ಯಕ್ಷಗಾನ ರಂಗಭೂಮಿಯ ಒಬ್ಬ ಶ್ರೇಷ್ಟ ಕಲಾವಿದರಾಗಿ, ಅತ್ಯುತ್ತಮ ಸಂಘಟನಾ ಪಟುವಾಗಿ ಸರ್ವ ಮಾನ್ಯರಾದವರು ಶ್ರೀ ಮುರಳಿ ಕಡೆಕಾರ್. ಕಲಾಸಂಘಟಕನೋರ್ವ ಸಮರ್ಥ ಕಲಾವಿದನಾಗಿದ್ದರೆ ಸತ್ಸಂಘಟನೆ ರೂಪುಗೊಂಡು ಯಕ್ಷಗಾನ ಕಲೆ ಬೆಳಗುತ್ತದೆ ಎಂಬುದಕ್ಕೆ ಪಾದರಸ ಶಕ್ತಿಯ ಕಲಾನಿಧಿ ಮುರಳಿ ಕಡೆಕಾರ್ ಅವರು ಜ್ವಲಂತ ನಿದರ್ಶನ. ಕಡೆಕಾರರು ನಿಜಾರ್ಥದಲ್ಲಿ ಕಲೆಯ ಆಸ್ತಿ, ಸಮಾಜದ ಶಕ್ತಿ. ಯಕ್ಷಗಾನ ಕಲೆಗೆ ತನ್ನ ಬದುಕು- ಭಾವವನ್ನು ಸದ್ವಿನಿಯೋಗ ಮಾಡಿದ ಮಾದರಿ ಕರ್ಮಯೋಗಿ.
ಕೃಷ್ಣನಗರಿ ಉಡುಪಿ ಇವರ ಹುಟ್ಟೂರು. 32 ವರ್ಷಗಳ ಕಾಲ ನಿಟ್ಟೂರು ಪ್ರೌಢಶಾಲೆಯಲ್ಲಿ ಗಣಿತ ಅಧ್ಯಾಪಕನಾಗಿ ಕಾರ್ಯನಿರ್ವಹಿಸಿ 5 ವರ್ಷಗಳ ಕಾಲ ನಿಟ್ಟೂರು ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ಶೈಕ್ಷಣಿಕವಾಗಿ ಹಿರಿತನದಲ್ಲಿ ಬೆಳಗಿದವರು ಕಡೆಕಾರ್. ಯಕ್ಷಗಾನದ ದಂತಕತೆ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೇಷದಿಂದ ಪ್ರಭಾವಿತರಾಗಿ ಉಡುಪಿ ಯಕ್ಷಗಾನ ಕಲಾರಂಗದಲ್ಲಿ ಕಾರ್ಯದರ್ಶಿಯಾಗಿ ಅನೇಕ ಕಲಾತ್ಮಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದ, ಸಂಘಟಕ ಸಾಹಸಿ ಮುರಳಿ ಕಡೆಕಾರ್.
17 ಅಕ್ಟೋಬರ್ 1960ರಂದು ನಾರಾಯಣ ಭಟ್ ಮತ್ತು ವನಜಾಕ್ಷಿ ಅವರ ಸುಪುತ್ರನಾಗಿ ಮುರಳಿಯವರ ಜನನ. ಮಡದಿ ವಿನೋದ (ಇವರು ಕೂಡ ಮುಖ್ಯೋಪಾಧ್ಯಾಯಿನಿ. ಪತಿಯ ಕಲಾಚಟುವಟಿಕೆಗಳನ್ನು ಸದಾ ಬೆಂಬಲಿಸುವ ಕಲಾಹೃದಯಿ ಮಮತಾಮಯಿ) ಮಗಳು ವಲ್ಲರಿ ಹಾಗೂ ಮಗ ಸನಕ ಇವರ ಜೊತೆಗೆ ಕಡೆಕಾರರ ಸುಖಿ ಸಂಸಾರ.

ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗೆ ಹಾಗೂ ಕಲೆಯ ಒಲವು ಹೇಗೆ ಸಾಧ್ಯವಾಯಿತು:-
ಬಾಲ್ಯದಲ್ಲಿ ನಡೆಯುತ್ತಿದ್ದ ಯಕ್ಷಗಾನದ ವಾತಾವರಣವೇ ಕಲಾಸಕ್ತಿಗೆ ಕಾರಣ. ಹಾಗೂ ಕಲಾವಿದರು ಬಿಡಾರಕ್ಕೆ ನಮ್ಮ ಮನೆಗೆ ಬರುತ್ತಿದ್ದರು. ರಾತ್ರಿ ಅವರೊಂದಿಗೆ ಯಕ್ಷಗಾನ ಪ್ರದರ್ಶನಗಳಿಗೆ ಹೋಗುತ್ತಿದ್ದೆ. ಆಮೇಲೆ ಅಂಬಲಪಾಡಿ ಕಲಾಸಂಘ ಹಾಗೂ ಕಿದಿಯೂರು ಸಂಘದ ಯಕ್ಷಗಾನ ನೋಡಲು ಹೋಗುತ್ತಿದ್ದೆ. ಇದುವೇ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಪೂರ್ಣಪ್ರಜ್ಞ ಕಾಲೇಜ್ ನಲ್ಲಿ ವಾರ್ಷಿಕೋತ್ಸವಕ್ಕೆ ಯಕ್ಷಗಾನದಲ್ಲಿ ನಾನು ಸೊಕ್ಕಟ್ಟು ಸೀತಾರಾಮಯ್ಯ ಅವರ ಬಳಿ ತಾಳ ಅಭ್ಯಾಸ ಕಲಿತು ಸುಧನ್ವ ಪಾತ್ರ ಮಾಡಿದೆ. ಈ ವೇಷದಿಂದ ನನಗೆ ಸ್ಫೂರ್ತಿ ದೊರಕಿತು. ಆಮೇಲೆ ಅದೇ ವರ್ಷ ಅಂಬಲಪಾಡಿ ಸಂಘದಲ್ಲಿ ಯಕ್ಷಗಾನ ಕ್ಲಾಸ್ ಶುರುವಾಯಿತು. ಅಲ್ಲಿ ಹಿರಿಯಡ್ಕ ಗೋಪಾಲ ರಾಯರಿಂದ ಯಕ್ಷಗಾನ ಕಲಿತೆ.
ಯಕ್ಷಗಾನ ರಂಗಕಲೆಯ ಅಭ್ಯಾಸ ಹೇಗೆ? ಗುರುಗಳು ಯಾರು:-
ಅಂಬಲಪಾಡಿಯಲ್ಲಿ ಮತ್ತು ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಬಡಗು ಮತ್ತು ನಡುತಿಟ್ಟಿನ ಯಕ್ಷಗಾನ ಅಭ್ಯಾಸ ಮಾಡಿದೆ. ಹಿರಿಯಡ್ಕ ಗೋಪಾಲ ರಾವ್, ಬಾಬು ಶೆಟ್ಟಿಗಾರ್, ಬನ್ನಂಜೆ ಸಂಜೀವ ಸುವರ್ಣ ಹಾಗೂ ಕಟೀಲು ಲಕ್ಷ್ಮೀನಾರಾಯಣ ಭಟ್ ನನಗೆ ಯಕ್ಷಗಾನ ಗುರುಗಳು.
ನಮಗೆ ಇಷ್ಟವಾದ ನಿಮ್ಮ ನಿರ್ವಹಣೆಯ ಪುರಾಣ ಪಾತ್ರಗಳು:-
ಬಬ್ರುವಾಹನ, ಅಭಿಮನ್ಯು, ಸುಧನ್ವ, ಅರ್ಜುನ, ತಾಮ್ರಧ್ವಜ, ಭೀಷ್ಮ, ಕೌರವ, ಬಲರಾಮ… ನೆಚ್ಚಿನ ವೇಷಗಳು.
