ಸಂಕೇತಿ ಭಾಷೆ ಮತ್ತು ಸಾಹಿತ್ಯದ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಮೈಸೂರಿನ ಸಾಹಿತಿ ಡಾ. ಪ್ರಣತಾರ್ತಿ ಹರನ್ ಇವರ ಕನ್ನಡ ಕಿರುಕಾದಂಬರಿ ‘ಯಾತ್ರೆ’ಯನ್ನು ಡಾ. ವಸಂತಕುಮಾರ ಪೆರ್ಲ ಅವರು ಅದೇ ಹೆಸರಿನಿಂದ ತುಳುವಿಗೆ ಅನುವಾದ ಮಾಡಿದ್ದಾರೆ. ಮೈಸೂರಿನ ಸಂಕೇತಿ ಕುಟುಂಬವೊಂದು ದೇವರ ಸೇವೆ ಮಾಡಿ ಹರಕೆ ತೀರಿಸಿಕೊಳ್ಳಲು ತಮ್ಮ ಮೂಲಸ್ಥಾನವಾದ ಹಾಸನದ ಕೌಶಿಕಕ್ಕೆ ರೈಲಿನಲ್ಲಿ ಎರಡು ದಿನಗಳ ಯಾತ್ರೆ ತೆರಳಿ ಮರಳಿ ಊರಿಗೆ ಹಿಂದಿರುಗುವ ಕಥಾನಕವಿರುವ ವಸ್ತುವನ್ನು ಈ ಕಿರುಕಾದಂಬರಿ ಒಳಗೊಂಡಿದೆ. ಯಾತ್ರೆಯ ಸಂದರ್ಭದಲ್ಲಿ ಫ್ಲ್ಯಾಶ್ ಬ್ಯಾಕ್ ತಂತ್ರದ ಮೂಲಕ ಒಂಭೈನೂರು ವರ್ಷಗಳ ಹಿಂದೆ ಸಂಕೇತಿಗಳು ತಮಿಳುನಾಡಿನಿಂದ ಕರ್ನಾಟಕಕ್ಕೆ ವಲಸೆ ಬಂದ ಸಂದರ್ಭವನ್ನು ಮತ್ತು ಹಳೇ ಮೈಸೂರು ಭಾಗದಲ್ಲಿ ಅವರು ನೆಲೆಯಾದ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತದೆ. ಸಮಾಜದಲ್ಲಿ ಸಂಕೇತಿಗಳ ಇವತ್ತಿನ ನೆಲೆಬೆಲೆಯನ್ನು ವಿಮರ್ಶಿಸುತ್ತದೆ.
ಕಥಾನಕವು ಬಹಳ ಸುಂದರವಾಗಿದ್ದು ತಂತ್ರ ಮತ್ತು ನಿರೂಪಣೆಯು ಅದಕ್ಕೆ ಪೂರಕವಾಗಿ ದುಡಿಯುತ್ತದೆ. ಚಿತ್ರವತ್ತಾದ ಸನ್ನಿವೇಶ ಮತ್ತು ಸೊಗಸಾದ ಭಾಷೆಯಿರುವ ಕಾದಂಬರಿ ವರ್ಣನೆಯಲ್ಲಿ ಮೈದುಂಬಿಕೊಂಡಿದೆ. ಇಡೀ ಕಾದಂಬರಿ ಸಾಂಕೇತಿಕವಾಗಿದ್ದು ಸಂಕೇತಿಗಳ ಮೂಲ ಮಹಿಳೆ ನಾಚಾರು ಅಮ್ಮನ ವ್ಯಕ್ತಿತ್ವ ಕೌಶಿಕದಲ್ಲಿ ನೆಲೆಯಾಗಿರುವ ಆಕೆಯ ಪ್ರತಿಮೆಯಂತೆ ಅಚ್ಚೊತ್ತಿ ನಿಲ್ಲುತ್ತದೆ.
ಡಾ. ವಸಂತಕುಮಾರ ಪೆರ್ಲ ಇವರು ಮೂಲದ ಸೌಂದರ್ಯ ಇನ್ನಷ್ಟು ಎದ್ದು ಕಾಣುವಂತೆ ಈ ಕಾದಂಬರಿಯನ್ನು ಸುಂದರವಾದ ತುಳು ಭಾಷೆಗೆ ಅನುವಾದಿಸಿದ್ದಾರೆ. ತುಳುವಿನ ಶಬ್ದಪ್ರಯೋಗ, ಶೈಲಿ ಮತ್ತು ನುಡಿಗಟ್ಟುಗಳಿಂದ ಇದು ಮೂಲ ತುಳು ಕೃತಿ ಎಂಬಂತೆ ಭಾಸವಾಗುತ್ತದೆ. ಕನ್ನಡ ಕೃತಿಯ ಭಾವ ಮತ್ತು ಆಶಯಗಳನ್ನು ಅದೇ ಧಾಟಿಯಲ್ಲಿ ತುಳುವಿಗೆ ಅನುವಾದಿಸಿರುವ ಡಾ. ಪೆರ್ಲರು ತುಳುವಿಗೆ ಒಂದು ಅನನ್ಯ ಅನುವಾದವನ್ನು ನೀಡಿದ್ದಾರೆ. ವಸ್ತು, ನಿರೂಪಣೆ, ತಂತ್ರ ಮತ್ತು ಭಾಷೆ ಎಲ್ಲ ರೀತಿಯಿಂದಲೂ ನಮ್ಮನ್ನು ಹಿಡಿದಿಟ್ಟುಕೊಳ್ಳುವ ಕೃತಿ ಈ ‘ಯಾತ್ರೆ’ ಅನ್ನಲು ಅಡ್ಡಿಯಿಲ್ಲ.
