“ದೇಶ ಸುತ್ತಿ ನೋಡು, ಕೋಶ ಓದಿ ನೋಡು” ಎಂದು ಹಿರಿಯರು ಹೇಳಿದಂತೆ ನಾಲ್ಕು ಕಡೆ ಓಡಾಡಿ ಅಲ್ಲಿನ ಅನುಭವ ಪಡೆದುಕೊಂಡರೆ ಆ ಅನುಭೂತಿಯೇ ಬೇರೆ. ಪ್ರವಾಸದಲ್ಲಿ ಹಲವು ವಿಧ, ಅಚಾನಕ್ಕಾಗಿ ಪ್ರವಾಸಕ್ಕೆ ಹೊರಡುವವರು ಕೆಲವರು, ಮುಂಚೆಯೇ ಪ್ಲಾನ್ ಮಾಡಿಕೊಂಡು, ಟಿಕೆಟ್ ಕಾದಿರಿಸಿ, ಹೊಟೆಲ್ ಕಾದಿರಿಸಿಕೊಂಡು ತಮ್ಮಷ್ಟಕ್ಕೆ ಹೊರಟು ಹೋಗುವವರು ಕೆಲವರು, ಸುತ್ತಾಟಕ್ಕೆ ಕರೆದುಕೊಂಡು ಹೋಗಲು ಇರುವ ಟ್ರಾವೆಲ್ ಏಜೆನ್ಸಿಯ ಸಹಾಯ ಪಡೆದು ಹೋಗುವವರು ಇನ್ನು ಕೆಲವರು. ಲೇಖಕಿ ಪಾರ್ವತಿ ಜಿ. ಐತಾಳ್ ಇವರು ಪತಿಯೊಂದಿಗೆ ಮಧುಚಂದ್ರದ ನೆಪದಲ್ಲಿ ತಿರುಗಾಟಕ್ಕೆ ಹೋದ ಸ್ಥಳಗಳು, ವಿದೇಶಕ್ಕೆ ಏಜೆನ್ಸಿಯವರೊಂದಿಗೆ ಹೋದ ಪ್ರವಾಸಗಳು- ಹೀಗೆ ತಮ್ಮ ವಿವಿಧ ಪ್ರವಾಸಗಳ ಕುರಿತು ನಮ್ಮೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ‘ಸಂಚಾರಿ ಭಾವ’ ಈಗ ಸದ್ಯ ಬಿಡುಗಡೆಯಾಗಿದ್ದು, ಅದನ್ನು ಓದುವ ಭಾಗ್ಯ ನನ್ನದಾಯಿತು.
1988ರಲ್ಲಿ ಅವರು ಮದುವೆಯಾದ ನಂತರ ಯಜಮಾನರು ಅವರಿಗೆ ಸರ್ಪ್ರೈಸ್ ನೀಡಲೆಂದು ಪ್ಲಾನ್ ಮಾಡಿದ ಕನ್ಯಾಕುಮಾರಿ-ರಾಮೇಶ್ವರ-ಮಧುರೈ ಪ್ರವಾಸದ ಕಥನವನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಕನ್ಯಾಕುಮಾರಿಯ ಹಿನ್ನೆಲೆ, ಅಲ್ಲಿನ ದೇವಸ್ಥಾನದ ವಿವರಣೆ, ಅಲ್ಲಿನ ಪರಿಸರ, ಚಂದ್ರೋದಯ, ಸೂರ್ಯಾಸ್ತಗಳನ್ನು ಒಟ್ಟಿಗೆ ಕಾಣುವ ರೋಮಾಂಚಕ ಅನುಭವದ ಕುರಿತು ಹೇಳುತ್ತಾರೆ. ಸೂರ್ಯೋದಯದ ದೃಶ್ಯವನ್ನು ಕಂಡು ಪಂಜೆ ಮಂಗೇಶರಾಯರ ‘ಮೂಡುವನು ರವಿ’ ಪದ್ಯವನ್ನು ನೆನಯುವ ಅವರ ಮನ ಭಾವುಕವಾಗುತ್ತದೆ. ಮುಂದೆ ಮಧುರೈ, ರಾಮೇಶ್ವರ ನಂತರ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯ ಅವುಗಳ ಹಿನ್ನೆಲೆಗಳನ್ನು ಹೇಳುತ್ತ, ತಮ್ಮ ಅನುಭವಗಳನ್ನು ನಮ್ಮ ಮುಂದೆ ಪ್ರಸ್ತುತ ಪಡಿಸಿರುವ ರೀತಿ ಅಷ್ಟು ವರ್ಷಗಳ ಹಿಂದಿನದಾದರೂ ನಿನ್ನೆ ಮೊನ್ನೆ ನಡೆದಂತೆ ನಮ್ಮ ಮುಂದೆ ನೀಡಿರುವ ಚಿತ್ರಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
1989ರ ಉತ್ತರ ಭಾರತ ಪ್ರವಾಸ. ಗಂಡ ಹೆಂಡಿರು ಇಬ್ಬರಿಗೂ ಹಿಂದಿ ಮಾತನಾಡಲು ಬಾರದಿದ್ದರೂ ಅವರೇ ರೈಲು ಪ್ರಯಾಣ, ಉಳಿದುಕೊಳ್ಳುವ ವ್ಯವಸ್ಥೆಗಳನ್ನು ಹೋದ ಸ್ಥಳಗಳಲ್ಲಿ ಅವರೇ ಹುಡುಕಿಕೊಂಡು ಹೋಗಿ, ಹರಕು-ಮುರುಕು ಹಿಂದಿಯಲ್ಲಿ ಮಾತನಾಡಿ ಪ್ರವಾಸದ ದಿನಗಳನ್ನು ನಿಭಾಯಿಸಿದ ಸಂದರ್ಭಗಳನ್ನು ಅವರು ನೆನೆಯುತ್ತಾರೆ. ಅಲಹಾಬಾದಿನಲ್ಲಿ ಹಿಂದಿಯ ಹಿರಿಯ ಕಥೆಗಾರ ಉಪೇಂದ್ರನಾಥ ಅಶ್ಕರವರ ಮನೆಗೆ ಹೋಗಿ ಅವರನ್ನು ಭೇಟಿಯಾಗುತ್ತಾರೆ. ಯಾಕೆಂದರೆ ಅವರ ಐದು ನೀಳ್ಗತೆಗಳನ್ನು ಅನುವಾದಿಸಿ ಅದಾಗಲೇ ಅವರ ಸ್ನೇಹ ಸಂಪಾದಿಸಿರುತ್ತಾರೆ. ಪತ್ರ ಮುಖೇನ ಸಂಪರ್ಕದಲ್ಲಿದ್ದ ಅವರ ಮನೆ (ಆಗ ಫೋನ್ ಸಂಪರ್ಕವಿಲ್ಲದ್ದರಿಂದ)ಯನ್ನು ಹುಡುಕಿಕೊಂಡು ಹೋಗಿ ಭೇಟಿಯಾಗುವ ಸನ್ನಿವೇಶ ಕುತೂಹಲಕಾರಿಯಾಗಿದೆ.
ಪೆಹಲ್ಗಾಮ್ ದುರ್ಘಟನೆಯ ಸಂದರ್ಭದಲ್ಲಿ ಕಾಶ್ಮೀರ ಪ್ರವಾಸಕ್ಕೆ ಹೋದ ಲೇಖಕಿಗೆ ಆದ ದುಃಖ, ಸಂಕಟ ವರ್ಣನಾತೀತ. ಆದರೆ ದಾರುಣ ಮರಣಕ್ಕೆ ತುತ್ತಾದವರಿಗಾಗಿ ಮೌನ ಪ್ರಾರ್ಥನೆ ಸಲ್ಲಿಸುತ್ತಾರೆ. ಯಾವ ತೊಂದರೆಯೂ ಇಲ್ಲದೇ (ಅಷ್ಟು ಕಟ್ಟಿನಿಟ್ಟಿನ ಬಿಗಿ ಬಂದೋಬಸ್ತನಲ್ಲಿ) ಕಾಶ್ಮೀರ ಪ್ರವಾಸ ಮಾಡಿದ ಘಟನೆಯನ್ನು ನಮಗೆ ತಿಳಿಸುತ್ತಾರೆ. ದಲ್-ಲೇಕ್ ನಲ್ಲಿ ಹೌಸ್-ಬೋಟ್, ಶಿಕರಗಳು (ಮೇಲೆ ಮಾಡು ಇರುವ ದೋಣಿ ಮನೆಗಳು), ಅಲ್ಲಿನ ಪ್ರಕೃತಿ ಸೌಂದರ್ಯ, ಟ್ಯೂಲಿಪ್ ಗಾರ್ಡನ್, ಅಲ್ಲಿನ ಟ್ಯೂಲಿಪ್ ಉತ್ಸವದ ಮಾಹಿತಿ ಹೀಗೆ ನಮ್ಮನ್ನು ಕಾಶ್ಮೀರಕ್ಕೆ ಕರೆದೊಯ್ದಿಹರೇನೋ ಎಂಬಂತೆ ನಮ್ಮ ಕಣ್ಣ ಮುಂದೆ ಅಲ್ಲಿನ ಪರಿಸರ ಹಾದುಹೋಗುತ್ತದೆ. ಶ್ರೀನಗರದ ರಸ್ತೆಗಳ ವಿವರ, ಅದರ ಸುತ್ತಮುತ್ತಲಿನ ಪ್ರಾದೇಶಿಕ ಮಾಹಿತಿ, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳ ರಮಣೀಯ ಸೌಂದರ್ಯರಾಶಿಯನ್ನು ನಮ್ಮ ಮುಂದೆ ಸುರುವಿದ್ದಾರೆ ಲೇಖಕಿ. ಏರ್-ಪೋರ್ಟಿನಲ್ಲಿ ನಡೆದ ಎರಡೆರಡು ಬಾರಿ ಬಿಗಿಯಾದ ಚೆಕ್ಕಿಂಗ್ ಕುರಿತು ಹೇಳುವ ಲೇಖಕಿ ಬೆಂಗಳೂರಿನ ನೆಲದ ಮೇಲೆ ಕಾಲಿಟ್ಟು ದೀರ್ಘ ನಿಟ್ಟುಸಿರು ಬಿಟ್ಟಿದ್ದನ್ನು ನೆನೆಯುತ್ತಾರೆ.
ಪುರಿ, ಕೋನಾರ್ಕ್, ಭುವನೇಶ್ವರ ಈ ಸದ್ಯ ನಾನು ನೋಡಿ ಬಂದಿದ್ದೇನೆ, ಆದರೆ ಲೇಖಕಿಯ ಮಾತಿನಲ್ಲಿ ಅವರ ಅನುಭವ ಓದಿದ ಮೇಲೆ ಆ ಪ್ರದೇಶಗಳ ಇನ್ನಷ್ಟು ಮಾಹಿತಿಯನ್ನು ನಾನು ತಿಳಿದುಕೊಳ್ಳುವಂತಾಯಿತು. ಉದಯಗಿರಿ, ಖಂಡಗಿರಿ ಗುಹೆಗಳ ಕುರಿತು ಹೇಳಿ ಅಲ್ಲಿನ ಮೂರ್ತಿ, ಕೆತ್ತನೆಗಳ ಸೌಂದರ್ಯದ ಕುರಿತು ಸ್ವಾರಸ್ಯವಾಗಿ ಹೇಳುತ್ತಾರೆ. ಧವಳಗಿರಿಯ ಶಾಂತಿ ಸ್ತೂಪಕ್ಕೆ ಹೋಗಿ ಅಲ್ಲಿನ ಚಿತ್ರಣ ನೀಡುತ್ತಾ, ಅಲ್ಲಿನ ಹಿನ್ನೆಲೆಯನ್ನು ನಮಗೆ ತಿಳಿಸಲು ಅವರು ಮರೆಯಲಾರರು. ಲಿಂಗರಾಜ ದೇವಾಲಯ, ತಾರತಾರಿಣಿ ಶಕ್ತಿಪೀಠ, ಪುರಿ ಜಗನ್ನಾಥ ದೇವಾಲಯ, ಅಲ್ಲಿನ ಧ್ವಜ ಬದಲಾವಣೆ, ಪ್ರವೇಶದ್ವಾರದ ವಿವರ, ಗೋಪುರದ ಶಿಖರದಲ್ಲಿ ನೀಲಚಕ್ರ, ಅಲ್ಲಿನ ರಹಸ್ಯಬಾವಿ, ಆ ಸ್ನಾನದ ನಂತರ ದೇವರಿಗೆ ಲೇಪಿಸುವ ಆಯುರ್ವೇದದ ಗಿಡಮೂಲಿಕೆ ಔಷಧಿ ಹೀಗೆ ಅಲ್ಲಿನ ವಿಸ್ಮಯಕಾರಿ ವಿಷಯಗಳನ್ನು ತಿಳಿದು ನಮಗೆ ಹೇಳಲು ಮರೆಯುವುದಿಲ್ಲ. ವಿಷ್ಣುವೇ ಬಡಗಿ ರೂಪದಲ್ಲಿ ಬಂದು ಮೂರ್ತಿ ಮಾಡುವಾಗ ಯಾರೂ ನನ್ನ ಕೆಲಸಕ್ಕೆ ತೊಂದರೆ ಮಾಡಬಾರದು ಎಂದು ಷರತ್ತು ವಿಧಿಸಿ ಹೋಗಿ, ನಂತರ ಸ್ವಲ್ಪ ದಿನದಲ್ಲಿ ರಾಣಿ ಬಾಗಿಲು ತೆರೆಸಿ, ಬಡಗಿ ಮಾಯವಾಗುವ ಕಥೆಯನ್ನೂ ನಮಗೆ ನೆನಪು ಮಾಡಿಕೊಡುತ್ತಾರೆ.
ಮಾಯಾನಗರಿ ದುಬೈ ಮತ್ತು ನೇಪಾಳದ ಪ್ರವಾಸ ಮಾಡಿ ಅಲ್ಲಿನ ಪರಿಸರ, ಆರ್ಥಿಕ ವ್ಯವಸ್ಥೆ, ಅವರ ಧಾರ್ಮಿಕ ನಂಬಿಕೆ, ಅವರ ಆಚರಣೆ, ಅಲ್ಲಿನ ರಸ್ತೆಗಳು, ದುಬೈನ ಗಗನ ಚುಂಬಿ ಕಟ್ಟಡಗಳು, ಒಂಟೆ ಸವಾರಿ, ಬೆಲ್ಲಿ ಡ್ಯಾನ್ಸ್, ದುಬೈ ಮ್ಯೂಸಿಯಂ, ಕ್ರೂಸರ್ ಭೋಜನ, ಚಿನ್ನ, ಖರ್ಜೂರದ ಮಾರುಕಟ್ಟೆಯ ವಿವರಗಳು, 164 ಮಹಡಿಗಳ ಬುರ್ಜ್ ಕಲೀಫಾ, ಅದರ ರುದ್ರ ಭಯಂಕರ ಅನುಭವ, ‘ಮಿರೆಕಲ್ ಗಾರ್ಡನ್’ ಭೇಟಿ, ಹೀಗೆ ಮಾಯಾನಗರಿಯ ಸೌಂದರ್ಯದ ಕುರಿತು ಅವರಿಗೆ ಎಷ್ಟು ಹೇಳಿದರೂ ಸಾಲದು ಎನಿಸುತ್ತದೇನೋ! ‘ಮಿರೆಕಲ್ ಗಾರ್ಡನ್’ನಷ್ಟು ದೊಡ್ಡ ಉದ್ಯಾನವನ್ನು ಈ ಹಿಂದೆ ಎಲ್ಲಿಯೂ ಕಂಡಿಲ್ಲವೇನೋ! ಅಷ್ಟು ದೊಡ್ಡ ಉದ್ಯಾನವೆಂದು ನಮಗೆ ಊಹಿಸಲ ಸಾಧ್ಯವಾದರೂ ಲೇಖಕಿಯ ವರ್ಣನೆ ನೋಡಿ ನಮಗೆ ಉದ್ಯಾನವನ್ನು ನೋಡಿದಷ್ಟೇ ಅನುಭವವಾದದ್ದು ಸುಳ್ಳಲ್ಲ. ಭಿಕ್ಷೆ ಬೇಡುವವರು ಇಲ್ಲದಿಹ, ಅಲೆಮಾರಿ ದನಗಳು, ಬೀದಿ ನಾಯಿಗಳು ಇಲ್ಲದಿಹ, ಸ್ವಚ್ಛವಾಗಿರುವ ರಸ್ತೆಗಳು, ಅಪಘಾತ ಅಪರೂಪವಾಗಿರುವ ರಸ್ತೆಗಳು, ಬೀದಿ ಬದಿ ಒಪ್ಪವಾಗಿ ನೆಟ್ಟು ಬೆಳೆಸಿದ ಹಸುರು ಗಿಡ-ಮರಗಳು ಹೀಗೆ ಇದು ಯಾವುದೋ ಕನಸಿನ ನಗರವೇ ಎಂದು ಅನಿಸುವುದರಲ್ಲಿ ಸುಳ್ಳಲ್ಲ. ದುಬೈ ದೇಶದ ವರ್ಣನೆ ನೋಡಿದರೆ ನಮಗೆ ಒಮ್ಮೆ ಹೋಗಿ ನೋಡಲೇ ಬೇಕು ಅನಿಸದಿರದು.