ಯಕ್ಷಗಾನ ರಂಗದಲ್ಲಿ ನಿಮ್ಮನ್ನು ಪ್ರಭಾವಿಸಿದ ತೆಂಕು – ಬಡಗಿನ ಕಲಾವಿದರು ಯಾರು:-
ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ, ತೆಂಕಿನಲ್ಲಿ ಗೋವಿಂದ ಭಟ್, ಸಂಪಾಜೆ ಶೀನಪ್ಪ ರೈ, ಸುಣ್ಣಂಬಳ ವಿಶ್ವೇಶ್ವರ ಭಟ್, ಕೋಳ್ಯೂರು ರಾಮಚಂದ್ರ ರಾಯರು ನನ್ನ ನೆಚ್ಚಿನ ಕಲಾವಿದರು. ನಡುಬಡಗಿನ ಕೋಟ ವೈಕುಂಠ, ಮೊಳಹಳ್ಳಿ ಹಿರಿಯ ನಾಯಕ್, ನಾರಾಯಣ ಉಪ್ಪೂರು, ಐರೋಡಿ ಗೋವಿಂದಪ್ಪ ಇವರಿಂದ ಪ್ರಭಾವಿತನಾದೆ.
ಯಕ್ಷಗಾನ ಉಡುಪಿ, ಕುಂದಾಪುರದ ನಡುತಿಟ್ಟಿನಲ್ಲಿ ನಿಮ್ಮ ಗಮನಾರ್ಹ ಕಳಕಳಿ ಹೇಗೆ:-
ಎಲ್ಲಾ ತಿಟ್ಟುಗಳ ಪ್ರಭಾವಕ್ಕೆ ಒಳಗಾಗಿ ಬಹುಶಃ ನಲುಗಿದ ತಿಟ್ಟು ಹೇಳಿದರೆ ಅದು ಬ್ರಹ್ಮಾವರದ ತಿಟ್ಟು. ಈ ಉಡುಪಿ- ಕುಂದಾಪುರದ ತಿಟ್ಟಿಗೆ ಆ ಕಡೆ ಉತ್ತರ ಕನ್ನಡದ ಬಡಾಬಡಗಿನ ತಿಟ್ಟಿನ ಪ್ರಭಾವ, ಈ ಕಡೆ ತೆಂಕುತಿಟ್ಟಿನ ಪ್ರಭಾವ ಆಗಿ ಒಂದು ರೀತಿಯಲ್ಲಿ ತನ್ನ ಸ್ವಂತಿಕೆಯನ್ನು ವೃತ್ತಿ ಮೇಳದಲ್ಲಿ ಅದು ಕಳೆದುಕೊಳ್ತಾ ಇದೆಯೇನೊ ಅನ್ನಿಸುತ್ತಿದೆ. ಹವ್ಯಾಸಿಗಳಲ್ಲಿ ಅಲ್ಲಲ್ಲಿ ಉಳಿಯುತ್ತಾ ಇದೆ. ಯಕ್ಷಗಾನ ಕೇಂದ್ರದಲ್ಲಿ, ಸಾಲಿಗ್ರಾಮ ಮಕ್ಕಳ ಮೇಳದಲ್ಲಿ, ಹೀಗೆ ಅಲ್ಲಲ್ಲಿ ಹವ್ಯಾಸಿಗಳಲ್ಲಿ ಈ ತಿಟ್ಟಿನ ಬಗ್ಗೆ ಕಳಕಳಿಯಿದೆ. ಮತ್ತೆ ಕೆಲವು ನಿರ್ದೇಶಕರು, ನಡು ಬಡಗಿನ ಸತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾ ಇದ್ದಾರೆ. ಆದರೆ ವೃತ್ತಿ ಮೇಳದಲ್ಲಿ ಅದು ತೀರಾ ಹದಗೆಟ್ಟಿದೆ. ಅದು ವೇಷಭೂಷಣದಲ್ಲಿರಬಹುದು, ಕುಣಿತದಲ್ಲಿ ಇರಬಹುದು, ಅಭಿನಯದಲ್ಲಿ ಇರಬಹುದು. ಒಟ್ಟಿನಲ್ಲಿ ನಡುಬಡಗಿಗೆ ಹೆಚ್ಚಿನ ಪ್ರಾಶಸ್ತ್ಯ ದೊರಕದಿರುವ ಬಗ್ಗೆ ಬೇಸರವೂ ಇದೆ. ಸಾಧ್ಯವಾದಷ್ಟು ಮಟ್ಟಿಗೆ ನಡುತಿಟ್ಟಿನ ಯಕ್ಷಗಾನದ ಸೊಬಗನ್ನು ನಮ್ಮ ಸಂಸ್ಥೆಯಲ್ಲಿ ಮತ್ತು ಮಕ್ಕಳ ಯಕ್ಷಗಾನ ಪ್ರದರ್ಶನಗಳಲ್ಲಿ ಕಾಣಿಸಿದ ಧನ್ಯತೆಯಿದೆ. ನಡುತಿಟ್ಟಿನ ಕಲಾವಿದರ ಬದುಕಿನ ಚೌಕಿಗೂ ನೆರವಾದ ಸಂತೃಪ್ತಿಯಿದೆ.
ಶುದ್ಧ ಯಕ್ಷಗಾನೀಯ ಉಳಿವಿಗೆ ನಿಮ್ಮ ಪ್ರಶಂಸನೀಯ ಪ್ರಯತ್ನಕ್ಕೆ ತಕ್ಕಂತೆ ಫಲ ದೊರಕಿದೆಯೆ:-
ಶುದ್ಧ ಯಕ್ಷಗಾನ ಅಂದ್ರೆ ಯಾವುದು ಅಂತ ಪ್ರಶ್ನೆ ಬರ್ತದೆ…..
ಪ್ರಜ್ಞಾವಂತ ವ್ಯಕ್ತಿಗಳು ಕೆಲವರು ಪ್ರಯತ್ನಿಸುತ್ತಾ ಇದ್ದಾರೆ. ಹಲವು ಗುರುಗಳ ಪ್ರಯತ್ನವೂ ಸಾಗಿದೆ. ಮುಖ್ಯವಾಗಿ ಮಕ್ಕಳ ಯಕ್ಷಗಾನದಿಂದ ನಾವು ಪಾರಂಪರಿಕ ಯಕ್ಷಗಾನವನ್ನು ಉಳಿಸುವ ಪ್ರಯತ್ನದಲ್ಲಿದ್ದೇವೆ. ಈ ಸೋಶಿಯಲ್ ಮೀಡಿಯಾದ ದೆಸೆಯಿಂದ ಅಥವಾ ಬೇರೆ ಬೇರೆ ಪ್ರಕಾರಗಳನ್ನು ನೋಡಿ ನಮ್ಮ ಯುವಕರು ತಕ್ಷಣ ಪ್ರಸಿದ್ಧಿಗೆ, ಜನಾಕರ್ಷಣೆಗೆ ಒಳಗಾಗಿ ಮೂಲ ಸತ್ವಕ್ಕೆ ಹೊರತಾದ ಸುಲಭ ಚೀಪ್ ಪಾಪ್ಯುಲಾರಿಟಿಯ ಅಭಿನಯ ಅಥವಾ ಮಾತುಗಾರಿಕೆ ಅಥವಾ ಹಿಮ್ಮೇಳದಲ್ಲಿ ಭಾಗವತಿಕೆಗೆ ಒಳಗಾಗುವುದನ್ನು ಕಾಣುತ್ತಾ ಇದ್ದೇವೆ. ನಾವು ಪರಂಪರೆಯ ಉಳಿವಿಗೆ ಯಾವತ್ತೂ ಬದ್ಧರಾದರೂ ಎಲ್ಲಾ ದೃಷ್ಟಿಯಿಂದಲೂ ಇದಕ್ಕೆ ನಮಗೆ ಸಹಕಾರ ಬೇಕಾಗುತ್ತದೆ.
