ಜನಪದ ಗೀತೆಗಳ ಹಾಡಿನ ಮೂಲಕ ನಾಡಿನ ಜನಮಾನಸದಲ್ಲಿ ತಮ್ಮದೇ ಛಾಪು ಮೂಡಿಸಿದ ಅಪರೂಪದ ಕಲಾವಿದ ಅಪ್ಪಗೆರೆ ತಿಮ್ಮರಾಜು. ಈಗ ಅವರಿಗೆ 72ರ (ಬಾಹತ್ತರ) ಸಂಭ್ರಮ. ಅವರ ಸಾಂಸ್ಕೃತಿಕ ಸಾಧನೆಯ ಕುರಿತ ಕಿರು ಲೇಖನ ಇಲ್ಲಿದೆ.
ಕರ್ನಾಟಕದ ಜಾನಪದ ಸಾಹಿತ್ಯ ಸಾಕಷ್ಟು ಸಮೃದ್ಧವಾದುದು ಹಾಗೂ ಅಷ್ಟೇ ವೈವಿಧ್ಯಮಯವಾದುದು. ನಮ್ಮ ನಾಡಿನ ನಾಮಾಂಕಿತ ಕಲಾವಿದ ಅಪ್ಪಗೆರೆ ತಿಮ್ಮರಾಜು ಅವರು ತಮ್ಮ ಮಾತು ಕೃತಿಗಳ ಮೂಲಕ ಕನ್ನಡ ಜಾನಪದ ಸಾಹಿತ್ಯದ ಹಿರಿಮೆ ಗರಿಮೆಯನ್ನು ಜಗದಗಲ ಎತ್ತಿ ಹಿಡಿದವರು, ಜೊತೆಗೆ ತಮ್ಮ ಸುಮಧುರ ಕಂಠಶ್ರೀಯ ಮುಖಾಂತರ ಕನ್ನಡ ಜನಮನವನ್ನು ಸೆಳೆದು ಬೆಸೆದವರು. ‘ತಿಂಗಾಳು ಮುಳುಗಿದವೋ ರಂಗೋಲಿ ಬೆಳಗಿದವೋ, ತಾಯಿ ಚಾಮುಂಡಿಯ ಪೂಜೆಗೆಂದು ಬಾಳೆ ಬಾಗಿದವೋ ನಮ್ಮ ತಾಯಿ ಚಾಮುಂಡಿಯ ಪೂಜೆಗೆಂದು ಬಾಳೆ ಬಾಗಿದವೋ’, ‘ಚೆಲ್ಲಿದರು ಮಲ್ಲಿಗೆಯಾ ಬಾಣಾ ಸುರೇರಿ ಮ್ಯಾಲೆ ಅಂದಾದ ಚೆಂದಾದ ಮಾಯ್ಕಾರ ಮಾದೇವ್ಗೆ ಚೆಲ್ಲಿದರು ಮಲ್ಲಿಗೆಯ’ ಹೀಗೆ ಸೃಜನಶೀಲ ಮನಸ್ಸಿನ ತಜ್ಞ ಕಲಾವಿದ ತಿಮ್ಮರಾಜು ಅವರು ಹಾಡಿದ ಸುಪ್ರಸಿದ್ಧ ಜಾನಪದ ಗೀತೆಗಳನ್ನು ಕೇಳದ ಕನ್ನಡಿಗರು ಕಡಿಮೆ ಎಂದರೂ ತಪ್ಪಿಲ್ಲ. ನೂರಾರು ಜನಪದ ಗೀತೆಗಳನ್ನು ಅವುಗಳ ಮೂಲ ಸ್ವರೂಪದಲ್ಲಿ ಹಾಡಿ ಕರ್ನಾಟಕ ಜಾನಪದ ಸಂಗೀತಕ್ಕೆ ಹೊಸ ಆಯಾಮ ನೀಡಿದ ಹೆಗ್ಗಳಿಕೆ ಅವರದು.
