ಉಡುಪಿ : ಕನ್ನಡದ ಪ್ರಮುಖ ಕತೆಗಾರ, ಹಿರಿಯ ವಿಜ್ಞಾನಿ ತೆಂಕನಿಡಿಯೂರು ಮೂಲದ ಡಾ. ವ್ಯಾಸರಾವ್ ನಿಂಜೂರು (86) ದಿನಾಂಕ 03 ನವೆಂಬರ್ 2026ರಂದು ಮುಂಬಯಿಯಲ್ಲಿ ನಿಧನ ಹೊಂದಿದರು. ಮೃತರು ಪುತ್ರ ಪುತ್ರಿಯನ್ನು ಅಗಲಿದ್ದಾರೆ. ಸಾಹಿತಿ, ಸಂಶೋಧಕ ಹಾಗೂ ಚಿಂತಕರಾಗಿದ್ದ ಅವರು ಮುಂಬಯಿಯ ಭಾಭಾ ಅಣು ಸಂಶೋಧನ ಕೇಂದ್ರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು.
ಕಥೆ, ಲೇಖನ ಹಾಗೂ ಸಾಹಿತ್ಯ ಸಂಶೋಧನೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಮುಂಬಯಿಯ ಗೋಕುಲವಾಣಿ ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದ್ದರು. 2006ರಲ್ಲಿ ಇನ್ನಾದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ಅವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಗಳಿಸಿದ್ದಾರೆ.
ಬಿ.ಎ.ಆರ್.ಸಿ.ನಲ್ಲಿ ಜೀವರಸಾಯನ ಮತ್ತು ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಸಂಶೋಧಕರಾಗಿ, ಸುದೀರ್ಘಕಾಲ ದುಡಿದು ನಿವೃತ್ತರಾಗಿದ್ದರು. 87ಕ್ಕೂ ಮಿಕ್ಕಿದ ಸಂಶೋಧನ ಲೇಖನಗಳನ್ನು ದೇಶ ವಿದೇಶಗಳ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ಅವರ ‘ನಲ್ವತ್ತರ ನಲುಗು’ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಪ್, ‘ಉಸಿರು’ ಕಾದಂಬರಿಗೆ ತ್ರಿವೇಣಿ ಸ್ಮಾರಕ ಪ್ರಶಸ್ತಿ, ‘ಚಾಮುಂಡೇಶ್ವರಿ ಭವನ’ ಕಾದಂಬರಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಮತ್ತು ‘ವರ್ಧಮಾನ ಪ್ರಶಸ್ತಿ’, ಮೂಡಬಿದಿರೆ 71ನೇ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕಶ್ರೀ ಪ್ರಶಸ್ತಿ’, ಮಹಾರಾಷ್ಟ್ರದ 6ನೇ ಸಾಂಸ್ಕೃತಿಕ ಸಮಾವೇಶದಲ್ಲಿ ಮಹಾರಾಷ್ಟ್ರದ ‘ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ದೊರೆತಿವೆ.
ಕಲ್ಯಾಣಪುರದ ಮಿಲಾಗ್ರಿಸ್ ಶಾಲೆಯಲ್ಲಿ ಪ್ರೌಢಶಾಲೆ, ಎಂ.ಜಿ.ಎಂ. ಕಾಲೇಜು ಉಡುಪಿಯಲ್ಲಿ ವಿಜ್ಞಾನದಲ್ಲಿ ಪದವಿಯನ್ನು ಪಡೆದಿದ್ದರು. ವಿಜ್ಞಾನದಲ್ಲಿ ಜೀವರಸಾಯನ ಮತ್ತು ಆಹಾರ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ. ಪದವಿ ಪಡೆದರು. ಅವರು ನಾಲ್ಕು ವರ್ಷ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಟ್ಯೂಟರ್ ಆಗಿ ಸೇವೆ ಸಲ್ಲಿಸಿದ್ದರು.
ಮುಂಬಯಿ ಆಕಾಶವಾಣಿಗಾಗಿ ಬರೆದ ‘ಸೌಖ್ಯವಿಲ್ಲ’, ‘ಅರಣ್ಯಕ್ಕೊಬ್ಬ ಅರಸು’, ‘ಪ್ರೇಮಾಂತರಿಕ್ಷ’ ಮೊದಲಾದ ಕಿರುನಾಟಕಗಳು ಅಪಾರ ಮೆಚ್ಚುಗೆ ಗಳಿಸಿವೆ. ಅವರು ಪ್ರಸಿದ್ಧ ನಾಟಕಗಳನ್ನೂ ರಚಿಸಿದ್ದಾರೆ. ಯಕ್ಷಗಾನ ಕಲಾವಿದರಾಗಿ, ಯಕ್ಷಗಾನ ಭಾಗವತಿಕೆಯ ಮಟ್ಟು ಹಾಗೂ ಹೆಜ್ಜೆ ಕುಣಿತಗಳನ್ನು ಶಾಸ್ತೋಕ್ತವಾಗಿ ಬಲ್ಲವರಾಗಿದ್ದರು. ಅವರ ಪ್ರಸಿದ್ದ ರಂಗಕೃತಿ ‘ನಲ್ಲತರ ನಲುಗು’ ಅನೇಕ ಪ್ರದರ್ಶನಗಳನ್ನು ಕಂಡಿವೆ. ನಿಂಜೂರ್ ಎಂಝೈಮ್ ಅವರು ಸಂಶೋಧಿಸಿದ ಮಾನವ ಉದರದ ಒಂದು ಕಿಣ್ವವನ್ನು ಜಗತ್ತಿನಾದ್ಯಂತ ನಿಂಜೂರ್ ಎಂಝೈಮ್ ಎಂದು ಕರೆಯಲಾಗುತ್ತಿದೆ.
