ಶಾಸ್ತ್ರೀಯ ಚೌಕಟ್ಟಿನಲ್ಲಿ ಪ್ರಸ್ತುತಗೊಂಡ ಅಂಗಶುದ್ಧ ನೃತ್ಯ ನೋಡುವುದೇ ಒಂದು ಚೆಂದ. ಅಂಥ ಒಂದು ಅಚ್ಚುಕಟ್ಟಾದ ನರ್ತನವನ್ನು ಸಮರ್ಪಿಸಿದ್ದು ಗುರು ರಕ್ಷಿತಾ ಪ್ರಸಾದಳ ಶಿಷ್ಯೆ ಕುಮಾರಿ ಮಾನಸಾ ರಾವ್. ಈ ಉದಯೋನ್ಮುಖ ನೃತ್ಯಕಲಾವಿದೆ ಇತ್ತೀಚೆಗೆ ತನ್ನ ಭರತನಾಟ್ಯದ ರಂಗಪ್ರವೇಶವನ್ನು ಬೆಂಗಳೂರಿನ ಗಾಯನ ಸಮಾಜದಲ್ಲಿ ತುಂಬಿದ ಕಲಾರಸಿಕರ ಸಮ್ಮುಖ ಮನೋಜ್ಞವಾಗಿ ಅರ್ಪಿಸಿ ಕಣ್ಮನ ಸೂರೆಗೊಂಡಳು.

ನತ್ಯಕ್ಕೆ ಹೇಳಿ ಮಾಡಿಸಿದ ಎತ್ತರದ ನಿಲುವು, ಪ್ರಮಾಣ ಬದ್ಧ ಸುಂದರ ಕಾಯ, ಬೊಗಸೆ ಕಂಗಳ ಚೆಲುವೆ ಕಲಾವಿದೆ ಮಾನಸಾ ಬಹು ಶ್ರದ್ಧೆಯಿಂದ ಪ್ರತಿಯೊಂದು ಕೃತಿಗಳನ್ನೂ ಹೃನ್ಮನ ಸೂರೆಗೊಳ್ಳುವಂತೆ ನರ್ತಿಸಿದಳು. ಮನಮೋಹಕ ಸುಂದರ ನೃತ್ತಗಳು ಮತ್ತು ಭಾವಪೂರ್ಣ ಅಭಿನಯವನ್ನು ಕಲಾವಿದೆ ತನ್ನ ಸಾತ್ವಿಕತೆಯ ಸೊಗಡಿನಿಂದ ನಿರೂಪಿಸಿಳು.

ಕಲಾಕ್ಷೇತ್ರ ಬಾನಿಯಲ್ಲಿ ಒಡಮೂಡಿದ ಆಂಗಿಕಾಭಿನಯ, ಸರಳ- ಸುಂದರ ಮಜಲಿನಲ್ಲಿ ಪ್ರಸ್ತುತವಾಗಿದ್ದು ವಿಶೇಷ. ಕಲಾವಿದೆಯ ನಗುಮೊಗದ ಆತ್ಮವಿಶ್ವಾಸದ ನರ್ತನ ಅವಳ ಗೆಲುವಿಗೆ ಕಾರಣವಾಯಿತು. ಅಲ್ಲದೆ ಅವಳ ಸಾಂಪ್ರದಾಯಕ ವೇಷ-ಭೂಷಣ – ಮುದ ನೀಡಿದ ಮೊಗ್ಗಿನ ಜಡೆ, ಧರಿಸಿದ್ದ ಸೂರ್ಯ-ಚಂದ್ರಾದಿ ಆಭರಣಗಳು ಮೊದಲನೋಟದಲ್ಲೇ ಆಕರ್ಷಿಸಿದವು.

ಮಾನಸ ಶುಭಾರಂಭದಲ್ಲಿ ತಿಶ್ರ ಜಾತಿಯ ‘ಅಲರಿಪು’ – ದೇವಾನುದೇವತೆಗಳಿಗೆ, ಗುರು- ಹಿರಿಯರಿಗೆ ವಂದನಾಪೂರ್ವಕ ಸಲ್ಲಿಸಿದ ಶುದ್ಧ ನೃತ್ತಬಂಧ, ಖಚಿತ ಅಡವುಗಳು, ಲೀಲಾಜಾಲ ಆಂಗಿಕಗಳ ಪ್ರದರ್ಶನದಿಂದ ಸೊಗಸಾಗಿ ಮೂಡಿಬಂತು. ಗುರು ರಕ್ಷಿತಾರ ಸ್ಫುಟವಾದ ಸುಸ್ಪಷ್ಟ ನಟುವಾಂಗದ ಬನಿ ಎದ್ದು ಕಾಣುತ್ತಿತ್ತು.

