ಹಾಸನ : ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ (79) ಅವರು ದಿನಾಂಕ 30 ಜೂನ್ 2026ರಂದು ನಿಧನರಾದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಪತ್ನಿ ಲೇಖಕಿ ಕೆ.ಟಿ. ಸುವರ್ಣ ಇದ್ದಾರೆ.
ಉದ್ಯಮಿ ದಿವಂಗತ ಎಚ್.ಟಿ. ಕಾರ್ಲೆ ಇವರ ಪುತ್ರರಾದ ಕೆ.ಟಿ. ಶಿವಪ್ರಸಾದ್, ತಮ್ಮ ಅದ್ಭುತ ಚಿತ್ರಕಲೆ ಹಾಗೂ ಛಾಯಾಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ಅವರ ಕಲಾಕೃತಿಗಳಲ್ಲಿ ಬಂಡಾಯ ಸಾಹಿತ್ಯ ಚಳವಳಿಯ ಪ್ರಭಾವವಿತ್ತು. ಕಲೆ ಮತ್ತು ಸೌಂದರ್ಯ ಪ್ರಜ್ಞೆಯನ್ನು ಸಮಾಜವಾದಿ ಉದ್ದೇಶಗಳೊಂದಿಗೆ ಬೆಸೆಯುವ ಪ್ರಯತ್ನದಲ್ಲಿ ಶಿವಪ್ರಸಾದ್ ಯಶಸ್ವಿಯಾಗಿದ್ದರು.
ರೈತರು, ಕಾರ್ಮಿಕರು, ದಲಿತರು ಹಾಗೂ ಶೋಷಿತರ ಬದುಕನ್ನು ತಮ್ಮ ಚಿತ್ರಗಳಲ್ಲಿ ಬಿಂಬಿಸಿದ್ದರು. ಕಲೆಯನ್ನು ಸಮಾಜ ಪರಿವರ್ತನೆಯ ಸಾಧನವನ್ನಾಗಿ ಮಾಡಿದ್ದರು. ದಲಿತ, ರೈತ ಹಾಗೂ ಸಮಾಜವಾದ ಚಳವಳಿಯಲ್ಲಿ ಸಕ್ರಿಯವಾಗಿ ಅವರು ಗುರುತಿಸಿಕೊಂಡಿದ್ದರು. ಕರ್ನಾಟಕದ ರೈತ ಚಳವಳಿಯಲ್ಲಿ ಜಪ್ತಿ ತಡೆ ಹಾಗೂ ಮರು ಜಪ್ತಿ ಚಳವಳಿ ನಡೆಸುವ ಮೂಲಕ ಹೋರಾಟದ ಹೊಸ ಪರಿಕಲ್ಪನೆಯನ್ನು ಆರಂಭಿಸಿದ್ದರು. ನಂತರ ಅವರು ದಲಿತ ಸಂಘರ್ಷ ಸಮಿತಿ ಸೇರಿದ್ದರು. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಆಪ್ತರಾಗಿದ್ದ ಶಿವಪ್ರಸಾದ್, ಕುಪ್ಪಳಿಯ ಕವಿಶೈಲದ ವಿನ್ಯಾಸ ಮಾಡಿದ್ದರು.
ಶಿವಪ್ರಸಾದ್ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯತ್ತ ಆಸಕ್ತಿ ಇತ್ತು. ಆದರೆ, ಆ ಕಾಲದಲ್ಲಿ ಚಿತ್ರಕಲೆಗೆ ಅಷ್ಟಾಗಿ ಮನ್ನಣೆ ಇರದೇ ಇದ್ದುದರಿಂದ, ಕುಟುಂಬದ ಇಚ್ಛೆಯಂತೆ ಎಂಜಿನಿಯರಿಂಗ್ ಕಾಲೇಜು ಸೇರಬೇಕಾಯಿತು. ಆದರೆ, ಕಲೆಯ ಮೇಲಿದ್ದ ಒಲವಿನಿಂದಾಗಿ ಎಂಜಿನಿಯರಿಂಗ್ ಅಧ್ಯಯನ ಅರ್ಧಕ್ಕೇ ಬಿಟ್ಟು, ಮುಂಬೈನ ಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್ ಸೇರಿದರು. 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದರು. ನಂತರದ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು.
ಅವರ ಕಲಾಕೃತಿಗಳು ದೇಶ-ವಿದೇಶಗಳಲ್ಲಿ ಅಪಾರ ಪ್ರಶಂಸೆ ಗಳಿಸಿವೆ. 1976ರಿಂದ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿಗಳಲ್ಲಿ ಇವರ ಹಲವು ಏಕವ್ಯಕ್ತಿ ಪ್ರದರ್ಶನಗಳು ನಡೆದಿವೆ. ಮುಂಬೈನ ಜಹಾಂಗೀರ್ ಆರ್ಟ್ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಅರ್ಟ್ ಟುಡೇಗಳಲ್ಲಿ ಇವರ ಕಲಾ ಪ್ರದರ್ಶನ ನಡೆದಿವೆ.
ಭೋಪಾಲ್ ಬಿನ್ನಾಲೆ (1988), ಬಾಂಬೆ ಆರ್ಟ್ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್ ಕಾಂಗ್ ಗ್ಯಾಲರಿಗಳಲ್ಲೂ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. 1996ರಲ್ಲೇ ಜಹಾಂಗೀರ್ ಆರ್ಟ್ ಗ್ಯಾಲರಿಯಲ್ಲಿ ನಡೆದ ಸಮಕಾಲೀನ ಭಾರತೀಯ ಕಲಾವಿದರ ಪ್ರದರ್ಶನದಲ್ಲೂ ಭಾಗವಹಿಸಿದ್ದರು. ಕಲೆಗೆ ಅವರು ಸಲ್ಲಿಸಿದ ಅನನ್ಯ ಸೇವೆ ಗುರುತಿಸಿ, 2001ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
