ಉಡುಪಿ : ಕವಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕ, ದಿವಂಗತ ನೆಂಪು ನರಸಿಂಹ ಭಟ್ ಇವರ ಸಂಸ್ಮರಣೆ ಮತ್ತು ‘ನಭ’ ಜೀವನ ಯಾನ ಕೃತಿಯ ಅನಾವರಣ ಕಾರ್ಯಕ್ರಮವು ದಿನಾಂಕ 28 ಮಾರ್ಚ್ 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಿತು.
“ನಭ ನೆಂಪುರವರ ಜೀವನ ಚರಿತ್ರೆಯನ್ನು ಒಂದು motivational story (ಪ್ರೇರಣಾತ್ಮಕ ಕಥೆ)ಯಾಗಿ ತೆಗೆದುಕೊಳ್ಳಬಹುದು. ಬದುಕಿನಲ್ಲಿ ತಾಪತ್ರಯಗಳು ಎದುರಾದಾಗ, ಅವುಗಳನ್ನು ಎದುರಿಸುವ ಬದಲು ಪಲಾಯನ ಮಾಡುವವರು, ನಿಂತು, ಗಮನಿಸಿ, ತಮ್ಮ ದಾರಿಯನ್ನು ಬದಲಿಸಿಕೊಳ್ಳಬೇಕು ಎನ್ನಿಸುವಂತಹ ಬದುಕು ಅವರದ್ದು” ಎಂದು ಕೃತಿಯ ಪ್ರಧಾನ ಸಂಪಾದಕರಾದ ಕವಿ, ಕತೆಗಾರ, ವಿಮರ್ಶಕ ಬೆಳಗೋಡು ರಮೇಶ ಭಟ್ ಅಭಿಪ್ರಾಯಪಟ್ಟರು.

‘ನಭ ಜೀವನ ಯಾನ’ ಕೃತಿಯನ್ನು ಪರಿಚಯಿಸಿದ ಲಕ್ಷ್ಮೀ ಮಚ್ಚಿನ ಪುಸ್ತಕದ ಸಮಗ್ರ ಚಿತ್ರಣ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, “ಮಕ್ಕಳ ಸಾಹಿತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದ ನಭ, ಬರೆದಂತೆಯೇ ಬದುಕಿದ್ದರು. ಕೃತಿಗೂ ಹಾಗೂ ಅವರ ಜೀವನಕ್ಕೂ ಸಾಮ್ಯತೆ ಇತ್ತು. ಸಂಸಾರ, ಸಂಸ್ಕಾರ ಹಾಗೂ ಸಂಸ್ಕೃತಿ ಈ ಮೂರೂ ಸಹ ಅವರ ವ್ಯಕ್ತಿತ್ವದೊಳಗಿತ್ತು” ಎಂದರು.

ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ತಮ್ಮ ಗುರುಗಳಾದ ನೆಂಪು ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ನಭ ಅವರ ಹಿರಿಯ ಸೋದರ ನೆಂಪು ಶ್ರೀಧರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ಹರಿದಾಸ ಬಿ.ಸಿ. ರಾವ್ ಶಿವಪುರ ಹಾಗೂ ಡಾ. ಡಿ. ಸದಾಶಿವ ಭಟ್ ಇವರು ನೀಡಿದ ವೀಡಿಯೋ ಸಂದೇಶಗಳನ್ನು ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು. ಮುಖ್ಯ ಅತಿಥಿಗಳು ನೆಂಪು ನರಸಿಂಹ ಭಟ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ರಾಘವೇಂದ್ರ ಉಡುಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ಮುರಳೀಧರ ಭಟ್ ವಂದಿಸಿದರು. ಪುಸ್ತಕ ಬಿಡುಗಡೆಗೂ ಮೊದಲು, ನಭರವರ ಆಯ್ದ ಭಾವಗೀತೆಗಳನ್ನು ಶ್ರೀಮತಿ ಇಂದಿರಾ ಮಂಜುನಾಥ ಭಟ್ ಮತ್ತು ಅವರ ತಂಡ ಸೊಗಸಾಗಿ ಪ್ರಸ್ತುತ ಪಡಿಸಿತು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ, ಕಾಸರಗೋಡು ಇವರಿಂದ ಪ್ರದರ್ಶನಗೊಂಡ ಯಕ್ಷಗಾನ ಗೊಂಬೆಯಾಟ ಪ್ರಸಂಗ ‘ಲಂಕಾದಹನ’ ನೆರೆದವರೆಲ್ಲರನ್ನೂ ರಂಜಿಸಿತು.