ಅನಂತರ- ಸರಸ್ವತೀ ರಾಗ-ರೂಪಕ ತಾಳದ, ಗುರು ರಕ್ಷಿತಾ ನೃತ್ಯ ಸಂಯೋಜನೆಯ ‘ಜತಿಸ್ವರ’ – ವಿವಿಧ ಸುಂದರ ನೃತ್ತವಿನ್ಯಾಸಗಳ ನೋಟವನ್ನು ಬಿತ್ತರಿಸಿದವು. ಮುಂದೆ- ಗೋಪಿಕೆಯರನ್ನು ಕೀಟಲೆ ಮಾಡುವ, ವೇಣುವಾದನದಿಂದ ಮರುಳುಗೊಳಿಸುವ ಶ್ರೀ ಕೃಷ್ಣನ ಲೀಲಾವಿನೋದಗಳ ಸುಂದರ ದೃಶ್ಯಗಳನ್ನು ಅನಾವರಣಗೊಳಿಸಿದ ರಾಗಮಾಲಿಕೆಯ ‘ಶಬ್ದಂ’ ಮನಮೋಹಕವಾಗಿ ಮೂಡಿಬಂತು.

ನಂತರ – ರಸಾಭಿಜ್ಞತೆಯನ್ನು ಕೇಂದ್ರೀಕರಿಸಿಕೊಂಡ ಘಟ್ಟ ‘’ವರ್ಣ’’ದ ಸುದೀರ್ಘ ಬಂಧ, ಮನೋಹರ ಬಂಧುರತೆಯಲ್ಲಿ ಮಿನುಗಿತು. ಯಾವುದೇ ಭರತನಾಟ್ಯ ಕಾರ್ಯಕ್ರಮದ ಹೃದಯಭಾಗ `ವರ್ಣಂ’. ಅದು ಸಂಕೀರ್ಣ, ಜೊತೆಗೆ ಅಷ್ಟೇ ಆಕರ್ಷಕ ಭಾಗ ಕೂಡ. `ವರ್ಣಂ’. ಸಾಮಾನ್ಯವಾಗಿ ನೃತ್ಯ ಕಲಾವಿದೆಯರ ಸ್ಮರಣಶಕ್ತಿಗೆ ಸವಾಲೆಸೆವ, ನೃತ್ತ ಮತ್ತು ಅಭಿನಯಗಳೆರಡರಲ್ಲೂ ಪರಿಣತಿ ಬೇಡುವ ಕ್ಲಿಷ್ಟ ನೃತ್ಯಬಂಧ. ಕಲಾವಿದರಿಗೆ ತಾಳ- ಲಯಜ್ಞಾನ ಹಾಗೂ ನೆನಪಿನ ಶಕ್ತಿ ಅತ್ಯವಶ್ಯ.

ಅಂದು ಮಾನಸ ಪ್ರಸ್ತುತಪಡಿಸಿದ ಭಕ್ತಿಪ್ರಧಾನ ವರ್ಣ- ತಂಜಾವೂರಿನ ಬೃಹದೀಶ್ವರನಲ್ಲಿ ಅನುರಕ್ತಳಾದ ನಾಯಕಿಯ ಭಕ್ತಿ ತಾದತ್ಮ್ಯತೆಯ ಸ್ತುತಿ ಜೊತೆಗೆ ಅವನತ್ತ ಅವಳಿಗಿದ್ದ ಗಾಢ ಪ್ರೀತಿಯ ಪಾರಮ್ಯವನ್ನು ಮನಗಾಣಿಸಿತು. ಶಂಕರಾಭರಣ ರಾಗ, ಆದಿತಾಳದಲ್ಲಿ ನಿಬದ್ಧಗೊಂಡಿದ್ದ ಪೊನ್ನಯ್ಯ ಪಿಳ್ಳೈ ಸಂಗೀತ ಸಂಯೋಜನೆಗೆ ಶ್ರೀಮತಿ ರುಕ್ಮಿಣಿ ಅರುಂಡೆಲ್ ನೃತ್ಯ ಸಂಯೋಜನೆ ಸಂಪ್ರದಾಯಕ ನೆಲೆಯಲ್ಲಿದ್ದು ಕಲಾವಿದೆ ಶಾಸ್ತ್ರೋಕ್ತ ನೃತ್ತಗಳನ್ನು ಬಹು ಪಾಂಗಿತವಾಗಿ ನಿರೂಪಿಸಿದಳು. ಬೃಹದೀಶ್ವರ ಸ್ವಾಮಿಯ ಅಗಲಿಕೆಯಿಂದ ನೊಂದ ನಾಯಕಿ, ಮನ್ಮಥ ಬಾಣಗಳನ್ನು ಸಹಿಸಲಾರೆ ಎಂದು ವಿರಹೋತ್ಖಂಠಿತಳಾಗಿ ತೊಳಲಾಡುವ ಅವಳ ತವಕ- ತಲ್ಲಣಗಳಿಗೆ ಕಲಾವಿದೆ ಕನ್ನಡಿ ಹಿಡಿದಳು. ಕಲಾವಿದೆಯ ಭಾವತೀವ್ರತೆಗೆ ರಕ್ಷಿತಾಳ ನಟುವಾಂಗ ಪ್ರೇರಣೆ ನೀಡಿತು.