ಅಪ್ಪಗೆರೆ ತಿಮ್ಮರಾಜು ಅವರು ನಮ್ಮ ನಾಡಿನ ಅಭಿಜಾತ ಜಾನಪದ ಕಲಾವಿದ, ಕೋವಿದ. ಅವರ ಹಾಡಿನ ಮೋಡಿ ಗತ್ತು ಗಮ್ಮತ್ತು ವೈವಿಧ್ಯ ಸೀಮಾತೀತವಾಗಿ ಜನಮನವನ್ನು ಮುಟ್ಟಿದೆ ತಟ್ಟಿದೆ. ಅವರು ತಮ್ಮ ಜನಪದ ಗೀತೆಗಳ ಗಾಯನ ಉಪನ್ಯಾಸ ಕೃತಿ ರಚನೆ ಸಂಪಾದನೆ ಚಿಂತನ ಮಂಥನಗಳ ಮೂಲಕ ಪರಂಪರೆಯಿಂದ ಬಂದಿರುವ ಜ್ಞಾನ ಹಾಗೂ ಒಟ್ಟು ಸಮುದಾಯದ ಸಂಸ್ಕೃತಿಯ ಉದಾತ್ತ ಮೌಲ್ಯಗಳನ್ನು ನಾಡಿಗೆ ಬಿತ್ತರಿಸುತ್ತ ಬಂದ ಅಪರೂಪದ ಸಾಂಸ್ಕೃತಿಕ ನೇತಾರರೂ ಹೌದು. ಜಾನಪದ ಸಂಸ್ಕೃತಿಯ ಸಂಗೋಪನೆಗಾಗಿ ಅವರು ತಮ್ಮ ಶ್ರದ್ಧೆ ನಿಷ್ಠೆಗಳನ್ನು ಧಾರೆಯೆರೆಯುತ್ತ ಬಂದಿದ್ದಾರೆ.
ಮನುಷ್ಯ ಪ್ರಕೃತಿಯ ಕೂಸು. ಶ್ರೀಸಾಮಾನ್ಯರ ಜನಪದರ ಬದುಕು ನಿಸರ್ಗಮುಖಿಯಾದುದು. ಜಾನಪದ ಮುಗ್ಧ ಜನತೆಯ ಸೊತ್ತು. ಜಾನಪದ ಒಂದು ಸಾರ್ವತ್ರಿಕ ವಿಷಯ. ಅದು ಇಡೀ ಮಾನವ ಕುಲದ ಸಮಸ್ತ ಕಾರ್ಯ ಚಟುವಟಿಕೆಗಳನ್ನು ಒಳಗೊಂಡಿರುವಂತಹದ್ದು. ಜಾನಪದ ಎಂಬುದು ಯಾವತ್ತೂ ಮಾನವ ಸಂಸ್ಕೃತಿಯ ಮೂಲವನ್ನು ಅರಿಯುವ ಮುಖ್ಯ ಸಾಧನ. ಮಾನವನ ಬದುಕು, ಅವನ ಬಾಳಿನ ಹಿನ್ನೆಲೆಯನ್ನು ಅರಿಯಲು ಅವನ ರೀತಿ ನೀತಿಗಳನ್ನು ಹತ್ತಿರದಿಂದ ನೋಡಲು ಜಾನಪದ ಮೂಲಾಧಾರವಾಗಿದೆ. ಪರಂಪರೆಯಿಂದ ಹಾದು ಬಂದ ಶ್ರೀಸಾಮಾನ್ಯರ ಜ್ಞಾನವೇ ಜಾನಪದ ಎಂದು ಕರೆಯಬಹುದು. ಜಾನಪದ ಜೀವಂತವಾದದ್ದು, ಅದು ಚೈತನ್ಯಪೂರ್ಣವಾದದ್ದು, ಶಕ್ತಿಯುತವಾದದ್ದು. ಅಪ್ಪಗೆರೆ ತಿಮ್ಮರಾಜು ಅವರು ಜಾನಪದ ಸಾಹಿತ್ಯದ ಸಾರ ಸತ್ವವನ್ನು ಅನೇಕ ದಶಕಗಳಿಂದ ಅಲೆ ಬೇಸರವಿಲ್ಲದೆ ಕರ್ನಾಟಕ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಪ್ರಚಾರ ಪ್ರಸಾರದಲ್ಲಿ ನಿರತರಾಗಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶದ ತುಂಬೆಲ್ಲ ಓಡಾಡುತ್ತಾ ತಮ್ಮ ಮಧುರ ಧ್ವನಿಯ ಮೂಲಕ ಜಾನಪದ ಸಾಹಿತ್ಯದ ಗಟ್ಟಿತನವನ್ನು ನಾಡಿಗೆ ಅವರು ಉಣ ಬಡಿಸುತ್ತಾ ಬಂದಿರುವುದು