ಮೂಲ್ಕಿ : ಹೊಸ ಅಂಗಣ ಪ್ರಕಟಣಾಲಯದಲ್ಲಿ ಪ್ರಕಟವಾದ ಮೂಲ್ಕಿಯ ಹರಿಶ್ಚಂದ್ರ ಪಿ. ಸಾಲಿಯಾನ್ ಇವರ ‘ತುಳುನಾಡ್ದ ತುಳು ಗಾದೆಲು’ 22ನೇ ಕೃತಿ ಬಿಡುಗಡೆ ಸಮಾರಂಭವು ದಿನಾಂಕ 10 ಮಾರ್ಚ್ 2026ರಂದು ಮೂಲ್ಕಿ ಕೆ.ಎಸ್. ರಾವ್ ನಗರದಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು.

ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು “ಸರಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ಹರಿಶ್ಚಂದ್ರ ಪಿ. ಸಾಲ್ಯಾನ್ ತುಳು ಮತ್ತು ಕನ್ನಡ ಸಾಹಿತ್ಯ ಕೃತಿಗಳನ್ನು ಬರೆಯುತ್ತಾ ಬಂದಿದ್ದಾರೆ. ಅವರ ಮಾಸ ಪತ್ರಿಕೆಯಲ್ಲಿ ಲೇಖಕರಿಗೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಅವರಿಗೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು” ಎಂದು ಹೇಳಿದರು.
ಉದ್ಯಮಿ ಜನಾರ್ದನ ಆಚಾರ್ಯ ಕೃತಿ ಬಿಡುಗಡೆಗೊಳಿಸಿದರು. ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮಾತನಾಡಿದರು. ಉದ್ಯಮಿ ಸದಾಶಿವ ಆಚಾರ್ಯ, ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೆ.ಎಸ್. ರಾವ್ ನಗರ ನಾರಾಯಣಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಬಲ ಎನ್. ಸನಿಲ್, ತುಳು ಪತ್ರಿಕೆ ಸಂಪಾದಕ ಪೂವರಿ ವಿಜಯ್ ಕುಮಾರ್ ಭಂಡಾರಿ ಪುತ್ತೂರು, ಸಾಮಾಜಿಕ ಕಾರ್ಯಕರ್ತ ಜನಾರ್ದನ ಬಂಗೇರ, ಗೋಪಿನಾಥ ಪಡಂಗ, ದಿನೇಶ್ ಕೊಲ್ನಾಡ್. ಜಯಪಾಲ ಶೆಟ್ಟಿ, ಜೋನ್ ಕ್ವಾಡ್ರಸ್, ಪೊಲೀಸ್ ನಿವೃತ್ತ ಅಧಿಕಾರಿ ಕೆ.ಎನ್. ಕೋಟ್ಯಾನ್, ಸರೋಜಿನಿ ಸುವರ್ಣ, ಇಂದಿರಾ, ವಿಜಯ ಎಚ್. ಸಾಲ್ಯಾನ್, ಕೇಶವಾನಂದ ಗುರೂಜಿ, ಕರುಣಾಕರ ಸುವರ್ಣ, ಜಿ.ಟಿ. ಆಚಾರ್ಯ ಮುಂಬಯಿ, ಜೆ.ಎಸ್. ಕರ್ಕೇರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಲೇಖಕರಾದ ಶರೋನ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ದಿನೇಶ್ ಶೆಟ್ಟಿ ಸ್ವಾಗತಿಸಿ, ವಾಸು ಪೂಜಾರಿ ವಂದಿಸಿದರು.

‘ತುಳುನಾಡ್ದ ತುಳು ಗಾದೆಲು’ ಕೃತಿ ಬಗ್ಗೆ ವಿಚಾರಿಸಲು ಹರಿಶ್ಚಂದ್ರ ಪಿ. ಸಾಲಿಯಾನ್ ಇವರ 94484 90860 ಸಂಖ್ಯೆಯನ್ನು ಸಂಪರ್ಕಿಸಬಹುದು.
