ಬಂಟ್ವಾಳ : ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ) ಕಲ್ಲಡ್ಕ ಭರತನಾಟ್ಯ ಸಂಸ್ಥೆಯು 25 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. ಈ ಸಲುವಾಗಿ ದಿನಾಂಕ 26 ಅಕ್ಟೋಬರ್ 2025ರಂದು ರಜತಕಲಾಯಾನ ಎಂಬ ಶೀರ್ಷಿಕೆಯೊಂದಿಗೆ ಉದ್ಘಾಟನಾ ಸಮಾರಂಭವು ನಡೆದು ವರ್ಷಪೂರ್ತಿ ಭರತನಾಟ್ಯ ಸಂಬಂಧಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಯಿತು. ರಜತ ಕಲಾಯಾನದ ಸಮಾರೋಪ ಸಮಾರಂಭವನ್ನು ದಿನಾಂಕ 23 ಮತ್ತು 24 ಅಕ್ಟೋಬರ್ 2026ರಂದು ಸ್ಪರ್ಶ ಕಲಾಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಯಿತು.

ಮೊದಲನೆಯ ದಿನ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ, ಶ್ರೀ ಎಡನೀರು ಮಠ, ಕಾಸರಗೋಡು ಇಲ್ಲಿನ್ ಶ್ರೀಗಳಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾಂದಗಳು ಗುರುಶಿಷ್ಯ ಪರಂಪರೆಯ ಹಾಗೂ ಭರತನಾಟ್ಯದ ಮಹತ್ವವೂ ಸೇರಿದಂತೆ ಆಶೀರ್ವಚನವನ್ನು ನೀಡಿ ಹರಸಿದರು. ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದಂತಹ ಗುರು ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರು ಕಲಾನಿಕೇತನದ ಆರಂಭಿಕ ಹಂತದಿಂದ ಇಂದಿನ ದಿನಗಳವರೆಗಿನ ಪರಿಶ್ರಮದ ಕುರಿತು ಮೆಲುಕು ಹಾಕಿದರು. ದೀಪಪ್ರಜ್ವಲನೆಯನ್ನು ಮಾಡಿದಂತಹ ವಿಶ್ವಕಲಾನಿಕೇತಬ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಆಂಡ್ ಕಲ್ಚರ್(ರಿ) ಪುತ್ತೂರು ಭರತನಾಟ್ಯ ಸಂಸ್ಥೆಯ ನಿರ್ದೇಶಕರಾದ ಕರ್ನಾಟಕ ಕಲಾಶ್ರೀ ವಿದುಷಿ ಶ್ರೀಮತಿ ನಯನಾ ವಿ. ರೈ ಇವರು ಕಲಾನಿಕೇತನ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿನ ವಿದ್ಯಾ ಮನೋಜ್ ಅವರ ಪರಿಶ್ರಮದ ಕುರಿತು ಮಾತನಾಡಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀರಾಮ ವಿದ್ಯಾಸಂಸ್ಥೆ ಕಲ್ಲಡ್ಕ ಇದರ ಸ್ಥಾಪಕ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಭಾರತೀಯ ಕಲೆ, ಸಂಸ್ಕೃತಿಗಳ ಕುರಿತು ಮಾತನಾಡಿದರು.

ಕಲಾನಿಕೇತನ ಸಂಸ್ಥೆಯ ಮೂಲಕ ವಿದ್ವತ್ ಪದವಿಯನ್ನು ಪಡೆದಂತಹ 23 ಶಿಷ್ಯೆಯರನ್ನು ಹಾಗೂ ಕಲಾನಿಕೇತನ ಸಂಸ್ಥೆಯ ಬೆಳವಣಿಗೆಗೆ ಸಹಕರಿಸುತ್ತಾ ಅನೇಕ ವರ್ಷಗಳಿಂದ ಪ್ರೋತ್ಸಾಹವನ್ನು ನೀಡುತ್ತಿರುವಂತಹ ಸರಿಸುಮಾರು 25 ಮಹನೀಯರನ್ನು ಗುರುತಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ವಿದ್ವಾನ್ ಬಾಲಕೃಷ್ಣ ಹೊಸಮನೆ, ಶ್ರೀಮತಿ ಕವಿತಾ ಕೊರ್ನಾಯ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಯುತ ರಾಜೇಶ್ ವಿಟ್ಲ ಇವರು ಕಲಾನಿಕೇತನದೊಂದಿಗಿನ ನಂಟಿನ ಕುರಿತು ಮಾತನಾಡಿದರು.


