ಸಸಿಹಿತ್ಲು : ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ದಿನಾಂಕ 4ರಿಂದ 8 ಮಾರ್ಚ್ 2026ರವರೆಗೆ ಜರಗಿದ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಅವುಗಳಲ್ಲಿ ಕಲಾ ಸೌರಭ ಮುಂಬಯಿ ಆಶ್ರಯದಲ್ಲಿ ದಿನಾಂಕ 07 ಮಾರ್ಚ್ 2026ರಂದು ಜರಗಿದ ‘ಶ್ರೀ ಭಗವತೀ ಅಮ್ಮ – ಸ್ವರ ಸಂಗೀತಾಭಿಷೇಕಂ’ ಎಂಬ ಭಕ್ತಿ, ಭಾವ-ಜಾನಪದ, ಯಕ್ಷಗಾಯನ ಹಾಗೂ ನೃತ್ಯ ರಂಜನೆಯ ಜುಗಲ್ಬಂದಿ ಒಂದು ವಿನೂತನ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
ಕಳೆದ 33 ವರ್ಷಗಳಿಂದ ಮುಂಬೈಯಲ್ಲಿ ವೈವಿಧ್ಯಮಯ ಕಲಾ ಕಾರ್ಯಕ್ರಮಗಳ ಮೂಲಕ ಹೆಸರಾಗಿರುವ ಕಲಾ ಸೌರಭ ಸಂಸ್ಥೆ ಹಿರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಇವರ ಸಾರಥ್ಯದಲ್ಲಿ ಪ್ರಸಕ್ತ ವರ್ಷ ‘ಸಂಸ್ಕಾರ – 26’ ಸರಣಿಯನ್ನು ನಡೆಸುತ್ತಿದೆ. ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಆರಂಭಗೊಂಡ ಸರಣಿಯ ಮೂರನೇ ಕಾರ್ಯಕ್ರಮವಾಗಿ ಸಸಿಹಿತ್ಲು ಭಗವತಿಗೆ ‘ಸ್ವರ ಸಂಗೀತಾಭಿಷೇಕ’ದ ಮೂಲಕ ಕಲಾ ಸಂಸ್ಕಾರಕ್ಕೆ ಧಾರ್ಮಿಕ ಸ್ಪರ್ಶ ನೀಡಿದ್ದು ವಿಶೇಷ.

‘ಸ್ವರ ಸಂಗೀತಾಭಿಷೇಕಂ’ ಕಾರ್ಯಕ್ರಮವನ್ನು ಭಕ್ತಿ – ಭಾವ ಗಾನಸುಧೆ, ಜಾನಪದ ಹಾಡು, ಯಕ್ಷ ಸಂಗೀತ ಮತ್ತು ನಾಟ್ಯಗಳ ಮೂಲಕ ವರ್ಣರಂಜಿತವಾಗಿ ಪ್ರಸ್ತುತಪಡಿಸಲಾಯಿತು. ಗಾಯಕ ಪದ್ಮನಾಭ ಸಸಿಹಿತ್ಲು ಶ್ರೀ ಗಣೇಶ ಸ್ತುತಿಯೊಂದಿಗೆ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ಅಪೂರ್ವ ಕುಂದಾಪುರ ಮತ್ತು ಹಿಮಾಂಗಿ ಉಳ್ಳಾಲ್ ಭಕ್ತಿ, ಭಾವ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಹಿನ್ನೆಲೆ ಸಂಗೀತದಲ್ಲಿ ಸತೀಶ್ ಸುರತ್ಕಲ್ (ಕೀಬೋರ್ಡ್), ದೀಪಕ್ ರಾಜ್ ಉಳ್ಳಾಲ್ (ತಬ್ಲಾ), ಸಂತೋಷ್ ವಿಟ್ಲ (ಕೊಳಲು) ಮತ್ತು ಸಂತೋಷ್ ಪಾನ (ರಿದಂ ಪ್ಯಾಡ್) ಭಾಗವಹಿಸಿದರು. ‘ಕೃಷ್ಣಾ ನೀ ಬೇಗನೆ ಬಾರೋ…’ ಹಾಡನ್ನು ಸಂಗೀತದ ಜುಗಲ್ಬಂದಿಯೊಂದಿಗೆ ವಿಶೇಷವಾಗಿ ಪ್ರಸ್ತುತ ಪಡಿಸಲಾಯಿತು.

