ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಯಕ್ಷಗಾನ ಕಲಾರಂಗದ ಐವೈಸಿಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಮುಖವರ್ಣಿಕೆ – ವೇಷಭೂಷಣ ಶಿಬಿರ’ವು ದಿನಾಂಕ 14 ಮೇ 2026ರಂದು ಸಮಾಪನಗೊಂಡಿತು.
ಗುರು ಸಂಜೀವ ಸುವರ್ಣರ ನಿರ್ದೇಶನದಲ್ಲಿ ಪ್ರಸಾಧನ ತಜ್ಞ ಮಿಥುನ್ ನಾಯಕ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯು. ವಿಶ್ವನಾಥ ಶೆಣೈ, ತಾರಾದೇವಿ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಸದಸ್ಯರಾದ ನಿರಂಜನ ಭಟ್, ಯು. ಅನಂತರಾಜ ಉಪಾಧ್ಯ, ಎಚ್.ಎನ್. ವೆಂಕಟೇಶ್, ಎನ್. ರಾಮ ಭಟ್, ಡಾ. ಪ್ರತಿಮಾ ಜೆ. ಆಚಾರ್ಯ, ರವಿರಾಜ್ ಎಚ್.ಪಿ., ಪ್ರಶಾಂತ್ ಕಾಮತ್ ಉಪಸ್ಥಿತರಿದ್ದರು. ಸಂಸ್ಥೆಯ ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.
ಈ ನಾಲ್ಕು ದಿನಗಳಲ್ಲಿ ಮಕ್ಕಳು ಸ್ವತಂತ್ರವಾಗಿ ವಿವಿಧ ವೇಷಗಳ ಮುಖವರ್ಣಿಕೆ, ಕಸೆ, ಗೆಜ್ಜೆ ಮತ್ತು ವೇಷಭೂಷಣ ಕಟ್ಟಿಕೊಳ್ಳುವುದನ್ನು ಕಲಿತುಕೊಂಡರು. ಶಿಬಿರಾರ್ಥಿಗಳಾದ ಐಶ್ವರ್ಯಾ, ಆನಂದ ಸಿಂಗ್, ಸೃಷ್ಟಿ, ವಿಧಿಶಾ ಹೆಗಡೆ, ಬಂಧನಾದೇವಿ, ಹರ್ಷಿತಾ ಅಮೀನ್, ಮನೋಜ್, ಸಹನಾ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಅಭ್ಯಾಸ ಮಾಡಲು ಪೂರಕವಾಗುವಂತೆ ಬಣ್ಣದ ಕಿಟ್ ವಿತರಿಸಲಾಯಿತು. 28 ಜನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಿನ್ನೆ ಅಗಲಿದ ಕಪ್ಪೆಕೆರೆ ಸುಬ್ರಾಯ ಭಾಗವತರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.

