ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಆಟಿಯಲ್ಲೊಂದು ಕವಿಗೋಷ್ಠಿ ಹಾಗೂ ಅಕಾಡೆಮಿ ಪ್ರಕಟಿತ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 18 ಜುಲೈ 2026ರಂದು ಮಧ್ಯಾಹ್ನ 2-45ಕ್ಕೆ ಮಂಗಳೂರಿನ ತುಳು ಭವನದ ಡಾ. ವಾಮನ ನಂದಾವರ ಚಾವಡಿಯಲ್ಲಿ ಆಯೋಜಿಸಲಾಗಿದೆ.
ಯುವ ಸಾಹಿತಿ ಅಕ್ಷತಾ ರಾಜ್ ಪೆರ್ಲ ಕವಿಗೋಷ್ಠಿಯನ್ನು ಉದ್ಘಾಟಿಸಲಿದ್ದು, ಸಾಹಿತಿ ಹಾಗೂ ತುಳು ಅಕಾಡೆಮಿಯ ಮಾಜಿ ಸದಸ್ಯ ದಿವಾ ಕೊಕ್ಕಡ ಇವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು. ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಇವರ ಗೌರವ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಕಾಡೆಮಿ ವತಿಯಿಂದ ಪ್ರಕಟಣೆಗೊಂಡ ವಲ್ಲಿ ಬೋಳ ಇವರು ಬರೆದ ‘ತುಳುವಪ್ಪೆಗ್ ಬುಲೆ ಕಾಣಿಕೆ’ ಹಾಗೂ ತಮ್ಮ ಲಕ್ಷ್ಮಣ ಇವರು ಬರೆದಿರುವ ‘ತೆಲಿಕೆದ ರಾಜೆ ಆರ್.ಕೆ. ಉಳ್ಳಾಲ್’ ಪುಸ್ತಕವನ್ನು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ಬಿ. ನಾವೂರು ಹಾಗೂ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ಕಿರಣ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ಕವಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಯ ಕವಿಗಳಾದ ದೇವಿಕಾ ನಾಗೇಶ್ ಮಂಗಳೂರು, ಸುಲೋಚನಾ ಪಚ್ಚಿನಡ್ಕ, ಹುಸೈನ್ ಕಾಟಿಪಳ್ಳ, ಎಡ್ವರ್ಡ್ ಲೋಬೊ ತೊಕ್ಕೊಟ್ಟು, ವಿಜಯಲಕ್ಷ್ಮಿ ಕಟೀಲು, ಉಮೇಶ್ ಆಚಾರ್ಯ ಉಡುಪಿ, ವಾಸಂತಿ ಅಂಬಲಪಾಡಿ, ಮಲ್ಲಿಕಾ ಜೆ. ರೈ ಪುತ್ತೂರು, ಸತೀಶ್ ಕಕ್ಕೆಪದವು ಬಂಟ್ವಾಳ, ಗಣೇಶ್ ಆದ್ಯಪಾಡಿ, ಧನಂಜಯ ಮೂಡುಬಿದ್ರೆ, ಆಶಾಲತಾ ಚೇವಾರ್ ಕಾಸರಗೋಡು, ಪರಿಮಳ ಎನ್.ಎಂ. ಐವರ್ನಾಡ್ ಸುಳ್ಯ ಭಾಗವಹಿಸುವರು.

