ಬೆಂಗಳೂರು : ಕುಮಾರಿ ಅನಿಕಾ ನಟ್ಟಮೈ ಮತ್ತು ಕುಮಾರಿ ಐಶಾನಿ ಕಾಮತ್ ಉದಯೋನ್ಮುಖ ಭರತನಾಟ್ಯ ಕಲಾವಿದೆಯರಿಬ್ಬರು, ಅಮೇರಿಕೆಯಲ್ಲಿದ್ದರೂ ಭಾರತೀಯ ಸಂಸ್ಕೃತಿಯ ಮೇಲೆ ಅಪಾರ ಒಲವುಳ್ಳ ಇವರು, ಅಮೇರಿಕಾದ ಒಹಾಯೋ ವೆಸ್ಟ್ ಚೆಸ್ಟರ್ನಲ್ಲಿರುವ ‘ನೃತ್ಯಾರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’- ಖ್ಯಾತ ನೃತ್ಯ ಸಂಸ್ಥೆಯ ಹೆಸರಾಂತ ನೃತ್ಯಗುರು ಮತ್ತು ನೃತ್ಯಕಲಾವಿದೆ – ಸಂಯೋಜಕಿಯಾಗಿರುವ ಶ್ರೀಮತಿ ಅನುಪಮ ರಾವ್ ಮಿರ್ಲೆ ಇವರ ನುರಿತ ಗರಡಿಯಲ್ಲಿ ಕಳೆದ 14 ವರ್ಷಗಳಿಂದ ಬಹು ಬದ್ಧತೆಯಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಇವರಿಬ್ಬರೂ ಯಶಸ್ವಿಯಾಗಿ ತಮ್ಮ ರಂಗಪ್ರವೇಶಗಳನ್ನು ಪೂರೈಸಿಕೊಂಡಿದ್ದು, ಇಬ್ಬರೂ ಜೊತೆಯಾಗಿ ಹಲವಾರು ವೇದಿಕೆಗಳ ಮೇಲೆ ಜುಗಲ್ಬಂದಿ ಪ್ರದರ್ಶನಗಳನ್ನು ನೀಡುತ್ತಾ, ಕಲಾತ್ಮಕ ಸಾಮರಸ್ಯ ಮತ್ತು ಗಾಢವಾದ ಬಾಂಧವ್ಯವನ್ನು ಅವಿನಾಭಾವವಾಗಿ ನೃತ್ಯದೊಂದಿಗೆ ಬೆಳೆಸಿಕೊಂಡಿದ್ದಾರೆ. ಪರಿಶ್ರಮಿಗಳಾದ ಇವರು, ಬಹು ಉತ್ಸಾಹದಿಂದ ಪ್ರದರ್ಶನಗಳನ್ನು ನೀಡುತ್ತಿರುವ ಈ ಇಬ್ಬರೂ ಬಹುಮುಖ ಪ್ರತಿಭೆಗಳು. ಈ ಜೋಡಿ ಇದೀಗ ದಿನಾಂಕ 23 ಮೇ 2026ರ ಶನಿವಾರ ಬೆಳಗ್ಗೆ 10-00 ಗಂಟೆಗೆ ಬೆಂಗಳೂರಿನ ವಾಡಿಯಾ ರಸ್ತೆಯಲ್ಲಿರುವ ದಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ತಮ್ಮ ಭರತನಾಟ್ಯದ ‘ಸಮರ್ಪಣಾ’ ನೃತ್ಯ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಅವರ ಮನಮೋಹಕ ಕಲಾನೈಪುಣ್ಯವನ್ನು ವೀಕ್ಷಿಸಲು ಎಲ್ಲ ಕಲಾರಸಿಕರಿಗೂ ಹಾರ್ದಿಕ ಸುಸ್ವಾಗತ.



