ಮಂಗಳೂರು : ಕಲಾಸಾಧಕ, ಕಲಾ ಸೇವಕ ಸ್ವರೂಣ್ ರಾಜ್ ಸ್ಮರಣಾರ್ಥ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ದಿನಾಂಕ 14 ಜೂನ್ 2026ರಂದು ‘ಸ್ವರುಣ್ ಸ್ಮರಣಾಂಜಲಿ’ ಕಾರ್ಯಕ್ರಮ ನಡೆಯಿತು.



ಈ ಕಾರ್ಯಕ್ರಮದಲ್ಲಿ ‘ರಾಷ್ಟ್ರ ಧರ್ಮ’ ಎಂಬ ವಿಷಯವಾಗಿ ಉಪನ್ಯಾಸ ನೀಡಿದ ವಿಧಾನ ಪರಿಷತ್‌ನ ಮಾಜಿ ಶಾಸಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ “ವ್ಯಕ್ತಿನಿರ್ಮಾಣದ ಪರಿಕಲ್ಪನೆಯು ಸರಳವಾದುದಲ್ಲ. ಮನುಷ್ಯ ಜೀವನವು ಕೇವಲ ಸಂಪಾದನೆ ಮತ್ತು ಜೀವನ ನಿರ್ವಹಣೆಗೆ ಮಾತ್ರ ಮೀಸಲಾಗಿರದೇ ನಮ್ಮ ರಾಷ್ಟ್ರದ ಬಗ್ಗೆ ಆಲೋಚನೆ ಮಾಡುವಂತೆ ಯುವ ಮನಸ್ಸುಗಳನ್ನು ರೂಪಿಸಬೇಕು. ಇದುವೇ ರಾಷ್ಟ್ರಧರ್ಮದ ಮೊದಲ ಮೆಟ್ಟಿಲಾಗಿದೆ. ಈ ರೀತಿಯ ವ್ಯಕ್ತಿ ನಿರ್ಮಾಣದ ಕೆಲಸವನ್ನು ಸೇನೆಯೂ ಮಾಡುತ್ತದೆ. ಶಿಸ್ತು ಮತ್ತು ದೇಶಸೇವೆಯ ಮಹತ್ವವನ್ನು ಅಲ್ಲಿ ಹೇಳಿಕೊಡಲಾಗುತ್ತದೆ. ಆದರೆ ಅಂತಹ ತರಬೇತಿಯು ಮನೆಮನೆಗಳಲ್ಲಿ ಪೋಷಕರು ಮಕ್ಕಳಿಗೆ ನೀಡಬೇಕು. ಕೇವಲ ಹಕ್ಕುಗಳ ಬಗ್ಗೆ ಮಾತ್ರ ತಿಳಿದುಕೊಳ್ಳದೇ, ಕರ್ತವ್ಯದ ಬಗ್ಗೆಯೂ ಮಕ್ಕಳಿಗೆ ತಿಳಿಹೇಳಬೇಕು. ಆಗ ಸಾಮಾಜಿಕ ಶಿಸ್ತು ಸಹಜವಾಗಿ ರೂಪುಗೊಳ್ಳುತ್ತದೆ. ನೃತ್ಯ ಗುರುಕುಲಗಳಲ್ಲಿ ನಮ್ಮ ದೇಶದ ಸಂಸ್ಕಾರವನ್ನು ಹೇಳಿಕೊಡುವ ಕೆಲಸ ನಡೆಯುತ್ತದೆ. ಈ ಮಾಧ್ಯಮದ ಮೂಲಕ ಮಕ್ಕಳು ಸನಾತನವಾದ ಅನೇಕ ವಿಚಾರಗಳನ್ನು ಕಲಿಯುತ್ತಾರೆ” ಎಂದು ಹೇಳಿದರು.



ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲಾವಿದ ಕದ್ರಿ ನವನೀತ್ ಶೆಟ್ಟಿ ಮಾತನಾಡಿ ಸ್ವರುಣ್‌ರಾಜ್ ಅವರ ಸಾಧನೆಯ ಹಾದಿಯನ್ನು ನೆನಪಿಸಿಕೊಂಡರು. ಅಲ್ಲದೆ ಸನಾತನ ನಾಟ್ಯಾಲಯವು ರಾಷ್ಟ್ರ ನಿರ್ಮಾಣದಲ್ಲಿ ವಹಿಸಿದ ಪಾತ್ರ ಮಹತ್ವದ್ದು ಎಂದು ಹೇಳಿದರು. ವಿದುಷಿಯರಾದ ಅಮೃತಾ ವಿ., ಸಿಂಚನ ಎಸ್. ಕುಲಾಲ್, ಅನನ್ಯ ಕುಂಡಂತಾಯ ಮತ್ತು ಶರಧಿ ಶ್ರೀನಿವಾಸ್ ಹಾಗೂ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರಿಂದ ಭರತನಾಟ್ಯ ಪ್ರಸ್ತುತಗೊಂಡಿತು. ವಿದುಷಿ ಶುಭಾಮಣಿ ಚಂದ್ರಶೇಖರ್ ನೃತ್ಯ ಸಂಯೋಜಿಸಿದ್ದು, ಗುರುಗಳಾದ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗಾರಾಜ್ ಇವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ನೃತ್ಯಗುರು ಶಾರದಾಮಣಿಶೇಖರ್ ಉಪಸ್ಥಿತರಿದ್ದರು.




