉದಯೋನ್ಮುಖ ನೃತ್ಯಕಲಾವಿದೆಯರಿಂದ ಪ್ರದರ್ಶಿತವಾದ ಚೇತೋಹಾರಿ ನೃತ್ಯವೈವಿಧ್ಯ ಮನರಂಜಿಸಿತು. ಎಂದಿನಂತೆ ಒಂದು ಸುಂದರ ನೃತ್ಯರೂಪಕ ಕಡೆಯಲ್ಲಿ ನಿಪುಣ ನರ್ತಕಿಯರೊಡಗೂಡಿ ಗುರು ಡಾ. ಪಿ. ಸಾಧನಾಶ್ರೀ ಕೂಡ ನರ್ತಿಸುವ ಪರಿಪಾಠ. ಈ ಸಲ ಅವರು ಆರಿಸಿಕೊಂಡ ‘ವಚನ ವೈಭವ’ ನೃತ್ಯರೂಪಕದಲ್ಲಿ ಮೂಡಿಬಂದ ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರರ ಹಲವಾರು ವಚನಗಳ ದೃಶ್ಯ ಸಾಕ್ಷಾತ್ಕಾರ ಹೊಸ ಅನುಭವವನ್ನು ಕಟ್ಟಿಕೊಟ್ಟಿತು.

    ಹನ್ನೆರಡನೆಯ ಶತಮಾನದ ವಚನಕ್ರಾಂತಿ ಅನೇಕ ವಿಧಗಳಲ್ಲಿ ಇಂದಿನವರೆಗೂ ತನ್ನ ಪರಿಣಾಮವನ್ನು ಉಳಿಸಿಕೊಂಡು ಬಂದಿರುವುದು ನಿಜಕ್ಕೂ ಚೋದ್ಯ. ಇಂದಿಗೂ ಪ್ರಸ್ತುತವಾದ ವಚನಕಾರರ ವಿಚಾರಧಾರೆಗಳು, ಸಾಹಿತ್ಯ, ಸಂಗೀತ, ನಾಟಕ ಪ್ರಕಾರಗಳ ಸಾಮಾಜಿಕ ಹೊಸ ಆಯಾಮಗಳ ಶೋಧದಲ್ಲಿ ಹಲವು ನೃತ್ಯರೂಪಕಗಳ ಸೃಷ್ಟಿಗೆ ಕಾರಣವಾಗುತ್ತಿರುವುದು ಅದರ ಶ್ರೀಮಂತಿಕೆಗೆ ಸಾಕ್ಷಿ. ಈ ದಿಸೆಯಲ್ಲಿ ಅಂದು ಪ್ರಸ್ತುತಪಡಿಸಿದ ‘ವಚನಗಳ ವೈಭವ’ ಆಸಕ್ತಿಯನ್ನು ಕೆರಳಿಸಿದಂಥ ವಿನೂತನ ಪ್ರಯೋಗವೆಂದರೆ ಖಂಡಿತಾ ಅತಿಶಯೋಕ್ತಿಯಲ್ಲ.

    ಅಂದು ಆರಿಸಿಕೊಳ್ಳಲಾಗಿದ್ದ ಎಂಟು ವಚನಗಳಲ್ಲಿ ಪ್ರಮುಖವಾಗಿ ಮಹಾ ಶಿವಶರಣರಾದ ಬಸವಣ್ಣ ಮತ್ತು ಶರಣೆ ಅಕ್ಕ ಮಹಾದೇವಿಯವರ ವೈಚಾರಿಕತೆ, ವಿಚಾರಧಾರೆ ಮತ್ತು ಜೀವನ ದರ್ಶನವನ್ನು ಒಳಗೊಂಡು ಅರ್ಥಪೂರ್ಣವಾಗಿದ್ದು, ಅವುಗಳನ್ನು ನರ್ತಕಿಯರು ತಮ್ಮ ಅಮೋಘವಾದ ಅಭಿನಯದಲ್ಲಿ ಸಾಮರಸ್ಯದಿಂದ ಸಾಕಾರಗೊಳಿಸಿದರು. ಅವುಗಳಿಗೆ ಸೂಕ್ತವಾದ ಅಷ್ಟೇ ಆಕರ್ಷಕ ಮೂರ್ತರೂಪಗಳನ್ನು ನೀಡಿ, ಆಕರ್ಷಕ ನೃತ್ಯ ಸಂಯೋಜನೆಯಲ್ಲಿ ರಂಗದ ಮೇಲೆ ತಂದ ಸಾಧನಾಶ್ರೀ ಅವರ ಪ್ರಯತ್ನ- ಶ್ರಮ ಸಾರ್ಥಕವಾಯಿತು.

