ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ವತಿಯಿಂದ ಉಡುಪಿ ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಭೀಷ್ಮೋತ್ಸವ’ ಸಾಹಿತ್ಯ ಸಂಸ್ಕೃತಿ ಕಲೋತ್ಸವವನ್ನು ದಿನಾಂಕ 03 ಮೇ 2026ರಂದು ಉಡುಪಿಯ ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಯಕ್ಷಗಾನ ಕಲಾರಂಗ (ಐ.ವೈ.ಸಿ.) ಹವಾ ನಿಯಂತ್ರಿತ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಪೂರ್ವಾಹ್ನ 8-30 ಗಂಟೆಗೆ ಸಮ್ಮೇಳನಾಧ್ಯಕ್ಷರನ್ನು ಹಾರಹಾಕಿ ಎದುರುಗೊಳ್ಳುವುದು ಹಾಗೂ 9-15 ಗಂಟೆಗೆ ಧ್ವಜಾರೋಹಣ ನಡೆಯಲಿದೆ. 9-20 ಗಂಟೆಗೆ ನಡೆಯಲಿರುವ ಗಮಕ ಸೌರಭದಲ್ಲಿ ಕುಮಾರಿ ಸ್ವಸ್ತಿ ಎಮ್. ಭಟ್ ಇವರಿಂದ ವಾಚನ ಮತ್ತು ಕುಮಾರಿ ಪ್ರಣತಿ ರಾವ್ ಇವರಿಂದ ವ್ಯಾಖ್ಯಾನ ನಡೆಯಲಿದೆ. ಸಾಹಿತಿ ದಿ. ರಾಮದಾಸ್ ನೆನಪಿನ ಪುಸ್ತಕ ಮಳಿಗೆಯ ಉದ್ಘಾಟನೆ ಲೇಖಕರಾದ ಡಾ. ವಿರೂಪಾಕ್ಷ ದೇವರಮನೆ ಇವರಿಂದ ನೆರವೇರಲಿದೆ. ಗಂಟೆ 9-30ಕ್ಕೆ ಚಿತ್ರಮಯ ಉಡುಪಿ ಪ್ರಸಿದ್ಧ ಛಾಯಾಚಿತ್ರ ಕಲಾವಿದರಾದ ಆಸ್ಟ್ರೋಮೋಹನ್ ಹಾಗೂ ಜನಾರ್ದನ ಕೊಡವೂರು ಸಂಪಾದಿತ ಛಾಯಾಚಿತ್ರ ಪ್ರದರ್ಶನ, ಸದ್ಗುರು ಆರ್ಟ್ಸ್ ಇದರ ಕಲಾವಿದ ನಿತ್ಯಾನಂದ ನಾಯಕ್ ಇವರಿಂದ ಮುರಲ್ ಕಲಾಕೃತಿಗಳ ಪ್ರದರ್ಶನ. ಉದಯ್ ಶೆಟ್ಟಿ ಪಡುಕೆರೆ ಮತ್ತು ಪ್ರವೀಣ್ ಯಕ್ಷಿಮಠ ಇವರ ಪರಿಕಲ್ಪನೆಯ ಸಮ್ಮೇಳನಾಧ್ಯಕ್ಷರ ಪರಿಚಯ ನುಡಿ ಚಿತ್ರವನ್ನು ಡಯಟ್ ಪ್ರಾಂಶುಪಾಲರಾದ ಡಾ. ಅಶೋಕ್ ಕಾಮತ್ ಇವರು ಬಿಡುಗಡೆಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕುದುಕ್ಕೊಳ್ಳಿ ಜಯಪ್ರಕಾಶ್ ರಾವ್ ಇವರ ‘ವ್ಯಕ್ತಿತ್ವ ವಿಕಸನ ವಿಚಾರಧಾರೆ’ ಮತ್ತು ಶ್ರೀನಾಥ್ ಬಸ್ರೂರು ಇವರ ‘ಅಂಚೆ ಚೀಟಿ ಜಗತ್ತಿನಲ್ಲಿ ಡಾ. ಕೋಟ ಶಿವರಾಮ ಕಾರಂತ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
ಪೂರ್ವಾಹ್ನ 10-00 ಗಂಟೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಹಿರಿಯ ಸಾಹಿತಿ ಡಾ. ಭಾಸ್ಕರಾನಂದ ಕುಮಾರ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಇವರಿಂದ ಗೀತ ಗಾಯನ, ಬಹುಮುಖಿ ಕನ್ನಡ ಕವಿಗೋಷ್ಠಿ, ಉಡುಪಿ ಮಣಿಪಾಲದ ಹೆಜ್ಜೆ ಗೆಜ್ಜೆ ತಂಡದವರಿಂದ ನೃತ್ಯ ಸಿಂಚನ, ವಿಚಾರಗೋಷ್ಠಿ, ‘ಆಪ್ತ ಮಿತ್ರರ ಕಚಗುಳಿ’ ಹಾಸ್ಯ ಸಮಯ, ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ ಗಂಟೆ 6-15ಕ್ಕೆ ಕೊಡವೂರು ಶ್ರೀ ಶಂಕರನಾರಾಯಣ ರಂಗ ತಂಡದವರಿಂದ ರಾಜೇಶ್ ಭಟ್ ಪಣಿಯಾಡಿ ಇವರ ನಿರ್ದೇಶನದಲ್ಲಿ ‘ಕತ್ತಲೆ ರಾಜ್ಯದ ಮರ್ಕಟ ರಾಜ’ ನಾಟಕ ಪ್ರದರ್ಶನ ನಡೆಯಲಿದೆ.