ನೇಪಾಳ, ಗುಜರಾಥ್, ಒಡಿಸ್ಸಾ ಹೀಗೆ ವಿದೇಶಿ ಮತ್ತು ಅಂತರ್-ರಾಜ್ಯ ಪ್ರವಾಸಗಳಷ್ಟೇ ಅಲ್ಲದೇ ಕಾರ್ಕಳ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಮೊದಲಾದೆಡೆ ತಾವು ಮಾಡಿದ ಪ್ರವಾಸ ಕಥನವನ್ನು ಹೇಳುತ್ತಾ, ತಮ್ಮ ಪ್ರವಾಸದ ವ್ಯವಸ್ಥೆ, ಪ್ರಯಾಣ, ಆಹಾರ, ತಂಗುವ ಜಾಗಗಳ, ಎಲ್ಲಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುತ್ತಾ ವ್ಯವಸ್ಥಾಪಕರಿಗೆ ಧನ್ಯವಾದ ಹೇಳಲು ಮರೆಯುವುದಿಲ್ಲ. ಮದುವೆಯ ನಂತರ ಅವರಂತೆ ಪ್ರವಾಸಿಪ್ರಿಯ ಸಂಗಾತಿ, ಈಗ ಮಕ್ಕಳ ಸಹಕಾರ ದೊರೆತ ಲೇಖಕಿ ಪುಣ್ಯವಂತರೇ ಸರಿ. ಅವರ ಸಂಚಾರಿ ಭಾವದ ನೌಕೆ ಇನ್ನೂ ಮುಂದೆ ಸಾಗುತ್ತಿರಲಿ, ಸಂಚಾರದ ಮುಂದಿನ ಪುಟಗಳನ್ನು ನಾವು ಓದುವಂತಾದರೆ ಇನ್ನೂ ಚೆನ್ನ.
ಸ್ವರೂಪ್ ಪ್ರಕಾಶನ ಮೈಸೂರು, ಪುಟಗಳು 264, ಬೆಲೆ : ರೂ.200/-

ವಿಮರ್ಶಕಿ : ಸಾವಿತ್ರಿ ಶಾನುಭಾಗ್
ಮಲೆನಾಡಿನ ಸಿರ್ಸಿ ಊರಿನವರಾದ ಸಾವಿತ್ರಿ ಶಾನುಭಾಗ್ ಬೆಂಗಳೂರಿನಲ್ಲಿ ಏಳು ವರುಷ ಸಾಫ್ಟ್ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿ ಈಗ ಗೃಹಿಣಿಯಾಗಿ ಓದುವ ಬರೆಯುವ ಹವ್ಯಾಸವನ್ನು ಮುಂದುವರಿದಿದ್ದಾರೆ. ಇದುವರೆಗೂ ಮಹಿಳೆಯರು, ಅವರ ಜೀವನದ ಬಗ್ಗೆ ಬರಹಗಳನ್ನು ಬರೆದು, ಅವುಗಳ ಕಿರುಪರಿಚಯ ಬರೆಯುವ ಹವ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾ ಅವರ ಆಟೋಟಗಳಲ್ಲೇ ಸಮಯ ಕಳೆಯುತ್ತಾ ಅವರ ಕುರಿತು, ಅವರನ್ನು ನಿಭಾಯಿಸುವ ಕುರಿತು ಬರೆಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಇವರ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಲೇಖಕಿ : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.