    ಪ್ರಥಮವಾಗಿ ಮೂಡಿಬಂದ ಶ್ರೀ ಬಸವಣ್ಣನವರ ಖ್ಯಾತವಾದ, ಭಕ್ತಿರಸ ಜ್ಹೆಂಕರಿಸಿದ ‘ವಚನದಲ್ಲಿ ನಾಮಾಮೃತ ತುಂಬಿ’ ನೃತ್ಯಸಲಿಲ ಕಲಾವಿದೆಯರ ಸುಲಲಿತ ಆಂಗಿಕಾಭಿನಯದ ಸೊಗಸಿನಲ್ಲಿ ಪಡಿಮೂಡಿತು. ‘ಕೂಡಲಸಂಗಮದೊಳಗೆ ಆನು ತುಂಬಿ’ ಎಂದು ಬಸವಣ್ಣನಾಗಿ ಮೈತಳೆದು ಭಾವಪೂರ್ಣವಾಗಿ ಅಭಿನಯಿಸಿದ ಸಾಧನಶ್ರೀ ವಚನದ ಸಾರಸರ್ವಸ್ವವನ್ನು ತಾದಾತ್ಮ್ಯದಿಂದ ಅರ್ಪಿಸಿದ್ದು ವಿಶೇಷವಾಗಿತ್ತು. ನಂತರ- ‘ವೇದಪ್ರಿಯ ಶಿವನೆಂಬರು…’– ಎಂಬ ವಚನವು ಕರುಣರಸವನ್ನು ಪ್ರತಿನಿಧಿಸಿ, ಸವಿಸ್ತಾರ ಸಂಚಾರಿ ಕಥಾನಕದೊಂದಿಗೆ ಮನ ನಾಟುವಂತೆ ನಿರೂಪಿಸಲಾಯಿತು.

    ನಡು ನಡುವೆ ನರ್ತಕಿಯರು ಪ್ರಸ್ತುತಪಡಿಸಿದ ಮನಮೋಹಕ ನೃತ್ತ ವಿನ್ಯಾಸಗಳು ಕಣ್ಮನ ಸೆಳೆದವು. ಮುಂದೆ ‘ಉಳ್ಳವರು ಶಿವಾಲಯವ ಮಾಡುವರಯ್ಯ’ ಎಂಬ ವಚನ ಅರ್ಥಪೂರ್ಣವಾಗಿ ಬಿತ್ತರವಾಯಿತು. ಭಕ್ತಿಪ್ರಧಾನವಾದ ಈ ವಚನ ಅತ್ಯಂತ ಪರಿಣಾಮಕಾರಿಯಾಗಿ ಶ್ರೀವತ್ಸರ ಸಿರಿಕಂಠದಲ್ಲಿ ಉನ್ನತಸ್ತರಕ್ಕೇರಿತು. ‘ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ’ ಎಂಬ ತತ್ವವನ್ನು ಎತ್ತಿ ಹಿಡಿಯಿತು.

    ನಂತರ – ‘ಜಗದಗಲ ಮುಗಿಲಗಲ’ವಾದ ಅಗಮ್ಯ- ಅಗೋಚರ- ಅಪ್ರತಿಮ ಲಿಂಗದ ಕೂಡಲಸಂಗಮದ ದೇವಯ್ಯನನ್ನು ಮನದುಂಬಿ ಅರ್ಚಿಸಲಾಯಿತು. ನಂತರ ಮಹಾದೇವಿ ಅಕ್ಕನ ಮನೋಜ್ಞ ವಚನ- ‘ಸುಲಿಪಲ್ಲ ಗೊರವನ‘ ಸೌಂದರ್ಯವನ್ನು ಅನಾವರಣಗೊಳಿಸುವ, ಚೆನ್ನಮಲ್ಲಿಕಾರ್ಜುನನಲ್ಲಿ ಅನುರಕ್ತಳಾದ ಅವಳ ಆತ್ಮಸಾಂಗತ್ಯದ ಅವಿನಾಭಾವ ಸಂಬಂಧವನ್ನು ಅಕ್ಕನಾಗಿ ಸಾಧನಶ್ರೀ ಮನನೀಯವಾಗಿ ಅಭಿನಯಿಸಿದರು.

    ನಂತರ – ‘ಚಿಳಿ ಮಿಳಿಯೆಂದು ಓದುವ ಗಿಳಿಗಳ’ನ್ನು ‘ಸರವೆತ್ತಿ ಪಡುವ ಕೋಗಿಲೆಗಳ’ನ್ನು, ಹಾರಾಡುವ ದುಂಬಿಗಳೆ ಮುಂತಾಗಿ ಪ್ರಕೃತಿಯ ಎಲ್ಲ ಪ್ರಾಣಿ- ಪಕ್ಷಿಗಳನ್ನು, ಅಕ್ಕಾ ತನ್ನ ದೇವ ಚೆನ್ನಮಲ್ಲಿಕಾರ್ಜುನ ಎಲ್ಲಿದ್ದಾನೆಂದು ಅಕ್ಕಮಹಾದೇವಿ ದೈನ್ಯವಾಗಿ ಕೇಳಿಕೊಳ್ಳುವ ಹೃದ್ಯ ವಚನ ಭಾವಸಿಂಚನಗೈದಿತು. ಚೆನ್ನಮಲ್ಲಿಕಾರ್ಜುನನ ಮದುಮಗಳಾದ ತನಗೇಕೆ ಬೇರೆ ಶೃಂಗಾರ ಎಂದು ಕೇಳುವ ಅಕ್ಕಾ, ತನ್ನ ವಿಭಿನ್ನ ನೆಲೆಯ ಪತಿಯ ಶೃಂಗಾರದ ವೈಶಿಷ್ಟ್ಯವನ್ನು ಗೊತ್ತುಪಡಿಸುವ ವಚನ ಹೃದಯಸ್ಪರ್ಶಿಯಾಗಿತ್ತು.

