ಉಡುಪಿ : ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು! ಇಂದು ಅವರೆಲ್ಲಾ ಬೆಳೆಯುವ ಸಮಯದಲ್ಲಿ ಸಮಂಜಸವಾದ ಸನ್ಮಾರ್ಗಗಳು, ಸತ್ಸಂಗಗಳೂ, ಸದ್ವಿಚಾರಗಳೂ, ಅವರೆಲ್ಲರಿಗೆ ಸೂಕ್ತ ಮಾರ್ಗದರ್ಶನಗಳೂ ನೀಡದೇ ಹೋದಲ್ಲಿ ನಾವು ಪೋಷಕರೂ, ಸಮಾಜವೂ, ಗುರು ಪೀಠಗಳೂ, ಸಮುದಾಯಗಳ ಹಿರಿಯರೂ ನಾಳೆಗಳಿಗೆ ಜವಾಬ್ದಾರಿಯಾಗಬೇಕಾಗುತ್ತದೆ. ವಸಂತ ಶಿಬಿರಗಳೂ ಈ ನಿಟ್ಟಿನಲ್ಲಿ ಮಹತ್ತರ ಪ್ರಭಾವ ಬೀರುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಇಲ್ಲಿನ ಗುಂಡಿಬೈಲಿನ ಶ್ರೀ ಆಭಿರಾಮಧಾಮ ಸಂಕೀರ್ತನ ಮಂದಿರದ ಸಂಸ್ಥಾಪಕ-ಅಧ್ಯಕ್ಷರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ಹೇಳಿದರು. ಕೇವಲ ಹದಿನೆಂಟು ದಿನಗಳ ಈ ವಸಂತ ಶಿಬಿರ ಅದೆಷ್ಟು ಪರಿಣಾಮಕಾರಿಯಾಗಿ ಇಲ್ಲಿನ 44 ಮಕ್ಕಳನ್ನು ತಯಾರು ಮಾಡಿತೆಂದರೆ ವಿದ್ವಾನ್. ರಾಮಕೃಷ್ಣ ಶಾಸ್ತ್ರಿಗಳಿಂದ ಸನಾತನ ಹಿಂದೂ ಧಾರ್ಮಿಕ ಸಂಸ್ಕಾರಗಳ ತಯಾರಿ, ಸಂಗೀತ, ನೃತ್ಯ, ಯಕ್ಷಗಾನ, ವೇದ-ಗಣಿತ, ಶ್ರೀಮದ್ಭಗವದ್ಗೀತ, ವಾಲ್ಮೀಕಿ ರಾಮಾಯಣ, ಗಮಕ ಕಲೆ, ರಂಗಭೂಮಿ, ರಂಗೋಲಿ, ಪುಷ್ಪಮಾಲಿಕೆ, ಕಸದಿಂದ ರಸ, ದೇಶಭಕ್ತಿ ಗೀತೆ ಕಲಿಕೆ ಮಾತ್ರವಲ್ಲದೆ ಯೋಗ, ಪ್ರಾಣಾಯಾಮ, ಭಜನೆ, ಕವಿತೆ ರಚನೆ, ಮಾತೃಪೂಜನ, ಭಾರತಮಾತಾ ಪೂಜನ ಹೀಗೆ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಹಲವು ಹತ್ತು ಮಜಲುಗಳಲ್ಲಿ ಅಭಿರಾಮ ಧಾಮದ ವಸಂತ ಶಿಬಿರ ಗಮನಾರ್ಹ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು.
