Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ
    Article

    ನೃತ್ಯ ವಿಮರ್ಶೆ | ಭಾವ ರಸಗಳ ರಂಗಸಂಗಮದಲ್ಲಿ ಅರಳಿದ ರಂಗಪ್ರವೇಶ

    May 15, 2026No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗುರು ಚೈತನ್ಯದ ಮಾರ್ಗದರ್ಶನ ಮತ್ತು ಶಿಷ್ಯೆಯ ಕಲಾಸಕ್ತಿಗೆ, ಹಿಮ್ಮೇಳದ ನಾದವು ಸಾಥ್ ನೀಡಿದಾಗ, ಅಲ್ಲಿ ಭರತನಾಟ್ಯವು ಕೇವಲ ಕಲೆಯಾಗದೆ ಒಂದು ದೈವಿಕ ಅನುಭೂತಿಯಾಗುತ್ತಿದೆ ಎನ್ನುವುದಕ್ಕೆ ದಿನಾಂಕ 10 ಮೇ 2026ರಂದು ಪಾಲೆಮಾರ್ ಕನ್ವೆನ್ಷನ್ ಹಾಲಿನಲ್ಲಿ ಗಾನ ನೃತ್ಯ ಅಕಾಡೆಮಿ ವತಿಯಿಂದ ನಡೆದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯ ಕುಮಾರಿ ನಿಮಿಷಾ ಶೆಣೈ ಇವರ ರಂಗಪ್ರವೇಶ ಸಾಕ್ಷಿಯಾಯಿತು. ಶಾಸ್ತ್ರೀಯ ಚೌಕಟ್ಟಿನಲ್ಲಿ ನಡೆದ ಈ ಕಾರ್ಯಕ್ರಮವು ಕಲಾವಿದೆಯ ಅಚ್ಚುಕಟ್ಟಾದ ಚಲನೆಗಳು, ಸಾಹಿತ್ಯದ ಉತ್ಕೃಷ್ಟತೆಯನ್ನು ರಸಿಕರಿಗೆ ತಲುಪಿಸಿದ ಅಭಿನಯ, ವೃತ್ತಭಾಗದಲ್ಲಿನ ಶುದ್ಧತೆ, ನುರಿತ ಆಹಾರ್ಯ, ಅತ್ಯುನ್ನತ ನೃತ್ಯ ಸಂಯೋಜನೆ, ವಿದ್ವತ್ ಭರಿತ ಹಿಮ್ಮೇಳ, ನರ್ತನದ ಅಂದವನ್ನು ಹೆಚ್ಚಿಸುತ್ತಿದ್ದ ಸುಂದರ ಉಡುಪು ಹಾಗೂ ಆಭರಣಗಳು ಕಾರ್ಯಕ್ರಮದ ಮೆರುಗನ್ನು ಇಮ್ಮಡಿಸುತ್ತಿತ್ತು. ಶೈಕ್ಷಣಿಕ ಗುರಿಯನ್ನೇ ಪರಮೋಚ್ಚವೆಂದು ಭಾವಿಸಿ ಅಂಧರಂತೆ ಸಾಗುತ್ತಿರುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಕಲೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.

