ಬೆಂಗಳೂರು : ಕಾಜಾಣ (ರಿ.) ಬೆಂಗಳೂರು ಇವರ ವತಿಯಿಂದ ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ದಿನಾಂಕ 30 ಏಪ್ರಿಲ್ 2026ರಂದು ಕಾಜಾಣ ನಾಟಕೋತ್ಸವ ಯಶಸ್ವಿಯಾಗಿ ಜರುಗಿತು.
ಹಿರಿಯ ಮತ್ತು ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ನಟರಾದ ಶ್ರೀನಿವಾಸಮೂರ್ತಿ ಜೆ.ಕೆ. ಅವರು ನಾಟಕೋತ್ಸವಕ್ಕೆ ಚಾಲನೆಯನ್ನು ಕೊಟ್ಟು “ರಂಗಭೂಮಿ, ಕನ್ನಡ, ಭಾಷಾಶುದ್ಧತೆಯನ್ನು ಕಲಾವಿದರಲ್ಲಿ ತುಂಬುತ್ತದೆ. ಕಾಜಾಣ ರಂಗತಂಡವು ಯುವಜನರಲ್ಲಿ ರಂಗಭೂಮಿಯ ಆಸಕ್ತಿಯನ್ನು ಬೆಳೆಸುತ್ತಿರುವುದು ಅಭಿನಾರ್ಹವಾದ ಸಂಗತಿ” ಎಂದರು. ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಸುರಭಿ ರಘು ಅವರು “ಕನ್ನಡ ನಾಟಕ ಕ್ಷೇತ್ರಕ್ಕೆ ಕಾಜಾಣದ ಕೊಡುಗೆ ಅಪಾರ. ಯುವಕರಲ್ಲಿ ರಂಗಭೂಮಿಯ ಆಸಕ್ತಿ ಇರುವಂತೆ ಶಿಕ್ಷಣದಲ್ಲೂ ರಂಗಭೂಮಿ ಇದ್ದರೆ ಉತ್ತಮ ನಾಗರೀಕರನ್ನು ರೂಪಿಸಬಹುದು” ಎಂದರು.
ಕಥೆಗಾರರಾದ ಅಮರೇಂದ್ರ ಹೊಲ್ಲಂಬಳ್ಳಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಜಿ.ಪಿ.ಓ. ಚಂದ್ರು, ಎನ್.ಎಲ್. ಶಾಂತಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೌಮ್ಯ, ಅಕ್ಕಯ್ ಪದ್ಮಶಾಲಿ, ಗಮಕಿಗಳಾದ ಸತ್ಯನಾರಾಯಣ, ನಾಟಕಕಾರ್ತಿ ಶೈಲಜ, ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪ್ರಕಾಶ್ ಮೂರ್ತಿ, ನವೀನ್ ಕೃಷಿ ಮುಂತಾದವರು ಉಪಸ್ಥಿತರಿದ್ದು ನಾಟಕೋತ್ಸವದ ಮೆರುಗನ್ನು ಹೆಚ್ಚಿಸಿತ್ತು. ಯುವ ರಂಗಕರ್ಮಿಗಳಾದ ಹನುರಾಮ ಸಂಜೀವ, ರಾಜಗುರು ಹೊಸಕೋಟೆ, ನಯನಸೂಡ ಮತ್ತು ಚಾಂದಿನಿ ಇವರಿಗೆ ‘ಕಾಜಾಣ ರಂಗಗೌರವ 2026’ ನೀಡಿ ಪುರಸ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ‘ನಾಗಸಂಪಿಗೆ’ ನಾಟಕದ ಧ್ವನಿ ಮುದ್ರಿತ ಸಂಗೀತವನ್ನು ಲೋಕಾರ್ಪಣೆ ಮಾಡಲಾಯಿತು. ಕಾಜಾಣ ನಾಟಕೋತ್ಸವದಲ್ಲಿ ಎನ್. ಲಿಂಗಯ್ಯನವರ ವಿರಚಿತ ಅರುಣ್ ಕುಮಾರ್ ಆರ್. ಅಭಿನಯಿಸಿದ, ಬೇಲೂರು ರಘುನಂದನ್ ಇವರು ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದ ‘ನಾಗಸಂಪಿಗೆ’ ಹಾಗೂ ಡಾ. ಎಸ್.ಎಲ್.ಎನ್. ಸ್ವಾಮಿ ಇವರ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದ ಗೋಕುಲ ಸಹೃದಯ ಅಭಿನಯದ ‘ಪಂಚಗವ್ಯ’ ನಾಟಕವನ್ನು ಪ್ರಯೋಗಿಸಲಾಯಿತು. ಮಳೆಯ ನಡುವೆಯೂ ಪ್ರೇಕ್ಷಕರು ಸಭಾಂಗಣದಲ್ಲಿ ತುಂಬಿದ್ದರು.