ಹಿರಿಯ ಕಲಾವಿದರೊಂದಿಗೆ ನಿಮ್ಮ ಕಲಾನುಭವ ಹಾಗೂ ಕಿರಿಯರನ್ನು ಬೆಳೆಸುವ ನಿಮ್ಮ ಪ್ರಯತ್ನದ ಬಗ್ಗೆ ತಿಳಿಸಿ:-
ಎಲ್ಲಾ ಕಲಾವಿದರು, ಯಕ್ಷಗಾನ ಕಲಾರಂಗದಿಂದಾಗಿ ನನಗೆ ದೊರಕಿದ್ದಾರೆ. ನನ್ನ ಕಲಾಪಯಣದಲ್ಲಿ ತೆಂಕು ಬಡಗು ಉತ್ತರ ಕನ್ನಡದ ಕಲಾವಿದರೆಲ್ಲರ ಪರಿಚಯ ಆದದ್ದೂ ನನ್ನ ಸೌಭಾಗ್ಯ. ಅವರೆಲ್ಲರೊಂದಿಗೆ ಬೆರೆಯುವ ಮತ್ತು ನನ್ನ ಮಿತಿಯಲ್ಲಿ ಕಷ್ಟ ಸುಖಗಳಿಗೆ ಸ್ಪಂದಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಕಿರಿಯರು ಯಕ್ಷಗಾನದಲ್ಲಿ ಬೆಳೆದಾಗ ಮಾತ್ರ ಯಕ್ಷಗಾನ ಕಲೆ ಭವಿಷ್ಯದ ಪೀಳಿಗೆಗೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಯಕ್ಷ ಶಿಕ್ಷಣ ಟ್ರಸ್ಟ್ ಮತ್ತು ವಿದ್ಯಾಪೋಷಕ್ ನಿಂದ ಸರ್ವರೀತಿಯಲ್ಲೂ ನಮ್ಮಿಂದಾದ ಪ್ರಯತ್ನ ಮಾಡುತ್ತಲೇ ಇದ್ದೇವೆ.
ಯಕ್ಷಗಾನ ರಂಗಕಲೆಗೆ ಅನ್ಯ ಮಾಧ್ಯಮಗಳ ಎರವಲು ಅಗತ್ಯವಿದೆಯೇ:-
ಅನ್ಯ ಮಾಧ್ಯಮದ ಎರವಲು ತಂದರೆ ಯಕ್ಷಗಾನ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ. ತುಂಬಾ ಪ್ರಬುದ್ಧರಾದವರು ಕಲೆಯ ಬಗ್ಗೆ ತೀವ್ರವಾದಂತಹ ಅನುಭವವಿದ್ದವರು ಯಾವುದು ಬೇಕೋ ಅದನ್ನು ಈ ರಂಗದಲ್ಲಿ ಅರ್ಥಪೂರ್ಣವಾಗಿ ಬಳಸಬೇಕೇ ಹೊರತು ಸಾಮಾನ್ಯರು ತೆಗೆದುಕೊಂಡರೆ ಕಲಸು ಮೇಲೋಗರವಾಗುತ್ತದೆ. ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುತ್ತದೆ. ಈಗ ಆಗುತ್ತಿರುವುದು ಅದೇ. ಹಾಗೆಯೇ ಇದ್ದರೆ ಅದು ಚಂದ. ನಮ್ಮ ಯಕ್ಷಗಾನದಲ್ಲಿ ಇದ್ದದ್ದನ್ನೇ ಚೆನ್ನಾಗಿ ಬಳಸಿಕೊಳ್ಳೋಣ.
ಯಕ್ಷಗಾನ ಕಲಾರಂಗವನ್ನು ವಿಶ್ವವ್ಯಾಪಿಯಾಗಿಸಿದ ನಿಮ್ಮ ಕೃತುಶಕ್ತಿಯ ಬಗ್ಗೆ ತಿಳಿಸಬಹುದೆ:-
ನಾನೊಬ್ಬ ಶಿಕ್ಷಕ. ಬಿಡುವಿತ್ತು. ಯಕ್ಷಗಾನವನ್ನು ಪ್ರೀತಿಸುತ್ತಾ ಇದ್ದೆ. ಕಲಾರಂಗ ಒಂದು ವೇದಿಕೆ ಆಯಿತು. ಬಿಡುವನ್ನು ಸದುಪಯೋಗ ಪಡಿಸಿಕೊಂಡೆ. ಸ್ವಂತ ಆನಂದಕ್ಕಾಗಿ ಒಂದಷ್ಟು ಕೆಲಸಗಳನ್ನು ಮಾಡಿದೆ. ಅದರಿಂದ ಯಕ್ಷಗಾನಕ್ಕೆ ನನ್ನಿಂದಾದ ಸೇವೆ ಅಷ್ಟೇ. ಕಲಾರಂಗ ವಿಶ್ವವ್ಯಾಪಿಯಾದ ಬಗ್ಗೆ ಸಂತಸವಿದೆ. ಅಹಂಕಾರ ಇಲ್ಲ. ನನ್ನ ಮಿತಿಯಲ್ಲಿ ಏನಿದೆಯೋ ಅದನ್ನು ಮಾಡುತ್ತಾ ಖುಷಿ ಪಡುತ್ತಾ ನನ್ನ ಆಯುಷ್ಯವನ್ನ ಸದುಪಯೋಗ ಪಡಿಸಿಕೊಂಡೆ ಎನ್ನುವ ಭಾವ ನನ್ನಲ್ಲಿದೆ. ಅದಕ್ಕೋಸ್ಕರ ಈ ಕಲಾ ಕಾಯಕ ಮಾಡಿಕೊಂಡು ಬಂದಿದ್ದೇನೆ.
ಉಡುಪಿ ಯಕ್ಷಶಿಕ್ಷಣ ಟ್ರಸ್ಟ್ ನ ಕಾರ್ಯವೈಖರಿ ಹೇಗೆ ರೂಪಿಸಿದ್ದೀರಿ:-
ಉಡುಪಿಯ ರಘುಪತಿ ಭಟ್ಟರು ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣ ಅಭಿಯಾನ ಮಾಡೋಣ ಅಂತ ಹೇಳಿದರು. ಅದು ಒಳ್ಳೆಯ ಕೆಲಸ ಅಂತ ಸ್ವೀಕರಿಸಿದೆವು. 2007ರಿಂದ ನಿರಂತರವಾಗಿ ಉಡುಪಿ, ಕುಂದಾಪುರ, ಬೈಂದೂರು, ಕಾಪು ವಿಧಾನಸಭಾ ಕ್ಷೇತ್ರಗಳ ಶಾಸಕರುಗಳ ಸಹಕಾರದಿಂದ ಈ ಅಭಿಯಾನವನ್ನು ಮುನ್ನಡೆಸಿದೆವು. ಈ ಬಾರಿ 99 ಪ್ರೌಢ ಶಾಲೆಗಳಲ್ಲಿ ಯಕ್ಷಗಾನ ಶಿಕ್ಷಣ ಮತ್ತು ಪ್ರದರ್ಶನ ಮಾಡುತ್ತಾ ಇದ್ದೇವೆ. 41 ಮಂದಿ ಯೋಗ್ಯ ಗುರುಗಳ ಮತ್ತು ಪ್ರಸಾದನ ತಂಡಗಳ, ಶಾಲೆಯ ಶಿಕ್ಷಕರ, ಮಕ್ಕಳ ಪೋಷಕರ, ಕಲಾಭಿಮಾನಿಗಳ, ಜನ ಪ್ರತಿನಿಧಿಗಳ ಮತ್ತು ಮುಖ್ಯವಾಗಿ ಯಕ್ಷಗಾನ ಕಲಾರಂಗದ ಕಾರ್ಯಕರ್ತರ ಸಮಷ್ಟಿ ಪ್ರಯತ್ನದಿಂದ ನಿಜಕ್ಕೂ ಇದೊಂದು ಚಾರಿತ್ರಿಕ ಕೆಲಸ ಆಗುತ್ತಾ ಇದೆ. ಬಹಳ ಮುಖ್ಯವಾಗಿ ಎಷ್ಟೋ ಗುರುಗಳು ತುಂಬಾ ಶ್ರದ್ಧೆಯಿಂದ ತಮ್ಮ ಕರ್ತವ್ಯ ಎಂಬ ನೆಲೆಯಲ್ಲಿ ಒಳ್ಳೆಯ ಯಕ್ಷಗಾನವನ್ನು ಮಕ್ಕಳಿಂದ ಮಾಡಿಸುತ್ತಾ ಇದ್ದಾರೆ.