    ‘ಅರಿಶಿನವನೇ ಮಿಂದು’ ಅವನ ದಾರಿಯನ್ನೇ ಕಾಯುತ್ತ ಬಾಯಾರಿದೆ ಎಂದು ಅಕ್ಕ ತನ್ನ ಹತಾಶೆಯನ್ನು ತೋಡಿಕೊಳ್ಳುವ ವಚನ ಮನಕಲಕಿತು. ಹೀಗೆ ಭಕ್ತಿ ಮತ್ತು ಶರಣಾಗತಿಯ ಭಾವದ ಕೆಲವು ಭಾವಪೂರ್ಣ ವಚನಗಳನ್ನು ಆರಿಸಿಕೊಂಡು ಬಹು ಕಲಾತ್ಮಕವಾಗಿ ಅಷ್ಟೇ ಸೊಗಸಾಗಿ ಸಾಕ್ಷಾತ್ಕರಿಸಿದ ‘ಸಾಧನ ಸಂಗಮ’ದ ಎಲ್ಲ ನಿಪುಣ ನರ್ತಕಿಯರಿಗೂ ಹೃತ್ಪೂರ್ವಕ ಅಭಿನಂದನೆಗಳು.

    ವಿದುಷಿ ಜ್ಯೋತಿ ಪಟ್ಟಾಭಿರಾಮ್ ಇವರ ಮಾರ್ಗದರ್ಶನ, ಪರಿಕಲ್ಪನೆ- ನೃತ್ಯಸಂಯೋಜನೆಯಲ್ಲಿ ಅರ್ಪಿತವಾದ ಈ ‘ವಚನ ವೈಭವ’ ನೃತ್ಯರೂಪಕವನ್ನು ಡಾ. ಸಾಧನಶ್ರೀ ಕಲಾನಿರ್ದೇಶನದಲ್ಲಿ ಸಾದರಪಡಿಸಿದ್ದು, ವಚನಗಾಯನ ಶ್ರೀವತ್ಸರ ಭಾವಪೂರ್ಣ ಕಂಠದಲ್ಲಿ ಪರಿಣಾಮಕಾರಿಯಾಗಿದ್ದು, ಜಿ. ಗುರುಮೂರ್ತಿ ಇವರ ಸಂಗೀತ ಸಂಯೋಜನೆ ಮತ್ತು ಇನ್ನಿತರ ವಾದ್ಯಗಳ ಪೂರಕ ಪರಿಣಾಮಗಳಿಂದ ‘ವಚನ ವೈಭವ’ ನೃತ್ಯರೂಪಕ ಹೃನ್ಮನ ತಣಿಸಿತು.

    *** ವೈ.ಕೆ. ಸಂಧ್ಯಾ ಶರ್ಮ

    ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.

    article baikady bharatanatyam dance Music review roovari
    Share. Facebook Twitter Pinterest LinkedIn Tumblr WhatsApp Email
    Previous Articleರಂಗಭೂಮಿ ಖ್ಯಾತ ನಿರ್ದೇಶಕ ಚಿದಂಬರ ರಾವ್ ಜಂಬೆ ಇನ್ನಿಲ್ಲ
    Next Article ಜಿಲ್ಲೆಯ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಪ್ರಬಂಧ ಸ್ಪರ್ಧೆ
    roovari

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ‘ಮಣ್ಣಿನ ಮಗ’ | ಸೆಪ್ಟೆಂಬರ್ 16

    September 15, 2026

    ಪುಸ್ತಕ ವಿಮರ್ಶೆ | ವಚನ ಸಾಹಿತ್ಯದ ಗುಣಾತಿಶಯಗಳ ಗುರುತಿಸುವಿಕೆ

    September 15, 2026

    ಸಾರ್ವಜನಿಕ ಗಣೇಶೋತ್ಸವದಲ್ಲಿ ‘ಯಕ್ಷ ಶ್ರಾವಣ -6’ ತಾಳಮದ್ದಳೆ

    September 15, 2026

    ಮೈತ್ರೇಯ ಆಯುರ್ವೇದ ಆಶ್ರಮದಲ್ಲಿ ಯಕ್ಷಗಾನ ಪ್ರದರ್ಶನ

    September 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.