Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

    October 17, 2026

    ಶಿವಮೊಗ್ಗದಲ್ಲಿ ಸಾಂಸ್ಕೃತಿಕ ದಸರಾ ಕವಿ ಕಾವ್ಯ ಸಂಭ್ರಮ | ಅಕ್ಟೋಬರ್ 19

    October 17, 2026

    ಮಡಿಕೇರಿ ಗಾಂಧಿ ಮೈದಾನದಲ್ಲಿ ‘ಜಾನಪದ ದಸರಾ -2026’ | ಅಕ್ಟೋಬರ್ 18

    October 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಪುಸ್ತಕ ವಿಮರ್ಶೆ | ‘ಪ್ರಬಂಧ ಪಂಚದಶೀ’ ಕನ್ನಡನಾಡಿನ ಸಾಂಸ್ಕೃತಿಕ ಸಂಕಥನ
    Article

    ಪುಸ್ತಕ ವಿಮರ್ಶೆ | ‘ಪ್ರಬಂಧ ಪಂಚದಶೀ’ ಕನ್ನಡನಾಡಿನ ಸಾಂಸ್ಕೃತಿಕ ಸಂಕಥನ

    October 17, 2026No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಇದು ನಮ್ಮ ನಾಡಿನ ಪ್ರತಿಭಾವಂತ ಯುವ ಸಂಶೋಧಕ ಎಸ್. ಕಾರ್ತಿಕ್ ಇವರ ಶೋಧ ಕೃತಿ. ‘ಪ್ರಬಂಧ ಪಂಚದಶೀ’ ಎಂಬುದಾಗಿ ಈ ಗ್ರಂಥಕ್ಕೆ ನಾಮಕರಣ ಮಾಡಿದ್ದರೂ ಇದರಲ್ಲಿ ಶೋಧ ಗುಣಸಂಪನ್ನ ಲೇಖನಗಳೇ ಒಡೆದು ಕಾಣುತ್ತವೆ. ಕನ್ನಡ, ಕನ್ನಡಿಗ, ಕರ್ನಾಟಕ ಈ ಮೂರು ತತ್ವಗಳನ್ನು ಭಿತ್ತಿಯಾಗಿರಿಸಿಕೊಂಡು ನಡೆಸಿದ ಅಂತರ್ಶಿಸ್ತೀಯ, ತೌಲನಿಕ ಚಿಂತನ, ಹುಡುಕಾಟಗೈದ ವಿಶ್ಲೇಷಣೆ ಈ ಕೃತಿಯಲ್ಲಿ ಹಾಳತವಾಗಿ ನೆಲೆ ಪಡೆದಿದೆ. ಕನ್ನಡ ನಾಡಿನ ಹಿರಿಮೆ ಗರಿಮೆ, ಕರ್ನಾಟಕದ ಶಾಸನಗಳ ಅತಿಶಯತೆ, ನಮ್ಮ ನಾಡಿನ ಭವ್ಯ ಸಂಗೀತ ಪರಂಪರೆ, ಅಲ್ಲಿನ ಪ್ರಯೋಗಗಳು, ರಾಮಕಥೆ ಕನ್ನಡ ಪಥ, ಕನ್ನಡ ಸಾಹಿತ್ಯದಲ್ಲಿ ವಾಮನಾವತಾರ, ತೆಲುಗು ಭಾಷೆಯ ಯಕ್ಷಗಾನಗಳು ಮತ್ತು ಕನ್ನಡಿಗ ಕವಿಗಳು, ಮೈಸೂರು ಒಡೆಯರ ಕಾಲದ ಸಂಗೀತ ಮತ್ತು ಸಾಹಿತ್ಯದ ಬೆಳವಣಿಗೆ ಹೀಗೆ ಈ ಕೃತಿ ಭಿನ್ನ ವಿಭಿನ್ನ ವಸ್ತು ವೈವಿಧ್ಯ ಆಶಯ ಆಕೃತಿಗಳಿಂದ ಅವಲೋಕನೀಯವಾಗಿದೆ. ಕರ್ನಾಟಕ ಸಂಸ್ಕೃತಿ ಚಾರಿತ್ರಿಕವಾಗಿ ಬಹುಮೂಲಗಳಿಂದ ಪ್ರಭಾವವನ್ನು ಹೀರಿ ಸಮೃದ್ಧಿ ಹೊಂದಿರುವ ಬಹುಮುಖಿ ಸಂಸ್ಕೃತಿ ಎಂಬ ಸತ್ಯವನ್ನು ಈ ಕೃತಿಯಲ್ಲಿ ಮನಗಾಣಿಸಿಕೊಟ್ಟಿರುವುದು ಮೆಚ್ಚತಕ್ಕ ಸಂಗತಿ. ಅವರು ತಮ್ಮ ಇತಿಹಾಸ ವಿಶ್ಲೇಷಣೆಗೆ ಸಾಹಿತ್ಯದ ಆಕರಗಳನ್ನು ಸಹ ಇಲ್ಲಿ ವಿಪುಲವಾಗಿ ದುಡಿಸಿಕೊಂಡಿದ್ದಾರೆ. ಅನೇಕ ಪುರಾವೆಗಳ ಮೂಲಕ ಅವರು ಸಾಂಸ್ಕೃತಿಕ ಇತಿಹಾಸದ ನಿರ್ವಚನವನ್ನು ಮಾಡಿರುವುದು ಈ ಕೃತಿಯ ಗುಣಾತಿಶಯವೂ ಆಗಿದೆ.

