ಮಂಗಳೂರು : ಯಕ್ಷ ಸ್ನೇಹ ಕಲಾ ಪ್ರತಿಷ್ಠಾನ (ರಿ.) ಕೊಂಚಾಡಿ ಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಲೆ ಅಷ್ಟಾಹ ಸಂಭ್ರಮ ‘ಯಕ್ಷಮಂಜರಿ’ಯ ಪಂಚಮ ದಿನದ ಕಾರ್ಯಕ್ರಮವು ದಿನಾಂಕ 05 ಮಾರ್ಚ್ 2026ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಎಸ್. ನಾಯಕ್ ಆಂಡ್ ಅಸೋಸಿಯೇಟ್ಸ್ ನ ಪಾಲುದಾರರಾದ ಶ್ರೀ ಎಸ್.ಎಸ್. ನಾಯಕ ಇವರು “ಮಹಿಳೆಯೊಬ್ಬಳು ಶಿಕ್ಷಿತಳಾದರೆ ಸಮಾಜವೊಂದು ಉದ್ಧಾರವಾದಂತೆ. ನಮ್ಮ ಧರ್ಮ ಪುರಾಣ ಕಾಲದಿಂದಲೂ ಸ್ತ್ರೀಯರಿಗೆ ಉನ್ನತವಾದ ಸ್ಥಾನವನ್ನು ನೀಡಿದೆ. ನಮ್ಮ ಧರ್ಮಗ್ರಂಥಗಳಾದ ಭಗವದ್ಗೀತೆ, ಹದಿನೆಂಟು ಪುರಾಣಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾದುದು. ಅವುಗಳನ್ನು ಎಲ್ಲರೂ ಅಭ್ಯಸಿಸಬೇಕು. ಸಾಧ್ಯವಿಲ್ಲವಾದರೆ ಅವುಗಳ ತಾತ್ಪರ್ಯದಂತೆ ಪರಪೀಡನೆ ಮಾಡದೇ ಪರೋಪಕಾರಿಯಾಗಿ ಬದುಕಬೇಕು” ಎಂದು ನುಡಿದರು.

ವೇದಮೂರ್ತಿ ಮಂದಾರ ಬಯಲು ಶ್ರೀ ಶರತ್ ಭಟ್ ದೀಪ ಪ್ರಜ್ವಲನೆ ಮಾಡಿ ಶುಭ ನುಡಿಗಳನ್ನಾಡಿದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಗುರುಪ್ರಸಾದ್ ಕಡಂಬಾರ್, ಕಾರ್ತಿಕ ಸ್ಥಾನದ ಅಧ್ಯಕ್ಷರಾದ ಸದಾನಂದ ದೇವಾಡಿಗ, ಕೊಂಚಾಡಿ ಮಹಾಕಾಳಿ ದೈವಸ್ಥಾನದ ಸೀತಾರಾಮ ಕೆ., ಖ್ಯಾತ ಯಕ್ಷಗಾನ ಸ್ತ್ರೀವೇಷಧಾರಿಗಳಾದ ಸಂಜಯ ಕುಮಾರ್ ಗೋಣಿಬೀಡು, ಭ್ರಾಮರಿ ಮಹಿಳಾ ಕಲಾವೃಂದ ಇದರ ಸಂಚಾಲಕಿ ನಳಿನಿ ಮೋಹನ್ ಉಪಸ್ಥಿತರಿದ್ದರು. ಈ ಸಂಧರ್ಭ ಯಕ್ಷ ಸ್ನೇಹ ಕಲಾಪ್ರತಿಷ್ಠಾನದ ಗೌರವಾಧ್ಯಕ್ಷರಾದ ಮಧುಸೂದನ ಅಲೆವೂರಾಯ, ಅಧ್ಯಕ್ಷೆ ಗೀತಾ ಲಕ್ಷ್ಮೀಶ, ಪ್ರತಿಷ್ಠಾನದ ಪದಾಧಿಕಾರಿಗಳಾದ ಮೋಹಿನಿ ಗೋಪಾಲ, ಅವನೀಶ ಭಟ್, ಶಿವಪ್ರಸಾದ್ ಕೊಕ್ಕಡ, ಹರೀಶ ಪಾಟಾಳಿ, ಅರುಣ್ ಕುಮಾರ್, ಗಣೇಶ ಬಿ.ಜಿ., ಯೋಗೀಶ ದೇವಾಡಿಗ, ಸೀಮಾ ಅರುಣ್, ಪ್ರಜ್ಞಾ ವಸಂತ, ಅನುರಾಧ ಯೋಗೀಶ, ಆಧ್ಯಾ, ಲಕ್ಷ್ಯಾ, ಕೃತಿ, ಹೃತ್ವಿ, ಲಕ್ಷಾ, ವೃಷಭೇಂದ್ರ ಹಾಗೂ ನೂರಾರು ಕಲಾಭಿಮಾನಿಗಳು ಉಪಸ್ಥಿತರಿದ್ದರು. ನಂತರ ಶ್ರೀ ಭ್ರಾಮರಿ ಮಹಿಳಾ ಕಲಾವೃಂದ ಅಶೋಕನಗರ ಇದರ ಮಹಿಳಾ ಕಲಾವಿದರಿಂದ ‘ಸುದರ್ಶನ ವಿಜಯ’ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

