ಉಡುಪಿ : ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ಒಂದು ವಾರದ ‘ಭೀಮ ಯಕ್ಷಶಿಕ್ಷಣ ಸನಿವಾಸ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 14 ಎಪ್ರಿಲ್ 2026ರಂದು ಜರಗಿತು.
ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು, “ಯಕ್ಷಗಾನ ಕಲಾರಂಗದ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ಸಮಾಜಕ್ಕೊಂದು ಸಂದೇಶವಿರುತ್ತದೆ. ಶಿಬಿರಾರ್ಥಿಗಳು ಆಡಿದ ಮಾತಿನಲ್ಲಿ ಶಿಬಿರ ಯಶಸ್ವಿಯಾಗಿ ನಡೆಯಿತು ಎಂಬುದು ಸ್ಪಷ್ಟವಾಯಿತು. ಸಮರ್ಪಣಾಭಾವದ ಕೆಲಸಗಳಿಂದಲೇ ಕಲಾರಂಗ ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿದೆ” ಎಂದರು.

ಶಿಬಿರದ ನಿರ್ದೇಶಕರಾದ ಗುರು ಬನ್ನಂಜೆ ಸಂಜೀವ ಸುವರ್ಣರನ್ನು ಶಾಲು, ಸ್ಮರಣಿಕೆ, ಫಲವಸ್ತು ನೀಡಿ ಗೌರವಿಸಲಾಯಿತು. ಅನಂತರ ಮಾತನಾಡಿದ ಸಂಜೀವರು “ಕಲಾವಿದರು ಅಪಸವ್ಯಗಳನ್ನು ಪ್ರದರ್ಶಿಸಿದಾಗ ಯಾಕೆ ಹೀಗೆ ಮಾಡಿದಿರಿ ಎಂದು ಪ್ರಶ್ನೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು. “ಸದಭಿರುಚಿಯ ಯಕ್ಷಪ್ರೇಕ್ಷಕರ ನಿರ್ಮಾಣ ಯಕ್ಷಶಿಕ್ಷಣದಿಂದ ಸಾಧ್ಯ. ಕಳೆದ 18 ವರ್ಷಗಳಿಂದ ನಿರಂತರವಾಗಿ ಈ ಅಭಿಯಾನವನ್ನು ಮುಂದುವರಿಸುತ್ತಿರುವುದು ಕಾರ್ಯಕರ್ತರ ಬದ್ಧತೆಯ ಸಂಕೇತ” ಎಂಬುದಾಗಿ ಪಣಂಬೂರು ವಾಸದೇವ ಐತಾಳರು ತಮ್ಮ ಮಾತುಗಳಲ್ಲಿ ಉಲ್ಲೇಖಿಸಿದರು.

ಅಭ್ಯಾಗತರಾಗಿ ಭೀಮ ಗೋಲ್ಡ್ ಪ್ರೈ.ಲಿ. ಸಂಸ್ಥೆಯ ಪ್ರತಿನಿಧಿ ಪೆರಂಪಳ್ಳಿ ರಾಘವೇಂದ್ರ ಭಟ್, ಡಾ. ಸಂದೀಪ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಶ್ರೀನಿವಾಸ ರಾವ್ ಹಿರಿಯಡಕ ಭಾಗವಹಿಸಿದ್ದರು. ಶಿಬಿರದ ಶಿಕ್ಷಕರಾದ ನರಸಿಂಹ ತುಂಗ, ಆದ್ಯತಾ ಭಟ್, ಶ್ರೀಧರ ಹೆಗಡೆ, ಮಹೇಶ್ ಮಂದಾರ್ತಿ, ಶಿಶಿರ್, ಮನೋಜ್, ಕಾರ್ತಿಕ್ ಭಟ್, ಶ್ರುತಿ ಬಂಗೇರ, ಪಲ್ಲವಿ ಕೊಡಗು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಪವನ್ ಕಿರಣ್ಕೆರೆ, ಮಿಥುನ್ ನಾಯಕ್ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿದ್ದ ಅಭ್ಯಾಗತರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಗುಂಪು ಛಾಯಾಚಿತ್ರ, ಪುಸ್ತಕಗಳನ್ನು ನೀಡಿದರು. ಶಿಬಿರದಲ್ಲಿ ನಡೆಸಿದ ಸ್ಪರ್ಧಾ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಹತ್ತು ಮಂದಿ ಶಿಬಿರಾರ್ಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು.

ಸಂಸ್ಥೆಯ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ.ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಶಿಬಿರದ ಸಂಯೋಜಕರಾದ ನಿರಂಜನ ಭಟ್ ಎಂ. ಸಂಸ್ಥೆಯ ಕಾರ್ಯಕರ್ತರಾದ ವಿದ್ಯಾ ಪ್ರಸಾದ್, ಅಶೋಕ ಎಂ., ಅನಂತರಾಜ ಉಪಾಧ್ಯ, ಡಾ. ಪ್ರತಿಮಾ ಆಚಾರ್ಯ, ಎ. ಅಜಿತ್ ಕುಮಾರ್, ಸುದರ್ಶನ ಬಾಯರಿ, ವಿಶ್ವನಾಥ ಸಹಕರಿಸಿದರು. ಸದಸ್ಯರಾದ ಪ್ರೊ. ಕೆ. ಸದಾಶಿವ ರಾವ್, ಯು. ವಿಶ್ವನಾಥ ಶಣೈ, ಪ್ರೊ. ಎಂ.ಎಲ್. ಸಾಮಗ, ವಿಜಯಕುಮಾರ ಮುದ್ರಾಡಿ, ಎಚ್.ಎನ್. ವೆಂಕಟೇಶ್, ಎನ್. ರಾಮ ಭಟ್, ಎಚ್. ಸುಜಯೇಂದ್ರ ಹಂದೆ, ನಾಗರಾಜ ಹೆಗಡೆ, ಡಾ. ರಾಘವೇಂದ್ರ ರಾವ್, ಹಿರಿಯಣ್ಣ ಕಿದಿಯೂರು, ಆನಂದ ಶೆಟ್ಟಿ ಹಾಗೂ ಸಂಸ್ಥೆಯ ದಾನಿಗಳು, ಹಿತೈಷಿಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ಶಿಬಿರದಲ್ಲಿ ಪಾಲ್ಗೊಂಡ 103 ವಿದ್ಯಾರ್ಥಿಗಳು ತರಬೇತಿಯಲ್ಲಿ ತಾವು ಕಲಿತ ಹೆಜ್ಜೆ, ತಾಳ, ಅಭಿನಯಗಳ ತುಣುಕುಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು.