ಏಪ್ರಿಲ್ 12ರಿಂದ 30ರ ತನಕ ನಡೆದ ಈ ಶಿಬಿರದಲ್ಲಿ ಒಟ್ಟು 14 ಸಂಪನ್ಮೂಲ ವ್ಯಕ್ತಿತ್ವಗಳನ್ನು ಕರೆತರಲಾಗಿತ್ತು. ಪ್ರತೀ ದಿನ ಸರಿಸುಮಾರು ಹತ್ತು ತಾಸು ಶಿಬಿರಾರ್ಥಿಗಳು ಅಭಿರಾಮ ಧಾಮದಲ್ಲೇ ಕಳೆಯುತ್ತಿದ್ದು, ಪುಟ್ಟ ವಯಸ್ಸಿನಲ್ಲೇ ದಿಟ್ಟ ಅನುಭವಗಳನ್ನೆದುರಿಸುವ ಸಾಮರ್ಥ್ಯ ಪಡೆಯುತ್ತಿರುವುದ ಕಂಡು ನಮಲ್ಲಿ ಸಂತೃಪ್ತಿ ಮೂಡುತ್ತಿದೆಯೆಂದು ಆಯೋಜಕರಾದ ಸ್ವರಸಾಮ್ರಾಟ್ ವಿದ್ವಾನ್ ಅಭಿರಾಮ್ ಭರತವಂಶಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ)ದ ಕಾರ್ಯದರ್ಶಿ, ನಾಟ್ಯ ವಿದುಷಿ ಶ್ರೀಮತಿ ಸುಶ್ಮಾ ಸುದರ್ಶನ್ ನುಡಿದರು. ಯಕ್ಷಗಾನ ಗುರು ನವೀನ್ ಕೋಟರವರ ಭಾಗವತಿಕೆಯಲ್ಲಿ ‘ಶ್ರೀರಾಮ ಕಾರುಣ್ಯ’ ಪ್ರಸಂಗವನ್ನು, ಸಂಸೃತ ಭಾರತಿಯ ಶಿಕ್ಷಣ ಪ್ರಮುಖರಾದ ವಿದ್ವಾನ್ ಶಮಂತ್ ಭಾಗವತ್ – ಶ್ರೀಮತಿ ಅಕ್ಷಯಾ ದಂಪತಿಗಳಿಂದ ಸಂಸ್ಕೃತ ಸಂಭಾಷಣೆ ಹಾಗೂ ‘ಪ್ರಹ್ಲಾದ ಚರಿತ’ ನಾಟಕವನ್ನು ಮಕ್ಕಳು ಸಮರ್ಥವಾಗಿ ನಟಿಸಿದರು ಎಂದು ನೆರೆದ ಪೋಷಕರು ಪ್ರಶಂಸಿಸಿದರು.


ಉಡುಪಿಯ ಶ್ರೀಕೃಷ್ಣ ಮಂದಿರದ ಭಜಕರಾದ ಮಧೂರು ನಾರಾಯಣ ಸರಳಾಯರಿಂದ ‘ದಾಸವಾಣಿ’ ಕಛೇರಿ ಶಿಬಿರಾರ್ಥಿಗಳಿಗೆ ನಮ್ಮ ದೈವೀಕ ಸಂಗೀತದ ಅರಿವು ಮೂಡಿಸಿದ್ದರೆ, ವಿಖ್ಯಾತ ಪ್ರವಚನಕಾರರಾದ ವಿದ್ವಾನ್ ಕೃಷ್ಣರಾಜ ಕುತ್ಪಾಡಿಯವರ ಮೂರು ಸರಣಿಯ ‘ಭಾರತ ದರ್ಶನ’ ಮಕ್ಕಳಿಗೆ ನಮ್ಮ ದೇಶದ ಪಾವಿತ್ರ್ಯತೆಗಳ ಪರಿಚಯ ಮಾಡಿಕೊಟ್ಟಿತು. ದೂರದ ಬಂಟ್ವಾಳದಿಂದ ಆಗಮಿಸಿದ ಗಮಕ ಕಲಾವಿದರಿಂದ ‘ಸೀತಾ ಸ್ವಯಂವರ’, ಕ್ಷೇತ್ರ ದರ್ಶನ ಪ್ರಯುಕ್ತ ಆದಿಶಕ್ತಿ ದುರ್ಗಾಪರಮೇಶ್ವರೀ ದೇವಾಲಯಕ್ಕೆ ಮುಂಜಾನೆ ಕರೆದೊಯ್ದು ಎಲ್ಲಾ ಮಕ್ಕಳಿಗೆ ಶ್ರೀಸರಸ್ವತೀ ವಿದ್ಯಾಮಂತ್ರ ದೀಕ್ಷೆಗಳನ್ನು ಬೋಧಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸರ್ವಸನ್ನದ್ಧರಾಗಿಸಿದೆ ಎಂದು ಆಯೋಜಕರು ಅವಲೋಕಿಸಿದರು.



