ಹಾವೇರಿ : ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ರಾಜ್ಯ ಸಮಿತಿ ಬೆಂಗಳೂರು ಇದರ ವತಿಯಿಂದ ಎರಡನೇ ರಾಜ್ಯ ಮಟ್ಟದ ‘ಕನ್ನಡ ಸಾಹಿತ್ಯ ಸಮ್ಮೇಳನ’ವನ್ನು ದಿನಾಂಕ 25 ಮೇ 2026ರಂದು ಹಾವೇರಿ ಜಿ.ಎಚ್. ಕಾಲೇಜು ಹಿಂಭಾಗ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾಹಿತಿ ಜಿ.ಎಮ್. ಓಂಕಾರಣ್ಣನವರ ಸಮ್ಮೇಳನಾಧ್ಯಕ್ಷತೆ ವಹಿಸಿದ್ದಾರೆ.
ಬೆಳಗ್ಗೆ 8-00 ಗಂಟೆಗೆ ಧ್ವಜಾರೋಹಣ ಮತ್ತು 9-00 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಸ್.ಡಿ. ಮುಡೆಣ್ಣವರ ಇವರ ಅಧ್ಯಕ್ಷತೆಯಲ್ಲಿ ಬೆಂಗಳೂರು ವಿಧಾನ ಸಭೆ ಉಪ ಸಭಾಪತಿಗಳಾದ ರುದ್ರಪ್ಪ ಲಮಾಣಿ ಇವರು ಈ ಸಮ್ಮೇಳನವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ನನ್ನ ಸಾಹಿತ್ಯ ಪ್ರೇರಣೆಯ ನೆಲೆಗಳು’, ‘ಡಿಂಬದೊಳಗಿರುವ ಜೀವ’, ‘ಹೆಂಗಿದ್ದೂರು ಹೆಂಗಾಯಿತು’, ‘ಹೃದಯ ಭಾವ’, ‘ಒಂಟಿದನಿ’, ‘ಶಾಹಿರಿಗೊಂದು ವಾರೆನೋಟ’ ಮತ್ತು ‘ಕನ್ನಡ ಶಾಯರಿ ಪ್ರಪಂಚ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಮಧ್ಯಾಹ್ನ 1-00 ಗಂಟೆಗೆ ನಡೆಯಲಿರುವ ವಿಚಾರ ಗೋಷ್ಠಿಯಲ್ಲಿ ‘ಕನ್ನಡ ಸಾಹಿತ್ಯಕ್ಕೆ ಹಾವೇರಿ ಜಿಲ್ಲೆಯ ಕೊಡುಗೆಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸಕರಾದ ಡಾ. ಪುಷ್ಪಾವತಿ ಶಲವಡಿಮಠ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 2-30 ಗಂಟೆಗೆ ಖ್ಯಾತ ಸಾಹಿತಿ ಡಾ. ಸತೀಶ ಕುಲಕರ್ಣಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಪ್ರೊ. ಎಚ್.ಎ. ಬಿಕ್ಷಾವರ್ತಿಮಠ ಇವರಿಗೆ ‘ಕರುನಾಡ ಶಹರಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 4-00 ಗಂಟೆಗೆ ರಾಜ್ಯ ಮಟ್ಟದ ಸಾಧಕರಿಗೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ.

