ಮಂಗಳೂರು : ಸಮುದಾಯ ಬೆಂಗಳೂರು ಮತ್ತು ಆಯನ ನಾಟಕದ ಮನೆ ಮಂಗಳೂರು ಇವರ ವತಿಯಿಂದ ಸಮುದಾಯ ಬೆಂಗಳೂರು ಪ್ರಸ್ತುತ ಪಡಿಸುವ ‘ಭಗವಂತನ ಮರಣ’ ನಾಟಕ ಪ್ರದರ್ಶನವನ್ನು ದಿನಾಂಕ 14 ಮಾರ್ಚ್ 2026ರಂದು ಸಂಜೆ 6-30 ಗಂಟೆಗೆ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಡಾನ್ ಬಾಸ್ಕೋ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ರಂಗರೂಪ, ವಿನ್ಯಾಸ, ರಂಗಸಜ್ಜಿಕೆ, ಸಂಗೀತ ಮತ್ತು ನಿರ್ದೇಶನ ಹಾಗೂ ಪದ್ಮಾ ಶಿವಮೊಗ್ಗ ಇವರು ಸಹ ನಿರ್ದೇಶನ ಮಾಡಿರುತ್ತಾರೆ.

ನಾಟಕದ ಬಗ್ಗೆ : ಧಾರ್ಮಿಕ ಅಸಹಿಷ್ಣತೆಯಿಂದ ಹೆಚ್ಚಾಗುತ್ತಿರುವ ಹಿಂಸೆಯ ನಿರರ್ಥಕತೆ ಹಾಗೂ ಮೂಲಭೂತವಾದಿ ಸಂಘಟನೆಗಳು ಇಂತಹ ಹಿಂಸಾಚಾರಕ್ಕೆ ಯುವಕರನ್ನು ಬಳಸಿಕೊಳ್ಳುತ್ತಿರುವುದು ಖೇದಕರ. ಅಮಾಯಕರಾದ ಯುವಕರು ಧರ್ಮದ ಅಮಲಿಗೆ ಬಿದ್ದು ಹಿಂಸೆಯನ್ನ ಕೈಗೆತ್ತಿಕೊಳ್ಳುತ್ತಿರುವುದನ್ನು ಭಗವಂತನ ಸಾವು ನಾಟಕ ತೀರ್ವವಾಗಿ ವಿಶ್ಲೇಷಿಸುತ್ತದೆ. ನಾಟಕ ಹಿಂಸೆಯ ನಿರರ್ತಕತೆಯನ್ನು ಹೇಳುತ್ತಲೇ ಜ್ಞಾನದ ಬಲದಿಂದ ಜ್ಞಾನದ ಕೇಡನ್ನು ನೋಡುವಂತೆ ಪ್ರೇರೇಪಿಸುತ್ತದೆ.
ಸಂಘಟನೆಯೊಂದರ ಕಾರ್ಯಕರ್ತನಾದ ಅಮರ ಎಂಬ ಯುವಕ ತಾನು ಸದಸ್ಯನಾದ ಸಂಘಟನೆಯ ಆದೇಶದ ಅನುಸಾರವಾಗಿ ಪ್ರೊಫೆಸರ್ ಅವರನ್ನು ಕೊಲ್ಲಲು ಬಂದು ತನ್ನ ಪ್ರಯತ್ನದಲ್ಲಿ ವಿಫಲನಾಗಿ ಗಾಯಾಳುವಾಗಿ ಪ್ರೊಫೆಸರ್ ಮನೆಯಲ್ಲಿ ಉಳಿಯುತ್ತಾನೆ. ಕೊಲ್ಲಲು ಬಂದವನು ತಾನು ಯಾರನ್ನು ಕೊಲ್ಲಬೇಕಿತ್ತೋ ಅವರಿಂದಲೇ ಪ್ರೀತಿ ಕರುಣೆಯ ಆರೈಕೆ ಪಡೆಯುತ್ತಾ ಜೊತೆಗೆ ಅವರ ಅರಿವಿನ ಮಾತಿನ ಬೆಳಕಿನಿಂದ ಹಿಂಸೆಯ ಕೇಡನ್ನು ಅರಿಯುತ್ತಾ ಹಿಂಸೆಯಿಂದ ಅಹಿಂಸೆಯ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ನಡೆಯುವುದನ್ನು ನಾಟಕೀಯವಾಗಿ ಭಗವಂತನ ಸಾವು ನಾಟಕ ಕಟ್ಟಿಕೊಡುತ್ತದೆ.
ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಕಾಲೀನ ಸಂದರ್ಭದಲ್ಲಿ ನಡೆದ ಹಲವು ಚಿಂತಕರ ಹತ್ಯೆಯ ಘಟನೆಗಳನ್ನು ನೆನಪಿಸುತ್ತಲೇ ನಾಟಕವು ಅದನ್ನು ಮೀರಿ ಹಿಂಸೆ ಮತ್ತು ಅಹಿಂಸೆಯ ನಡುವಿನ ವಾಗ್ವಾದವಾಗಿ ನಾಟಕೀಯವಾಗಿ ವಿಸ್ತರಣೆಗೊಳ್ಳುತ್ತದೆ. ಕೆ.ಆರ್. ಮೀರಾ ಅವರ ಮೂಲ ಮಲಯಾಳಂ ಭಾಷೆಯ ‘ಭಗವಂತೆ ಮರಣಂ’ ಕಥೆಯನ್ನು ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿಯವರು ನಾಟಕ ರೂಪಾಂತರ ಮಾಡಿದ್ದಾರೆ. ಇದರ ಕನ್ನಡ ಅನುವಾದ ಕೆ. ಪ್ರಭಾಕರನ್ ಅವರದ್ದು.
