ಈ ಕವನ ಸಂಕಲನವನ್ನು ಬರೆದವರು ಸುಶೀಲಾ ಎಲ್. ಶೆಟ್ಟಿಯವರು. 88ರ ಹರಯದ ಹಿರಿಯ ಜೀವ. ಬೈಂದೂರಿನ ಪ್ರತಿಷ್ಠಿತ ಯಡ್ತರೆ ಮನೆತನಕ್ಕೆ ಸೇರಿದವರು. ಎಳವೆಯಿಂದಲೇ ಸಾಹಿತ್ಯಕ ಸಂವೇದನೆಯನ್ನು ಬೆಳೆಸಿಕೊಂಡು ಬಂದವರಾದರೂ ಸಂಸಾರ ಸಾಗರದಲ್ಲಿ ಈಜುವ ವ್ಯಸ್ತತೆಯಲ್ಲಿ ಹೆಚ್ಚು ಬರೆಯಲು ಸಾಧ್ಯವಾಗಿರಲಿಲ್ಲ. ಬದುಕನ್ನು ಸದಾ ಸೂಕ್ಷ್ಮ ಕಣ್ಣುಗಳಿಂದ ವೀಕ್ಷಿಸುತ್ತಿದ್ದ ಇವರಲ್ಲಿ ಕವಿತೆಗಳು ಅಲ್ಲಲ್ಲಿ ಹುಟ್ಟುತ್ತಿದ್ದವಾದರೂ ಅಂದು ಅಕ್ಷರಗಳ ಮೂಲಕ ಅಭಿವ್ಯಕ್ತಿ ಪಡೆದಿರಲಿಲ್ಲ. ಈಗ ಜೀವನದ ವಿಶ್ರಾಂತ ಕಾಲದಲ್ಲಿ ಅವರ ಮಾಗಿದ ಮನಸ್ಸು ತಾನು ಕಂಡು, ಕೇಳಿ, ಅನುಭವಿಸಿ, ಚಿಂತನೆ ಮಾಡಿದ ವಿಚಾರಗಳಿಗೆ ರೂಪು ಕೊಡಲು ಪ್ರಯತ್ನಿಸಿದೆ. ಹಾಗೆ ರೂಪು ತಳೆದ ಸುಂದರ ಕವಿತೆಗಳು ಇಲ್ಲಿವೆ. ಇಲ್ಲಿ ಆಧ್ಯಾತ್ಮಿಕ ಚಿಂತನೆಯ ಕವಿತೆಗಳಿವೆ, ಪರಿಸರ ಕಾಳಜಿಯ ಕವಿತೆಗಳಿವೆ, ಪ್ರಕೃತಿ ವಿಕೋಪದ ಕುರಿತಾದ ಕವಿತೆಗಳಿವೆ ಕೂಡುಕುಟುಂಬದ ಬದುಕು ಮತ್ತು ಮನುಷ್ಯ ಸಂಬಂಧಗಳ ಮಧುರ ಭಾವಗಳಿರುವ ಕವಿತೆಗಳೂ ಇವೆ. ಪುಲಿಟ್ಝರ್ ಅವಾರ್ಡ್ ವಿನ್ನರ್ ಕೆವಿನ್ ಕಾರ್ಟರ್ ತೆಗೆದ ಫೋಟೋ ಆಧಾರಿತ ಕವಿತೆ ಕವಯಿತ್ರಿಯ ಜೀವ ಕಾರುಣ್ಯದ ದ್ಯೋತಕ. ‘ವೃಕ್ಷ ಸಂಹಾರ’ ಮರಗಳನ್ನು ತನ್ನ ಸ್ವಾರ್ಥಕ್ಕಾಗಿ ಕಡಿದು ಹಣ ಮಾಡುವ ಮನುಷ್ಯನ. ದುರಾಸೆ-ಕ್ರೌರ್ಯಗಳನ್ನು ತೋರಿಸುತ್ತದೆ. ಅಣ್ಣ-ತಂಗಿಯರ ಸಮಾಗಮದ ಕುರಿತಾದ ಕವಿತೆಯಂತೂ ‘ಆಷಾಢ ಮಾಸ ಬಂದೀತವ್ವ ಖಾಸಾ ಅಣ್ಣ ಬರಲಿಲ್ಲವ್ವಾ’ ಎಂಬ ಭಾವನಾತ್ಮಕವಾದ ಜಾನಪದ ಗೀತೆಯನ್ನು ನೆನಪಿಸುವಂತಿದೆ. ಕೊನೆಯಲ್ಲಿರುವ ಮಿನಿಕವಿತೆಗಳಲ್ಲಿ ವಿಡಂಬನೆ ಸಶಕ್ತವಾಗಿದೆ.
‘ಹದ್ದು ಮತ್ತು ಕಾಗೆ’ ಮತ್ತು ‘ ಚಿನ್ನ ಬೆಳ್ಳಿ’ ಕವನಗಳಲ್ಲಿ ಸಾಂಪ್ರದಾಯಿಕ ನಂಬಿಕೆಗಳಿಗೆ ವಿರುದ್ಧವಾದ ಆಶಯಗಳಿವೆ. ಸಾಮಾನ್ಯವಾಗಿ ನಾವು ಹದ್ದು ಕಾಗೆಯನ್ನು ಕೊಲ್ಲುತ್ತದೆ ಎಂದು ನಿರೀಕ್ಷಿಸುತ್ತೇವೆ. ಚಿನ್ನ-ಬೆಳ್ಳಿಗಳ ನಡುವೆ ಸ್ಪರ್ಧೆ ನಡೆದರೆ ಚಿನ್ನವೇ ಗೆಲ್ಲುತ್ತದೆ ಎಂದು ಭಾವಿಸುತ್ತೇವೆ. ಆದರೆ ಇಲ್ಲಿ ಕಾಗೆ ಗೆಲ್ಲುತ್ತದೆ. ಚಿನ್ನದ ಬೆಲೆ ಗಗನಕ್ಕೇರುವುದನ್ನು ನೋಡಿ ಜನರು ಬೆಳ್ಳಿಯನ್ನು ಆಯ್ದುಕೊಳ್ಳಲಾರಂಭಿಸಿದ್ದಾರೆ. ಅಂತೆಯೇ ಯಾರೂ ತಮ್ಮ ಸ್ಥಾನಮಾನಗಳ ಬಗ್ಗೆ ಜಂಬ ಪಡುವುದು ತರವಲ್ಲ. ನಾಳೆ ಏನಾಗುತ್ತದೆ ಅನ್ನುವುದನ್ನು ಬಲ್ಲವರಾರು? ಪಂಜೆ ಮಂಗೇಶರಾಯರು ತಮ್ಮ ಪ್ರಸಿದ್ಧ ‘ಮೂಡುವನು ರವಿ ಮೂಡುವನು’ ಕವನದ ಕೊನೆಯಲ್ಲಿ ಹೇಳುವಂತೆ ಒಂದಿಲ್ಲೊಂದು ದಿನ ‘ಮೇಲೇರಿದವನು ಕೆಳಗಿಳಿಯಲೇ’ ಬೇಕಲ್ಲವೇ?
‘ವೇಗದೂತ’ ಕವನದಲ್ಲಿ ಕವಯಿತ್ರಿ ಆಧುನಿಕ ಯುಗದ ‘ವೇಗ’ವು ಎಂದಿಗೂ ಅಪಾಯಕಾರಿ’ ಎನ್ನುತ್ತಾರೆ. ಹೆದ್ದಾರಿಯಲ್ಲಿ ಸಾಗುವ ಎಲ್ಲಾ ವಾಹನಗಳಿಗೂ ಇತರರಿಗಿಂತ ವೇಗವಾಗಿ ಸಾಗಿ ಸೋಲಿಸುವ ಹುಚ್ಚು. ಎಲ್ಲೆಲ್ಲೂ ಹೊಂಡ-ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ಅಪರಿಮಿತ ವೇಗದಿಂದ ಸಾಗಿದರೆ ಒಳಗಿರುವ ಪ್ರಯಾಣಿಕರ ಎದೆಗಳು ಗಡಗಡನೆ ನಡುಗತೊಡಗುತ್ತವೆ. ಒಮ್ಮೆ ನಿಲ್ದಾಣ ಬಂದರೆ ಸಾಕಪ್ಪಾ ಅನ್ನಿಸುತ್ತದೆ. ಪ್ರಯಾಣಿಕರಿಗೆ ಇಂಥ ಮಾನಸಿಕ ಹಿಂಸೆ ಕೊಡುವುದನ್ನು ಬಿಟ್ಟು ನಿಧಾನವಾಗಿ ತಾಳ್ಮೆ ವಹಿಸಿ ವಾಹನಗಳನ್ನು ಚಲಾಯಿಸುವುದು ಎಷ್ಟು ಒಳ್ಳೆಯದು ಎಂದು ಈ ಕವನವನ್ನು ಓದಿದವರಿಗೆ ಅನ್ನಿಸದೆ ಇರಲಿಕ್ಕಿಲ್ಲ.
‘ಕೊರೋನಾ’ ಕವನ ಮಾನವ ಜೀವನದಲ್ಲಿ ವೈರಾಣುಗಳ ಇತಿಹಾಸದೊಂದಿಗೆ ಆರಂಭವಾಗುತ್ತದೆ. ಕವಯಿತ್ರಿ ಪ್ಲೇಗ್ ಮಾರಿಯು ಹಿಂದೊಮ್ಮೆ ಮನುಕುಲವನ್ನು ಕಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ. ‘ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಂತೆ’ ಯಾರ ಹಿಡಿತಕ್ಕೂ ಸಿಗದ ಕೊರೋನಾ ತಂದಿಟ್ಟ ಸಂಕಟ-ತಾಕಲಾಟಗಳನ್ನೂ ರಾಶಿ ರಾಶಿ ಹೆಣಗಳು ಬಿದ್ದಿದ್ದನ್ನೂ ಸಂಕಷ್ಟದ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರವು ಕಷ್ಟ ಪಟ್ಟದ್ದನ್ನೂ ಕವಿತೆ ಚಿತ್ರಿಸುತ್ತದೆ.
ಶತಶತಮಾನಗಳ ಸ್ಪಾನಿಷ್ ಫ್ಲು ಪ್ಲೇಗ್
ಸಿಡುಬು ಮಹಾಮಾರಿ ಆರ್ಭಟಕೆ
ಕೊಚ್ಚಿ ಹೋದವರ ನೆನಪು ಮಾಸುವ ಮುನ್ನ
ಕೊರೋನಾ ಹೆಮ್ಮಾರಿ ಕ್ರಿಮಿ
ಬಿಡದೆ ಹರಡಿತು ಭೀಕರ
ಶೀತ ಕೆಮ್ಮು ದಮ್ಮು ಜ್ವರ
ಅನ್ನುತ್ತಾರೆ (ಪುಟ 27)
ಚಿಕ್ಕ ಕವನಗಳಲ್ಲಿ ದೊಡ್ಡ ವಿಚಾರಗಳನ್ನು ಹೇಳುವುದು ಸಾಧ್ಯವಾಗುವುದು ಸಮರ್ಥ ಕವಿಗೆ ಮಾತ್ರ. ಸುಶೀಲಾ ಶೆಟ್ಟಿಯವರು ಅದನ್ನು ಇಲ್ಲಿ ಮಾಡಿದ್ದಾರೆ ಅನ್ನುವುದು ಅವರ ಹೆಗ್ಗಳಿಕೆ. ‘ತಕ್ಕಡಿ’ ಕವನದ ನಾಲ್ಕು ಸಾಲುಗಳು ಹೀಗಿವೆ :
ತಕ್ಕಡಿ ತಟ್ಟೆಗೆ/ಅಸಲಿ ನಕಲಿ ತೂಕ
ನಕಲಿ ಗತ್ತು ಗೈರತ್ತು/ ಅಸಲಿ ಸುಸ್ತು
ಇವತ್ತಿನ ದಿನಗಳಲ್ಲಿ ನಕಲಿ ವಸ್ತುಗಳ ಕಾರುಬಾರೇ ಜೋರು ಅನ್ನುವ ಸತ್ಯವನ್ನು ಕವಯಿತ್ರಿ ಇಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ. (ಪು.17).