ಉಲ್ಲೇಖನೀಯ ಅಂಶ. ಅವರೊಬ್ಬ ಅಪರೂಪದ ಜಾನಪದ ಜಂಗಮರೂ ಆಗಿದ್ದಾರೆ. ಜನಪದ ಜೋಗಿ, ಗಾಡಿಯ ದಾರಿ ಸಾಗಲಿ, ಜನಪದ ಮಲ್ಲಿಗೆ, ಜಲದ ಗೆರೆಯಮ್ಮ, ಕನಕ ಗೀತೆಗಳು, ಉದುರು ಉದುರು ಮಲ್ಲಿಗೆ, ಸುವರ್ಣ ಸ್ವಾತಂತ್ರ್ಯ ಗೀತೆಗಳು, ಗಾಂಧೀ ಗೀತೆಗಳು, ಕೃಷಿ ಗೀತೆಗಳು ಹೀಗೆ ಅವರು ಹಾಡಿದ ಹತ್ತಾರು ಧ್ವನಿ ಸುರುಳಿಗಳು ಅವರಿಗೆ ಸಾಕಷ್ಟು ಸಿದ್ಧಿ ಪ್ರಸಿದ್ಧಿಯನ್ನು ತಂದುಕೊಟ್ಟಿವೆ. ಇವಲ್ಲದೆ ಬದಲಾಗುತ್ತಿರುವ ಜಾನಪದ, ಜನಪದ ಕಲೆಗಳು ಮತ್ತು ಪ್ರಾಯೋಗಿಕತೆ, ಜಾನಪದ ನಮಗೆಷ್ಟು ಗೊತ್ತು, ಬದುಕು ಮತ್ತು ಜಾನಪದ, ಚೆಲ್ಲಿದರು ಮಲ್ಲಿಗೆಯ, ಜನಪದ ರಸ ಬಳ್ಳಿ ಮೊದಲಾದ ಮಹತ್ವದ ಕೃತಿಗಳನ್ನು ರಚಿಸಿ ಅವರು ಜನಪ್ರಿಯರಾಗಿದ್ದಾರೆ.

ಜನಪದರ ಸಾಹಿತ್ಯ, ಸಂಗೀತ, ನೃತ್ಯ, ಆಟ ಈ ಎಲ್ಲವನ್ನು ಒಳಗೊಂಡಿದ್ದೇ ಜಾನಪದ.ಇದೊಂದು ವಿಶ್ವವಿದ್ಯಾಲಯ.ಇದು ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ.ತಲೆ-ತಲೆಮಾರುಗಳಿಂದ ಸಾಗಿ ಬಂದಿರುವ ಮೌಖಿಕ ಪರಂಪರೆಯ ಜ್ಞಾನ ಭಂಡಾರವೇ ಜಾನಪದ.ಅದು ನಾಡಿನ ಉಸಿರು ಎಂಬುದನ್ನು ಮನಗಂಡು ಈ ಅಮೂಲ್ಯ ಸಂಪತ್ತನ್ನು ಚಲನಶೀಲವಾಗಿಡಲು ತಿಮ್ಮರಾಜು ಅವರು ತನು ಶುದ್ಧ ಮನ ಶುದ್ಧ ಭಾವ ಶುದ್ಧವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅವರೊಬ್ಬ ಹಿರಿಯ ಜಾನಪದ ಕಾವಲು ಕಾಯಕ ಜೀವಿಯೂ ಆಗಿದ್ದಾರೆ.ಜಾನಪದ ಜಗತ್ತಿನ ಸಂಭ್ರಮವನ್ನು ಸೊಗಡನ್ನು ಅದರ ಪರಿಮಳವನ್ನು ಅವರು ನಾಡಿನೆಲ್ಲೆಡೆ ಹರಡುತ್ತ ಹಂಚುತ್ತ ಬಂದಿದ್ದಾರೆ.ಮುಳುಗಿ ಮರೆಯಾಗಿ ಹೋಗಬಹುದಾದ ಈ ಜೀವಂತ ತವನಿಧಿಯನ್ನು ಉಳಿಸಿಕೊಟ್ಟವರಲ್ಲಿ ಅಪ್ಪುಗೆರೆ ತಿಮ್ಮರಾಜು ಅವರೂ ಒಬ್ಬರು.ಅವರ ಹಾಡಿನಲ್ಲಿ ವ್ಯಕ್ತವಾಗುವ ಈ ನೆಲದ ಬದುಕು ಭಾಷೆ ನಾದ ಆಡು ನುಡಿಯ ಸೊಗಡು ಬಣ್ಣಿಸಲಸದಳ. ಆ ಕಂಪು ಸೊಂಪು ಯಾರನ್ನು ಬೆರಗುಗೊಳಿಸುತ್ತದೆ.ಜಾನಪದ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸಂತತ ಸೇವೆ ಚಿರಸ್ಮರಣೀಯವಾದುದು. “ನನ್ನ ಜೀವನ ಜಾನಪದ, ಅದರಲ್ಲಿ ಬೆಳಕು ಕಂಡು ಇಂದಿನ ಯುವ ಜನತೆಗೆ ಜನಪದ ಕಲೆ ಗೀತೆಗಳ ಮೂಲಕ ಬೆಳಕಾಗಿಸುವಂಥ ಜೀವನ ನನ್ನದು “ಎಂಬ ವಿನಮ್ರ ನುಡಿ ಅವರದು.
