ಚೆನ್ನೈ : ಐಐಟಿ ಮದ್ರಾಸು ಇದರ ಕನ್ನಡ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಕರಾವಳಿಯ ಗಂಡುಮೆಟ್ಟಿದ ಕಲೆ ಯಕ್ಷಗಾನ ರಮ್ಯಾದ್ಭುತ ಸೃಷ್ಟಿಸಿತು. ಐಐಟಿ ಸಭಾಂಗಣದಲ್ಲಿ ಕಾಸರಗೋಡಿನ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರು ‘ಮಹಿಷಾಸುರ ವಧೆ’ ಪ್ರಸಂಗವನ್ನು ದಿನಾಂಕ 31-03-2024ರ ಭಾನುವಾರದಂದು ಪ್ರಸ್ತುತ ಪಡಿಸಿ ಮಹಾನಗರದಲ್ಲಿ ಯಕ್ಷ ಗಂಧರ್ವಲೋಕ ಸೃಷ್ಟಿಸಿದರು.
ಅಧ್ಯಯನ ಕೇಂದ್ರದ ರೂವಾರಿ, ಧಾರ್ಮಿಕ ಮುಂದಾಳು, ಗಡಿನಾಡ ಸಾಂಸ್ಕೃತಿಕ ರಾಯಭಾರಿ ಕೆ. ಎನ್. ವೆಂಕಟ್ರಮಣ ಹೊಳ್ಳ ಮತ್ತು ಸಹೋದರ ಕೆ.ಎನ್. ರಾಮಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಈ ಯಕ್ಷಗಾನ ಪ್ರದರ್ಶನದಲ್ಲಿ ಕೇರಳ ರಾಜ್ಯ ಶಾಲಾ ಕಲೋತ್ಸವದಲ್ಲಿ ‘ಎ’ ಗ್ರೇಡ್ ಪಡೆದ ಕಾಸರಗೋಡು ಬಿ. ಇ. ಎಂ. ಹಯರ್ ಸೆಕೆಂಡರಿ ಶಾಲಾ ವಿದ್ಯಾರ್ಥಿಗಳನ್ನೊಳಗೊಂಡ ಪ್ರತಿಭಾನ್ವಿತರ ತಂಡ ಭಾಗವಹಿಸಿತ್ತು.
ರಾಕೇಶ್ ರೈ ಅಡ್ಕ ಅವರ ಸಮರ್ಥ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಯಕ್ಷಗಾನವು ನೆರೆದ ಅಸಂಖ್ಯ ಪ್ರೇಕ್ಷಕರನ್ನು ಮೂಕ ವಿಸ್ಮಯಗೊಳಿಸಿತು. ಕಂಚಿನ ಕಂಠದ ರಾಮಕೃಷ್ಣ ಮಯ್ಯ ಕೂಡ್ಲು ಭಾಗವತರಾಗಿ ಮಿಂಚಿದರು. ಚೆಂಡೆಯಲ್ಲಿ ವಿಕ್ರಂ ಮಯ್ಯ ಮದ್ರಾಸು, ಮದ್ದಳೆಯಲ್ಲಿ ಶ್ರೀಕುಮಾರ ಮೀಯಪದವು, ಚಕ್ರತಾಳದಲ್ಲಿ ಕೆ.ಎನ್. ವೆಂಕಟ್ರಮಣ ಹೊಳ್ಳ ಸಹಕರಿಸಿದರು.
ಯಕ್ಷಗಾನದಲ್ಲಿ ದೇವೇಂದ್ರನಾಗಿ ಅನುಶ್ರೀ ಹೊಳ್ಳ, ಅಗ್ನಿಯಾಗಿ ಛಾಯಶ್ರೀ ಹೊಳ್ಳ, ವರುಣ ಮತ್ತು ಬ್ರಹ್ಮನಾಗಿ ಪ್ರೀತಿ ಕಲ್ಲೂರಾಯ, ಮಾಲಿನಿ ಮತ್ತು ಶ್ರೀದೇವಿಯಾಗಿ ಮಹಿಮಾ ಎಸ್. ರಾವ್, ದಿತಿಯಾಗಿ ಸಮನ್ವಿತಾ ಗಣೇಶ್, ಸುಪಾಶ್ವತನಾಗಿ ಮತ್ತು ಸಿಂಹದ ಪಾತ್ರದಲ್ಲಿ ಯತಿರಾಜ ಮುಳಿಯಾರು, ವಿದ್ಯುನ್ಮಾಲಿಯಾಗಿ ಧನಿಶ್ ಕುಂಡಂಗುಯಿ, ಯಕ್ಷ ಮತ್ತು ವಿಷ್ಣುವಾಗಿ ಕಿಶನ್ ಅಗ್ಗಿತ್ತಾಯ, ದೂತನಾಗಿ ರಮ್ಯಾ ಭಟ್, ಮಹಿಷಾಸುರನಾಗಿ ರಂಜಿತ್ ಗೋಳಿಯಡ್ಕ, ಶಂಖಾಸುರನಾಗಿ ಸುಬ್ರಹ್ಮಣ್ಯ ಭಟ್ ಬದಿಯಡ್ಕ, ದುರ್ಗಾಸುರನಾಗಿ ಕೆ.ವಿ. ಶೇಷಾದ್ರಿ ಹೊಳ್ಳ, ದೂತ ಮತ್ತು ಶಿವನಾಗಿ ರಮ್ಯಾರಾವ್ ಅದ್ಭುತ ಅಭಿನಯ ನೀಡಿದರು.
ಕಾರ್ಯಕ್ರಮದ ಮುಖವರ್ಣಿಕೆಯಲ್ಲಿ ಚಂದ್ರಮೋಹನ ಕೂಡ್ಲು ಲೋಕೇಶ್ ಸುಳ್ಯ, ವಸ್ತ್ರಾಲಂಕಾರದಲ್ಲಿ ಸುಧಾಕರ ಮಲ್ಲ ಸಹಕರಿಸಿದರು. ಯಕ್ಷಗಾನ ಪ್ರದರ್ಶನದ ಬಳಿಕ ಕಲಾವಿದರಿಗೆ ಗೌರವಧನ ಮತ್ತು ಸ್ಮರಣಿಕೆ ನೀಡಲಾಯಿತು.