ಮುಂದಿನ ಸುರುತಿ ರಾಗದ ಕ್ಷೇತ್ರಜ್ಞರ ‘ಪದಂ’ ಕಲಾವಿದೆಯ ಸಹಜಾಭಿನಯದಲ್ಲಿ ಬಹು ಮನೋಜ್ಞವಾಗಿ ಮೂಡಿಬಂತು. ಜೀವಾತ್ಮ- ಪರಮಾತ್ಮನ ಪರಿಕಲ್ಪನೆಯಲ್ಲಿ ಒಡಮೂಡಿದ, ಕಸ್ತೂರಿರಂಗನ ಬಗ್ಗೆ ನಾಯಕಿಯ ಹುಸಿಮುನಿಸು- ಈರ್ಷೆ- ನೋವಿನ ಅಭಿನಯ ಪರಿಣಾಮಕಾರಿಯಾಗಿತ್ತು. ಪರಸ್ತ್ರೀಯರಲ್ಲಿ ಆಸಕ್ತನಾದ ನಾಯಕನನ್ನು, ನಾಯಕಿ ತಿರಸ್ಕರಿಸುವ ಅಭಿನಯ ಮನಮುಟ್ಟಿತು. ಅನಂತರದ ಶ್ರೀ ಚಕ್ರರಾಜ ಸಿಂಹಾಸನೇಶ್ವರಿ ಶ್ರೀ ಲಲಿತಾಂಬಿಕೆಯನ್ನು ಆರಾಧಿಸುವ, ಅವಳಿಗೆ ಶರಣಾಗಿ ಅವಳ ಕೃಪೆಯನ್ನು ಬೇಡುವ ಕಿರ್ತನೆಯನ್ನು, ಮಾನಸ ,ದೈವೀಕ ನೆಲೆಯಲ್ಲಿ ಸಮರ್ಪಿಸಿ ಕಲಾರಸಿಕರ ಮನಗೆದ್ದಳು. ಭವಾನಿಯ ಭೈರವ ರೂಪದ ಜೊತೆಗೆ ಆಕೆಯ ಪ್ರಸನ್ನ ಮೊಗದ ದರ್ಶನವನ್ನೂ ಮಾಡಿಸುವ ಕಲಾವಿದೆಯ ಆಂಗಿಕಾಭಿನಯ – ರಸಾಭಿನಯ ಮೆಚ್ಚುಗೆ ಪಡೆಯಿತು.

ನಂತರದ ಶ್ರೀಪುರಂದರದಾಸರ ‘ಆಡಿದನೋ ರಂಗ, ಅದ್ಭುತದಿಂದಲಿ ಕಾಳಿಂಗನ ಪಣೆಯಲಿ’ ಎಂಬ ಶ್ರೀಕೃಷ್ಣನ ಸಾಹಸಗಾಥೆಯನ್ನು ಬಿತ್ತರಿಸುವ ದೇವರನಾಮ, ಕಲಾವಿದೆಯ ನಾಟಕೀಯ ಆಯಾಮದಲ್ಲಿ ಬಹು ಸೊಗಸಾಗಿ ಬಿಂಬಿತವಾಯಿತು. ಅಂತ್ಯದಲ್ಲಿ ಹಿಂದೋಳ ರಾಗದ ಶ್ರೀ ಎಂ.ಆರ್. ಕೃಷ್ನಮೂರ್ತಿ ನೃತ್ಯ ಸಂಯೋಜನೆಯ ‘ತಿಲ್ಲಾನ’ ಹಾಗೂ ‘ಮಂಗಳ’ದೊಂದಿಗೆ ಮಾನಸಳ ಪ್ರಸ್ತುತಿ ಸಂಪನ್ನಗೊಂಡಿತು.

ಮಾನಸಳ ನೃತ್ಯಕ್ಕೆ ಸಂಗೀತ ಸಾಂಗತ್ಯ ನೀಡಿದವರು- ಗಾಯನ- ಮಿಥುನ್ ಮಧುಸೂದನ್, ಮೃದಂಗ- ಹರ್ಷ ಸಾಮಗ, ವೀಣೆ- ಗೋಪಾಲ್ ವೆಂಕಟರಮಣ, ಕೊಳಲು- ಎಂ.ಡಿ. ಅರ್ಜುನ್ ಮತ್ತು ನಟುವಾಂಗ- ಗುರು ರಕ್ಷಿತಾ ಪ್ರಸಾದ್.

ನೃತ್ಯ ವಿಮರ್ಶಕರು : ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
