ಪೆರಿಯ : ಬೇಕಲ ಗೋಕುಲಂ ಗೋಶಾಲೆಯ ಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿ ಜರುಗುತ್ತಿರುವ ಮೂರನೇ ಆವೃತ್ತಿಯ ‘ವೈಶಾಖ ನಟನಂ’ ರಾಷ್ಟ್ರೀಯ ನೃತ್ಯೋತ್ಸವದ ಹನ್ನೊಂದನೇ ದಿನ ದಿನಾಂಕ 11 ಮೇ 2026ರಂದು ಪ್ರಖ್ಯಾತ ಮೋಹಿನಿಯಾಟ್ಟಂ ನೃತ್ಯಗಾರ್ತಿ ಅನುಪಮಾ ಮೆನನ್ ಮತ್ತು ಅವರ ಕುಟುಂಬದವರಿಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ ನಡೆಯಿತು.
ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು, ದೂರದರ್ಶನದ ‘ಎ-ಟಾಪ್’ ಶ್ರೇಣಿಯ ಕಲಾವಿದರು ಹಾಗೂ ತೃಪ್ಪುಣಿತ್ತುರಾ ಆರ್.ಎಲ್.ವಿ. ಕಾಲೇಜಿನ ಮೋಹಿನಿಯಾಟ್ಟಂ ವಿಭಾಗದ ಪ್ರಾಧ್ಯಾಪಕರೂ ಆಗಿರುವ ಶ್ರೀಮತಿ ಅನುಪಮಾ ಮೆನನ್ ಇವರು ವೇದಿಕೆಯಲ್ಲಿ ಮೋಹಿನಿಯಾಟ್ಟಂ ಪ್ರಸ್ತುತಪಡಿಸಿದರು. ಅವರ ಪತಿ, ಖ್ಯಾತ ಸಂಗೀತಗಾರ ಶ್ರೀ ನೀಲಂಪೇರೂರ್ ಸುರೇಶ್ ಕುಮಾರ್ ಇವರು ಗಾಯನದಲ್ಲಿ ಸಾಥ್ ನೀಡಿದರು. ದಂಪತಿಗಳ ಪುತ್ರಿಯರಾದ ಕುಮಾರಿ ಪಲ್ಲವಿ ಸುರೇಶ್ ವೀಣಾವಾದನದಲ್ಲಿ ಹಾಗೂ ಕುಮಾರಿ ಪವಿತ್ರಾ ಸುರೇಶ್ ಕೊಳಲುವಾದನದಲ್ಲಿ ಪೋಷಕರೊಂದಿಗೆ ಸುಶ್ರಾವ್ಯವಾಗಿ ಸ್ವರಗೂಡಿಸಿದರು.


ಕಲಾಮಂಡಲಂ ನಯನಾ ನಟ್ಟುವಾಂಗದಲ್ಲಿ ಸಹಕರಿಸಿದರೆ, ಆರ್.ಎಲ್.ವಿ. ಕಾಲೇಜಿನ ಮೃದಂಗ ವಿಭಾಗದ ಪ್ರಾಧ್ಯಾಪಕ ಶ್ರೀ ಬಿಜೋಯ್ ನಾರಾಯಣನ್ ಮೃದಂಗದಲ್ಲಿ ಮತ್ತು ಪಿಟೀಲು ಪ್ರಾಧ್ಯಾಪಕಿ ಶ್ರೀಮತಿ ಲಯಾ ಬಿಜೋಯ್ ಪಿಟೀಲು ವಾದನದಲ್ಲಿ ಹಿಮ್ಮೇಳ ಒದಗಿಸಿದರು. ಕಲಾಪ್ರದರ್ಶನದ ಭಾಗವಾಗಿ ಚಕ್ರವಾಕ ರಾಗದ ‘ಗಣಪತಿ ಸ್ತುತಿ’, ಆರಭಿ ರಾಗದ ‘ಶ್ರೀ ರಮಣ ವಿಭೋ’, ಶ್ರೀರಾಗದ ‘ಅಜಿತಾ ಹರೇ’ ಮತ್ತು ಶ್ರೀಕೃಷ್ಣನನ್ನು ಸ್ತುತಿಸುವ ‘ಕುರತ್ತಿ’ ನೃತ್ಯ ರೂಪಕಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಲಾಯಿತು. ಈ ಎಲ್ಲಾ ನೃತ್ಯ ಪ್ರಕಾರಗಳನ್ನು ಶ್ರೀಮತಿ ಅನುಪಮಾ ಮೆನನ್ ಅವರೇ ಸಂಯೋಜಿಸಿರುವುದು ವಿಶೇಷವಾಗಿತ್ತು.


