ಬೆಂಗಳೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ರಂಗ ತಂಡಗಳು ಬೆಂಗಳೂರು ಇವರ ವತಿಯಿಂದ ‘ರಂಗ ವೈವಿಧ್ಯ’ ವಿಭಿನ್ನ ನಾಟಕಗಳ ಉತ್ಸವ’ವನ್ನು ದಿನಾಂಕ 18 ರಿಂದ 21 ಮೇ 2026ರವೆರೆಗೆ ಪ್ರತಿದಿನ ಸಂಜೆ 6-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 18 ಮೇ 2026ರಂದು ಸಂಜೆ 6-00 ಗಂಟೆಗೆ ಉದ್ಘಾಟನಾ ಸಮಾರಂಭ ಹಾಗೂ ನಾಡೋಜ ಡಾ. ಗೊ. ರು. ಚನ್ನಬಸಪ್ಪ -98 ಜನ್ಮದಿನ ಆಚರಣೆ ನಡೆಯಲಿದ್ದು, ಮಾಜಿ ಶಾಸಕರಾದ ಡಾ. ಮುಖ್ಯಮಂತ್ರಿ ಚಂದ್ರು ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಡಾ. ಬಿ.ವಿ. ರಾಜಾರಾಂ ಇವರು ಅಧ್ಯಕ್ಷತೆ ವಹಿಸಲಿದ್ದು, ಕನ್ನಡದ ಪ್ರಸಿದ್ಧ ಜಾನಪದ ತಜ್ಞ ನಾಡೋಜ ಡಾ. ಗೊ. ರು. ಚನ್ನಬಸಪ್ಪ ಇವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಬಿ. ಎಸ್. ಮಂಜುನಾಥಸ್ವಾಮಿ ರಂಗ ಗೌರವ ಸಮರ್ಪಣೆ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಕಲಾಗಂಗೋತ್ರಿ ತಂಡದವರಿಂದ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 19 ಮೇ 2026ರಂದು ಪುನೀತ್ ಇವರ ನಿರ್ದೇಶನದಲ್ಲಿ ಬೆಂಗಳೂರಿನ ಶ್ರೀ ದಕ್ಷತರಂಗ ತಂಡದವರಿಂದ ‘ಜ್ಞಾತಪರ್ವ’, ದಿನಾಂಕ 20 ಮೇ 2026ರಂದು ಡಾ. ಕೆ. ರಾಮಕೃಷ್ಣಯ್ಯ ಇವರ ನಿರ್ದೇಶನದಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರದರ್ಶನ ಕಲೆಗಳ ವಿಭಾಗ ತಂಡದಿಂದ ‘ಮಾಂಟೇಸ್ವಾಮಿ ಕಥಾ ಪ್ರಸಂಗ’ ಹಾಗೂ ದಿನಾಂಕ 21 ಮೇ 2026ರಂದು ಶ್ರೀ ಋತ್ವಿಕ್ ಸಿಂಹ ಇವರ ನಿರ್ದೇಶನದಲ್ಲಿ ಬೆಂಗಳೂರಿನ ವೇದಿಕೆ ತಂಡದವರಿಂದ ‘ನಂ ಕಂಪ್ನಿ’ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