ನಾನು ಬಹಳ ಮುಖ್ಯವಾಗಿ ಹೇಳುವುದು ನಡುತಿಟ್ಟಿನ ಯಕ್ಷಗಾನ. ಇಲ್ಲಿಯದ್ದೆ ವೇಷಭೂಷಣ, ಹಿತಮಿತವಾದ ಕುಣಿತ ಮಾತುಗಾರಿಕೆಯಿದ್ದರೆ ಸೊಗಸು. ಈಗ ಏನಾಗಿದೆ ಅಂತ ಹೇಳಿದರೆ ಎಲ್ಲವೂ ಅತಿಯಾಗುತ್ತಾ ಇದೆ. ಮಿತಿ ಮೀರುತ್ತಾ ಇದೆ. ಅತಿಯಾದ ಕುಣಿತ, ಅತಿಯಾದ ದೇಹದ ದಂಡನೆ – ಬಾಗುವಿಕೆ. ತುಂಬ ನಮ್ಮಂತವರಿಗೆ ನೋಡಲು ಅಸಹ್ಯ ಆಗುವ ರೀತಿಯಲ್ಲಿದೆ. ಹೀಗಾಗಿ ಹಿತಮಿತವಾದ, ಯಕ್ಷಗಾನೀಯವಾದ ಪ್ರದರ್ಶನವನ್ನು ನಾವು ಯಕ್ಷ ಶಿಕ್ಷಣದಿಂದ ನೋಡಲಿಕ್ಕೆ ಸಾಧ್ಯವಾಗಿದೆ. ಅವರಲ್ಲಿ ಕೆಲವರು ಮುಂದೆ ಯಕ್ಷಗಾನವನ್ನು ವೃತ್ತಿಯಾಗಿಯೂ ಸ್ವೀಕರಿಸಿ ಕೆಲವು ಮೇಳಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಲವರು ಬೇರೆ ವೃತ್ತಿಯಲ್ಲಿದ್ದೂ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿ ಕಲೆಯ ಬಗ್ಗೆ ವಿಶೇಷ ಅಭಿಮಾನ, ಪೂಜ್ಯ ಭಾವ ಬೆಳೆಸಿಕೊಂಡಿದ್ದಾರೆ. ಅದೊಂದು ಧನ್ಯತೆಯ ಭಾವ. ಖಂಡಿತವಾಗಿಯೂ ಇದೊಂದು ಸಾರ್ಥಕತೆ ನಮಗಿದೆ.
ವಿದ್ಯಾಪೋಷಕ್ ಬಗ್ಗೆ ತಿಳಿಸಿ:-
ಯಕ್ಷಗಾನ ಕಲಾರಂಗದಿಂದ ವಿದ್ಯಾ ಪೋಷಕ್ ನಿಂದ ಉಡುಪಿ ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದೇವೆ. ಯಕ್ಷಗಾನ ಮತ್ತು ಇದಕ್ಕೆ ಯಾವುದೇ ಸಂಬಂಧ ಇಲ್ಲ. ಇದು ಕೇವಲ ಪ್ರತಿಭೆ ಮತ್ತು ಬಡತನ ಎರಡನ್ನೇ ಆಧಾರವಾಗಿಟ್ಟುಕೊಂಡದ್ದು. ಯಕ್ಷಗಾನ ಕಲಾವಿದರ ಮಕ್ಕಳು ಕೂಡ ಇದ್ದಾರೆ. ಯಕ್ಷಗಾನ ಕಲಾವಿದರ ಮಕ್ಕಳಿಗೆ ಬೇರೆಯೇ. ಇದರಲ್ಲಿಯೂ ಸೇರಿಸಿಕೊಂಡು ಮಾಡ್ತಾ ಇದ್ದೇವೆ. ಇದು ಉಡುಪಿ ಜಿಲ್ಲೆಗೆ ಮಾತ್ರ. ಯಕ್ಷಗಾನ ಕಲಾವಿದರ ಮಕ್ಕಳಾದರೆ ಯಾವ ಜಿಲ್ಲೆಯವರೇ ಇರಲಿ ಅವರಿಗೆ ಕೂಡ ಶೈಕ್ಷಣಿಕ ನೆರವು ನೀಡುತ್ತಾ ಇದ್ದೇವೆ.
ಈ ವರ್ಷ ಸುಮಾರು 10 ಲಕ್ಷ ರೂಪಾಯಿಯನ್ನು ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಾ ಇದ್ದೇವೆ. ಕಲಾವಿದರಿಗೆ 10 ಮನೆ ಕಟ್ಟಿಸಿ ಕೊಟ್ಟೆವು. 103 ಮನೆ ಆಯಿತು. ಇನ್ನು 20 ಮನೆಗಳು ಆಗುತ್ತಿವೆ. ವಿದ್ಯಾ ಪೋಷಕ್ ಮಕ್ಕಳಿಗೆ ಜಾಸ್ತಿ, ಕಲಾವಿದರಿಗೂ ಮನೆ ಕಟ್ಟಿಸಿ ಕೊಡುತ್ತಾ ಇದ್ದೇವೆ. ಇದೊಂದು ಬೃಹದಾಕಾರವಾಗಿ ಬೆಳೆದಂತಹ ಒಂದು ಯೋಜನೆ. ಈ ವರ್ಷ ಸೆಪ್ಟೆಂಬರ್ 27ಕ್ಕೆ 1211 ಮಕ್ಕಳಿಗೆ 1 ಕೋಟಿ 75 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಕೊಡುತ್ತಾ ಇದ್ದೇವೆ. ಕಳೆದ ವರ್ಷವೂ 1 ಕೋಟಿ 25 ಲಕ್ಷ. ಮನೆ ಕಟ್ಟುವುದು ಕೂಡ ಎಲ್ಲಿಯೂ ಆಗದ ಕೆಲಸ. ನಮ್ಮ ಅಧ್ಯಕ್ಷರು ಗಂಗಾಧರ ರಾಯರು, ಅವರೇ ಸ್ವತಃ ಹೋಗಿ ಮನೆ ಕಟ್ಟಿಸಿ ಕೊಡುವುದು. ಒಂದು ರೂಪಾಯಿಯನ್ನು ಕೂಡ ಫಲಾನುಭವಿಯ ಕೈಯಿಂದ ತೆಗೆದುಕೊಳ್ಳುವುದಿಲ್ಲ.