ಯಾತ್ರೆ (ಕಾದಂಬರಿ)
ಮೂಲ ಸಂಕೇತಿ ಮತ್ತು ಕನ್ನಡ : ಡಾ. ಪ್ರಣತಾರ್ತಿ ಹರನ್
ತುಳು ಅನುವಾದ : ಡಾ. ವಸಂತಕುಮಾರ ಪೆರ್ಲ
ಪ್ರಕಾಶನ : ಸಮುದಾಯ ಅಧ್ಯಯನ ಕೇಂದ್ರ, ಮೈಸೂರು,
ಪ್ರಕಟಣೆ : 2026, ಪುಟ : 104, ಬೆಲೆ : ರೂ.150.00

ವಿಮರ್ಶಕರು : ಸದಾನಂದ ನಾರಾವಿ
ಸದಾನಂದ ನಾರಾವಿಯವರು ಅಂಚೆ ಇಲಾಖೆಯಲ್ಲಿ 29 ವರ್ಷ ಸೇವೆಸಲ್ಲಿಸಿ ನಿವೃತ್ತರಾಗಿ, ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುವ ಸದಾನಂದ ನಾರಾವಿಯವರು ‘ಮುತ್ತುಮಲ್ಲಿಗೆ’, ‘ಸಂರಚನೆಯ ಸುತ್ತಮುತ್ತ’ (ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಶಸ್ತಿ ವಿಜೇತ ಕೃತಿ), ‘ಉಬ್ರೆ ಈಶ್ವರ ಭಟ್’, ‘ಡಾ. ಕೆ. ಪ್ರಭಾಕರ ಆಚಾರ್’ ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ಪ್ರಶಸ್ತಿ, ತುಳು ಕತೆಯೊಂದಕ್ಕೆ ತುಳು ಒಕ್ಕೂಟದ ಪ್ರಥಮ ಬಹುಮಾನ ಇತ್ಯಾದಿ ಗೌರವಗಳಿಗೆ ಪಾತ್ರರಾಗಿದ್ದು, ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ಸೇವೆಯನ್ನು ಪರಿಗಣಿಸಿ ತುಳು ಸಾಹಿತ್ಯ ಅಕಾಡೆಮಿ ಇವರನ್ನು ಗೌರವಿಸಿದೆ.

ಲೇಖಕ : ಡಾ. ವಸಂತಕುಮಾರ ಪೆರ್ಲ
ಡಾ. ಪೆರ್ಲ ಇವರು ಗಡಿನಾಡಾದ ಕಾಸರಗೋಡಿನವರಾಗಿದ್ದು, ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರ ದುಡಿಯುತ್ತಿದ್ದಾರೆ. ಸಾಹಿತ್ಯದ ನಾನಾ ವಿಭಾಗಗಳಲ್ಲಿ, ಕನ್ನಡ, ತುಳು, ಇಂಗ್ಲೀಷ್ ಮತ್ತು ಹವ್ಯಕ ಭಾಷೆಯಲ್ಲಿ ಇದುವರೆಗೆ 55ಕ್ಕೆ ಮೇಲ್ಪಟ್ಟು ಕೃತಿ ರಚನೆ ಮಾಡಿದ್ದು, ಸಾಹಿತ್ಯ ರಚನೆ, ಸಂಘಟನೆ, ಸಂವರ್ಧನೆ, ಕಿರಿಯರಿಗೆ ಪ್ರೋತ್ಸಾಹ ಹೀಗೆ ಕನ್ನಡ ನಾಡುನುಡಿಯನ್ನು ಕಟ್ಟುವ ಎಲ್ಲ ಕ್ಷೇತ್ರಗಳಲ್ಲಿ ದುಡಿದು ಓರ್ವ ಸಾಧಕರಾಗಿದ್ದಾರೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ – ಅಂದರೆ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಸಂಶೋಧನೆ, ಸಂಪಾದನೆ, ಪ್ರಬಂಧ, ವ್ಯಕ್ತಿಚಿತ್ರ, ಪ್ರವಾಸ ಕಥನ, ಅನುವಾದ ಮೊದಲಾದ ಕ್ಷೇತ್ರಗಳಲ್ಲಿ ಇವರ ಕೃತಿ ರಚನೆಯ ವ್ಯಾಪ್ತಿಯಿದ್ದು, ಇವರ ಕೆಲವು ರಚನೆಗಳು ತುಳು, ಕೊಂಕಣಿ, ಮಲಯಾಳಂ, ತಮಿಳು, ತೆಲುಗು, ಹಿಂದಿ, ಪಂಜಾಬಿ, ನೇಪಾಳಿ ಮತ್ತು ಇಂಗ್ಲೀಷ್ ಭಾಷೆಗಳಿಗೆ ಅನುವಾದಗೊಂಡಿವೆ. ಪತ್ರಿಕೋದ್ಯಮ, ರೇಡಿಯೋ ಮತ್ತು ಟಿ.ವಿ., ರಂಗಭೂಮಿ, ಸಿನಿಮಾ ಕ್ಷೇತ್ರಗಳಲ್ಲೂ ದುಡಿದು ವ್ಯಾಪಕ ಅನುಭವ ಮತ್ತು ಲೋಕಜ್ಞಾನ ಗಳಿಸಿದ ಪ್ರತಿಭಾವಂತ ಮತ್ತು ಬಹುಮುಖಿ ವ್ಯಕ್ತಿತ್ವದ ಸಾಹಿತಿ ಹಾಗೂ ಒಳ್ಳೆಯ ವಾಗ್ಮಿಯೂ ಆಗಿದ್ದಾರೆ. ಡಾ. ಪೆರ್ಲ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳು ಬಂದಿವೆ.