    ಕಾರ್ಯಕ್ರಮದ ಆರಂಭವು ಅತ್ಯಂತ ಸಾಂಪ್ರದಾಯಿಕವಾಗಿ ಪುಷ್ಪಾಂಜಲಿಯ ಮೂಲಕ ನಾಟ್ಯಾಧಿದೇವತೆ ನಟರಾಜ, ಗುರುಗಳು, ಹಿಮ್ಮೇಳ ಕಲಾವಿದರು ಹಾಗೂ ಅಷ್ಟ ದಿಕ್ಪಾಲಕರಿಗೆ ಪುಷ್ಪ ನಮನದ ಮೂಲಕ ಕಾರ್ಯಕ್ರಮ ಆರಂಭವಾಯಿತು. ಮುಂದೆ ಪ್ರಭೋ ಗಣಪತಿ ಎಂಬ ಕೃತಿಯು ಭಕ್ತಿ ಭಾವದ ಪರಾಕಷ್ಟೆಯಂತಿತ್ತು. ಕೊಂಕಣಿ ಸಂಪ್ರದಾಯದ ಗಣೇಶ ಚತುರ್ಥಿಯ ಸಂಭ್ರಮವನ್ನು ಗುರುಗಳಾದ ವಿದ್ಯಾಶ್ರೀ ರಾಧಾಕೃಷ್ಣ ಅವರು ನೃತ್ಯದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದರು. ಕಲಾವಿದೆ ತನ್ನ ಕರಗಳ ಮೂಲಕ ಮಣ್ಣಿನ ಗಣಪತಿಯನ್ನು ರೂಪಿಸಿ ಪುಟ್ಟಗಜ ಮುಖನ ಸುಂದರ ರೂಪವನ್ನು ವರ್ಣಿಸುತ್ತಾ ಅಂತಿಮವಾಗಿ ಭಕ್ತಿಯ ಮೆರವಣಿಗೆಯಲ್ಲಿ ವಿಘ್ನ ವಿನಾಯಕನನ್ನು ರಸಿಕರು ಕಂಡದ್ದು ಅನನ್ಯ. ಮುಂದೆ ರಂಗಪ್ರವೇಶದ ಪ್ರಮುಖ ಅಂಗವಾದ ವರ್ಣದಲ್ಲಿ ಏಳು ಗಿರಿಗಳ ಒಡೆಯ ಶ್ರೀನಿವಾಸನನ್ನು ಭಕ್ತಿ ಪೂರ್ವಕವಾಗಿ ಸ್ತುತಿಸುತ್ತಾ ಬಕುಳ ದೇವಿಯನ್ನೊಳಗೊಂಡ ಶ್ರೀನಿವಾಸ ದೇವರ ಬಾಲ್ಯದ ಕಥೆಯನ್ನು ನರ್ತನದ ಮೂಲಕ ಬಿಂಬಿಸುತ್ತಾ, ಧರೆಗಿಳಿದು ಬಂದ ಲಕ್ಷ್ಮಿ ದೇವಿಯ ಹುಡುಕಾಟದಲ್ಲಿ ಶ್ರೀನಿವಾಸ ಸ್ವಾಮಿಯನ್ನು ತೋರಿಸಲಾಗಿದೆ. ಬಳಿಕ ಶ್ರೀದೇವಿ ಹಾಗೂ ಭೂದೇವಿಯ ರೋಡನೆ ಭೂಮಿಯಲ್ಲಿ ನೆಲೆಸಿದ ಶ್ರೀನಿವಾಸನನ್ನು ಸ್ತುತಿಸುತ್ತಾ ಆತನ ದಶಾವತಾರಗಳನ್ನು ಮೂಲಕ ವೇದಿಕೆಗೆ ತಂದು ಸಹಸ್ರನಾಮಗಳ ಒಡೆಯನಾದ ಆತನಿಗೆ ಭಕ್ತಿ ಪೂರ್ವಕ ನೃತ್ಯ ನಮನವು ಅಪೂರ್ವವಾಗಿತ್ತು.

     

    ಬಳಿಕ ಉತ್ತರಾರ್ಧದಲ್ಲಿ ಪಾಂಡುರಂಗ ವಿಠಲನ ಸ್ಮರಣೆಯುಳ್ಳ ಅಭಂಗ್ ಪ್ರದರ್ಶನಗೊಂಡು ಒಮ್ಮೆ ಆ ಭಗವಂತನ ಭಕ್ತಿಯ ಹುಚ್ಚು ಹತ್ತಿದರೆ ಮತ್ತೆ ಮರೆತು ಹೋಗುವುದು ಅಸಾಧ್ಯ ಎಂಬ ಸಾರಾಂಶದೊಂದಿಗೆ ಭಕ್ತ ಮತ್ತು ಭಗವಂತನ ಅವಿನಾಭಾವ ಸಂಬಂಧವನ್ನು ಇಲ್ಲಿ ಚಿತ್ರಿಸಲಾಯಿತು. ತದನಂತರದಲ್ಲಿ ಪುರಂದರ ದಾಸರ ಆಡೋದಲ್ಲೇ ಮಕ್ಕಳು ಆಡಿಕೊಂಬರು ಎಂಬ ದೇವರನಾಮದಲ್ಲಿ ಯಶೋದೆಯ ಮುಂದೆ ದೂರು ನೀಡುವ ಬಾಲಕೃಷ್ಣನ ತುಂಟಾಟ ಮತ್ತು ಮುಗ್ಧತೆ ಪ್ರೇಕ್ಷಕರ ಮನಸ್ಸನ್ನು ಮುದಗೊಳಿಸಿತು. ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಚೈತನ್ಯದ ಚಿಲುಮೆಯಂತಿದ್ದ ಕಾಳಿಂಗ ನರ್ತನ ತಿಲ್ಲಾನವು ಕೃಷ್ಣನ ವೀರಾವೇಶವನ್ನು ಬಿಂಬಿಸಿ, ಬಳಿಕ ಕಾರ್ಯಕ್ರಮವು ಮಂಗಳದೊಂದಿಗೆ ಸಂಪನ್ನಗೊಂಡಾಗ, ಇಡೀ ಸಭಾಂಗಣದ ಪ್ರೇಕ್ಷಕರು ಎದ್ದುನಿಂತು ತುಂಬುಗಣ್ಣಿನಿಂದ ನೀಡಿದ ಕರತಾಡನವು ಕಲಾವಿದೆಯ ತನ್ಮಯತೆಗೆ ಹಾಗೂ ಆಕೆಯ ನಿರಂತರ ಶ್ರಮಕ್ಕೆ ಸಂದ ಗೌರವವಾಗಿತ್ತು.

