ಬೆಂಗಳೂರು : ನೃತ್ಯಗುರು-ಕಲಾವಿದೆ ವಿದುಷಿ ಭಾನುಪ್ರಿಯ ರಾಕೇಶ್, ಭರತನಾಟ್ಯ ಕಲಾವಿದೆಯರಲ್ಲಿ ತಮ್ಮದೇ ಆದ ಅಸ್ಮಿತೆಯನ್ನು ಸಾಬೀತುಗೊಳಿಸಿರುವ ಪ್ರೌಢ ಕಲಾವಿದೆ ಮತ್ತು ಬದ್ಧತೆಯುಳ್ಳ ಆಚಾರ್ಯರಾಗಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅವರ ನೇತೃತ್ವದ ಅರ್ಕ ಕಲಾ ಫೌಂಡೇಶನ್ ‘ತಸ್ಮೈ ಶ್ರೀ ಗುರುವೇ ನಮಃ’ ಎಂಬ ವಿಶಿಷ್ಟ ಅರ್ಥಪೂರ್ಣ ಶೀರ್ಷಿಕೆಯಲ್ಲಿ ಗುರುಪರಂಪರೆಗೆ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದು ವಿದುಷಿ ಭಾನುಪ್ರಿಯರ ಕಲಾಪಯಣವನ್ನು ರೂಪಿಸಿದ ಗುರುಗಳಿಗೆ, ಅವರಿಂದ ಅರ್ಜಿಸಿದ ವಿದ್ಯೆ–ಸಂಸ್ಕಾರಗಳಿಗೆ ಹಾಗೂ ಗುರು–ಶಿಷ್ಯ ಪರಂಪರೆಗೆ ಆತ್ಮೀಯತೆಯಿಂದ ಸಲ್ಲಿಸುವ ಕೃತಜ್ಞತೆಯ ಅರ್ಪಣಾ ಕಾರ್ಯಕ್ರಮ.
ವಿದುಷಿ ಭಾನುಪ್ರಿಯಾರ ನೃತ್ಯಯಾನವನ್ನು ರೂಪಿಸಿದ ಗುರುತ್ರಯರಾದ ಶ್ರೀಮತಿಯರಾದ ರೇವತಿ ನರಸಿಂಹನ್, ಇಂದಿರಾ ಕದಾಂಬಿ ಹಾಗೂ ವೈಜಯಂತಿ ಕಾಶಿ ಇವರಿಗೆ ಗುರುವಂದನೆಯನ್ನು ಅರ್ಪಿಸುವ ಕಾರ್ಯಕ್ರಮ ಇದಾಗಿದೆ. ಬೆಂಗಳೂರಿನ ದೊಡ್ಡಕಲ್ಲಸಂದ್ರದಲ್ಲಿರುವ ಮೀನಾಕ್ಷಿ ರಂಗಮಂಚ ಆಡಿಟೋರಿಯಂನಲ್ಲಿ ದಿನಾಂಕ 08 ಆಗಸ್ಟ್ 2026ರ ಶನಿವಾರ ಬೆಳಗ್ಗೆ ಮತ್ತು ಸಂಜೆ ಗುರು -ಶಿಷ್ಯರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ. ‘ತಸ್ಮೈ ಶ್ರೀ ಗುರುವೇ ನಮಃ’ ಉತ್ಸವವನ್ನು ಎರಡು ಭಾಗಗಳಲ್ಲಿ ರೂಪಿಸಲಾಗಿದೆ.


ಬೆಳಗಿನ ಅರ್ಕ ಗುರುವಂದನಾ ಕಾರ್ಯಕ್ರಮದಲ್ಲಿ, ಗುರು ರೇವತಿ ನರಸಿಂಹನ್ ಇವರ ಸಾನ್ನಿಧ್ಯದಲ್ಲಿ ಭಾನುಪ್ರಿಯ ರಾಕೇಶ್, ತಮ್ಮ 21 ಶಿಷ್ಯರೊಂದಿಗೆ ಅವರ ನೃತ್ಯರಚನೆಗಳನ್ನು ನೇರ ವಾದ್ಯವೃಂದದೊಂದಿಗೆ ಪ್ರಸ್ತುತಪಡಿಸುತ್ತಿದ್ದಾರೆ. ಇದರೊಂದಿಗೆ, ರೇವತಿ ಅವರ ‘ನಾಟ್ಯ ನಿಕೇತನ’ದ ಶಿಷ್ಯರ ಪ್ರಸ್ತುತಿಯೂ ನಡೆಯಲಿದ್ದು, ಗುರು–ಶಿಷ್ಯ ಪರಂಪರೆಯ ಹಲವು ಪೀಳಿಗೆಗಳು ಒಂದೇ ವೇದಿಕೆಯಲ್ಲಿ ಸಮಾಗಮವಾಗುವ ಅಪರೂಪದ ಸಂದರ್ಭಕ್ಕೆ ಇದು ಸಾಕ್ಷಿಯಾಗಲಿದೆ.


ಸಂಜೆಯ ‘ಅರ್ಕ ಕಲಾಸಂಭ್ರಮ’ದಲ್ಲಿ ಶ್ರೀಮತಿ ವೈಜಯಂತಿ ಕಾಶಿ ಮತ್ತು ಅವರ ಪುತ್ರಿ -ಶಿಷ್ಯೆ ಪ್ರತೀಕ್ಷಾ ಕಾಶಿ ಇವರೊಂದಿಗೆ ‘ಅನುಬಂಧ‘ ಕೂಚಿಪುಡಿ ಯುಗಳನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ. ಅನಂತರ ಇಂದಿರಾ ಕದಂಬಿ ‘ಅಂಬಳಂ ಎನ್ಸೆಂಬಲ್’ನೊಂದಿಗೆ “ವರ್ಷ ಋತು” ನೃತ್ಯಪ್ರಸ್ತುತಿಯನ್ನು ನೀಡಲಿದ್ದಾರೆ. ಈ ಮಹತ್ವದ ಅರ್ಥಪೂರ್ಣ ಕಾರ್ಯಕ್ರಮದ ಅಯೋಜನೆ ಮತ್ತು ಪರಿಕಲ್ಪನೆ ‘ಅರ್ಕ ಕಲಾ ಫೌಂಡೇಶನ್’ ಕಲಾ ನಿರ್ದೇಶಕಿ ಭಾನುಪ್ರಿಯಾ ರಾಕೇಶ್ ಅವರದು. ಮನೋಲ್ಲಾಸ ನೀಡುವ ಈ ಕಣ್ಮನ ತುಂಬುವ ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸುಸ್ವಾಗತ.



*** ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.
