ಚಿಗುರುತ್ತಿರುವ ಸಸಿಗೆ ಸರಿಯಾದ ಸಮಯದಲ್ಲಿ ಸರಿಯಾದ ಗೊಬ್ಬರ ನೀರು ಬಿದ್ದರೆ ಮಾತ್ರ ಅದು ದಷ್ಟಪುಷ್ಟವಾಗಿ ಬೆಳೆದು ಹೂವು ಹಣ್ಣು ಬಿಡುವುದರ ಜೊತೆಗೆ ಒಂದಷ್ಟು ಮೃಗ ಪಕ್ಷಿಗಳಿಗೆ ನೆಲೆಯಾಗಿ ಬಸವಳಿದವರಿಗೆ ನೆರಳಾಗಿ ಬೆಳೆಯಲು ಸಾಧ್ಯ. ಮುದ್ದು ಮಕ್ಕಳ ಮುಗ್ಧ ಮನಸ್ಸು ಅರಳುವ, ವಿಚಲಿತವಾಗುವ ಸಮಯದಲ್ಲಿ ಸುಂದರ ಕನಸು ಕಾಣುವ ವಯಸ್ಸಿನಲ್ಲಿ ಸರಿಯಾದ ಸಂಸ್ಕಾರ ಶಿಸ್ತು ಪ್ರೀತಿ ಜವಾಬ್ದಾರಿ ಭವಿಷ್ಯತ್ತಿನ ಬಗೆಗಿನ ಸುಂದರ ಕಲ್ಪನೆಗಳಿಗೆ ಆಕಾರ ನೀಡುವ ಹೊಣೆ ಹೆತ್ತವರ ಜೊತೆ ಶಿಕ್ಷಕರಿಗೂ ಅಷ್ಟೇ ಇದೆ. ಹಾಗಾಗಿ ಈ ಮೂವರೂ ಮಕ್ಕಳ ಪಾಲಿಗೆ ದೇವರಾಗುತ್ತಾರೆ. ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ. ಹೀಗೆ ಮಕ್ಕಳೊಡನೆ ಮಕ್ಕಳಂತೆ ಬೆರೆಯುತ್ತಾ ಅವರ ಬಣ್ಣ ಬಣ್ಣದ ಕನಸುಗಳ ಕಾಮನಬಿಲ್ಲಿಗೆ ಮತ್ತಷ್ಟು ರಂಗನ್ನು ಚೆಲ್ಲುತ್ತಾ ಸರಿಯಾದ ತಿಳುವಳಿಕೆ ಮಾರ್ಗದರ್ಶನ ಮಾಡುತ್ತಾ ಆಟದೊಡನೆ ಪಾಠ ಹೇಳಿಕೊಡುತ್ತಾ ತನ್ನ ಸೃಜನ ಶೀಲ ವ್ಯಕ್ತಿತ್ವದ ಮೂಲಕ ಮಕ್ಕಳ ಸುಂದರ ಭವಿಷ್ಯತ್ತನ್ನು ರೂಪಿಸುತ್ತಿರುವ ಶಿಲ್ಪಿ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ.
ಶಿಕ್ಷಣಕ್ಕಿಂತಲೂ ಮೊದಲು ರಂಗಭೂಮಿ ಹುಟ್ಟಿಕೊಳ್ಳುತ್ತದೆ. ಪ್ರತಿಯೊಬ್ಬ ಶಿಕ್ಷಕರಿಗೂ ರಂಗಭೂಮಿಯ ಒಲವು, ಸ್ವರ್ಶ, ಸೊಗಡು, ಜ್ಞಾನ ಇರಬೇಕು. ಆಗ ಮಾತ್ರ ಆ ಶಾಲೆಯ ಮಕ್ಕಳು ಅವರ ಬಾಳಲ್ಲಿ ಪ್ರಜ್ವಲಿತ ಬೆಳಕನ್ನು ಕಾಣಲು ಸಾಧ್ಯ. ಎನ್ನುವುದು ರಾಮ್ ಶೆಟ್ಟಿಯವರ ಅಭಿಪ್ರಾಯ. ಬನ್ನಿ…ಇವರ ಜೀವನ ಪಯಣದ ಸಾಧನೆಯ ಮೈಲುಗಲ್ಲುಗಳ ಮೇಲೊಮ್ಮೆ ಕಣ್ಣು ಹಾಯಿಸೋಣ.