‘ಬೀಜ ವೃಕ್ಷ’ ಕವಿತೆಯಲ್ಲೂ :
‘ಮಿಡಿಯಾಗಿ ಹಣ್ಣಾಗಿ/ಮಣ್ಣು ಪಾಲಾಗಿ
ತನ್ನ ಸೇವೆ ಬಿಡದ/
ಬೀಜ ವೃಕ್ಷಕೆ ಮೂಲವಾಗಿ
ಎನ್ನುತ್ತ ನಿಸರ್ಗ ಚಕ್ರದ ಅನಿವಾರ್ಯತೆಯನ್ನು ಚಿತ್ರಿಸಿದ್ದಾರೆ. (ಪು :19)
ಮನೆಯೊಳಗಿನ ಮಹಿಳೆಯರು ಹೆಚ್ಚು ಗಮನವೀಯದ ರಾಜಕೀಯದ ಕುರಿತಾದ ಕವಿತೆಗಳೂ ಈ ಸಂಕಲನದಲ್ಲಿವೆ. ‘ಚುನಾವಣೆ’ ಎಂಬುದು ಅಂಥದೊಂದು ಕವಿತೆ. ಗೆಲುವಿನ ಲೆಕ್ಕಾಚಾರದಲ್ಲೇ ಮತದಾರರ ಮನ ಒಲಿಸಿ ಮಾತನಾಡುವ ಅಭ್ಯರ್ಥಿಗಳು ಫಲಿತಾಂಶ ಬರುವ ತನಕ ತಡೆಯಿಲ್ಲದ ದಾಳ ಉರುಳಿಸುತ್ತಾರೆ ಅನ್ನುವಲ್ಲಿ ಕವಯಿತ್ರಿಯ ವ್ಯಂಗ್ಯ ಧ್ವನಿ ಕಾಣಿಸುತ್ತದೆ.
ಕವಿತೆಗಳಿಗೆ ಅಗತ್ಯ ಬಿದ್ದಲ್ಲೆಲ್ಲ ಉಪಮೆ-ರೂಪಕಗಳ ಅಲಂಕಾರವನ್ನೂ ಸಾಂದರ್ಭಿಕ ಪ್ರತಿಮೆಗಳನ್ನೂ ಬಳಸಿ ಮೆರುಗು ನೀಡುವ ಸುಶೀಲಾ ಅವರು ಸರಿಯಾದ ಸಮಯದಲ್ಲಿ ಸಾಹಿತ್ಯ ಜಗತ್ತನ್ನು ಪ್ರವೇಶಿಸಿದ್ದರೆ ಉತ್ಕೃಷ್ಟ ಕವಿತೆಗಳು ಅವರ ಲೇಖನಿಯಿಂದ ಬರುತ್ತಿದ್ದವು ಅನ್ನುವುದನ್ನು ಇಲ್ಲಿನ ಕವಿತೆಗಳು ಸಿದ್ಧ ಪಡಿಸುತ್ತವೆ.
ಕೃತಿಯ ಹೆಸರು : ‘ಮನದ ಮಲ್ಲಿಗೆ’ (ಕವನ ಸಂಕಲನ)
ಕವಯಿತ್ರಿ : ಎ. ಸುಶೀಲಾ ಎಲ್. ಶೆಟ್ಟಿ
ಪ್ರ : ಅಕೃತಿ ಆಶಯ ಪಬ್ಲಿಷರ್ಸ್ ಮಂಗಳೂರು
ಪುಟಗಳು : 84, ಬೆಲೆ : ರೂ.100/-

ಡಾ. ಪಾರ್ವತಿ ಜಿ. ಐತಾಳ್

ಲೇಖಕಿ : ಸುಶೀಲಾ ಎಲ್. ಶೆಟ್ಟಿ
ಉಡುಪಿ ಜಿಲ್ಲೆಯ ಬೈಂದೂರಿನ ಯಡ್ತರೆ ಮನೆತನದವರು. ಕೃಷಿ ಬದುಕಿನ ಕೂಡುಕಟ್ಟಿನಲ್ಲಿ ಅನ್ನದ ಜತೆಗೆ ಕುಟುಂಬ ಪ್ರೇಮವನ್ನು ಉಂಡು ಬೆಳೆದವರು. ಕುಟುಂಬದ ಪೋಷಣೆಯಲ್ಲಿ ತಮ್ಮ ಸುಖವನ್ನು ಕಂಡವರು. ಪ್ರಸ್ತುತ ಮಗಳು ಡಾ. ವೀಣಾ ಶೆಟ್ಟಿಯವರ ಜತೆಗೆ ಮಂಗಳೂರಿನ ದೇರಳೆಕಟ್ಟೆಯಲ್ಲಿ ವಾಸವಾಗಿದ್ದಾರೆ.