ಯಕ್ಷ – ಸಂಗೀತ – ನಾಟ್ಯ ಸಂಗಮ : ತೆಂಕುತಿಟ್ಟಿನ ಯುವ ಭಾಗವತ ಡಾ. ಪ್ರಖ್ಯಾತ್ ಶೆಟ್ಟಿ ಮತ್ತು ಬಡಗು ತಿಟ್ಟಿನ ಉದಯೋನ್ಮುಖ ಕಲಾವಿದೆ ಕುಮಾರಿ ಇಂಚರ ಶಿವಪುರ ಎರಡು ಪ್ರತ್ಯೇಕ ಶೈಲಿಯಲ್ಲಿ ಯಕ್ಷ ಗಾಯನವನ್ನು ನಡೆಸಿಕೊಟ್ಟರು. ಹಿಮ್ಮೇಳದಲ್ಲಿ ಲವಕುಮಾರ್ ಐಲ ಮತ್ತು ಅನಿರುದ್ಧ ಅತ್ತಾವರ (ತೆಂಕು); ಶಶಿಕುಮಾರ್ ಆಚಾರ್ಯ, ಶ್ರೀನಿವಾಸ ಪ್ರಭು (ಬಡಗು) ಸಹಕರಿಸಿದರು. ಪಾತ್ರಧಾರಿಗಳಾಗಿ ತೆಂಕಿನ ಪುಂಡು ವೇಷದಲ್ಲಿ ಕುಮಾರಿ ಶಿವಾನಿ ಸುರತ್ಕಲ್ ಹಾಗೂ ಬಡಗು ತಿಟ್ಟಿನ ಸ್ತ್ರೀ ಭೂಮಿಕೆಯಲ್ಲಿ ಕುಮಾರಿ ಸ್ವಸ್ತಿ ಶ್ರೀ ಯಕ್ಷ ನಾಟ್ಯವನ್ನು ಪ್ರಸ್ತುತಪಡಿಸಿದರು.

ಪ್ರಥಮ ಸುತ್ತಿನಲ್ಲಿ ಗಣಪತಿ ಸ್ತುತಿ ಮತ್ತು ದೇವಿ ಸ್ತುತಿಯನ್ನು ಹೇಳಿ ಬಳಿಕ ‘ಸ್ವರ ಸಂಗೀತಾಭಿಷೇಕಂ’ ಭಾಸ್ಕರ ರೈ ಕುಕ್ಕುವಳ್ಳಿ ರಚಿಸಿರುವ ಶೀರ್ಷಿಕೆ ಗೀತೆಯನ್ನು ಉಭಯ ಭಾಗವತರು ಹಾಡಿದರು. ದ್ವಿತೀಯ ಸುತ್ತಿಗೆ ತೆಂಕು ಹಾಗೂ ಬಡಗು ಶೈಲಿಯ ಯಕ್ಷ ನಾಟ್ಯವನ್ನು ಬೇರೆ ಬೇರೆಯಾಗಿ ಪ್ರಸ್ತುತ ಪಡಿಸಲಾಯಿತು. ಇದರಲ್ಲಿ ಪ್ರಕೃತಿ ವರ್ಣನೆಯ ಹಾಡಿಗೆ ಬಡಗಿನ ಸ್ತ್ರೀ ವೇಷದ ಕುಣಿತ ಸೊಗಸಾಗಿ ಮೂಡಿಬಂತು. ಬಳಿಕ ‘ಭಗವತೀ ಕ್ಷೇತ್ರ ಮಹಾತ್ಮೆ’ ಪ್ರಸಂಗದ ಒಂದು ಪದ್ಯವನ್ನೆತ್ತಿಕೊಡು ಭಾಗವತರು ಹಾಡಿದಾಗ ತೆಂಕಿನ ಪುಂಡುವೇಷದ ಅಬ್ಬರದ ಪ್ರವೇಶ, ವೀರ – ಶೃಂಗಾರ ರಸಗಳ ಪ್ರಸ್ತುತಿ ಗಮನ ಸೆಳೆಯಿತು.

ಪ್ರೊ. ಅಮೃತ ಸೋಮೇಶ್ವರ ಅವರ ‘ಉಡಲ್ದುಲಯಿ ಗೇನೊದೊಂಜಿ ತುಡರ್…’ ತುಳು ಭಕ್ತಿಗೀತೆ ಹಾಗೂ ಸುಬ್ರಾಯ ಚೊಕ್ಕಾಡಿಯವರ ‘ಮುನಿಸು ತರವೇ ಮುಗುದೆ..’ ಭಾವಗೀತೆಗಳನ್ನು ಯಕ್ಷಗಾನದ ಹಿಮ್ಮೇಳದೊಂದಿಗೆ ಹಾಡಿದ್ದು ಮತ್ತು ಕೊನೆಯಲ್ಲಿ ಸಂಗೀತ, ಯಕ್ಷಗಾನ ಹಾಗೂ ನೃತ್ಯ ಸಂಗಮದೊಂದಿಗೆ ನಡೆದ ಅಪೂರ್ವ ಜುಗಲ್ಬಂದಿ ಪ್ರೇಕ್ಷಕರನ್ನು ರಂಜಿಸಿತು.
* ಭಾಸ್ಕರ ರೈ ಕುಕ್ಕುವಳ್ಳಿ
[email protected]
