ಕಾಸರಗೋಡು : “ಸರಕಾರದ ಮಟ್ಟದಲ್ಲಿ ಪ್ರಶಸ್ತಿಗಳು ಎನ್ನುವುದು ಮಾಫಿಯಾ ಆದ ಸಂದರ್ಭದಲ್ಲಿ ಅರ್ಹರನ್ನ ಗುರುತಿಸಿ ಗೌರವಿಸುವ ಸಂಪ್ರದಾಯ ನಿಜಕ್ಕೂ ಸ್ವಾಗತಾರ್ಹ ಎಂದು ಹಿರಿಯ ಪತ್ರಕರ್ತ ರವೀಂದ್ರ ಜೋಶಿ ಮೈಸೂರು ಅವರು ರಂಗಚಿನ್ನಾರಿ ದ್ವಿದಶಕ ವಾರ್ಷಿಕೋತ್ಸವ ಹಾಗೂ ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಶ್ಲಾಘಿಸಿದರು.

ಕಾಸರಗೋಡಿನ ಬೀರಂತಬೈಲಿನಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ದಿನಾಂಕ 10 ಮೇ 2026ರಂದು ಭಾನುವಾರ ಜರಗಿದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಪ್ರಶಸ್ತಿಯಲ್ಲಿ ಎರಡು ವಿಧ, ಒಂದು ಪಡೆದುಕೊಳ್ಳುವುದಾದರೆ ಇನ್ನೊಂದು ಹೊಡೆದುಕೊಳ್ಳುವುದು ಎಂದು ವಿಡಂಬನೆ ಮಾಡಿದ ಅವರು ಸರಕಾರಿ ಪ್ರಶಸ್ತಿಗಳು ಯಾಂತ್ರಿಕವಾಗಿರುತ್ತದೆ ಮತ್ತು ಅನಗತ್ಯ ಮಾನದಂಡ ಹೊಂದಿರುತ್ತದೆ ಎಂದು ಹೇಳಿದರಲ್ಲದೆ ಈ ಹಿಂದೆ ಸರಕಾರ ಶಾಮಿಯಾನ ಹಾಕಿದವನಿಗೂ ರಾಜ್ಯ ಪ್ರಶಸ್ತಿ ನೀಡಿದ ಸರ್ಕಾರದ ನಡೆಯನ್ನು ಟೀಕಿಸಿದರು.

ಮತ್ತೊಬ್ಬ ಅತಿಥಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ಪತ್ರಕರ್ತ ಬಾ.ನಾ. ಸುಬ್ರಹ್ಮಣ್ಯ ಮಾತನಾಡಿ “ನಾಟಕ, ನೃತ್ಯ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಾಸರಗೋಡಿನಲ್ಲಿ ಕನ್ನಡ ಅಸ್ಮಿತೆಯನ್ನು ಉಳಿಸಲು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿರುವ ಕಾಸರಗೋಡು ಚಿನ್ನಾ ಅವರಿಗೆ ಎಂದೋ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬರಬೇಕಿತ್ತು. ಕೊನೆಯ ಘಳಿಗೆಯಲ್ಲಿ ಆಯ್ಕೆ ಪ್ರಕ್ರಿಯೆಯಲ್ಲಿ ಕಾಣದ ಕೈಗಳು ಅಡ್ಡಿಯಾದ ಬಗ್ಗೆ ಕೇಳಿದ್ದೇನೆ ಎಂದರಲ್ಲದೆ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ” ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ “ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ರಂಗಚಿನ್ನಾರಿ ಮಹತ್ವದ ಕೊಡುಗೆ ನೀಡಿದ್ದು, ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳ ಮೂಲಕ ಭಾಷೆ ಮತ್ತು ಪ್ರತಿಭೆಗಳನ್ನು ಗುರುತಿಸಿ ಅನಾವರಣಗೊಳಿಸುವ ಕಾರ್ಯ ನಡೆಯಲಿ” ಎಂದು ಅವರು ಹಾರೈಸಿದರು.

