ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಷ್ಠಿತ ದತ್ತಿಗಳಲ್ಲಿ ಒಂದಾದ ಶ್ರೀಮತಿ ವಿಜಯ ವಿಷ್ಣು ಭಟ್ ದತ್ತಿ ಪ್ರಶಸ್ತಿಗೆ ಜಿಲ್ಲೆಯ ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯ್ ರವರು ಪುರಸ್ಕಾರಗೊಂಡಿದ್ದಾರೆ. 2026-27ನೇ ಸಾಲಿನ ದತ್ತಿ ಪ್ರಶಸ್ತಿಯ ಆಯ್ಕೆಗಾಗಿ ಜಿಲ್ಲೆಯ ಮಹಿಳಾ ಲೇಖಕಿಯರ ಕೃತಿಗಳನ್ನು ಆಹ್ವಾನಿಸಿದಾಗ ಬಂದ ಕೃತಿಗಳನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳಿಂದ ಪರಮಾರ್ಷಿಸಿ ಮೂರು ಜನರು ನೀಡಿದ ಅಂಕಗಳನ್ನು ಒಂದುಗೂಡಿಸಿ ಸಾಹಿತಿ ಶ್ರೀಮತಿ ಉಳುವಂಗಡ ಕಾವೇರಿ ಉದಯ್ ರವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ
ಟಿ. ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ. ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿಯಾಗಿ 18 ಮೇ 1969ರಲ್ಲಿ ಜನಿಸಿ ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ವಗರೆ ನಿವಾಸಿ ಉಳುವಂಗಡ ಯು. ಉದಯ ಇವರನ್ನು ವಿವಾಹವಾದ ಇವರಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಇರುವರು. ಬಹುಬಾಷಾ ಸಾಹಿತಿ, ಕವಯಿತ್ರಿಯಾಗಿರುವ ಇವರು ಹವ್ಯಾಸಿ ರಂಗ ಕಲಾವಿದೆ ಮತ್ತು ಚಿತ್ರಕಲಾವಿದೆಯು ಆಗಿರುವರು. ಕನ್ನಡ, ಕೊಡವ, ಇಂಗ್ಲೀಷ್ ಹಿಂದಿ ಮತ್ತು ಮಲಯಾಳ ಈ ಐದು ಭಾಷೆಯಲ್ಲಿ, ಕಥೆ, ಕವನ, ಕಾದಂಬರಿ, ಮುಕ್ತಕ, ವಚನ, ಜೀವನ ಚರಿತ್ರೆ, ಭಕ್ತಿ ಪ್ರಧಾನ, ಲಲಿತ ಪ್ರಬಂಧ, ನಾಟಕ ಹೀಗೆ ಇವರು ಬರೆದ ಒಟ್ಟು 36 ಕೃತಿಗಳು ಲೋಕಾರ್ಪಣೆಗೊಂಡಿವೆ. ಆರು ಭಾಷೆಯಲ್ಲಿ ಕವನ ವಾಚನ ಮಾಡಿರುವರು. ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮಂಗಲ ಹೋಬಳಿಯ ಅಧ್ಯಕ್ಷೆ, ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ , ಗುರುಕುಲ ಕಲಾ ಪ್ರತಿಷ್ಠಾನ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆಯ ಉಪಾಧ್ಯಕ್ಷೆ ಆಗಿರುವರು. ಇವರು ಬರೆದ ಕಾದಂಬರಿ ಕೊಡವ ಸಿನಿಮಾ ಆಗಿದೆ. ಹಾಗೂ ಸಣ್ಣ ಕಥೆಗಳು ನಾಲ್ಕು ಕಿರುಸಿನೆಮ ಆಗಿದೆ. ಇವರು ಬರೆದ ಹಾಡುಗಳನ್ನು ಹಲವಾರು ಗಾಯಕರು ಹಾಡಿರುವರು. ಮಡಿಕೇರಿ ಆಕಾಶವಾಣಿಯ ಸುಪ್ರಭಾತದಲ್ಲು ಪ್ರಸಾರವಾಗುತ್ತಿರುವುದು.
ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಕೊಡವ ಮತ್ತು ಕನ್ನಡ ಹೀಗೆ ಎರಡು ಬಾರಿ ಕವನ ವಾಚನ ಮಾಡಿರುವರು. ಹಲವಾರು ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿರುವರು. ವಿವಿಧ ಕಾರ್ಯಕ್ರಮಗಳಲ್ಲಿ ವಿಚಾರ ಮಂಡನೆ ಮಾಡಿರುವರು. ಪೌರಾಣಿಕ, ಸಾಮಾಜಿಕ ನಾಟಕಗಳನ್ನು ಬರೆದು ಮಹಿಳೆಯರಿಗೆ ನಾಟಕ ನಿರ್ದೇಶನ ಮಾಡಿ, ಮುಖ್ಯ ಪಾತ್ರವಹಿಸಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿರುವರು. 2022ನೇ ಸಾಲಿನ ಕರ್ನಾಟಕ ಸರ್ಕಾರದ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ‘ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ’, ಗುರುಕುಲ ಕಲಾಪ್ರತಿಷ್ಠಾನದಿಂದ ‘ಗುರುಕುಲ ಶಿರೋಮಣಿ ಪ್ರಶಸ್ತಿ’, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ‘ಪುಸ್ತಕ ಪ್ರಶಸ್ತಿ’, ನಾಡಿನ ಸಮಾಚಾರ ದಿನಪತ್ರಿಕೆಯಿಂದ ‘ಸಾಹಿತ್ಯ ರತ್ನ ಮತ್ತು ಸಾಹಿತ್ಯ ತಪಸ್ವಿ ಪ್ರಶಸ್ತಿ’, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ‘ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ’, ವಿದ್ಯಾಧರ ಕನ್ನಡ ಪ್ರತಿಷ್ಠಾನದಿಂದ ‘ಕನ್ನಡ ಬಹುಬಾಷಾ ಸಾಹಿತ್ಯ ಸಿರಿ ಪ್ರಶಸ್ತಿ’, ಯಶೋಮಾರ್ಗ ಸೇವಾ ಫೌಂಡೇಶನಿಂದ ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ’ (ಪೂಚಂತೆ) ಪ್ರಶಸ್ತಿ, ಮಾಣಿಕ್ಯ ಪ್ರಕಾಶನದಿಂದ ‘ಕಾದಂಬರಿ ಮಾಣಿಕ್ಯ ಪ್ರಶಸ್ತಿ’, ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯಿಂದ ‘ಗೌರವ ಡಾಕ್ಟರೇಟ್’ ಹೀಗೆ ಒಟ್ಟು ಹನ್ನೊಂದು ಪ್ರಶಸ್ತಿ ಪಡೆದಿರುವರು. ಸಾಹಿತ್ಯ ಸೇವೆಗಾಗಿ ಇದುವರೆಗೆ ಇವರಿಗೆ 26 ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ.
ವಿಜಯ ವಿಷ್ಣು ಭಟ್ ಪ್ರಥಮ ಗತಿ ಪ್ರಶಸ್ತಿಯನ್ನು ಸಾಹಿತಿ ಶ್ರೀಮತಿ ಸುಮಿತಾ ಅಮೃತ್ ರಾಜ್ ಪಡೆದುಕೊಂಡರೆ ದ್ವಿತೀಯ ಪ್ರಶಸ್ತಿಯನ್ನು ಸಾಹಿತಿ ಶ್ರೀಮತಿ ಪ್ರತಿಭಾ ಹರೀಶ್ ರೈ ಅವರು ಪಡೆದುಕೊಂಡಿದ್ದರು. ಈ ಬಾರಿ ತೃತೀಯ ಪ್ರಶಸ್ತಿಯನ್ನು ಶ್ರೀಮತಿ ಉಳುವಂಗಡ ಕಾವೇರಿ ಉದಯ್ ಅವರು ಪಡೆದುಕೊಂಡಿದ್ದು ಸಾಹಿತ್ಯ ಪರಿಷತ್ ಅವರನ್ನು ಅಭಿನಂದಿಸುತ್ತದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ತಿಳಿಸಿದ್ದಾರೆ.
