ಮಂಗಳೂರು : ಸರಯೂ ಮಕ್ಕಳ ಮೇಳದ ‘ಸರಯೂ ಬಾಲ ಯಕ್ಷ ವೃಂದ’ದ ವತಿಯಿಂದ ಕದ್ರಿ ದೇವಳದ ಸಹಕಾರದಲ್ಲಿ 26ನೇ ವರ್ಷದ ‘ಸರಯೂ ಅಷ್ಠಾಹ’ದ ಸಮಾರೋಪ ಸಮಾರಂಭವು ದಿನಾಂಕ 01 ಜೂನ್ 2026ರಂದು ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಳದ ರಾಜಾಂಗಣದಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಭಾಗವಹಿಸಿದ ಶ್ರೀಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀ ಕಮಲಾದೇವಿಪ್ರಸಾದ ಆಸ್ರಣ್ಣರು ಮಾತನಾಡಿ “ಚುರುಕು ನಡೆ, ಗಾಂಭೀರ್ಯ, ಲಾಲಿತ್ಯ, ವೇಷದ ನಡೆ, ಪೌರಾಣಿಕ ಜ್ಞಾನ ಇವಿಷ್ಟಿದ್ದರೆ ಓರ್ವ ಉತ್ತಮ ಕಲಾವಿದನಾಗಿ ಮೂಡಿ ಬರಬಹುದು. ಇದಕ್ಕೆ ಎಳವಿನಿಂದಲೇ ಸಾಧನಾಶೀಲ ಗುಣ ಬೇಕು. ಆ ಪ್ರಯತ್ನವೇ ಮುಂದೆ ಆತನನ್ನು ಪ್ರಬುದ್ಧ ಕಲಾವಿದನನ್ನಾಗಿ ರೂಪಿಸುತ್ತದೆ. ಇದರಿಂದ ಸಾಂಸ್ಕೃತಿಕತೆ ಮತ್ತು ಸಾಮಾಜಿಕತೆ ಜೊತೆಯಲ್ಲೇ ಸಾಗುತ್ತದೆ. ಉತ್ತಮ, ಸ್ವಾಸ್ಥ್ಯ ಸಮಾಜದ ಅವಿಭಾಜ್ಯ ಅಂಗವಾಗಿ ಕಲಾವಿದ ಬೆಳೆಯುತ್ತಾನೆ. ಇದಕ್ಕೆ ದುರ್ಗಾ ಮಕ್ಕಳ ಮೇಳವೂ ಒತ್ತು ನೀಡುತ್ತದೆ. 26 ವರ್ಷಗಳಿಂದ ಸರಯೂ ಕೂಡಾ ಶ್ರಮಿಸುತ್ತದೆ. ಬೆಳೆಯುವ ಯಕ್ಷ ಚಿಣ್ಣರಿಗೆ ನಮ್ಮ ಆಶೀರ್ವಾದ ಸದಾ ಇರುತ್ತದೆ” ಎಂದು ಹೇಳಿದರು.


ಪ್ರೊ. ಎಂ.ಬಿ. ಪುರಾಣಿಕ್, ಪ್ರದೀಪ ಕುಮಾರ ಕಲ್ಕೂರರು ಸರಯೂ ಚಿಣ್ಣರಿಗೆ ಶುಭ ಕೋರಿದರು. ಸಕ್ಕಟ್ಟು ಬಣ್ಣದ ಲಕ್ಷ್ಮೀನಾರಾಯಣಯ್ಯ ಪ್ರತಿಷ್ಠಾನದ ಮಂಜುನಾಥಯ್ಯ ಅತಿಥಿಯಾಗಿದ್ದರು. ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ಸೌಕೂರು ಸುಬ್ರಹ್ಮಣ ಉಡುಪ, ಸೂರ್ಯ ಶೆಟ್ಟಿ, ಮಲ್ನಾಡು, ಸುಧಾಕರ ರಾವ್, ಪೇಜಾವರ ಮುಖ್ಯ ಅತಿಥಿಗಳಾಗಿದ್ದರು. ಧರ್ಮದರ್ಶಿ ಡಾ. ಪುನರೂರುರವರು ಸಮಾರೋಪ ಭಾಷಣ ಮಾಡಿದರು. ಜನಾರ್ದನ ಅಮ್ಮುಂಜೆಯವರು ನಿರ್ವಹಿಸದರೆ, ಅಧ್ಯಕ್ಷರಾದ ಮಧುಸೂದನ ಎ. ಧನ್ಯವಾದವಿತ್ತರು. ಬಳಿಕ ವರ್ಕಾಡಿ ರವಿ ಅಲೆವೂರಾಯ ವಿರಚಿತ ಗೋವಿನ ಗೀತೆ ಆಧಾರಿತ ‘ಪುಣ್ಯ ನಿಧಿ ಪುಣ್ಯಕೋಟಿ’ ಎಂಬ ನೂತನ ಪ್ರಸಂಗ ಬಯಲಾಟ ರೂಪದಲ್ಲಿ ಪ್ರದರ್ಶನಗೊಂಡಿತು.