ಸದಾಶಿವ ಸುಧಾ ದಂಪತಿಗಳದ್ದು ಮಧ್ಯಮ ವರ್ಗದ ಸುಸಂಸ್ಕೃತ ಕೃಷಿಕ ಕುಟುಂಬ. ಅಂದಿನ ಸರ್ಕಾರದ ಕಾನೂನು ಹಾಗಿತ್ತೋ ಏನೋ ಎರಡು ಬೇಕು ಮೂರು ಸಾಕು ಎಂದು. ರಾಮ ಲಕ್ಷ್ಮಣ ಭರತರೆಂಬ ಮೂರು ಮಕ್ಕಳಿಗೆ ಜನ್ಮವಿತ್ತವರು ಇವರು. ಈ ಮೂವರಲ್ಲಿ ಮೊದಲ ಮಗನೇ ಶ್ರೇಷ್ಠ ರಂಗಕರ್ಮಿ ನವ ಕಲ್ಪನೆಗಳ ಹರಿಕಾರ ರಂಗ ನಿರ್ದೇಶಕ ಬಿ.ಎಸ್. ರಾಮ್ ಶೆಟ್ಟಿ.
ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷ ಕಲಾವಿದ ರಾಮಗಾಣಿಗರ ಊರು, ಯಕ್ಷ ಕಲೆಯ ತವರೂರು, ಮಣ್ಣಿನ ಕಣಕಣದಲ್ಲೂ ಯಕ್ಷಗಾನದ ಕಂಪಿರುವ ಹಾರಾಡಿ ರಾಮ ಶೆಟ್ಟರ ಹುಟ್ಟೂರು. ಯಕ್ಷಗಾನ ಹೆಜ್ಜೆ ಹಾಕಲು ಮಾತ್ರ ಗೊತ್ತಿದ್ದ ಶೆಟ್ಟರಿಗೆ ಕಲಾವಿದರ ಕುಟುಂಬದ ಹಿನ್ನೆಲೆ ಏನೂ ಇರಲಿಲ್ಲ. ನಾಟಕ ಮುಂದೆ ಅವರಾಗಿ ಬೆಳೆಸಿಕೊಂಡ ರಂಗಕಲೆ. ಹುಟ್ಟಿದ್ದು ಹಾರಾಡಿಯಲ್ಲಾದರೂ ಬಾಲ್ಯದ ಒಂದಷ್ಟು ವರ್ಷ ಅಂದರೆ 1ರಿಂದ 6ನೇ ತರಗತಿಯವರೆಗೆ ಕಲಿತದ್ದು ಬೆಳೆದದ್ದು ತೀರ್ಥಹಳ್ಳಿಯ ಸಮೀಪದ ತೂದೂರು ಎಂಬ ಗ್ರಾಮದಲ್ಲಿ – ತಂದೆಯ ಕೃಷಿ ಭೂಮಿಯ ಹಿನ್ನೆಲೆಯಲ್ಲಿ. ಆ ಸಮಯದಲ್ಲಿ ರಾಮ್ ಶೆಟ್ಟಿಯವರಿಗೆ ಬಾಲ್ಯದ ನಟನೆಯ ಸ್ಪೂರ್ತಿಯಾದದ್ದು… ಗಣೇಶೋತ್ಸವ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರ ನಡುವಿನಿಂದ ಎದ್ದು ಬಂದು ಯಾರಿಗೂ ಗುರುತಿಸಲು ಅಸಾಧ್ಯವಾದ ಭಿಕ್ಷುಕನ ವೇಷದಲ್ಲಿ ತನ್ನ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ ಪಿ.