ಕೋಟೇಶ್ವರ : ಕೋಟೇಶ್ವರ ಕೋಟಿಲಿಂಗೇಶ್ವರ ದೇಗುಲದ ಸಹಯೋಗದೊಂದಿಗೆ ತೆಕ್ಕಟ್ಟೆ ಕೊಮೆ ಯಶಸ್ವಿ ಕಲಾವೃಂದ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಜಂಟಿ ಆಶ್ರಯದಲ್ಲಿ ಹೊಸ ತಲೆಮಾರಿನ ಅರ್ಥದಾರಿಗಳ ಪರಿಶೋಧ ಕಾರ್ಯಕ್ರಮದಡಿಯಲ್ಲಿ ‘ಅರ್ಥಾಂಕುರ-18’ ಎರಡನೇ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡರ ಸಂಸ್ಮರಣಾ ಕಾರ್ಯಕ್ರಮವನ್ನು ದಿನಾಂಕ 24 ಮೇ 2026ರಂದು ಕೋಟಿಲಿಂಗೇಶ್ವರ ದೇಗುಲದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕಾಳಿಂಗ ನಾವಡರ ಒಡನಾಡಿ ಡಾ. ಶ್ರೀಕಾಂತ್ ರಾವ್ ಮಾತನಾಡಿ “ಯಕ್ಷಗಾನ ರಂಗಭೂಮಿಯ ಅಪ್ರತಿಮ ಕಲಾವಿದ, ಮೇರು ಭಾಗವತ ದಿವಂಗತ ಕಾಳಿಂಗ ನಾವಡರು. ನವಡರೊಂದಿಗಿನ ಕಳೆದ ಆತ್ಮೀಯ ಒಡನಾಟ ಸ್ಮರಣೀಯ. ರಂಗಭೂಮಿಯಲ್ಲಿ ನಾವಡರ ಅಪಾರ ಶಕ್ತಿ, ಪಾತ್ರಗಳಲ್ಲಿ ಜೀವ ತುಂಬುವ ಸಾಮರ್ಥ್ಯ ಹಾಗೂ ಯುವ ಕಲಾವಿದರಿಗೆ ಅವರು ನೀಡಿದ ಪ್ರೋತ್ಸಾಹವನ್ನು ನೆನೆದರೆ ಈಗಲೂ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಯಕ್ಷಗಾನದಲ್ಲಿ ರಾಗ ಕ್ರಾಂತಿಯನ್ನು ಮಾಡಿ ಈಗಲೂ ಕಲಾಸಕ್ತರ ನೆನಪಲ್ಲಿ ಅನುದಿನವೂ ಉಳಿದು ಹೋದವರು ಕಾಳಿಂಗ ನಾವಡರು” ಎಂದು ಸ್ಮರಿಸಿಕೊಂಡರು.

ಕಾಳಿಂಗ ನಾವಡರ ಒಡನಾಡಿಗಳಾಗಿದ್ದ ಪ್ರಸಿದ್ಧ ಭಾಗವತ ಸುರೇಂದ್ರ ಪಣಿಯೂರು, ಆ್ಯಂಡ್ರೂ ಡಿ’ಸಿಲ್ವ, ಪ್ರಸಿದ್ಧ ಅರ್ಥದಾರಿಗಳಾದ ವಾಸುದೇವ ರಂಗ ಭಟ್, ಕೋಟಿಲಿಂಗೇಶ್ವರ ದೇಗುಲದ ಧರ್ಮದರ್ಶಿಗಳಾದ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಕರ್ಣಾವಸಾನ’ ಯಕ್ಷಗಾನ ತಾಳಮದ್ದಳೆ ರಂಗ ಪ್ರಸ್ತುತಿಗೊಂಡಿತು.