    ಸಂಗೀತ ಲೋಕದ ಉಜ್ವಲ ನಕ್ಷತ್ರಗಳೇ ಧರೆಗಿಳಿದು ಬಂದಂತೆ ಭಾಸವಾಗುತ್ತಿದ್ದ ಈ ಹಿಮ್ಮೇಳ ತಂಡ, ತಮ್ಮ ಕಲಾ ಪ್ರೌಢಿಮೆಯ ಮೂಲಕ ನಮ್ಮ ಉದಯೋನ್ಮುಖ ಪ್ರತಿಭೆಯ ಈ ಮಹತ್ವದ ದಿನಕ್ಕೆ ವಿಶೇಷ ಮೆರುಗು ನೀಡಿತು. ನಟುವಾಂಗದಲ್ಲಿ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಗಾಯನದಲ್ಲಿ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜನ್ ಬೆಂಗಳೂರು, ವೀಣೆಯಲ್ಲಿ ವಿದ್ವಾನ್ ಅನಂತನಾರಾಯಣ ಚೆನ್ನೈ, ಕೊಳಲಿನಲ್ಲಿ ವಿದ್ವಾನ್ ನಿತೀಶ್ ಅಮಣ್ಣಯ್ಯ ಬೆಂಗಳೂರು ಹಾಗೂ ರಿತಂ ಪಾಡ್ನಲ್ಲಿ ವಿದ್ವಾನ್ ಕಾರ್ತಿಕ್ ವೈಧಾತ್ರಿ ಬೆಂಗಳೂರು ಹೀಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ದಿಗ್ಗಜರೆನಿಸಿಕೊಂಡಿರುವ ಈ ಕಲಾವಿದರು, ಕೇವಲ ಸಾಥ್ ನೀಡದೆ ಗಾನ ನೃತ್ಯ ಅಕಾಡೆಮಿಯ ಕುಟುಂಬದ ಸದಸ್ಯರಾಗಿ ಈ ಸಂಜೆಯನ್ನು ಅವಿಸ್ಮರಣೀಯಗೊಳಿಸಿದರು. ಬೆಳಕಿನ ಅಚ್ಚುಕಟ್ಟಾದ ನಿರ್ವಹಣೆಯಲ್ಲಿ ರಾಧಾಕೃಷ್ಣ ಭಟ್ ಉತ್ತಮ ರೀತಿಯಲ್ಲಿ ಸಹಕರಿಸಿದ್ದಾರೆ. ವಸ್ತ್ರ ವಿನ್ಯಾಸದಲ್ಲಿ ಶ್ರೀ ಸುನಿಲ್ ಉಚಿಲ ಹಾಗೂ ಶ್ರೀಮತಿ ಗಾಯತ್ರಿ ನಾವಡ ಇವರ ಸಹಾಯ ಸ್ಮರಣೀಯ. ಇವರೆಲ್ಲರ ಸಮ್ಮಳಿತ ಶ್ರಮ ಹಾಗೂ ಕಲಾವಿದೆಯ ಪ್ರಾಮಾಣಿಕ ಪ್ರಯತ್ನದಿಂದ ದ್ವಿತೀಯ ಪಿ.ಯು.ಸಿ. ಅಂತಹ ಪ್ರಮುಖ ಶೈಕ್ಷಣಿಕ ಘಟ್ಟದಲ್ಲೂ ಕಲೆಯ ಅಭ್ಯಾಸ ಸಾಧ್ಯ ಎನ್ನುವುದನ್ನು ನಿರೂಪಿಸಿತಷ್ಟೇ ಅಲ್ಲದೆ ಪ್ರತಿ ನೃತ್ಯದ ಬಳಿಕ ಆ ಶ್ರಮಕ್ಕೆ ಸಲ್ಲುತ್ತಿದ್ದ ಕರತಾಡನ ಆ ನರ್ತನವು ಪ್ರೇಕ್ಷಕನ ಹೃದಯದ ಕದ ತಟ್ಟಿದ್ದಕ್ಕೆ ಸಾಕ್ಷಿ.