ಡಿ. ಪ್ರಸಾದ್ ಎಂಬ ಸೃಜನಶೀಲ ಗುರುಗಳ ಮೂಲಕ. ಮತ್ತೆ ರಾಮ್ ಶೆಟ್ಟಿಯವರು ಹಿಂದಿರುಗಿ ಏಳನೇ ತರಗತಿಗಾಗಿ ಬಂದದ್ದು ಗೆಲುವಿನ ಗುಣ ಇರುವ ಮಣ್ಣಿನ ಹಾರಾಡಿಗೆ, ಜೀವನ ಕೊಟ್ಟ ವಿದ್ಯಾಮಂದಿರ ಶಾಲೆಗೆ. ನಂತರದ ವಿದ್ಯಾಭ್ಯಾಸ ಬ್ರಹ್ಮಾವರದ ನಿರ್ಮಲ ಹೈಸ್ಕೂಲ್ನಲ್ಲಿ ಮತ್ತು ಕೊಕ್ಕರ್ಣೆಯ ಆರ್.ಎನ್. ಶೆಟ್ಟಿ ಪಿ.ಎಡ್. ಕಾಲೇಜಲ್ಲಿ. ಆನಂತರ ಕಲಿತ ಶಾಲೆ ವಿದ್ಯಾ ಮಂದಿರವೇ ವೃತ್ತಿ ಜೀವನಕ್ಕೆ ನಾಂದಿಯಾಯಿತು. ಅದು ವರ್ಷ 1993ರಲ್ಲಿ. ಈ ನಡುವೆ ಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ನಡೆಯುತ್ತಿದ್ದ ಗಣೇಶೋತ್ಸವ ಕಾರ್ಯಕ್ರಮಕ್ಕೆ ತಾನೇ ರಚಿಸಿ ನಿರ್ದೇಶಿಸಿದ ಕಿರು ಹಾಸ್ಯಮಯ ನಾಟಕ ಇವರ ರಂಗಭೂಮಿಯ ಬೆಳವಣಿಗೆಗೆ ಚಾಲನೆ ನೀಡಿತು. ಮುಂದೆ ಸುತ್ತಮುತ್ತ ಪ್ರದರ್ಶನಗೊಳ್ಳುತ್ತಿದ್ದ ರಂಗಭೂಮಿ ಉಡುಪಿ ನೀನಾಸಂ ನಾಟಕಗಳು ಶೆಟ್ಟರ ನವ್ಯ ನಾಟಕಗಳ ತಯಾರಿಗೆ ಸ್ಪೂರ್ತಿಯಾಯ್ತು. ಶಿಕ್ಷಕನಾಗಿ ಸೇರಿದ ನಂತರ ಶಾಲಾ ಮಕ್ಕಳಿಗೆ ಕಲಿಸುತ್ತಿದ್ದ ನಾಟಕಗಳಿಗೆ ನವ್ಯ ಲೇಪನ ನೀಡಲು ಪ್ರಾರಂಭಿಸಿದರು. ವರುಷ 1997-98ರಲ್ಲಿ ಈ ನಾಟಕದ ಗೀಳು ಶಿಕ್ಷಕರನ್ನು ರಕ್ಷಕರನ್ನು ಸೇರಿಸಿಕೊಂಡು ಭೂಮಿಕಾ ಎಂಬ ನಾಟಕ ಸಂಸ್ಥೆಯನ್ನು ಕಟ್ಟಿ “ತಿರುಕನ ಕನಸು, ಊರಿಗೆ ಬಂದ ನಾಗರಹಾವು, ಕುವೆಂಪುರವರ ‘ನಾಗಿ’ ಕತೆಗೆ ನಾಟಕ ರೂಪಾಂತರ, ಕೆರೆಗೆ ಹಾರ ಹೀಗೆ ಹತ್ತು ಹಲವು ನಾಟಕಗಳು ವೇದಿಕೆ ಹತ್ತಿ ಕಲಾರಸಿಕರ ಗಮನ ಸೆಳೆದವು. ವೆಂಕಟೇಶಮೂರ್ತಿಯವರ ‘ಹೂವಿನ ಆಟ’ ವೈದೇಹಿಯವರ ‘ಸೂರ್ಯ ಬಂದ’, ‘ಆಲಿ ಬಾಬಾ ಮತ್ತು 40 ಕಳ್ಳರು’ ಇತ್ಯಾದಿ ನಾಟಕಗಳನ್ನು ಬೇರೆ ಬೇರೆ ಶಾಲೆಗಳಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ನಿರ್ದೇಶಿಸಿ ಎಲ್ಲರಿಂದ ಸೈ ಎನಿಸಿಕೊಂಡವರು ಶೆಟ್ಟರು. ಶಿಕ್ಷಕರನ್ನು ಒಂದುಗೂಡಿಸಿ ನಿರ್ದೇಶಿಸಿದ ನಾಟಕ ‘ಬರ್ಬರಿಕಾ’, ‘ತ್ರಿಪುರದ ಅಗರ್ತಲ’, ‘ಪಾಟ್ನ’ ಮುಂತಾದ ಹೊರ ರಾಜ್ಯಗಳಲ್ಲಿ ಪ್ರದರ್ಶನಗೊಂಡು ಶ್ರೇಷ್ಠ ನಿರ್ದೇಶಕ ಶ್ರೇಷ್ಠ ನಾಟಕಗಳ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡದ್ದಾಗಿತ್ತು.
ಇನ್ನು ಇವರ ಬದುಕಿನ ತುಂಬಾ ಬಣ್ಣಗಳದ್ದೇ ಮೆರವಣಿಗೆ. ಶಾಲೆ ಎಂದರೆ ಹೀಗಿರಬೇಕು ನೋಡಿ ಎಂದು ತೋರಿಸಿಕೊಟ್ಟವರು ರಾಮ್ ಶೆಟ್ಟಿಯವರು. ಇವರು ಮುಖ್ಯೋಪಾಧ್ಯಾಯರಾಗಿ ಜವಾಬ್ದಾರಿ ವಹಿಸಿಕೊಂಡ ಮೇಲೆ ಅವರ ಶಾಲೆ ಬಣ್ಣಗಳ ಅರಮನೆಯಾಗಿ ಮೂಡಿಬಂತು. ಮಕ್ಕಳಿಗಂತೂ ಖುಷಿಯೋ ಖುಷಿ. ಎಲ್ಲೆಲ್ಲೂ ಸಡಗರ ಎಲ್ಲೆಲ್ಲೂ ಸೌಂದರ್ಯ. ಮಾದರಿ ಶಾಲೆಯಾಯಿತು ವಿದ್ಯಾ ಮಂದಿರ. ಕೊರೋನ ಮಹಾಮಾರಿಯ ಆರ್ಭಟದ ಆ ಸಂದರ್ಭದಲ್ಲಿ ಕಾಮನಬಿಲ್ಲಿನ ಎಲ್ಲ ಬಣ್ಣಗಳು ಹೆದರಿ ಸಹಶಿಕ್ಷಕರ ಸಹಕಾರದೊಂದಿಗೆ ಶೆಟ್ಟರ ಸೃಜನಶೀಲ ಕಲ್ಪನೆಯೊಂದಿಗೆ ಶಾಲೆಯ ಎಲ್ಲಾ ಗೋಡೆಗಳಲ್ಲಿ, ಕ್ಲಾಸಿನ ಬೆಂಚು ಕುರ್ಚಿ ಡೆಸ್ಕ್ ಗಳ ಮೇಲೆಲ್ಲ ಬಗೆಬಗೆಯಾಗಿ ಹರಡಿಕೊಂಡವು. ಸೌಂದರ್ಯದ ಖನಿಯಾದವು. ವಿದ್ಯಾರ್ಥಿಗೊಂದು ಹೂವಿನ ಕುಂಡ ಎಂಬ ಒಪ್ಪಂದದ ಮೇರೆಗೆ ಶಾಲೆಯ ಸುತ್ತ ಸುಂದರ ಉದ್ಯಾನವನ ಹುಟ್ಟಿಕೊಂಡವು. ಮಾಡುವ ಕನ್ನಡ ಮತ್ತು ವಿಜ್ಞಾನ ಪಾಠದ ಜೊತೆಗೆ ಹೊಸ ಅವಿಷ್ಕಾರಗಳು ಸೇರಿ ಕೊಂಡವು. ಆಟದ ಬಯಲಲ್ಲಿ ಸಂಜೆ ಹೊತ್ತಿನಲ್ಲಿ ಮಕ್ಕಳೊಡನೆ ಕೋಕೋ, ವಾಲಿಬಾಲ್, ತ್ರೋಬಾಲ್, ಕ್ರಿಕೆಟ್ ಇತ್ಯಾದಿ ವಿವಿಧ ಕ್ರೀಡೆಗಳು ಬೇರೆ…ಹೀಗೆ ಮಕ್ಕಳ ಮನಸ್ಸುಗಳು ಹೂವಿನಂತೆ ಅರಳಿಕೊಂಡವು. ಇದು ರಂಗಭೂಮಿ ಸೃಷ್ಟಿಸಿದ ವರಪ್ರಸಾದ.
ಇನ್ನು ಕಳೆದ 12 ವರ್ಷಗಳಿಂದ ಭೂಮಿಕಾ ಹಾರಾಡಿಯ ‘ಬಣ್ಣ’ ಎಂಬ ನಾಡಿನಾದ್ಯಂತದ ಉತ್ತಮ ನಾಟಕ ತಂಡಗಳ ನಾಟಕೋತ್ಸವ ಈವರೆಗೆ ಸುಮಾರು 48ಕ್ಕೂ ಮಿಕ್ಕಿ ನಾಟಕಗಳನ್ನು ಆಡಿಸುವುದರ ಮೂಲಕ ನಾಟಕ ಪ್ರೇಮಿಗಳಿಗೆ ಮೃಷ್ಟಾನ್ನದೂಟ ಉಣ ಬಡಿಸಿದೆ. ಈ ಹಬ್ಬದಲ್ಲಿ ಪ್ರತಿವರ್ಷ ಇವರ ನಿರ್ದೇಶನದ ನಾಟಕವೊಂದು ಇದ್ದೇ ಇರುತ್ತದೆ. ಇವರ ನಿರ್ದೇಶನದ ಯಶಸ್ವಿ ನಾಟಕಗಳಲ್ಲಿ ಕೆಲವೊಂದನ್ನು ಹೆಸರಿಸಲೇಬೇಕು ಅಗ್ನಿಲೋಕ.. ‘ಅರಗಿನ ಬೆಟ್ಟ..’, ‘ವ್ರತ್ತದ ವ್ರತ್ತಾಂತ..’, ‘ಸುರ್ಯಾಸ್ತದಿಂದ ಸೂರ್ಯೋದಯದವರೆಗೆ…’, ‘ಕಾತ್ಯಾಯಿನಿ..’, ,ಬರ್ಬರಿಕ..’, ‘ನಮ್ಮ ನಿಮ್ಮೊಳಗೊಬ್ಬ..’ ಪ್ರೇಕ್ಷಕರ ಮನಸ್ಸನ್ನು ಗಟ್ಟಿಯಾಗಿ ಹಿಡಿದಿಟ್ಟ ನಾಟಕಗಳು ಇವು.
