ಮುಂಬೈ : ಪ್ರತಿಷ್ಠಿತ ಅಲ್ಲಾದಿಯಾ ಖಾನ್ ಸಂಗೀತ ಉತ್ಸವ 2026ರ ಅಂಗವಾಗಿ ಶಿರ್ವ ಕಾಲೇಜಿನ ಪ್ರಾಚಾರ್ಯರಾದ ಹಿರಿಯ ಕಲಾವಿದ ಡಾ. ಮಿಥುನ್ ಚಕ್ರವರ್ತಿ ಇವರಿಂದ ಗಾಯನ ಕಾರ್ಯಕ್ರಮವು ದಿನಾಂಕ 01 ಏಪ್ರಿಲ್ 2026ರಂದು ಸಂಜೆ ಮುಂಬೈಯ ರವೀಂದ್ರ ನಾಟ್ಯ ರಂಗಮಂದಿರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹಿನ್ನೆಲೆ ಕಲಾವಿದರಾಗಿ ತಬಲದಲ್ಲಿ ಧಾರವಾಡದ ಪಂಡಿತ್ ಅಲ್ಲಮಪ್ರಭು ಕಡಕೋಳ್ ಹಾಗೂ ಹಾರ್ಮೋನಿಯಂನಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಸಹಕರಿಸಲಿದ್ದಾರೆ.
ದಿವಂಗತ ಡಿ.ಆರ್. ಖಡ್ಕೆ ಇವರು ಸ್ಥಾಪಿಸಿದ ಡಿ.ಆರ್. ಖಡ್ಕೆ ಪ್ರತಿಷ್ಠಾನ ಕಳೆದ 47 ವರ್ಷಗಳಿಂದ ಈ ಸಂಗೀತ ಸಮ್ಮೇಳನ ಕಾರ್ಯಕ್ರಮವನ್ನು ಮುಂಬೈಯಲ್ಲಿ ಹಮ್ಮಿಕೊಳ್ಳುತ್ತ ಬಂದಿದೆ. ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಅಂಶವಾಗಿರುವ ಶಾಸ್ತ್ರೀಯ ಸಂಗೀತದ ಸಂರಕ್ಷಣೆ ಮತ್ತು ಪ್ರಸರಣದ ಏಕೈಕ ಉದ್ದೇಶವನ್ನು ಇದು ಹೊಂದಿದೆ. ನಾಲ್ಕು ದಿನಗಳ ಈ ಸಂಗೀತ ಉತ್ಸವದಲ್ಲಿ ದೇಶದ ವಿವಿಧ ಕಡೆಗಳಿಂದ ಹೆಸರಾಂತ ಕಲಾವಿದರು ಭಾಗವಹಿಸಲಿದ್ದಾರೆ.

ಕಲಾವಿದ ಡಾ. ಮಿಥುನ್ ಚಕ್ರವರ್ತಿ ಇವರು ನಾಡಿನ ಹೆಸರಾಂತ ಕಲಾವಿದ ಪಂಡಿತ್ ರಾಜಶೇಖರ ಮನ್ಸೂರ್ ಇವರ ಶಿಷ್ಯರು. ಜೈಪುರ್-ಅತ್ರೌಲಿ ಘರಾಣಾ ಪದ್ಧತಿಯಲ್ಲಿ ಕಳೆದ ಎರಡು ದಶಕಗಳಿಂದ ಗಾಯನ ಕಲಿಕೆ ಹಾಗೂ ಪ್ರಸ್ತುತಿಯಲ್ಲಿ ಗಂಭೀರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಮಂಗಳೂರು ಆಕಾಶವಾಣಿಯ ‘ಎ’ ಗ್ರೇಡ್ ಕಲಾವಿದರು. ಪ್ರಸ್ತುತ ಡಾ. ಚಂದ್ರಿಕಾ ಕಾಮತ್, ಹುಬ್ಬಳ್ಳಿ ಇವರಲ್ಲಿ ಘರಾನಾ ಗಾಯಕಿಯ ಸೂಕ್ಷ್ಮತೆಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ, ಸೊರಬ ತಾಲೂಕಿನ ತೆಲಗುಂದ ಎಂಬ ಚಿಕ್ಕ ಹಳ್ಳಿಯಲ್ಲಿ ಜನಿಸಿದ ಡಾ. ಮಿಥುನ್ ಚಕ್ರವರ್ತಿ ಇವರು ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ನಲ್ಲಿ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದು ಕಳೆದ ಎರಡು ದಶಕಗಳಿಂದ ಇಂಗ್ಲೀಷ್ ಭಾಷೆ ಹಾಗೂ ಸಾಹಿತ್ಯದ ಪ್ರಾಧ್ಯಾಪಕರಾಗಿದ್ದು, ಪ್ರಸ್ತುತ ಉಡುಪಿ ಜಿಲ್ಲೆಯ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೈಪುರ-ಅತ್ರೋಲಿ ಘರಾಣೆಯ ಅಪ್ರಚಲಿತ ರಾಗಗಳ ಪ್ರಸ್ತುತಿಯನ್ನು ಬದ್ಧತೆಯಿಂದ ಕಾಪಾಡಿಕೊಂಡು ದೇಶದ ಅನೇಕ ಕಡೆಗಳಲ್ಲಿ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಅನೇಕ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ.