ಕಲಾನಿಕೇತನ ಭರತನಾಟ್ಯ ಸಂಸ್ಥೆಯ ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು. ಪುಷ್ಪಾಂಜಲಿಯೊಂದಿಗೆ ಆರಂಭವಾದ ಪ್ರದರ್ಶನವು ಪುಟಾಣಿಗಲ ನಾಮರಾಮಾಯಣದ ಪ್ರಸ್ತುತಿಯೊಂದಿಗೆ ಮುಂದುವರಿಯಿತು. ಮುಂದಕ್ಕೆ ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ ಎಂದರೋ ಮಹಾನುಭಾವುಲು ಪ್ರಸ್ತುತಿಯು ಗುರುಗಳ ಸಂಯೋಜನೆ ಹಾಗೂ ಶಿಷ್ಯೆಯರ ಅಭಿವ್ಯಕ್ತಿಗೆ ಹಿಡಿದ ಕೈಗನ್ನಡಿಯಂತಿತ್ತು. ಮುಂದಿನ ಪ್ರಸ್ತುತಿಯಾಗಿ ಶ್ರೀಕೃಷ್ಣನ ಲೀಲಾವಿಲಾಸಗಳನ್ನು ಕೊಂಡಾಡುವಂತಹ ಲೀಲಾ ಮಾಧವ ಸಂಯೋಜನೆಯನ್ನು ಮಾಡಲಾಯಿತು. ಶ್ರೀಕೃಷ್ಣನ ಬಾಲ್ಯದಿಂದ ತೊಡಗಿ ವಿಶ್ವರೂಪದರ್ಶನದವರೆಗಿನ ಈ ನೃತ್ಯ ಪ್ರಸ್ತುತಿಯು ಪ್ರೇಕ್ಷಕರ ಮನಸೂರೆಗೊಂಡಿತು. ನಂತರ ದೇವಿ ಭವತಾರಿಣಿ ಎಂಬ ಶೀರ್ಷಿಕೆಯೊಂದಿಗೆ ಮಹಿಷಾಸುರ ಮರ್ಧಿನಿ ಸ್ತೋತ್ರ ಹಾಗೂ ತಿಲ್ಲಾನದೊಂದಿಗೆ ನೃತ್ಯ ಕಾರ್ಯಕ್ರಮವು ಸಂಪನ್ನಗೊಂಡಿತು.

ನಟುವಾಂಗದಲ್ಲಿ ವಿದುಷಿ ಶ್ರೀಮತಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀ ಕೃಷ್ಣ ಆಚಾರ್ಯ ಪಾಣೆಮಂಗಳೂರು, ವಿದ್ವಾನ್ ಡಾ. ವಿನೀತ್ ಪುರವಂಕರ, ಮೃದಂಗವಾದನದಲ್ಲಿ ವಿದ್ವಾನ್ ಶ್ರೀ ಗೀತೇಶ್ ಎ.ಜಿ. ನೀಲೇಶ್ವರ, ಕೊಳಲು ವಾದನದಲ್ಲಿ ಶ್ರೀ ಎ.ಎಸ್. ಹರಿಪ್ರಸಾದ್ ನೀಲೇಶ್ವರ ಹಾಗೂ ರಿದಂ ಪ್ಯಾಡ್ನಲ್ಲಿ ಶ್ರೀ ಸುಹಾಸ್ ಹೆಬ್ಬಾರ್ ಇವರು ಸಹಕರಿಸಿದರು. ಕಾರ್ಯಕ್ರಮಗಳಲ್ಲಿ ಹಲವಾರು ನೃತ್ಯ ಗುರುಗಳು, ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದುಷಿ ಡಾ. ಶ್ರೀದೇವಿ ಕಲ್ಲಡ್ಕ ಇವರು ನಡೆಸಿಕೊಟ್ಟಿದ್ದು, ಶ್ರೀಯುತ ಲಕ್ಷ್ಮಣ ಅಗರಬೈಲು ಇವರು ವಂದಿಸಿದರು.

