ತೆಕ್ಕಟ್ಟೆ : ತೆಕ್ಕಟ್ಟೆ ಹಯಗ್ರೀವದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಸಹಕಾರದೊಂದಿಗೆ ಧಮನಿ ಟ್ರಸ್ಟ್ ತೆಕ್ಕಟ್ಟೆ 3ನೇ ವರ್ಷದ ವಾರ್ಷಿಕೋತ್ಸವವು ದಿನಾಂಕ 28 ಫೆಬ್ರವರಿ 2026ರಂದು ನಡೆಯಿತು.
ಈ ರಂಗೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅಭಿಲಾಷ ಸೋಮಯಾಜಿ ಇವರು ಮಾತನಾಡಿ “ಶಾಲೆ, ಶಿಕ್ಷಣ, ನಾಟಕದೊಳಗಿನ ನನ್ನ ನಂಟು ಸದಾ ವೇದಿಕೆಯಲ್ಲಿ ಕಂಡುಕೊಳ್ಳುತ್ತಿದ್ದೇನೆ. ಮಕ್ಕಳು ನಾಟಕದಲ್ಲಿ ತೊಡಗಿಸಿಕೊಂಡಾಗ ಬುದ್ಧಿ, ಬೌತಿಕವಾದ ಅಂಶಗಳ ಬೆಳವಣಿಗೆ, ಕೌಶಲ್ಯ ಸಾಧ್ಯ. ಬದುಕಬೇಕಾದರೆ ಮನುಷ್ಯ ಮನುಷ್ಯರ ನಡುವೆ ಸಂಬಂಧ ಬೇಕು. ಒಂದು ಪಾತ್ರವಾಗಿ ಅದರ ಉದ್ದಗಲವನ್ನು ಅಳೆದಾಗ ವ್ಯಕ್ತಿತ್ವ ವಿಕಸನ ಸಾಧ್ಯ” ಎಂದು ಹೇಳಿದರು.
ಧಮನಿ ಟ್ರಸ್ಟಿನ ಕಾರ್ಯದರ್ಶಿ ಶ್ರೀಶ ಭಟ್ ಮಾತನ್ನಾಡಿ, “ಮಕ್ಕಳ ರಂಗಭೂಮಿಯ ತುಡಿತವನ್ನು ಮೂರು ವರ್ಷದಲ್ಲಿ ಹಲವು ಕಾರ್ಯಕ್ರಮ ನೀಡಿ, ಈಡೇರಿಸಿಕೊಂಡಿದ್ದೇನೆ. ಮುಂದೆಯೂ ಮಕ್ಕಳ ರಂಗಭೂಮಿಯ ಬಗೆಗೆ ಸಹಸ್ರ ಕೆಲಸ ಮಾಡಿ ಸಾರ್ಥಕತೆಯನ್ನು ಹೊಂದುವುದು ನಮ್ಮ ಗುರಿ” ಎಂದರು. ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್, ರಂಗ ನಿರ್ದೇಶಕಿ ಸುಧಾ ಮಣೂರು, ಸಂಘಟಕಿ ವನಿತಾ ಉಪಾಧ್ಯ, ಉಪನ್ಯಾಸಕಿ ಶಾರದಾ ಹೊಳ್ಳ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಬಳಿಕ ಕರಾವಳಿ ನಿರ್ದಿಗಂತದ ಮಕ್ಕಳ ತಂಡ ಅಭಿನಯಿಸಿದ ನಾಟಕ ‘ಕುಣಿ ಕುಣಿ ನವಿಲೆ’ ರಂಗ ಪ್ರಸ್ತುತಿಗೊಂಡಿತು.