    ನಮ್ಮ ದೃಷ್ಟಿ ತಿದ್ದುವ ಅನೇಕ ನವನವೀನ ವಿಚಾರಗಳು ಇಲ್ಲಿ ಮುನ್ನೆಲೆಗೆ ಬಂದಿವೆ. ಇಲ್ಲಿ ಲೇಖಕರು ಒಂದು ವಿಷಯವನ್ನು ಕೇವಲ ಪರಿಚಯಾತ್ಮಕವಾಗಿ ಹೇಳದೇ ಅದರ ಐತಿಹಾಸಿಕ ಹಿನ್ನೆಲೆ, ಸಾಂಸ್ಕೃತಿಕ ಸಂದರ್ಭ, ತಾತ್ವಿಕ ಆಯಾಮ ಮತ್ತು ಸಮಕಾಲೀನ ಪ್ರಸ್ತುತತೆಯನ್ನು ಬಹುಮುಖಿ ನೆಲೆಯಲ್ಲಿ ಅನುಸಂಧಾನಗೊಳಿಸಿ ಲೋಕಸಮ್ಮುಖಗೊಳಿಸಿರುವುದು ಈ ಕೃತಿಯ ವೈಶಿಷ್ಟ್ಯ. ನಮ್ಮ ನಾಡಿನ ಭವ್ಯ ಪರಂಪರೆಯನ್ನು ಅಲ್ಲಿನ ಮುಚ್ಚಿ ಹೋದ ಮುಖಗಳನ್ನು ಒಳನೋಟಗಳೊಂದಿಗೆ ಬೆಳಕಿಗೆ ಹಿಡಿದಿರುವುದು ಈ ಕೃತಿಯ ಹೆಚ್ಚುಗಾರಿಕೆ. ಈ ನಿಟ್ಟಿನಲ್ಲಿ ವಿದ್ವಾಂಸರಾದ ಎಸ್. ಕಾರ್ತಿಕ್ ಅವರ ‘ಪ್ರಬಂಧ ಪಂಚದಶೀ’ ಕೃತಿ ಒಂದು ಗಮನಾರ್ಹ ಕೊಡುಗೆಯಾಗಿದೆ.

    ತಮ್ಮ ಮಾತು ಕೃತಿಗಳ ಮೂಲಕ ಕರ್ನಾಟಕದ ಇತಿಹಾಸ ಸಂಸ್ಕೃತಿ ಪರಂಪರೆ ಇವುಗಳ ಸ್ವರೂಪ ವ್ಯಾಪ್ತಿಯನ್ನು ಹೆಚ್ಚಿಸಿದ ಡಾ. ಚಿದಾನಂದಮೂರ್ತಿ, ಕೆಳದಿ ಗುಂಡಾ ಜೋಯಿಸ್, ಸಂಗೀತಶಾಸ್ತ್ರಜ್ಞ ರಾ. ಸತ್ಯನಾರಾಯಣ, ಬೌದ್ಧ ವಾಸ್ತು ಅಧ್ಯಯನಕಾರ ಡಾ. ನಾಗರಾಜು ಅವರ ವ್ಯಕ್ತಿತ್ವ, ಯಶೋಗಾಥೆ ಜೊತೆಗೆ ಸಂಶೋಧನ ಸಾಧನೆಯನ್ನು ಇಲ್ಲಿ ಆಪ್ತವಾಗಿ ಕಟ್ಟಿಕೊಡಲಾಗಿದೆ. ನಾಡಿನ ಪರಂಪರೆಯ ಸಮೀಕ್ಷೆಯನ್ನು ಸರಿಯಾದ ಹಳಿಯ ಮೇಲೆ ನಿಲ್ಲಿಸುವ ಮನೀಷೆ ಇಲ್ಲಿ ಎದ್ದು ಕಾಣುತ್ತದೆ. ಮನುಷ್ಯ ಸಂಸ್ಕೃತಿಯ ನಿರ್ಮಾಪಕ. ಸಂಸ್ಕೃತಿಯಲ್ಲಿ ಕೃಷಿಗೂ ವಿಶೇಷವಾದ ಮಾನ ಮನ್ನಣೆ ಇದೆ. ಬೆಂಗಳೂರು ಇವತ್ತು ಕರ್ನಾಟಕದ ರಾಜಧಾನಿಯಾಗಿ ಜಗದಗಲ ಹೆಸರು ಮಾಡಿದರೂ ಅದು ಕೃಷಿ ಚಟುವಟಿಕೆಗೆ ಹೆಸರಾಗಿತ್ತು ಎಂಬುದನ್ನು ವಿವಿಧ ಆಧಾರಗಳ ಮೂಲಕ ಇಲ್ಲಿ ತೋರಿಸಿಕೊಡಲಾಗಿದೆ. ಹೀಗೆ ಇಲ್ಲಿನ ಲೇಖನಗಳು ಸಾಮಾಜಿಕ ತುರ್ತಿನಿಂದ ಮೂಡಿಬಂದ ಲೇಖನಗಳು ಎಂಬುದು ಉಲ್ಲೇಖನೀಯ ಸಂಗತಿ.