ಯಕ್ಷಗಾನ ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಯ ನಡುವಿನ ಕಲಾಸೇತು ನೀವು, ಆ ಬಗ್ಗೆ ತಿಳಿಸಿ:-
ಯಕ್ಷಗಾನ ರಂಗಭೂಮಿ ಹವ್ಯಾಸಿ ಕಲಾ ಕ್ಷೇತ್ರ ಮತ್ತು ನಾನು ವೈಯ್ಯಕ್ತಿಕವಾಗಿ ಅನ್ನುವ ಪ್ರಶ್ನೆಯೇ ಇಲ್ಲ. ನಮ್ಮ ಕೆಲಸವನ್ನು ಮಾಡುತ್ತಾ ಹೋಗುವುದು. ಪರ್ಯಾಯವಾಗಿ ಎಲ್ಲ ಆಗಬೇಕು. ಅದು ಆಗ್ತದೆ ಹೊರತು ಇದನ್ನು ಮಾಡ್ತೇನೆ ಅನ್ನುವ ಹಮ್ಮಿನಿಂದ ಮಾಡುವುದೇ ಅಲ್ಲ. ವೃತ್ತಿ ಕಲಾವಿದರಿಗೆ ಅವರದ್ದೇ ಆದ ಸಮಸ್ಯೆ ಇದೆ ಅಂತ ಹೇಳುತ್ತಾ ಇದ್ದಾರೆ. ಅದನ್ನು ಮೀರಿ ನಾನು ಇದಕ್ಕೆ ಬದ್ಧ ಅಂತ ಹೇಳುವವರು ಬಹಳ ಬೆರಳೆಣಿಕೆ ಕಲಾವಿದರು ಮಾತ್ರ. ಹವ್ಯಾಸಿಗಳಿಗೆ ಅವಕಾಶಗಳಿವೆ. ಆದರೆ ಹವ್ಯಾಸಿಗಳು ಕೂಡ ವೃತ್ತಿ ಕಲಾವಿದರ ಪ್ರಭಾವಕ್ಕೆ ಒಳಗಾದುದನ್ನು ಕಂಡು ನಾನು ಇತ್ತೀಚೆಗಂತೂ ಹವ್ಯಾಸಿ ಕಲಾವಿದನಾಗಿ ವೇಷ ಮಾಡುತ್ತಾ ಇಲ್ಲ. ನಮ್ಮ ಸಂಘದಲ್ಲಿಯೂ ವೇಷ ಮಾಡುತ್ತ ಇಲ್ಲ. ಯಾಕೆಂದರೆ ಹವ್ಯಾಸಿ ರಂಗಭೂಮಿ ಬೆಳವಣಿಗೆಯೂ ಈಗ ನಿರೀಕ್ಷಿತ ರೀತಿಯಲ್ಲಿ ಇಲ್ಲ. ಅದು ಕೂಡ ವೃತ್ತಿ ಮೇಳದ ತೀವ್ರ ಪ್ರಭಾವಕ್ಕೆ ಒಳಗಾಗಿದೆ. ಆದ್ದರಿಂದ ಎಷ್ಟೋ ಸಲ ಹವ್ಯಾಸಿ ರಂಗಭೂಮಿ ಬೇಕೋ ಎಂಬ ಪ್ರಶ್ನೆ ನನ್ನನ್ನು ಕಾಡ್ತಾ ಇದೆ. ಅದಕ್ಕೆ ಹೊರತಾಗಿ ನೀವು ಭಿನ್ನವಾಗಿ ನಮ್ಮದಿಷ್ಟು ಅಂತ ಪ್ರಾಮಾಣಿಕ ಕಳಕಳಿಯಿಂದ ಮಾಡ್ತಿರೋ ಮಾಡಿ. ಅದೇ ಮಾಡುದಿದ್ರೆ ಅದು ಮೇಳದವರು ಮಾಡ್ತಾರೆ. ಪುನಃ ಇಲ್ಲಿ ಬೇಕಾಗಿ ಇಲ್ಲ.
ಪರಂಪರೆಯ ಉಳಿವಿಗೆ ಎಲ್ಲರೂ ಹೇಗೆ ಪ್ರಯತ್ನ ಶೀಲರಾಗಬಹುದು:-
ಪರಂಪರೆ ಉಳಿವಿಗೆ ನಿಮ್ಮ ನಿಮ್ಮ ಮಿತಿಯಲ್ಲಿ ನೀವು ಮಾಡಿ ಅಷ್ಟೇ. ನನ್ನದು ಹೀಗೇ ಅಂತ ಕಲೆಯ ಬಗ್ಗೆ ನಿಲುವು ಇದ್ದು ಈ ರಂಗಕ್ಕೆ ಬಂದಂತಹ ಬನ್ನಂಜೆ ಸಂಜೀವ ಸುವರ್ಣರು, ಸಾಲಿಗ್ರಾಮ ಮಕ್ಕಳ ಮೇಳದ ಹಂದೆಯವರು, ಪ್ರಸಾದ್ ಮೊಗೆಬೆಟ್ಟು, ಸದಾನಂದ ಐತಾಳರು, ಪೃಥ್ವಿರಾಜ್ ಕವತ್ತಾರ್ ಇಂತಹ ಸ್ಪಷ್ಟತೆ ಇರುವ ವ್ಯಕ್ತಿಗಳು ಇದ್ದಾರೆ. ಇವರೆಲ್ಲ ನಮಗೆ ಆಶಾದಾಯಕ ಮಂದಿ.
ನಿಮ್ಮ ಕಾಲದ ಯಕ್ಷಗಾನ ಮತ್ತು ವರ್ತಮಾನದ ಯಕ್ಷಗಾನದ ಒಟ್ಟು ಸ್ಥಿತ್ಯಂತರ ಹೇಗಿದೆ:-
ಸ್ಥಿತ್ಯಂತರ ಕಾಲ ಕಾಲಕ್ಕೆ ಆಗುತ್ತಲೇ ಇರುತ್ತದೆ. ಎಲ್ಲದರಲ್ಲಿಯೂ ಬದಲಾವಣೆ ಆಗಿದೆ. ನಾನು ಬಾಲ್ಯದಲ್ಲಿ ನೋಡಿದ ಎಲ್ಲ ವಿಷಯಗಳು, ಊಟ ತಿಂಡಿಯಿಂದ ಹಿಡಿದು ವೇಷ ಭೂಷಣದಿಂದ ಹಿಡಿದು, ಧಾರ್ಮಿಕ ಪ್ರಕ್ರಿಯೆಗಳಿಂದ ಹಿಡಿದು, ಗಂಡಸು ಹೆಂಗಸುಗಳ ಒಟ್ಟು ನಡವಳಿಕೆಯಿಂದ ಹಿಡಿದು ಎಲ್ಲವೂ ತುಂಬ ವ್ಯತ್ಯಾಸ ಆಗಿದೆ. ನಾನು 40 – 50 ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. 50 ವರ್ಷದ ಹಿಂದೆ ಇದ್ದದ್ದಕ್ಕೂ ಈಗ ಇರುವುದಕ್ಕೂ ತುಂಬ ವ್ಯತ್ಯಾಸ ಆಗಿದೆ. ಅದು ಮಾಧ್ಯಮದ ಪ್ರಭಾವ ಇರಬಹುದು, ಅಥವಾ ಇಡೀ ವಿಶ್ವದ ಬಾಗಿಲು ತೆರೆದದ್ದರಿಂದ ಆಗಿರಬಹುದು. ಅದೇ ರೀತಿಯಲ್ಲಿ ಯಕ್ಷಗಾನದಲ್ಲಿ ಕೂಡ ದೊಡ್ಡ ಬದಲಾವಣೆಗಳನ್ನು ಕಂಡಿರಬಹುದು. ಬಾಲ್ಯದಲ್ಲಿ ಕಂಡ ಯಕ್ಷಗಾನ ಮತ್ತು ಈಗಿನ ಯಕ್ಷಗಾನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಯಾವ ಸ್ಥಿತ್ಯಂತರವಿದ್ದರೂ ಅದರ ನಡುವೆಯೇ ಯಕ್ಷಗಾನ ಉಳಿದಿದೆ, ಉಳಿಯುತ್ತದೆ. ಅದೇ ವೈಶಿಷ್ಟ್ಯ. ಒಂದು 10 ಶೇಕಡಾ ಮೂಲಸ್ಥಿತಿಯನ್ನು ಉಳಿಸಿಕೊಳ್ಳಲು ಬಹಳ ಮುಖ್ಯವಾಗಿ ಈಗ ವಿದ್ಯಾವಂತ ಯುವಕರು ಯುವತಿಯರು ಬರುತ್ತಾ ಇದ್ದಾರೆ. ಇದನ್ನೇ ಅಧ್ಯಯನ ಮಾಡಿ ವೃತ್ತಿ ಶಿಕ್ಷಣ ಯಕ್ಷಗಾನ ಉಳಿವಿಗಾಗಿ ಪ್ರಯತ್ನ ಮಾಡುತ್ತಾ ಇರುವುದನ್ನು ನಾವು ನೋಡ್ತಾ ಇದ್ದೇವೆ. ಇದೊಂದು ಆಶಾದಾಯಕ ಬೆಳವಣಿಗೆ. ಯಕ್ಷಗಾನ ಇಷ್ಟು ವ್ಯಾಪಕವಾಗಿ ಬೆಳೆದಿದೆ. ಬಾಲ್ಯದಲ್ಲಿ ಒಂದು ಮಂದಾರ್ತಿ ಮೇಳದ ಆಟ ನಮ್ಮ ಊರಲ್ಲಿ ಆಗುವುದೆಂದರೆ ಒಂದು ದೊಡ್ಡ ಸಂಭ್ರಮ. ಈಗ ಹೈವೇಯಲ್ಲಿ ಹೋದರೆ ಎಡ ಬಲದಲ್ಲಿ ಮೇಳಗಳ ಸಂಖ್ಯೆ ನಾಲ್ಕು ಪಟ್ಟು ವೃದ್ಧಿಯಾಗಿದೆ. ಅದು ಅತಿ ಎಂಬಷ್ಟು ವೃದ್ಧಿಯಾಗಿದೆ. ಸಂಖ್ಯೆ ಜಾಸ್ತಿಯಾಗಿದೆ. ಆ ಗುಣಮಟ್ಟದ ಕಲಾವಿದರ ಕೊರತೆ ಎದ್ದು ಕಾಣ್ತದೆ. ಅದು ಸ್ಥಿತ್ಯಂತರ ಆಗಿದೆ. ಅದರ ಜೊತೆಯಲ್ಲಿ ಧನಾತ್ಮಕವಾಗಿ ಹೇಳುವುದಾದರೆ ವಿದ್ಯಾವಂತರು ಬಂದಿದ್ದಾರೆ. ಮೊದಲೆಲ್ಲಾ ಇದನ್ನೇ ಬದುಕಿಗೆ ವೃತ್ತಿಯಾಗಿ ತೆಗೆದುಕೊಂಡವರು ಮಾತ್ರ ಯಕ್ಷಗಾನದಲ್ಲಿ ಇದ್ದದ್ದು. ಬಿಡುವಿನ ಮಳೆಗಾಲದಲ್ಲಿ ಕೃಷಿ ಮಾಡ್ತಾ ಇದ್ದರು. ಈಗ ಹಾಗಲ್ಲ. ವಿದ್ಯಾವಂತರು, ರಿಸರ್ಚ್ ಮಾಡುವವರು, PhD ಮಾಡುವವರು, MSc ಮಾಡುವವರು, ಪೋಸ್ಟ್ ಗ್ರ್ಯಾಜುಯೇಟ್, ಗ್ರ್ಯಾಜುಯೇಟ್, ಹುಡುಗರು ಹುಡುಗಿಯರು; ಯಕ್ಷ ಶಿಕ್ಷಣದಲ್ಲಿ ಮುಕ್ಕಾಲುವಾಸಿ ಹುಡುಗಿಯರು, ಪಾಲ್ಗೊಳ್ಳುತ್ತಾ ಇದ್ದಾರೆ. ಇದರಿಂದ ನಿರಾಶೆ ಪ್ರಶ್ನೆ ಇಲ್ಲ. ಇನ್ನೊಂದು ವಿಭಾಗದಲ್ಲಿ ದೊಡ್ಡ ಪರಿವರ್ತನೆ ಆಗುತ್ತಾ ಇದೆ. ಯಕ್ಷಗಾನ ವಿಸ್ಮಯ ಪಡುವ ರೀತಿಯಲ್ಲಿ ಬೆಳವಣಿಗೆ ಆಗುತ್ತಾ ಇದೆ. ಇದು ಹೆಮ್ಮೆ ಪಡುವ ವಿಷಯ. ಮಡಿವಂತಿಕೆ ಇಲ್ಲ. ನಾವು ಸಣ್ಣವರಿರುವಾಗ ಮಡಿವಂತಿಕೆ ಇತ್ತು. ಅದರ ಬಗ್ಗೆ, ಅದರ ಹತ್ತಿರ ಹೋಗುವುದು, ಅದರ ಶುದ್ಧತೆ ಬಗೆಗೆಲ್ಲಾ ಆ ಭಾವವಿತ್ತು. ಈಗ ಅದು ಇಲ್ಲ. ಈಗ ಮನೆಯ ಒಳಗೆ ಮನಸಿನ ಒಳಗೆ ಬಂದು ಬಿಟ್ಟಿದೆ. ಆ ಹಿನ್ನೆಲೆಯಲ್ಲಿ ಧನಾತ್ಮಕವಾದ ಬೆಳವಣಿಗೆ ಆಗಿದೆ.
ಸಮರ್ಥ ಯಕ್ಷಗಾನ ಸಂಘಟನೆ ಹೇಗಿರಬೇಕು? ಹಾಗೂ ಕಲಾಸಂಘಟನೆಯ ನಿಮ್ಮ ಯಶಸ್ಸಿಗೆ ಕಾರಣ ಯಾವುದು:-
ಯಕ್ಷಗಾನ ಬಹಳ ಮುಖ್ಯವಾಗಿ ಇದು ಸಮಷ್ಟಿ ಕಲೆ. ಇಲ್ಲಿ ವ್ಯಕ್ತಿ ಪ್ರಧಾನ ಆಗಬಾರದು. ಸಂಘಟನೆಗಳಲ್ಲಿ ವ್ಯಕ್ತಿ ಪ್ರಧಾನವಾಗಿ ವ್ಯಕ್ತಿಗೋಸ್ಕರ ಪ್ರಸಂಗವನ್ನು, ಪ್ರದರ್ಶನವನ್ನು ಮಾಡುವಂಥದ್ದು ಸರಿಯಲ್ಲ. ಎಷ್ಟೋ ಸಲ ಹವ್ಯಾಸಿ ರಂಗಭೂಮಿಯಲ್ಲಿ ಕೂಡ ಈ ಸಮಸ್ಯೆ ಆಗಿದೆ. ಇದು ಸಮಷ್ಟಿ ಕಲೆ. 3 ತಾಸಿನ ಪ್ರದರ್ಶನವನ್ನು ಪರಿಣಾಮಕಾರಿಯಾಗಿ ಪ್ರೇಕ್ಷಕರಿಗೆ ಉಣಬಡಿಸುವ ಬಿಗಿ ಇರಬೇಕೇ ಹೊರತು ನಾನೊಬ್ಬನೇ ಕಾಣಬೇಕು ಎಂಬುದು ಇರಲೇಬಾರದು. ಕಲಾ ಸಂಘಟನೆಯಲ್ಲಿ ಸಮಷ್ಟಿಯಾಗಿ ಚೆನ್ನಾಗಿ ಮಾಡುವವರು ಇರಬೇಕೇ ಹೊರತು ವ್ಯಷ್ಟಿಯಾಗಿ ವಿಜೃಂಭಿಸಬಾರದು. ಇಲ್ಲಿ ಎಲ್ಲರೂ ಒಂದೇ. ಸಮಷ್ಟಿಯಾಗಿ ಸಂಸ್ಥೆಯನ್ನು ಕಟ್ಟಿಕೊಳ್ಳಬೇಕು ಎನ್ನುವ ಭಾವ ಇರಬೇಕು. ಯಾವುದೇ ಕೆಲಸ ಮಾಡುವಾಗ ಕಷ್ಟ ಅಂತ ಅನಿಸಿದ್ರೆ ಮಾಡಬಾರದು. ಅದು ಖುಷಿ ಕೊಡ್ತದೆ, ಅದರಿಂದ ಆನಂದ ಸಿಗುತ್ತದೆ ಅಂತ ಅನ್ನಿಸಿದರೆ ಅದನ್ನು ಮಾಡಬೇಕು. ನಾನು ಅದನ್ನೇ ಮಾಡ್ತೇನೆ. ನನಗೆ ಕಲೆಯಿಂದ ಆನಂದ ದೊರಕಿದೆ.
ದಿನದ ಸಿಂಹಪಾಲು ಸಮಯ ಕಲೆಗಾಗಿ ಅರ್ಪಣೆಯಾದ ನೀವು ನಿಮ್ಮ ವೈಯಕ್ತಿಕ ಬದುಕಿಗೆ ಹೇಗೆ ಸಮಯ ನೀಡುವಿರಿ:-
ನನ್ನ ಖುಷಿಗಾಗಿ, ನನ್ನ ಆತ್ಮಸಂತೋಷಕ್ಕಾಗಿ. ನನಗೆ ಒಂದಷ್ಟು ಬಿಡುವು ಇದೆ. ಸಮಯ ಇದೆ. ಅದನ್ನು ಸಮಾಜಕ್ಕೆ ಉಪಯೋಗವಾಗುವ ಹಾಗೆ ಬಳಸುತ್ತೇನೆ. ಸಾಮಾಜಿಕರು ಮೆಚ್ಚುವ ರೀತಿಯಲ್ಲಿ ಅದು ಕಲೆಯಲ್ಲಿ ಇರಬಹುದು, ಶಿಕ್ಷಣದಲ್ಲಿ ಇರಬಹುದು ಅಥವಾ ಬೇರೆ ಸಂಘಟನೆಗಳಲ್ಲಿ ಇರಬಹುದು. ಮೊದಲು ನೀನು ಆನಂದ ಪಡು. ನಿನ್ನಿಂದಾಗುವ ಕೆಲಸದಿಂದ ಇನ್ನೊಬ್ಬರಿಗೆ ಆದರೆ ಉಪಕಾರ ಮಾಡು, ಕಷ್ಟ ಕೊಡಬೇಡ… ಇಂತಹ ಸಿಂಪಲ್ ಆದಂತಹ ಜೀವನದ ತತ್ವಗಳು ನನ್ನ ಬದುಕನ್ನು ಬೆಸೆದಿವೆ. ದೊಡ್ಡ ಅವಕಾಶ ನನಗೆ ಪ್ರಾಪ್ತಿಯಾಗಿದೆ. ಸಮಾಜ ಕೆಟ್ಟು ಹೋಗಲಿಲ್ಲ. ಒಳ್ಳೆಯ ಕೆಲಸ ಮಾಡಿದ್ರೆ ಕೇಳದೆಯೇ ಸಮಾಜ ಕೋಟಿ ಕೋಟಿ ಕೊಡ್ತದೆ ಎಂಬುದಕ್ಕೆ ನಮ್ಮ ಯಕ್ಷಗಾನ ಕಲಾರಂಗವೇ ಉದಾಹರಣೆ. ವರ್ಷಕ್ಕೆ 4- 5 ಕೋಟಿಯ ಕೆಲಸವನ್ನು ಯಾರ ಹತ್ತಿರವೂ ಕೇಳದೆಯೇ ಮಾಡ್ತಾ ಇದೆ. ಇದು ಬದುಕಿನಲ್ಲಿ ಒಂದು ದೊಡ್ಡ ಅವಕಾಶ.
ಯಕ್ಷಗಾನ ಕಲೆ, ಕಲಾವಿದರಿಗೆ ಉಜ್ವಲ ಭವಿಷ್ಯವಿದೆಯೇ:-
ಯಾವ ಕಲಾವಿದನೂ ಕೂಡ ಸಮಾಜವನ್ನು ಯಾವತ್ತೂ ದೂರಬಾರದು. ಸಮಾಜ ಹಾಳಾಗಲಿಲ್ಲ. ದೂರಿದರು ಅಂತ ಹೇಳಿದ್ರೆ ನನ್ನಲ್ಲಿ ಏನೋ ಕೊರತೆ ಇದೆ ಅಂತ ಅರ್ಥ. ಇದು ಬಹಳ ಸಿಂಪಲ್ ಆದಂತಹ ವಿಷಯ. ನಾನು ಸರಿ ಇದ್ರೆ ಸಮಾಜದಲ್ಲಿ ಯಾವತ್ತೂ ಕೆಟ್ಟದು ಕಾಣುವುದಿಲ್ಲ. ನಾನು ಇದನ್ನು ಕಲಾರಂಗದ ನೆಲೆಯಲ್ಲಿ ಹೇಳುತ್ತಾ ಇದ್ದೇನೆ. ನೀವು ಚೆನ್ನಾಗಿದ್ರೆ ಜನ ಬಂದು ದುಡ್ಡು ಕೊಡ್ತಾರೆ. ನೀವು ಚೆನ್ನಾಗಿ ನಿರ್ವಹಣೆ ಮಾಡಿದರೆ ನಿಮಗೆ ದಿನಕ್ಕೆ 100 ಪ್ರದರ್ಶನಕ್ಕೂ ಅವಕಾಶ ಇದೆ. ನಿಮ್ಮಲ್ಲಿ ಕೊರತೆ ಇದ್ರೆ ನೀವು ನನ್ನನ್ನು ಕರೆಯಲಿಲ್ಲ, ನನಗೆ ಅವಕಾಶ ಸಿಕ್ಕಿಲ್ಲ ಅಂತ ಹೇಳಿದ್ರೆ ಅದ್ಕೆ ಬೆಲೆಯಿಲ್ಲ. ಮತ್ತೆ ಸಮಾಜ ಕಲಾವಿದನಿಗೆ ಅನ್ನ ಕೊಡುವುದಕ್ಕೆ ಇರುವುದಲ್ಲ. ಸಮಾಜವನ್ನು ಮೆಚ್ಚಿಸಿ ಕಲಾವಿದ ಪಡೆಯಬೇಕು. ಕಲಾವಿದ ಅಂತ ಹೇಳಿ ಅಲ್ಲ. ಯಾವುದೇ ಕ್ಷೇತ್ರದಲ್ಲಿ ಸಮಾಜವನ್ನು ಮೆಚ್ಚಿಸಿ ನಾವು ಪಡೆಯಬೇಕು. ಮುಂದಿನ ದಿನಗಳಲ್ಲಿ ಯಕ್ಷಗಾನವೊಂದನ್ನೇ ವೃತ್ತಿಯಾಗಿ ಇಟ್ಟುಕೊಳ್ಳುವ ಸಮಯ ಹೋಗಿದೆ. ಇಂದು ದೊಡ್ಡ ಪರಿವರ್ತನೆಯ ಕಾಲಘಟ್ಟದಲ್ಲಿ ಇದ್ದೇವೆ. ಯಕ್ಷ ಸಂಕ್ರಮಣದ ಕಾಲಘಟ್ಟ. ಮುಖ್ಯವಾಗಿ ತೆಂಕಿನಲ್ಲಿ ಹೇಳುವುದಾದರೆ ವಿದ್ಯಾಭ್ಯಾಸವನ್ನು ಮಾಡಿ, ಒಳ್ಳೆಯ ಉದ್ಯೋಗವನ್ನು ಪಡೆದು, ಕಾಲಮಿತಿಯ ಪ್ರದರ್ಶನಗಳಲ್ಲಿ ದುಡಿಯುತ್ತಾರೆ. ಸಂಜೆ 6ರಿಂದ 12ರ ತನಕ ಯಕ್ಷಗಾನದಲ್ಲಿ ತೊಡಗಿಸಿಕೊಂಡು ಮತ್ತೆ ಪುನಃ ಯಥಾಪ್ರಕಾರವಾಗಿ ಹಗಲಿನಲ್ಲಿ ಉದ್ಯೋಗವನ್ನು ಮಾಡುತ್ತಾರೆ. ಇಂದು ಯಕ್ಷಗಾನವನ್ನು ಉಪವೃತ್ತಿಯನ್ನಾಗಿ ಮಾಡುವವರು ಇದ್ದಾರೆ. ಇದು ಬದುಕಿನ ಒಳ್ಳೆಯ ಬೆಳವಣಿಗೆ. ಯಕ್ಷಗಾನ ಪ್ರಧಾನ ವೃತ್ತಿಯಾಗಿ ಮತ್ತೊಂದು ವೃತ್ತಿಯನ್ನು ಇಟ್ಟುಕೊಳ್ಳಲೇ ಬೇಕು. ಆಗ ನಾವು ಸ್ವತಂತ್ರವಾಗಿ ಯಾರ ಹಂಗೂ ಇಲ್ಲದೇ ಬದುಕಬಹುದು. ಕೆಲವರು ಹೇಳುತ್ತಾರೆ, ಪ್ರೇಕ್ಷಕರು ಇಷ್ಟ ಪಡುತ್ತಾರೆ ಅದಕ್ಕೋಸ್ಕರ ಕುಣಿಯುವುದು – ಅದಕ್ಕೋಸ್ಕರ ಹೀಗೆ ಮಾತನಾಡುವುದು ಅಂತ. ಆ ಮಾತಿಗೆ ಬೆಲೆಯಿಲ್ಲ. ಅದು ಸ್ವೀಕಾರಾರ್ಹ ಅಲ್ಲ. ಅದಾಗಬೇಕಾದರೆ ಆರ್ಥಿಕ ಸ್ವಾತಂತ್ರ್ಯ ಬೇಕು. ನನಗೆ ಹಂಗಿಲ್ಲ. ನಾನು ಇಷ್ಟೇ ಮಾಡುವುದು, ನನ್ನದು ಹೀಗೇ. ಬೇಡದಿದ್ರೆ ಬೇಡ. ಹಾಗೆ ಆಗಬೇಕಾದ್ರೆ ನನ್ನಲ್ಲಿ ಆರ್ಥಿಕ ಭದ್ರತೆ ಎನ್ನುವುದು ಪರ್ಯಾಯ ವ್ಯವಸ್ಥೆ ಬೇಕು. ಅದೀಗ ಆಗ್ತಾ ಇದೆ. ಮುಖ್ಯವಾಗಿ ಕಟೀಲು ಮೇಳದಲ್ಲಿ ನೋಡ್ತಾ ಇದ್ದೇನೆ, ತುಂಬಾ ಮಂದಿ ಬೇರೆ ವೃತ್ತಿಯನ್ನು ಮಾಡುತ್ತ ಈ ಕ್ಷೇತ್ರದಲ್ಲಿದ್ದಾರೆ. ಬಡಗಿನಲ್ಲಿ ಸ್ವಲ್ಪ ವಿಳಂಬ ಆಗ್ತಾ ಇದೆ. ಕಾಲಕ್ರಮೇಣ ಖಂಡಿತ ಆದೀತು. ಆಗ ಹೆಚ್ಚು ಚಿಂತನಪರ ಕಲಾವಿದರು ಈ ರಂಗಕ್ಕೆ ಬರ್ತಾರೆ. ಅದು ಈಗಿನ ಕಾಲದ ಅವಶ್ಯಕತೆ. ಯಕ್ಷಗಾನಕ್ಕೆ ಭವಿಷ್ಯ ಖಂಡಿತವಾಗಿಯೂ ಇದೆ. ಯಕ್ಷಗಾನದ ಅಂತಃಸತ್ವದಲ್ಲಿದೆ. ಯಾರೂ ಮಾಡಬೇಕಾಗಿಲ್ಲ.