ಅಪ್ಪಗೆರೆ ಅವರದು ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತ ಹೆಸರು.ಅವರು ಆದರ್ಶ ಜೀವಿ, ಹೃದಯವಂತ ಶಿಕ್ಷಕರು.ಅವರದು ಮುಕ್ತ ಮನಸ್ಸು ಜೊತೆಗೆ ಬಹುಮುಖ ವ್ಯಕ್ತಿತ್ವ.ಸರಳ ಸಜ್ಜನಿಕೆಗೆ ಹೆಸರಾದ ಅವರು ಅಷ್ಟೇ ಸಹೃದಯರು,ಉದಾರ ಮನಸ್ಕರು.ಪ್ರೀತಿ ವಿಶ್ವಾಸಗಳನ್ನು ಕೊಟ್ಟು ಪಡೆಯುವುದರಲ್ಲಿ ಅಪ್ಪಗೆರೆ ಅವರದು ಎತ್ತಿದ ಕೈ.ಹಿರಿಯ ಸಾಹಿತಿಗಳಿಂದ ಹಿಡಿದು ಸಮಾಜದ ಎಲ್ಲರ ಒಲವನ್ನು ಸೂರೆಗೊಂಡು ಅವರು ಜನಮಾನ್ಯರಾಗಿದ್ದಾರೆ .

ದೇಶದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಮುಂಬೈ ವಿಶ್ವವಿದ್ಯಾಲಯವೂ ಒಂದು. ಅಪ್ಪಗೆರೆ ತಿಮ್ಮರಾಜು ಅವರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೂ ಬಂದು ಹಾಡಿ ಈ ಮಾಯಾನಗರಿಯ ಕನ್ನಡಿಗರನ್ನು ಜಾನಪದ ಝೆ0ಕಾರದಲ್ಲಿ ಮಿಂದೇಳುವಂತೆ ಮಾಡಿದ್ದಾರೆ.ಮುಂಬೈ ವಿಶ್ವವಿದ್ಯಾಲಯದ ಜೊತೆಗೆ ಇಂದಿಗೂ ಅವರು ನಿಕಟವಾದ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅವರ ಅಸಾಧಾರಣ ಪ್ರತಿಭೆಯನ್ನು ಗಮನಿಸಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಗೌರವ ಪುರಸ್ಕಾರವನ್ನು ನೀಡಿ ಸತ್ಕರಿಸಿದೆ. ಒಬ್ಬ ಒಳ್ಳೆಯ ಕಲಾವಿದ,ಶಿಕ್ಷಕ, ಮನುಷ್ಯ ಹೇಗಿರುತ್ತಾನೆ ಎನ್ನುವುದಕ್ಕೆ ಅಪ್ಪಗೆರೆ ಅವರು ನಿದರ್ಶನವಾಗಿದ್ದಾರೆ.ಈಗ ಅವರಿಗೆ 72ರ ಹರೆಯ. ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಗಳ ಬಲವರ್ಧನೆಗೆ ಅವಿರತವಾಗಿ ಶ್ರಮಿಸುತ್ತಾ ಬಂದ ತಿಮ್ಮರಾಜು ಅವರಿಗೆ ಕನ್ನಡಿಗರು ಸದಾ ಕೃತಜ್ಞರು.