    ಸಂಪ್ರದಾಯಬದ್ಧವಾಗಿ ನಡೆದ ಈ ಸಾಂಸ್ಕೃತಿಕ ಸುದಿನವು ದೀಪ ಪ್ರಜ್ವಲನೆಯೊಂದಿಗೆ ಮಂಗಳಕರವಾಗಿ ಆರಂಭಗೊಂಡಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಪ್ರಸಿದ್ಧ ನೃತ್ಯ ಗುರುಗಳಾದ ವಿದ್ವಾನ್ ಸುಧೀರ್ ಕೊಡವೂರು ಹಾಗೂ ವಿದುಷಿ ಮಾನಸಿ ಸುಧೀರ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ಸಂಸ್ಕೃತ ಭಾರತಿಯ ಶ್ರೀ ದಿನೇಶ್ ಕಾಮತ್ ಅವರು ದೀಪ ಬೆಳಗಿಸಿ ಚಾಲನೆ ನೀಡಿದರು. ಈ ಸಮಾರಂಭಕ್ಕೆ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಶ್ರೀ ವೇದವ್ಯಾಸ ಕಾಮತ್ ಅವರು ಆಗಮಿಸಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ವಿಶೇಷವಾಗಿ, ನೃತ್ಯ ಲೋಕದ ಘನವೆತ್ತ ಗುರುಗಳಾದ ಕರ್ನಾಟಕ ಕಲಾಶ್ರೀ ಚಂದ್ರಶೇಖರ್ ನಾವಡ, ಕರ್ನಾಟಕ ಕಲಾಶ್ರೀ ಶಾರದಾಮಣಿ ಶೇಖರ್, ಶ್ರೀಮತಿ ಸುಮಂಗಲ ರತ್ನಾಕರ್ ರಾವ್, ಶ್ರೀಮತಿ ಚೇತನ ರಾಧಾಕೃಷ್ಣ ಮತ್ತು ಕುಂದಾಪುರದ ಶ್ರೀಮತಿ ಪ್ರವಿತಾ ಅಶೋಕ್ ಅವರು ಉಪಸ್ಥಿತರಿದ್ದು, ಉದಯೋನ್ಮುಖ ಕಲಾವಿದೆಯನ್ನು ಹರಸಿದರು. ಮಣಿಕೃಷ್ಣಸ್ವಾಮಿ ಅಕಾಡೆಮಿಯ ಸ್ಥಾಪಕರಾದ ಶ್ರೀ ನಿತ್ಯಾನಂದ ರಾವ್ ಸೇರಿದಂತೆ ಕಲಾಕ್ಷೇತ್ರದ ಅನೇಕ ಗಣ್ಯರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಗಾನ ನೃತ್ಯ ಅಕಾಡೆಮಿಯ ವಿದ್ಯಾರ್ಥಿನಿ ವಿದುಷಿ ವೈಷ್ಣವಿ ಭಟ್ ಅವರು ಇಡೀ ಕಾರ್ಯಕ್ರಮವನ್ನು ಅತ್ಯಂತ ಮನೋಜ್ಞವಾಗಿ ಮತ್ತು ಅಚ್ಚುಕಟ್ಟಾಗಿ ನಿರೂಪಿಸಿ ಸಭೆಯ ಮೆಚ್ಚುಗೆಗೆ ಪಾತ್ರರಾದರು.