ಒಂದನ್ನು ಪಡೆಯಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು ಎಂಬ ಗಾದೆ ಇದೆ. ನಾಟಕಕ್ಕಾಗಿ ಕೈಯಿಂದ ಇವರು ಕಳಕೊಂಡಷ್ಟು ಯಾರೂ ಕಳಕೊಂಡಿರಲಿಕ್ಕಿಲ್ಲ. ಹಾಗಂತ ಇವರು ಪಡೆದುಕೊಂಡದ್ದು ಬಹಳಷ್ಟು ಇದೆ. ಮುದ್ದು ಮಕ್ಕಳ, ರಸಿಕರ ವಿಶ್ವಾಸ, ಹಲವಾರು ರಾಜ್ಯ ರಾಷ್ಟ್ರಮಟ್ಟದ ನಾಟಕಗಳಲ್ಲಿ ಪ್ರಶಸ್ತಿ, (ಮುಖ್ಯವಾಗಿ ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ 3 ಬಾರಿ ಶ್ರೇಷ್ಟ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಅತ್ಯಂತ ಹೆಮ್ಮೆಯ ವಿಷಯ) ಸಿಜಿಕೆ ರಂಗ ಪ್ರಶಸ್ತಿ, ಸ್ವರ್ಣ ಕಮಲ ಕುವೆಂಪು ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ರಂಗಸವ್ಯಸಾಚಿ ಪ್ರಶಸ್ತಿ ಇನ್ನೂ ಬೇಕಾದಷ್ಟು ಇದೆ ಮನೆಯ ಗೋಡೆ ತುಂಬಾ ನೇತುಬಿದ್ದಿದೆ. ಮಕ್ಕಳೊಡನೆ ಬೆರೆತು ಕಲೆತು ಕಲಿತ ಕಲಿಸಿದ ಇತ್ಯಾದಿ ಆಟಗಳ ತರಬೇತಿ ಮಕ್ಕಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮತ್ತು ಪ್ರಶಸ್ತಿ ವಿಜೇತರನ್ನಾಗಿಸುವಂತೆ ಮಾಡಿದರೆ ರಾಮ ಶೆಟ್ಟಿಯವರನ್ನು ತ್ರೋಬಾಲ್ ಕ್ರೀಡೆಯಲ್ಲಿ ರಾಷ್ಟ್ರಮಟ್ಟದ ತರಬೇತುದಾರನನ್ನಾಗಿಸಿತು. ಇನ್ನು ರಾಮ್ ಶೆಟ್ಟರ ಸಂಸಾರಿಕ ಬದುಕಿಗೆ ಬಣ್ಣ ತುಂಬಿದವರು ಅವರ ಅರ್ಧಾಂಗಿ ವೀಣಾ ರಾಮ್ ಶೆಟ್ಟಿ, ಬಿಜಾಡಿಯಲ್ಲಿ ಸರ್ಕಾರಿ ಶಿಕ್ಷಕಿ. ಅದೇ ರೀತಿ ಇವರ ಬದುಕಿಗೆ ಬಣ್ಣವಾದವನು ಮಗ ದೃಶ್ಯ ರಾಮ್ ಶೆಟ್ಟಿ, ಎ.ಐ. ಬಿಟೆಕ್ ವಿದ್ಯಾರ್ಥಿ.
ಹೀಗೆ ನಟನಾಗಿ ನಿರ್ದೇಶಕನಾಗಿ ರಂಗ ಸಂಘಟನಾಗಿ ಶಿಕ್ಷಕನಾಗಿ ಸಾಧನೆಯ ಹಾದಿಯಲ್ಲಿ ಯಶಸ್ಸನ್ನು ಕಂಡ ಬಿ.ಎಸ್. ರಾಮ್ ಶೆಟ್ಟಿಯವರಿಗೆ 2025-26ನೇ ಸಾಲಿನ ಶಂಕರ್ ರೂಫಿಂಗ್ ಸಿಸ್ಟಮ್ ದತ್ತಿನಿಧಿ ಪ್ರಾಯೋಜಿತ ಮಲಬಾರ್ ವಿಶ್ವ ರಂಗ ಪುರಸ್ಕಾರ 2026ರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಜಂಟಿಯಾಗಿ ಇದೇ ತಿಂಗಳ ಮಾರ್ಚ್ 26ರಂದು ನೀಡಿ ಗೌರವಿಸಲಿದೆ.
ಬರಹ : ರಾಜೇಶ್ ಭಟ್ ಪಣಿಯಾಡಿ
