ಬೆಂಗಳೂರು : ಪ್ರಸಿದ್ಧ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯು ಬುಕ್ ಬ್ರಹ್ಮ ಇವರ ಸಹಯೋಗದೊಂದಿಗೆ ಬೆಂಗಳೂರಿನ ಬನಶಂಕರಿಯಲ್ಲಿರುವ ಸುಚಿತ್ರಾ ಫಿಲ್ಮ್ ಸೊಸೈಟಿಯ ಸಭಾಂಗಣದಲ್ಲಿ ಪುಸ್ತಕಗಳ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 11 ಅಕ್ಟೋಬರ್ 2026ರಂದು ಹಮ್ಮಿಕೊಂಡಿದ್ದರು. ಲೇಖಕರುಗಳಾದ ಡಾ. ಎಂ.ವಿ. ನಾಗರಾಜರಾವ್ ಇವರ ‘ಗೋಲಪ ಕಾಲೊನಿ ರಹಸ್ಯ’ ಅನುವಾದಿತ ಪತ್ತೇದಾರಿ ಕಾದಂಬರಿ, ಶ್ರೀಮತಿ ವಸುಮತಿ ಉಡುಪ ಇವರ ‘ಜೀವನ್ಮುಖಿ’ ಕಥಾಸಂಕಲನ, ಡಾ. ಎ.ಓ. ಅವಲ ಮೂರ್ತಿ ಇವರ್ತ ‘ದೇವರು-ವಿಜ್ಞಾನ ಮತ್ತು ವಿಜ್ಞಾನಿಗಳು’, ರವಿರಾಜ್ ಬೈಕಂಪಾಡಿ ಇವರ ‘ಅದಲು ಬದಲು’ ಪತ್ತೇದಾರಿ ಕಾದಂಬರಿ ಹಾಗೂ ಪಾರ್ವತಿ ಜಿ. ಐತಾಳ್ ಇವರ ‘ಬೇಸಿಗೆಯ ಮಳೆ’ ಅನುವಾದಿತ ಕಾದಂಬರಿ ಎಂಬ ಐದು ಕೃತಿಗಳು ಲೋಕಾರ್ಪಣೆಗೊಂಡವು.
ಕೃತಿಗಳನ್ನು ಬಿಡುಗಡೆಗೊಳಿಸಿದ ಖ್ಯಾತ ರಂಗಭೂಮಿ ಕಲಾವಿದ-ಚಿತ್ರನಟ ಶ್ರೀನಿವಾಸ ಪ್ರಭು ಇವರು ಮಾತನಾಡಿ “ಇಂಗ್ಲಂಡ್ನಲ್ಲಿ ಜನಮೆಚ್ಚುಗೆ ಪಡೆದ ಎಲ್ಲಾ ಹೆಸರಾಂತ ಕವಿ-ಲೇಖಕರುಗಳಿಗೆಲ್ಲ ಸ್ಮಾರಕಗಳನ್ನು ಕಟ್ಟಿ ಅಲ್ಲಿ ಅವರಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಸಾರ್ವಜನಿಕರಿಗೆ ವೀಕ್ಷಣೆಗೋಸ್ಕರ ಇಡುವ ಪರಿಪಾಠವಿದೆ. ಅಷ್ಟೇ ಏಕೆ, ಜನರು ಹುಚ್ಚೆದ್ದು ಪ್ರೀತಿಸಿದ ಷರ್ಲಾಕ್ ಹೋಮ್ಸ್ ನಂತಹ ಕಾಲ್ಪನಿಕ ಪಾತ್ರಕ್ಕೂ ಅವರು ಒಂದು ಭರ್ಜರಿ ಸ್ಮಾರಕವನ್ನು ಕಟ್ಟಿದ್ದಾರೆ. ಆದರೆ ನಮ್ಮ ದೇಶದಲ್ಲಿ ಆ ಸಂಸ್ಕೃತಿ ಇನ್ನೂ ಬೆಳೆದಿಲ್ಲ. ನಮ್ಮ ಸರಕಾರ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ” ಎಂದು ಹೇಳಿದರು.



ವಿಜಯ ಕರ್ನಾಟಕ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕಿ ವಿದ್ಯಾರಶ್ಮಿ ಪೆಲತ್ತಡ್ಕ ಮತ್ತು ಯುವ ಲೇಖಕ ಶರತ್ ಭಟ್ ಸೇರಾಜೆಯವರು ಕೃತಿಗಳ ಬಗ್ಗೆ ಮಾತನಾಡಿದರು. ಕೃತಿಗಳ ಲೇಖಕರು ಕೃತಿ ರಚನೆಯಲ್ಲಿ ತಮ್ಮ ಅನುಭವಗಳನ್ನು ಹೇಳಿಕೊಂಡರು. ಹಿರಿಯ ಕವಿ ಬಿ.ಆರ್. ಲಕ್ಷ್ಮಣ ರಾವ್ ಸ್ವತಃ ರಚಿಸಿದ ಕವಿತೆಯೊಂದನ್ನು ಆರಂಭಗೀತೆಯಾಗಿ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಪ್ರಕಾಶಕರಾದ ಪ್ರಕಾಶ ಕಂಬತ್ತಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆಗೈದರು.