    ವಿದ್ವಾಂಸರಾದ ಎಸ್. ಕಾರ್ತಿಕ್ ಇವರ ಹೊಸ ಪುಸ್ತಕ ‘ಪ್ರಬಂಧ ಪಂಚದಶೀ’ ಎಂಬ ಹೆಸರಿನ ಈ ಸಂಗ್ರಹಯೋಗ್ಯ ಗ್ರಂಥದಲ್ಲಿ ಕರ್ನಾಟಕದ ಶಾಸನ, ಸಂಗೀತ, ಸಂಗೀತದ ಪ್ರಯೋಗಗಳು, ಶಾಸನಗಳ ಮೂಲಕ ಕಂಡುಬರುವ ಸನಾತನ ಧರ್ಮದ ದೇವತಾ ಮೂರ್ತಿಗಳ ವಿಕಾಸ, ಪುರಾಣ ಪ್ರಪಂಚದ ಶೋಧನೆ ಇವುಗಳು ದಾಖಲಾಗಿವೆ. ಶಾಸನಶಾಸ್ತ್ರ, ನಾಣ್ಯಶಾಸ್ತ್ರ ಹಾಗೂ ಏಷ್ಯಾ ಖಂಡದ ಸಾಂಸ್ಕೃತಿಕ ಚರಿತ್ರೆ, ಕನ್ನಡನಾಡಿನ ಗಣ್ಯ ವಿದ್ವಾಂಸರ ಕೊಡುಗೆಗಳು ಇವು ಇತಿಹಾಸದ ವೈಜ್ಞಾನಿಕ ಅಧ್ಯಯನದ ನೆಲೆಯಲ್ಲಿ ಕಂಡುಬರುತ್ತವೆ. ಇದೊಂದು ಬೌದ್ಧಿಕ ಸಾಹಸವೇ ಸರಿ. ಈ ಗ್ರಂಥವನ್ನು ಆಧಾರವಾಗಿಟ್ಟುಕೊಂಡು ಸಾಹಿತ್ಯ ಸಂಸ್ಕೃತಿ ಇತಿಹಾಸ ಮತ್ತು ಪುರಾತತ್ವ ವಿಭಾಗಗಳ ವಿದ್ಯಾರ್ಥಿಗಳು ಸ್ವತಂತ್ರವಾದ ಸಂಶೋಧನ ಪಿಎಚ್‌ಡಿ ಪ್ರಬಂಧಗಳನ್ನು ರಚಿಸುವಷ್ಟು ಈ ಸಂಪುಟ ಆಕರಗ್ರಂಥದ ಗುಣಮಟ್ಟವನ್ನು ಹೊಂದಿದೆ. ಖಚಿತವಾದ ಭಾಷೆ. ಸಂದರ್ಭ ಸೂಚಿ, ಆಕರಗಳ ಪಟ್ಟಿ ಇವುಗಳನ್ನು ಕಾರ್ತಿಕ್ ಅವರು ಅಲಭ್ಯವಾದ ಮತ್ತು ದುರ್ಲಭವಾದ ಮೂಲಗಳಿಂದ ಹೆಕ್ಕಿಕೊಟ್ಟಿರುವುದು ನಮ್ಮ ಕಾಲದ ಒಂದು ವಿಸ್ಮಯವೇ ಸರಿ. ಇವುಗಳನ್ನು ಓದಿದಾಗ ಆಗುವ ಸಂತೋಷವೇ ಒಂದು ಮೌಲ್ಯವಾಗಿದೆ ಎಂಬುದಾಗಿ ನಾಡಿನ ಹಿರಿಯ ವಿದ್ವಾಂಸರಾದ ಡಾ. ಜಿ.ಬಿ. ಹರೀಶ ಅವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಸಾಂಪ್ರತ ಸಂದರ್ಭದಲ್ಲಿ ಉಪೇಕ್ಷೆಗೆ ಒಳಗಾದ ನೆಲೆಗಳನ್ನು ಹುಡುಕಿ ತೆಗೆದು ಕರುನಾಡಿನ ಭವ್ಯ ಪರಂಪರೆಯನ್ನು ಅಕ್ಷರಲೋಕಕ್ಕೆ ಪರಿಚಯಿಸುವ ಕಾಯಕ ಈ ಬರವಣಿಗೆಯ ಮೂಲಕ ನಡೆದಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಇದೊಂದು ಅಧ್ಯಯನಪೂರ್ಣ ಗರುಡಗಮನದ ಕೃತಿಯೂ ಆಗಿದೆ.