ಕುಮಾರಿ ಅನಿಕಾ ಮತ್ತು ಕುಮಾರಿ ಐಶಾನಿಗೆ ನೃತ್ಯ ಇವರ ಬಾಲ್ಯದ ಒಲವು. ಉತ್ತಮ ನೃತ್ಯ ಗುರುವೆಂದು ಖ್ಯಾತರಾಗಿದ್ದ ಶ್ರೀಮತಿ ಅನುಪಮಾ ಮಿರ್ಲೆ ಇವರ ಬಳಿ ಈಗ 14 ವರ್ಷಗಳ ಹಿಂದೆ ನೃತ್ಯ ಕಲಿಯಲು ಸೇರಿ ರಂಗಪ್ರವೇಶ ನೆರವೇರಿಸಿಕೊಳ್ಳುವವರೆಗೂ ಸತತ ಅಭ್ಯಾಸ ಮಾಡಿ ಪ್ರೇಕ್ಷಕರ ಸಮ್ಮುಖ ತಮ್ಮ ಪ್ರತಿಭಾ ಪ್ರದರ್ಶನ ಮಾಡಿ ಮೆಚ್ಚುಗೆ ಗಳಿಸಿದರು. ಇಬ್ಬರಿಗೂ ನೃತ್ಯ ಬಿಡದ ನಂಟು. ನೃತ್ಯಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸು. ಶಾಸ್ತ್ರೀಯ ಕಲೆಗಳಲ್ಲಿನ ಇವರ ಸಮರ್ಪಣೆ ಮತ್ತು ಶ್ರೇಷ್ಠತೆಯನ್ನು ಗುರುತಿಸಿ ಒಹಾಯೋ ಆರ್ಟ್ಸ್ ಕೌನ್ಸಿಲ್ ಇವರನ್ನು ಹಲವು ಬಾರಿ ‘ಸಾಂಪ್ರದಾಯಿಕ ಕಲೆಗಳ ಅಪ್ರೆಂಟಿಸ್‌ಗಳು’ ಎಂದು ಗೌರವಿಸಿದೆ. ಕಲೈಮಾಮಣಿ ಮಧುರೈ ಆರ್. ಮುರಳೀಧರನ್ ಇವರ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದ ಇವರು ಗಿನ್ನಿಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನೂ ಪಡೆದಿದ್ದಾರೆ. ತಮ್ಮ ಗುರುವಿನ ಶಾಲೆಯಾದ ‘ನೃತ್ಯಾರ್ಪಣ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್’ನಲ್ಲಿ ತರಗತಿಗಳನ್ನು ನಡೆಸಿಕೊಡುವ ಅವಕಾಶವೂ ಇವರಿಗೆ ಲಭಿಸಿದೆ. ಅನಿಕಾ ಮತ್ತು ಐಶಾನಿ ನೃತ್ಯದಲ್ಲಿ ಹಲವು ಮೈಲಿಗಲ್ಲುಗಳನ್ನು ಜೊತೆಯಾಗಿ ಹಂಚಿಕೊಂಡಿದ್ದರೂ, ಇಬ್ಬರೂ ನೃತ್ಯದ ಹೊರತಾಗಿ ತಮ್ಮದೇ ಆದ ಆಸಕ್ತಿ ಮತ್ತು ಆಶಯಗಳನ್ನು ಬೆಳೆಸಿಕೊಂಡಿದ್ದಾರೆ.

ಕುಮಾರಿ ಅನಿಕಾ ಕಳೆದ ಹತ್ತು ವರ್ಷಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದು, ತನ್ನ ಮೊದಲ ಏಕವ್ಯಕ್ತಿ ಗಾಯನ ‘ಮಾರ್ಗಂ’ ಪ್ರದರ್ಶನವನ್ನು ನೀಡಿರುವ ವೈಶಿಷ್ಟ್ಯ ಇವಳದು. ಗಾಯನದ ಜೊತೆಗೆ ಪಿಯಾನೋ ಮತ್ತು ಕೊಳಲು ನುಡಿಸುವ ಕಲೆಯನ್ನೂ ಇವಳು, ಕರಗತ ಮಾಡಿಕೊಂಡಿದ್ದು, ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ನೇಲ್ ಆರ್ಟ್, ಅಡುಗೆ ಮಾಡುವುದಲ್ಲದೆ ಅಥ್ಲೇಟಿಕ್ ಆಗಿರುವ ವಿಶೇಷತೆ ಪಡೆದಿದ್ದಾಳೆ. ಪ್ರಸ್ತುತ ಇವಳು ಸಿನ್ಸಿನಟಿ ವಿಶ್ವವಿದ್ಯಾಲಯದಲ್ಲಿ ಹೆಲ್ತ್ ಸೈನ್ಸ್ ವಿಷಯದಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿ ಅಭ್ಯಾಸ ಮಾಡುತ್ತಿದ್ದಾಳೆ. ಮುಂದೆ- ಫಿಸಿಶಿಯನ್ ಅಸಿಸ್ಟೆಂಟ್ ಆಗುವ ಗುರಿಯನ್ನು ಹೊಂದಿದ್ದರೂ ನೃತ್ಯ ಸಾಧನೆಯನ್ನು ಜೊತೆ ಜೊತೆಗೆ ಮುಂದುವರೆಸಿಕೊಂಡು ಹೋಗುವ ಆಶಯ ಹೊಂದಿದ್ದಾಳೆ. ಮುಂದಿನ ವರ್ಷ ವಿಶ್ವವಿದ್ಯಾಲಯದ ಭಾರತೀಯ ಶಾಸ್ತ್ರೀಯ ನೃತ್ಯ ತಂಡವಾದ ‘ಯುಸಿ ಲಯಾ’ದ ಸಹ-ನಾಯಕಿಯಾಗಿಯೂ ಆಯ್ಕೆಯಾಗಿದ್ದಾಳೆ. ನೃತ್ಯಕ್ಷೇತ್ರದಲ್ಲಿ ಅನಿಕಾಳ ಗುರಿಯೆಂದರೆ ಕೇವಲ ಪ್ರದರ್ಶನ ಮತ್ತು ಸ್ಪರ್ಧೆಗಳಿಗೆ ಸೀಮಿತವಾಗದೆ ಶಾಶ್ವತವಾದದ್ದನ್ನು ನಿರ್ಮಿಸಿ, ತನ್ನದೇ ಆದ ಭರತನಾಟ್ಯ ಶಾಲೆ ಅಥವಾ ಕಂಪನಿಯನ್ನು ಸ್ಥಾಪಿಸುವ ಬಯಕೆ ಅವಳದು.




ಕುಮಾರಿ ಐಶಾನಿ ಕಾಮತ್ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಆರ್ಕಿಟೆಕ್ಚರಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿ ಮೊದಲ ವರ್ಷವನ್ನು ಪೂರೈಸಿದ್ದಾಳೆ. ಅಲ್ಲಿನ ಹಲವಾರು ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸಕ್ರಿಯಳಾಗಿದ್ದು ಮತ್ತು ಮುಂದಿನ ವರ್ಷ ‘ಯುಸಿ ಲಯಾ’ ತಂಡದ ಪ್ರೊಡಕ್ಷನ್ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದಾಳೆ. ಎಂಜಿನಿಯರಿಂಗ್ ಮತ್ತು ಶಾಸ್ತ್ರೀಯ ನೃತ್ಯ – ಈ ಎರಡೂ ಕ್ಷೇತ್ರಗಳ ಸಂಗಮದ ಅನ್ವೇಷಣೆ ಅವಳ ಆಸಕ್ತಿ. ಶೈಕ್ಷಣಿಕ ಕೆಲಸಗಳ ನಡುವೆಯೂ ಐಶಾನಿ ತಮ್ಮ ಗುರುವಿನ ಶಾಲೆಯಲ್ಲಿ ಪಾಠ ಮಾಡುವುದು ಅವರಿಗೆ ಕಿರಿಯ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವುದರಿಂದ ಅವಳಲ್ಲಿ ಆತ್ಮವಿಶ್ವಾಸ, ಶಿಸ್ತು ಹಾಗೂ ನೃತ್ಯದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ. ಚಿತ್ರಕಲೆ ಮತ್ತು ಡ್ರಾಯಿಂಗ್ ಹವ್ಯಾಸವುಳ್ಳ ಇವಳು, ಕಳೆದ 13 ವರ್ಷಗಳಿಂದ ಪಿಯಾನೋ ನುಡಿಸುತ್ತಾಳೆ. ಭವಿಷ್ಯದಲ್ಲಿ ನೃತ್ಯ ಶಾಲೆ ಸ್ಥಾಪಿಸುವ ಕನಸು ಅವಳದಾಗಿದೆ. ಅಮೆರಿಕದಾದ್ಯಂತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಸೃಜನಾತ್ಮಕ ಪ್ರದರ್ಶನಗಳನ್ನು ನೀಡುವ ಆಸೆ ಹೊಂದಿರುವ ಇವಳು, ಸಂಪ್ರದಾಯವನ್ನು ಉಳಿಸಿ, ಹೊಸತನವನ್ನು ಅಳವಡಿಸಿಕೊಳ್ಳುವ ಆಶಯ ಹೊಂದಿದ್ದಾಳೆ.

***** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
