ಉರ್ವಸ್ಟೋರ್ : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಆಕೃತಿ ಆಶಯ ಪಬ್ಲಿಕೇಷನ್ಸ್ ಸಹಯೋಗದೊಂದಿಗೆ ಜಾನಪದ ವಿದ್ವಾಂಸ ಹಾಗೂ ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ವಾಮನ ನಂದಾವರ ಇವರ ವಾರ್ಷಿಕ ಸ್ಮರಣೆಯ ಪ್ರಯುಕ್ತ ಚಂದ್ರಕಲಾ ನಂದಾವರ ಇವರು ಸಂಪಾದಿಸಿರುವ ಡಾ. ವಾಮನ ನಂದಾವರ ಅವರ ‘ಆದಿಮ’ ಲೇಖನಗಳ ಸಂಕಲನ ಹಾಗೂ ‘ತಾಳಮೇಳ’ ಕವನ ಸಂಕಲನ ಕೃತಿಗಳ ಲೋಕಾರ್ಪಣೆ ಹಾಗೂ ‘ವಾಮನ ನಂದಾವರ ಚಾವಡಿ’ ಉದಿಪನ ಕಾರ್ಯಕ್ರಮವು ದಿನಾಂಕ 14 ಮಾರ್ಚ್ 2026ರಂದು ಮಂಗಳೂರು ಉರ್ವಸ್ಟೋರಿನ ತುಳು ಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ‘ಆದಿಮ’ ಕೃತಿ ಪರಿಚಯ ಮಾಡಿದ ಮೈಸೂರು ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ ಸಂಶೋಧಕ ಡಾ. ಚಲಪತಿ “ಜಾನಪದ ಸಂಶೋಧಕರಾಗಿದ್ದ ಡಾ. ವಾಮನ ನಂದಾವರ ಇವರು ವೈಯಕ್ತಿಕ ನೆಲೆಯಲ್ಲಿ ನಡೆಸಿದ ಅಧ್ಯಯನ ಕೇವಲ ಕರಾವಳಿಯ ಜನಪದೀಯ ಹಾಗೂ ಜನಾಂಗೀಯ ಅಧ್ಯಯನಕ್ಕೆ ಮಾತ್ರ ಸೀಮಿತವಾಗಿರದೆ ಇಡೀ ಕರ್ನಾಟಕದ ಒಳಗೆ ಜನಪದೀಯವಾಗಿ ಜನಾಂಗೀಯ ಅಧ್ಯಯನವನ್ನು ಹೇಗೆ ಮಾಡಬೇಕೆಂಬ ಮಾದರಿಯನ್ನು ತೋರಿಸಿಕೊಟ್ಟಿದೆ” ಎಂದು ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕೃತಿ ಬಿಡುಗಡೆಗೊಳಿಸಿದರು. ಉಚ್ಚಿಲ ಕಲಾ ಗಂಗೋತ್ರಿಯ ನಿರ್ದೇಶಕ, ನಿವೃತ್ತ ಪ್ರಾಂಶುಪಾಲ ಸದಾಶಿವ ಅವರು ‘ವಾಮನ ನಂದಾವರ ಚಾವಡಿ’ಯ ನಾಮ ಫಲಕವನ್ನು ಅನಾವರಣಗೊಳಿಸಿದರು. ಡಾ. ವಾಮನ ನಂದಾವರ ಅವರ ‘ತಾಳಮೇಳ’ ಕೃತಿಯನ್ನು ಕವಯಿತ್ರಿ ಜ್ಯೋತಿ ಮಹಾದೇವ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದೆ ರತ್ನಾವತಿ ಜೆ. ಬೈಕಾಡಿಯವರನ್ನು ಸಮ್ಮಾನಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಬಾಬು ಪಾಂಗಳ ಉಪಸ್ಥಿತರಿದ್ದರು. ತುಳು ಅಕಾಡೆಮಿಯ ಮಾಜಿ ಸದಸ್ಯ ಬೆನೆಟ್ ಅಮ್ಮಣ್ಣ ಕಾರ್ಯಕ್ರಮ ನಿರೂಪಿಸಿದರು. ಆಕೃತಿ ಆಶಯ ಪ್ರಕಾಶಕ ಕಲ್ಲೂರು ನಾಗೇಶ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ನಂದಾವರ ವಂದಿಸಿದರು. ಸಭಾ ಕಾರ್ಯಕ್ರಮದ ‘ಪದರಂಗಿತ’ ಪ್ರಸ್ತುತಗೊಂಡಿತು.