ಪ್ರಶಸ್ತಿ ವಿಜೇತ ನಾಟಕ ನಿರ್ದೇಶಕ ಚಿತ್ರಸಾಹಿತಿ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಚಲನಚಿತ್ರ ನಟಿ ಗೌತಮಿ ಜಾದವ್, ಡಾ. ಅನಂತ ಕಾಮತ್, ಶ್ರೀ ಕೃಷ್ಣಯ್ಯ ಅನಂತಪುರ, ಶ್ರೀಮತಿ ಸವಿತಾ ಟೀಚರ್ ಮುಂತಾದವರು ವೇದಿಕೆಯಲ್ಲಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷಗಾನ ಕ್ಷೇತ್ರದ ಪದ್ಮನಾಭ ಶೆಟ್ಟಿ ಮಜಕಾರ ಇವರಿಗೆ ‘ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಪುರಸ್ಕಾರ’, ರಂಗಭೂಮಿ, ಚಲನಚಿತ್ರ ಕ್ಷೇತ್ರದ ಜೆ.ಪಿ. ತೂಮಿನಾಡು ಹಾಗೂ ಹರಿಕಥೆ ಕ್ಷೇತ್ರದ ಶ್ರೀಮತಿ ಮಂಜುಳಾ ಗುರುರಾಜ್ ಇರಾ ಇವರಿಗೆ ‘ರಂಗಚಿನ್ನಾರಿ ಪ್ರಶಸ್ತಿ’, ಕ್ರೀಡಾ ಕ್ಷೇತ್ರದಲ್ಲಿ ದೇವಾಂಶ ರೈ ಮತ್ತು ಸಂಗೀತ ಕ್ಷೇತ್ರದಲ್ಲಿ ಅನ್ವಿತಾ ಟಿ. ಇವರಿಗೆ ‘ರಂಗಚಿನ್ನಾರಿ ಯುವ ಪ್ರಶಸ್ತಿ’ಯನ್ನು ಗೌರವಿಸಲಾಯಿತು.

ಕುಮಾರಿ ತಸ್ಮಯಿ ಹಾಗೂ ಕುಮಾರಿ ವರ್ಷಾ ಇವರು ಪ್ರಾರ್ಥನೆ ಹಾಡಿದರು. ರಂಗಚಿನ್ನಾರಿಯ ನಿರ್ದೇಶಕರೂ, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಇವರು ರಂಗಚಿನ್ನಾರಿ ಸಂಸ್ಥೆಯ ಕಳೆದ ಎರಡು ದಶಕಗಳಿಂದ ಮಾಡಿದ ಸಾಧನೆಗಳ ಬಗ್ಗೆ ತಿಳಿಸಿದರು. ರಂಗಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ತಾರಾನಾಥ ಗಟ್ಟಿ ಕಾಪಿಕಾಡ್ ವಿಂಶತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ರಂಗಚಿನ್ನಾರಿಯ ನಿರ್ದೇಶಕರಾದ ಸತ್ಯನಾರಾಯಣ, ಡಾ. ಸಂತೋಷ್ ಕಾಮತ್, ನ್ಯಾಯವಾದಿ ಎ.ಎನ್. ಅಶೋಕ ಕುಮಾರ್, ರಂಗಕರ್ಮಿ ಉದಯ ಕುಮಾರ್ ಮನ್ನಿಪ್ಪಾಡಿ, ಜನಾರ್ದನ ಅಣಂಗೂರು, ಗೋಪಿ ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.
‘ಸ್ವರ ಚಿನ್ನಾರಿ’, ‘ನಾರಿ ಚಿನ್ನಾರಿ’ಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ನಿರ್ದೇಶಕಿ ವಿದುಷಿ ಅನುಪಮಾ ರಾಘವೇಂದ್ರ ಮತ್ತು ಶಿಷ್ಯೆ ವೃಂದದಿಂದ ‘ನೃತ್ಯೋಲ್ಲಾಸ’ ನೃತ್ಯ ಕಾರ್ಯಕ್ರಮ ಜರಗಿತು.



ಇದೇ ಸಂದರ್ಭದಲ್ಲಿ ಕಾಸರಗೋಡಿನವರಾದ ಚಲನಚಿತ್ರ ಛಾಯಾಗ್ರಾಹಕ ಅಭಿಷೇಕ ಕಾಸರಗೋಡು ಹಾಗೂ ಅಂತರಾಷ್ಟ್ರೀಯ ಚಿತ್ರ ಕಲಾವಿದ ಕರಣ್ ಆಚಾರ್ಯ ಕಾಸರಗೋಡು ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಡಾ. ಕೆ ಕೆ. ಶ್ಯಾನುಭೋಗ್ ಹಾಗೂ ಡಾ. ಎ.ಪಿ. ಭಟ್ ಇವರು ಸಭಾಗೃಹವನ್ನು ಉಚಿತವಾಗಿ ನೀಡಿದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಲಾಯಿತು.