    ವೇಗವಾಗಿ ಓಡುತ್ತಿರುವ ಇಂದಿನ ಆಧುನಿಕ ಯುಗದಲ್ಲಿ, ತಾಂತ್ರಿಕ ಪ್ರಗತಿಯ ಜೊತೆಜೊತೆಗೇ ನಮ್ಮ ಮಣ್ಣಿನ ಸಂಸ್ಕೃತಿ ಮತ್ತು ಕಲೆಗಳನ್ನು ಉಸಿರಾಗಿಸಿಕೊಂಡಿರುವ ಯುವ ತಲೆಮಾರಿನ ಸಂಕಲ್ಪಕ್ಕೆ ನಿಮಿಷಾ ಅವರ ಈ ಸಾಧನೆ ಒಂದು ಕನ್ನಡಿ. ಕೇವಲ ಯಶಸ್ಸು ಮಾತ್ರ ಗುರಿಯಾಗದೆ, ಸಂಸ್ಕಾರಯುತ ಕಲೆಯು ಬದುಕಿನ ಭಾಗವಾದಾಗ ವ್ಯಕ್ತಿತ್ವಕ್ಕೆ ಪೂರ್ಣತೆ ಲಭಿಸುತ್ತದೆ. ಇಂತಹ ಪ್ರತಿಭೆಗಳ ಹಿಂದೆ ಬೆನ್ನೆಲುಬಾಗಿ ನಿಂತು, ಕಲೆಯನ್ನು ಧಾರೆ ಎರೆಯುವ ಗುರು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ ಮಾರ್ಗದರ್ಶನವು ಗುರಿ ತಲುಪಲು ದಾರಿದೀಪವಾಗಿದೆ. ಸಂಪ್ರದಾಯ ಮತ್ತು ಆಧುನಿಕತೆ ಸಮಾಗಮಗೊಂಡಾಗ ಮಾತ್ರ ಸಶಕ್ತ ಸಮಾಜದ ನಿರ್ಮಾಣ ಸಾಧ್ಯ. ಇಂತಹ ಕಲಾಬದ್ಧ ಪ್ರಯತ್ನಗಳಿಗೆ ನಾವೆಲ್ಲರೂ ಸಾಥ್ ನೀಡೋಣ, ಸಾಂಸ್ಕೃತಿಕ ಶ್ರೀಮಂತಿಕೆಯ ನಾಳೆಯನ್ನು ಕಟ್ಟೋಣ.

    ಮಹಿಮಾ ಯು.ಎಸ್.
    ಅಂತಿಮ ವರ್ಷದ ಎಂಜಿನಿಯರ್ ವಿದ್ಯಾರ್ಥಿನಿ
    ಕೆನರಾ ಎಂಜಿನಿಯರಿಂಗ್ ಕಾಲೇಜು, ಬೆಂಜನಪದವು ಮಂಗಳೂರು.

    article baikady bharatanatyam dance Music review roovari
    Share. Facebook Twitter Pinterest LinkedIn Tumblr WhatsApp Email
    Previous Articleಪ್ರಶಸ್ತಿಗಳನ್ನು ಹೊಡೆದುಕೊಳ್ಳಬಾರದು – ಪಡೆದುಕೊಳ್ಳಬೇಕು : ಪತ್ರಕರ್ತ ರವೀಂದ್ರ ಜೋಶಿ
    Next Article ‘ಮುಖವರ್ಣಿಕೆ – ವೇಷಭೂಷಣ ಶಿಬಿರ’ದ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಜಾನಪದ ನೃತ್ಯ ಕಲಾಮೇಳ’ | ಮೇ 16

    May 15, 2026

    ಸಂಗೀತ ಪರಿಷತ್ ವತಿಯಿಂದ ಅಮೃತ ಭವನದಲ್ಲಿ ಸಂಗೀತ ಕಛೇರಿ | ಮೇ 17

    May 15, 2026

    ಉದ್ಘಾಟನೆಗೊಂಡ ‘ಬಾಲ ಲೀಲಾ -2026’ ಚಿಣ್ಣರ ಬೇಸಿಗೆ ಶಿಬಿರ

    May 15, 2026

    ‘ಮುಖವರ್ಣಿಕೆ – ವೇಷಭೂಷಣ ಶಿಬಿರ’ದ ಸಮಾರೋಪ ಸಮಾರಂಭ

    May 15, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.