ಪ್ರೊ. ಜಿ.ಎನ್. ಉಪಾಧ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬೈ ವಿಶ್ವವಿದ್ಯಾಲಯ, ವಿದ್ಯಾನಗರಿ,ಮುಂಬೈ – 400098.
9220212578
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಜಿ.ಎನ್. ಉಪಾಧ್ಯ ಅವರು ಮುಂಬೈ ಮಹಾನಗರದಲ್ಲಿ ಕನ್ನಡದ ಪ್ರಸಾರ ಮತ್ತು ಪ್ರಚಾರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸಂಶೋಧನೆ, ವಿಮರ್ಶೆ, ಪತ್ರಿಕೋದ್ಯಮ, ಭಾಷಾವಿಜ್ಞಾನ ಅವರ ಆಸಕ್ತಿಯ ಕ್ಷೇತ್ರಗಳು. ವೈವಿಧ್ಯಮಯವಾದ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು ತಮ್ಮದೇ ಆದ ‘ಅಭಿಜಿತ್’ ಪ್ರಕಾಶನವನ್ನು ಮುಂಬೈಯಲ್ಲಿ ಆರಂಭಿಸಿ 130ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ವಲಯವಾಗಿ ಮುಂಬೈ ಇಂದಿಗೂ ಬೆಳಗುವಂತೆ ಮಾಡಿದ್ದಾರೆ. ‘ಮಹಾರಾಷ್ಟ್ರದ ಕನ್ನಡ ಶಾಸನಗಳು’, ‘ಗೋದಾವರಿ ತೀರದಲ್ಲಿ ಕನ್ನಡದ ಕುರುಹು’, ‘ಮಹಾರಾಷ್ಟ್ರದ ಕನ್ನಡ ಸ್ಥಳನಾಮಗಳು’, ‘ಸಿದ್ಧರಾಮನ ಸೊನ್ನಲಿಗೆ’, ‘ಮುಂಬೈ ಕನ್ನಡ ಪರಿಸರ’, ‘ಮುಂಬೈ ಕನ್ನಡ ಸಾಹಿತ್ಯ ಚರಿತ್ರೆ’ ಮೊದಲಾದ ಕೃತಿಗಳು ವಿದ್ವತ್ ವಲಯದಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಅವರ ಮಾರ್ಗದರ್ಶನದಲ್ಲಿ ಈವರೆಗೆ 74 ಮಂದಿ ಎಂ.ಫಿಲ್ ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಗುರುನಾರಾಯಣ ಸಾಹಿತ್ಯ ಪ್ರಶಸ್ತಿ, ನರಹಳ್ಳಿ ಪ್ರಶಸ್ತಿ, ಕರ್ನಾಟಕ ಶ್ರೀ ಪುರಸ್ಕಾರ ಮೊದಲಾದ ಗೌರವಕ್ಕೂ ಡಾ. ಉಪಾಧ್ಯ ಇವರು ಪಾತ್ರರಾಗಿದ್ದು, ಮುಂಬೈ ವಿವಿಯಲ್ಲಿ ಕನ್ನಡ ವಿಭಾಗಕ್ಕೆ ‘ಎ’ ಗ್ರೇಡ್ ತಂದುಕೊಡುವಲ್ಲಿ ಇವರು ಸಫಲರಾಗಿದ್ದಾರೆ.
