ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಮೂವತ್ತು ವರ್ಷದ ಸಂಭ್ರಮದ ಅಂಗವಾಗಿ ಅಕಾಡೆಮಿಯ ವಿದ್ಯಾರ್ಥಿಗಳಾದ ವಿದುಷಿ ಅಕ್ಷತಾ ಕನ್ನಡ್ಕ, ವಿದುಷಿ ಅಪೂರ್ವ ಗೌರಿ ಡಿ., ವಿದುಷಿ ವಿಭಾಶ್ರೀ ವಿ. ಗೌಡ ಮತ್ತು ಕುಮಾರಿ ಪ್ರಣಮ್ಯ ಪಾಲೆಚ್ಚಾರು ಇವರು ತಮ್ಮ ಗುರುಗಳಿಗೆ ನೃತ್ಯ ನಮನ ಸಲ್ಲಿಸುವ ‘ನೃತ್ಯೋಪಸೇವನಂ’ ಎಂಬ ಗುರುವಂದನೆ ಕಾರ್ಯಕ್ರಮವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ದಿನಾಂಕ 05 ಏಪ್ರಿಲ್ 2026ರಂದು ನೆರವೇರಿಸಿದರು.
ಈ ಸಮಾರಂಭದಲ್ಲಿ ಅಭ್ಯಾಗತರಾಗಿ ವಿವೇಕಾನಂದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ ಸರಸ್ವತಿ, ವಿವೇಕಾನಂದ ಕನ್ನಡ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ, ಶಿಕ್ಷಕರಾದ ಶ್ರೀಮತಿ ವೀಣಾ ಸರಸ್ವತಿ ನಿಡ್ವಣ್ಣಾಯ ಮತ್ತು ವಿವೇಕಾನಂದ ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ರಮೇಶ್ ಚಂದ್ರ ಇವರು ಉಪಸ್ಥಿತರಿದ್ದರು.




ಕಾರ್ಯಕ್ರಮವು ದೇವಸ್ಥಾನದ ಶೈಲಿಯ ಗಂಭೀರ ನಾಟ ರಾಗ ಮತ್ತು ಆದಿ ತಾಳದ ಮಲ್ಲಾರಿ ನೃತ್ಯದೊಂದಿಗೆ ವೈಭವಯುತವಾಗಿ ಆರಂಭವಾಯಿತು. ಇದರ ನಂತರ ಭಗವಾನ್ ವಿಷ್ಣು ಮತ್ತು ಗಣಪತಿಯ ನಡುವಿನ ಆಪ್ತತೆ, ಗಣೇಶನ ಹುಟ್ಟು ಹಾಗೂ ಆನೆಯ ತಲೆಯನ್ನು ಪಡೆದ ಪುರಾಣ ಕಥೆಯನ್ನು ಒಳಗೊಂಡ ಗಣಪತಿ ಶ್ಲೋಕವನ್ನು ಪ್ರಸ್ತುತಪಡಿಸಲಾಯಿತು. ತದನಂತರ ಮೋಹನ ರಾಗದ ಜತಿಸ್ವರ. ಗುರು ನರ್ಮದಾರವರ ಈ ನೃತ್ಯ ಸಂಯೋಜನೆಯು ಪ್ರೇಕ್ಷಕರ ಮನ ಸೆಳೆಯಿತು.


ನಂತರ ಕಾರ್ಯಕ್ರಮದ ಮುಖ್ಯ ಪ್ರಸ್ತುತಿಯಾಗಿ ವರ್ಣ ಮೂಡಿಬಂದಿತು. ಪುತ್ತೂರಿನ ಒಡೆಯ ಮಹಾಲಿಂಗೇಶ್ವರನ ಮೇಲೆ ರಚಿತವಾಗಿದ್ದ ‘ಆನಂದ ತಾಂಡವ ನಟಶೇಖರ’ ಎಂಬ ಕನ್ನಡದ ವರ್ಣವು ಗಂಭೀರವಾದ ತೋಡಿ ರಾಗದಲ್ಲಿದ್ದು, ಕ್ಲಿಷ್ಟಕರವಾದ ಜತಿಗಳು ಹಾಗೂ ಸ್ವರಗಳು ಮತ್ತು ಸಾಹಿತ್ಯದಲ್ಲಿದ್ದ ಕಥೆಗಳು ಎಲ್ಲರ ಮನ ಮುಟ್ಟಿದವು. ನಂತರ ಇಂಪಾದ ಕಲ್ಯಾಣಿ ರಾಗದ ‘ಕಲ್ಯಾಣ ಸುಂದರೇಶ್ವರಿ’ ಎಂಬ ಕೃತಿಯಲ್ಲಿ ಮಧುರೈ ಮೀನಾಕ್ಷಿಯ ಹುಟ್ಟು ಹಾಗೂ ಸುಂದರೇಶ್ವರನೊಂದಿಗೆ ಆಕೆಯ ವಿವಾಹದ ಕಥೆಯು ಸುಂದರವಾಗಿ ಮೂಡಿಬಂತು. ಕಾರ್ಯಕ್ರಮದ ಕೊನೆಯಲ್ಲಿ ಮೋಹನ ಕಲ್ಯಾಣಿ ರಾಗದ ತಿಲ್ಲಾನ ಪ್ರದರ್ಶನವಾಯಿತು. ಕ್ಷಿಪ್ರಗತಿಯ ಜತಿಗಳು, ಕೋರ್ವೆಗಳು ಹಾಗೂ ಹಿಮ್ಮೇಳ ಮತ್ತು ನರ್ತಕಿಯರು ಜುಗಲಬಂದಿಯಂತೆ ಪ್ರದರ್ಶಿಸಿದ ‘ಗೆತ್ತು’ ಎಲ್ಲರನ್ನೂ ಆಕರ್ಷಿಸಿದವು.


ಭರತನಾಟ್ಯ ಕಾರ್ಯಕ್ರಮದ ಹಿಮ್ಮೇಳದಲ್ಲಿ ನಟುವಾಂಗ ಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ಹಾಡುಗಾರಿಕೆಯಲ್ಲಿ ವಿದುಷಿ ಪ್ರೀತಿಕಲಾ, ಮೃದಂಗದಲ್ಲಿ ಬೆಂಗಳೂರಿನ ಶ್ರೀ ಪವನ್ ಮಾಧವ್, ಕೊಳಲಿನಲ್ಲಿ ಶ್ರೀ ಕೃಷ್ಣ ಗೋಪಾಲ್ ಪುಂಜಾಲಕಟ್ಟೆ ಮತ್ತು ಪಿಟೀಲಿನಲ್ಲಿ ಕುಮಾರಿ ತನ್ಮಯಿ ಉಪ್ಪಂಗಳ ಸಾಥ್ ನೀಡಿದರು. ವಿದುಷಿ ಸೌಜನ್ಯ ಪಡುವೆಟ್ನಾಯ ಮತ್ತು ಶ್ರೀಮತಿ ತೇಜಸ್ವಿ ಅಂಬೆಕಲ್ಲು ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು.



