ಧಾರವಾಡ : ರಾ. ಹ. ದೇಶಪಾಂಡೆ ಸಭಾಭವನದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸಿದ ‘ಹಿರಿಯಕ್ಕನ ಅಕ್ಷರ ಸಂಭ್ರಮ’ ಕಾರ್ಯಕ್ರಮವು ದಿನಾಂಕ 29 ಮೇ 2026ರಂದು ನಡೆಯಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವ ಸಾಹಿತಿ ಡಾ. ಸುಭಾಷ್ ಪಟ್ಟಾಜೆಯವರು ಮಾತನಾಡಿ “ಮಾಲತಿ ಪಟ್ಟಣಶೆಟ್ಟಿಯವರ ಕವಿತೆಗಳು ವೈಯಕ್ತಿಕ ನೋವು ನಲಿವುಗಳಿಗಲ್ಲದೆ ಸಾಮಾಜಿಕ ತಲ್ಲಣಗಳಿಗೂ ಸ್ಪಂದಿಸುತ್ತವೆ. ಇವರ ಕಾವ್ಯವು ಭಾಷಣ, ಗೋಳಾಟಗಳಾಗಿ ಉಳಿಯದೆ ಸಾಮಾಜಿಕ ಸಮಸ್ಯೆಗಳಿಗೆ ದನಿಯಾಗುತ್ತದೆ. ಆ ಕಾಲಘಟ್ಟದಲ್ಲಿ ಇಂಥ ಪ್ರಯತ್ನ ಅಪರೂಪವಾಗಿತ್ತು. ಮಾಲತಿ ಪಟ್ಟಣಶೆಟ್ಟಿಯವರ ಕಾವ್ಯವು ಲೇಖಕಿಯನ್ನೂ ಒಳಗೊಂಡಂತೆ ಸಮಾಜದ ಸಂಕಟವನ್ನು ತೋಡುವ, ಮಾನವ ಜಗತ್ತಿನೊಡನೆ ಅರ್ಥಪೂರ್ಣ ಸಂಬಂಧವನ್ನು ಬೆಸೆಯುವ, ಬದುಕಿನ ಅರ್ಥವನ್ನು ಹುಡುಕುವ ಮಾಧ್ಯಮವಾಗಿದೆ. ಆದ್ದರಿಂದ ಅವರ ಕವಿತೆಗಳು ವರ್ತಮಾನ ಲೋಕದಲ್ಲಿ ಸಹಜವಾಗಿ ಅರಳಿವೆ” ಎಂದು ಅಭಿಪ್ರಾಯಪಟ್ಟರು.

“ಮಾಲತಿ ಪಟ್ಟಣಶೆಟ್ಟಿಯವರ ಕತೆಗಳಲ್ಲಿ ಸುಶಿಕ್ಷಿತ, ಧೈರ್ಯವಂತ ಹಾಗೂ ಒಂಟಿ ಮಹಿಳೆಯರು ಕಂಡು ಬರುತ್ತಾರೆ. ಅವರು ಸ್ವತಂತ್ರರಾದರೂ ಸ್ವೇಚ್ಛಾಚಾರಿಗಳಲ್ಲ. ಮಾಲತಿಯವರದ್ದು ವಾಸ್ತವ ಪ್ರಜ್ಞೆಯ ಹಿನ್ನೆಲೆಯಲ್ಲಿ ರೂಪುಗೊಂಡ ಸ್ತ್ರೀವಾದವೇ ಹೊರತು ಸಾಹಿತ್ಯಕ ಪಠ್ಯಗಳು ರೂಪಿಸಿದ ಸ್ತ್ರೀವಾದವಲ್ಲ. ವಾಸ್ತವದ ನೆಲೆಗಟ್ಟಿನ ಮೇಲೆ ಬರೆದ ಮಾಲತಿ ಪಟ್ಟಣಶೆಟ್ಟಿಯವರು ಧಾರವಾಡದ ಪರಿಸರವನ್ನು ಕಟ್ಟಿಕೊಟ್ಟ ಮಹತ್ವದ ಲೇಖಕಿ” ಎಂದು ಯುವ ವಿಮರ್ಶಕ ವಿಕಾಸ ಹೊಸಮನಿಯವರು ನುಡಿದರು.
ಮಾಲತಿ ಪಟ್ಟಣಶೆಟ್ಟಿಯವರ ಜೊತೆ ಹುಬ್ಬಳ್ಳಿ ಧಾರವಾಡದ ಲೇಖಕಿಯರು ಸಂವಾದವನ್ನು ನಡೆಸಿದರು. ನಿವೃತ್ತ ಕುಲಪತಿ ವೀರಣ್ಣ ರಾಜೂರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಲಿತಾ ಪಾಟೀಲ, ಸುವರ್ಣಾ, ಪುಷ್ಪಾ ಹಾಲಭಾವಿ, ಸುನಂದಾ ಪ್ರಾರ್ಥನಾ ಗೀತೆಯನ್ನು ಹಾಡಿದರು. ಮಾಲತಿ ಹೆಗಡೆ ಸ್ವಾಗತಿಸಿ, ರೂಪಾ ಜೋಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತಾ ಗುಡಿಯವರು ಆಶಯ ಭಾಷಣವನ್ನು ಮಾಡಿದರು. ಉಷಾ ಗದ್ದಗಿಮಠ, ಮೇಘಾ ಹುಕ್ಕೇರಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಸುಮಾ ಹಡಪದ ಅವರು ವಂದನಾರ್ಪಣೆಯನ್ನು ಮಾಡಿದರು.