    ಈ ಸಂಕಲನದಲ್ಲಿನ ಹದಿನೈದು ಶೋಧ ಪ್ರಬಂಧಗಳಲ್ಲಿ ಅಧ್ಯಯನಶೀಲತೆ, ಸಮತೋಲನದ ದೃಷ್ಟಿಕೋನ, ಬರವಣಿಗೆಯ ಅಚ್ಚುಕಟ್ಟುತನ ಹಾಗೂ ವಾಚನೀಯತೆ ಎದ್ದು ಕಾಣುವ ಅಂಶ. ಲೇಖಕರು ಯಾವುದೇ ವಿಷಯವನ್ನು ಪೂರ್ವಗ್ರಹಗಳಿಂದ ಸಮೀಪಿಸದೆ, ಲಭ್ಯವಿರುವ ಆಕರಗಳು, ಐತಿಹಾಸಿಕ ದಾಖಲೆಗಳು ಮತ್ತು ಸಾಂಸ್ಕೃತಿಕ ಸಾಕ್ಷ್ಯಗಳನ್ನು ಆಧರಿಸಿ ವಿಶ್ಲೇಷಿಸಿದ್ದಾರೆ. ಪರಿಣಾಮವಾಗಿ ಈ ಪ್ರಬಂಧಗಳು ಕೇವಲ ಆಸಕ್ತ ಓದುಗರಿಗಷ್ಟೇ ಅಲ್ಲ, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಹಿತ್ಯದ ಉಪಾಸಕರಿಗೂ ಉಪಯುಕ್ತ ಆಕರ ಸಾಮಗ್ರಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಕಾರ್ತಿಕ್ ಅವರ ಪ್ರತಿಭೆಯ ಬೀಸು ದೊಡ್ಡದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ.

    ಪ್ರಬಂಧ ಪಂಚದಶೀ
    ಎಸ್. ಕಾರ್ತಿಕ್
    ಕಾಮಧೇನು ಪುಸ್ತಕ ಭವನ ಬೆಂಗಳೂರು, ಬೆಲೆ ರೂ.325/-

    ಪ್ರೊ. ಜಿ.ಎನ್. ಉಪಾಧ್ಯ. ಮುಂಬೈ

    ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.

    article baikady Literature review roovari
    Share. Facebook Twitter Pinterest LinkedIn Tumblr WhatsApp Email
    Previous Articleವಿಜಯನಗರ ಬಿಂಬ (ರಿ.) ಡಿಪ್ಲೋಮೊ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -2 | ಅಕ್ಟೋಬರ್ 18
    Next Article ಶಿವಮೊಗ್ಗದಲ್ಲಿ ರಾಜ್ಯಮಟ್ಟದ ದಸರಾ ಕಾವ್ಯ ಸಂಭ್ರಮ | ಅಕ್ಟೋಬರ್ 18
    roovari

    Add Comment Cancel Reply


    Related Posts

    ಬೆಂಗಳೂರಿನ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

    October 17, 2026

    ಶಿವಮೊಗ್ಗದಲ್ಲಿ ಸಾಂಸ್ಕೃತಿಕ ದಸರಾ ಕವಿ ಕಾವ್ಯ ಸಂಭ್ರಮ | ಅಕ್ಟೋಬರ್ 19

    October 17, 2026

    ಮಡಿಕೇರಿ ಗಾಂಧಿ ಮೈದಾನದಲ್ಲಿ ‘ಜಾನಪದ ದಸರಾ -2026’ | ಅಕ್ಟೋಬರ್ 18

    October 17, 2026

    ಕನ್ನಡ ಜಾಗೃತಿ ಪುಸ್ತಕ ಬಹುಮಾನಕ್ಕೆ ಆಹ್ವಾನ | ಕೊನೆಯ ದಿನಾಂಕ ನವೆಂಬರ್ 10

    October 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.