ಪ್ರಶಸ್ತಿ ಪುರಸ್ಕಾರ:-
ನನಗೇನು ನೆನಪಿಲ್ಲ. ನನಗೆ ಅದರ ಬಗ್ಗೆ ಹೆಚ್ಚು ಆಸಕ್ತಿಯೂ ಇಲ್ಲ. ಪ್ರಶಸ್ತಿಯ ಹಿಂದೆ ಹೋಗಬಾರದು. ನಮ್ಮ ಪ್ರತಿಭೆಯನ್ನು ಗುರುತಿಸಿ ಅದಾಗಿಯೇ ಬರಬೇಕು. ಆಗ ಮಾತ್ರ ಸ್ವಾಭಿಮಾನದಿಂದ ಬದುಕಬಹುದು. ಇಲ್ಲದಿದ್ರೆ ತುಂಬ ಲಘುವಾಗ್ತೇವೆ. ನನ್ನಲ್ಲಿ ಆರ್ಥಿಕ ನಿಧಿ ಇದ್ರೆ ಸಮಾಜಕ್ಕೆ ಕೊಡುತ್ತಾ ಇದ್ದೇನೆ. ಯಕ್ಷಗಾನ ಅಕಾಡೆಮಿ ವತಿಯಿಂದ ಬಂದಂತಹ 50 ಸಾವಿರ ಗೌರವಧನವನ್ನು ಕಲಾರಂಗಕ್ಕೆ ಕೊಟ್ಟೆ. ರಾಜೀವ ಶೆಟ್ಟಿ ವಿದ್ಯಾನಿಧಿ ಪ್ರಶಸ್ತಿ ಬಂದಿತ್ತು. ಅದನ್ನು ಕೂಡ ಕಲಾರಂಗಕ್ಕೆ ಕೊಟ್ಟಿದ್ದೇನೆ. ನಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳಬಾರದು. ನಮ್ಮದೇ ಆದ ವೃತ್ತಿ ಇರುವುದರಿಂದ ಸಂಪಾದನೆಗಾಗಿ ಯಕ್ಷಗಾನ ಅಲ್ಲ. ಯಕ್ಷಗಾನ ಆನಂದಕ್ಕಾಗಿ. ನಮ್ಮ ಕಲೆಯಲ್ಲಿ ತೊಡಗಿಸಿಕೊಂಡೆ ಎಂಬ ಖುಷಿಗಾಗಿ ಹೊರತು ಅದರಿಂದ ಹಣ ಸಂಗ್ರಹಣೆಗೆ ಅಲ್ಲ. ಯಕ್ಷಗಾನವನ್ನೇ ವೃತ್ತಿಯಾಗಿ ಇಟ್ಟುಕೊಂಡವರು ಕೂಡ ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಇವತ್ತಲ್ಲ ನಾಳೆ ಪ್ರಶಸ್ತಿ ಸಿಗುತ್ತದೆ.
ಯಕ್ಷಗಾನ ಕಲೆಯ ಇಂದಿನ ಪೀಳಿಗೆಯ ಕಲಾವಿದರಿಗೆ, ಕಲಾಭಿಮಾನಿಗಳಿಗೆ ನಿಮ್ಮ ಸಂದೇಶವೇನು:-
ಈಗ ಯಾರ ಸಂದೇಶವನ್ನು ಕೇಳುವ ಸ್ಥಿತಿಯಲ್ಲಿ ಯಾರು ಇಲ್ಲ. ನಾವು ಮಾಡಿದ್ದನ್ನು ನೋಡಿ ಕೆಲವರು ಸ್ವೀಕರಿಸಬಹುದು ಹೊರತು ನನ್ನ ಸಂದೇಶ ಇನ್ನೊಬ್ಬರಿಗೆ ಪಥ್ಯವಾಗಬೇಕಿಲ್ಲ.
ಆರ್ಥಿಕವಾಗಿ ನಿಧಿ ಬಂದ್ರೆ ನಾನು ಕೊಡ್ತೇನೆ, ಯಾಕಂದ್ರೆ ನಾನು ಶಿಕ್ಷಕ. ಒಂದು ವಿಷಯದಲ್ಲಿ ತೊಡಗಿಸಿಕೊಂಡರೆ ನೀವು ಮೊದಲು ಆನಂದ ಪಡಿ, ಖುಷಿ ಪಡಿ. ನಿಮಗೆ ಖುಷಿ ಕೊಡುವುದಿಲ್ಲ ಅಂತ ಆದ್ರೆ ಆ ಕ್ಷೇತ್ರ ಬಿಡಿ. ಎರಡನೆಯದು ಸಮಾಜವನ್ನು ದೂರಲು ನಮಗೆ ಹಕ್ಕಿಲ್ಲ. ನಾವು ಸರಿ ಇದ್ರೆ ಸಮಾಜ ಸರಿಯಾಗಿ ಕಾಣ್ತದೆ. ನಿಮ್ಮನ್ನು ನೀವು ನೋಡಿಕೊಳ್ಳಿ, ಅವಲೋಕಿಸಿಕೊಳ್ಳಿ. ನಿಮ್ಮ ಗುಣ ದೋಷಗಳನ್ನ ಅವಲೋಕಿಸಿಕೊಳ್ಳಿ. ಸಮಾಜವನ್ನು ಅಥವಾ ಪ್ರೇಕ್ಷಕರನ್ನು ದೂರಲು ಹೋಗಬೇಡಿ. ನಮಗೆ ಯಾವುದೇ ನೈತಿಕ ಹಕ್ಕಿಲ್ಲ…
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ.
‘ಸುಪ್ರಭಾತ’, ಶಕ್ತಿನಗರ, ಮಂಗಳೂರು.
+ 91 8317463705







