ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಚೇಳ್ಯಾರು ಗುತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕೊಡಮಾಡುವ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಗಡೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 20 ಜೂನ್ 2026ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.
ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಬಿ.ಎ. ವಿವೇಕ ರೈ ಮಾತನಾಡಿ “ಪೊಳಲಿ ಶೀನಪ್ಪ ಹೆಗ್ಡೆಯವರ ಬದುಕು ಮತ್ತು ಬರಹಗಳು ಎಂದೂ ಮಾದರಿಯಾಗಿರುವಂತದ್ದು. ಸ್ವಾತಂತ್ರ್ಯ ಪೂರ್ವದಿಂದಲೇ ಅವರು ತುಳುನಾಡಿನ ಕುರಿತು ಅನೇಕ ಸಂಶೋಧನೆ ನಡೆಸಿ ಕೃತಿಗಳನ್ನು ನೀಡಿದವರು. ಆ ಸಂದರ್ಭದಲ್ಲಿ ಅವರು ಅನೇಕ ಹೊಳಹುಗಳನ್ನು ನೀಡಿ ಮುಂದಿನ ಅಧ್ಯಯನಕಾರರಿಗೆ ದಾರಿದೀಪವಾದರು. ಗದ್ಯರೂಪದಲ್ಲಿ ತುಳುನಾಡಿನ ಜನಪದ ಸಂಪತ್ತನ್ನು ಮುಖ್ಯವಾಗಿ ಪಾಡ್ದನದ ಕಥೆಗಳನ್ನು ಸಂಗ್ರಹಿಸಿ ಜಾನಪದ ಅಧ್ಯಯನಕಾರರಿಗೆ ಮಾರ್ಗದರ್ಶಿ ಸೂತ್ರವನ್ನು ಹೆಣೆದರು. ಅವರಿಗೆ ತುಳುನಾಡಿನ ವ್ಯಾಪಕವಾದ ಸಂಸ್ಕೃತಿ ಆಚಾರ ವಿಚಾರಗಳ ಕುರಿತು ಪರಿಚಯವಿತ್ತು. ಇಂದಿನ ದಿನಗಳಲ್ಲಿ ಓದು, ಸಂಶೋಧನೆಗಳು ದೂರ ಸರಿಯುತ್ತಿವೆ. ವಿಸ್ತಾರವಾದ ಅಧ್ಯಯನ ಮತ್ತು ಕ್ಷೇತ್ರ ಕಾರ್ಯಗಳಷ್ಟೇ ನಿಜ ಸತ್ಯದರ್ಶನ ಮಾಡಿಸಬಲ್ಲವು. ಆಳಅಧ್ಯಯನಗಳನ್ನು ಅಪೇಕ್ಷೆಪಡುವ ಇಂತಹ ಕ್ಷೇತ್ರಗಳು ಇಂದು ಬಡವಾಗುತಿರುವುದು ಖೇದನೀಯ” ಎಂದು ಹೇಳಿದರು.
ಪ್ರಶಸ್ತಿಯನ್ನು ಸ್ವೀಕರಿಸಿದ ಹಿರಿಯ ಲೇಖಕ, ಸಂಶೋಧಕರಾದ ಡಾ. ಬಿ. ಶಿವರಾಮ ಶೆಟ್ಟಿಯವರು ‘ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದರು. “ಸಂಶೋಧನೆ ಎಂದರೆ ಹೊಸತನ್ನು ಹೇಳುವುದಲ್ಲ ಇಲ್ಲದ್ದನ್ನೂ ಹೇಳುವುದಲ್ಲ, ಬದಲು ಆಳವಾದ ಅಭ್ಯಾಸದ ಫಲವಾಗಿ ಒಡಮೂಡುವ ವಿಶಿಷ್ಟ ಸತ್ಯ. ಆ ಬಗೆಯ ಸತ್ಯದ ಹೊಳಹುಗಳಿಗೆ ಕಾಲಾತೀತವಾಗಿ ಎಂದೂ ಸಮಸ್ಯೆಗಳು ಬರುವುದಿಲ್ಲ. ಅಂತಹ ಅಧ್ಯಯನಗಳು ಪರಾಂಬರಿಸಿ ನೋಡುವುದರಿಂದ ಸಾಧ್ಯವಾಗುತ್ತದೆ” ಎಂದರು. ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಚೇತನ್ ಮುಂಡಾಜೆ ಇವರು ಪ್ರಶಸ್ತಿ ಪುರಸ್ಕೃತರನ್ನು ಕುರಿತಾಗಿ ಅಭಿನಂದನಾ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಎಂ.ಜಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಾಯತ್ರಿ ಜಿ. ಪೈ ಉಪಸ್ಥಿತರಿದ್ದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಶಸ್ತಿಯ ಪ್ರಾಯೋಜಕರಾದ ಚೇಳ್ಯಾರು ಗುತ್ತು ಎಸ್.ಆರ್. ಹೆಗ್ಡೆ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಇಂದಿರಾ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾದರು. ಶ್ರೀ ನಾಗರಾಜ ಶಂಕರ ನಾರಾಯಣ ಪ್ರಾರ್ಥಿಸಿದರು. ಆರ್.ಆರ್.ಸಿ.ಯ ಸಹಸಂಶೋಧಕ ಡಾ. ಅರುಣ್‌ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
